ಇದೇ ಜ.10 ರಂದು ಭೂಮಿಯ ಸಮೀಪಕ್ಕೆ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ!
ಭೂಮಿಯ ಅತ್ಯಂತ ಸಮೀಪಕ್ಕೆ ಹಾದು ಹೋಗಲಿರುವ ಕ್ಷುದ್ರಗ್ರಹ| ಇದೇ ಜ.10 ರಂದು ಭೂಮಿಯ ಸಮೀಪಕ್ಕೆ ಬರಲಿರುವ 2019 UO ಕ್ಷುದ್ರಗ್ರಹ| ಸುಮಾರು 250-550 ಮೀಟರ್ ಸುತ್ತಳತೆ ಹೊಂದಿರುವ 2019 UO ಕ್ಷುದ್ರಗ್ರಹ| ಭೂಮಿಯಿಂದ ಕೇವಲ 2.8 ಮಿಲಿಯನ್ ಕಿ.ಮೀ ದೂರದಿಂದ ಹಾದು ಹೋಗಲಿರುವ ಕ್ಷುದ್ರಗ್ರಹ| ಗಂಟೆಗೆ 21,027 ಮೈಲು ವೇಗದಲ್ಲಿ ಹಾದು ಹೋಗಲಿದೆ 2019 UO ಕ್ಷುದ್ರಗ್ರಹ| ಎಚ್ಚರಿಕೆಯ ಕರೆಗಂಟೆ ಮೊಳಗಿಸಿದ ನಾಸಾ|
ವಾಷಿಂಗ್ಟನ್(ಜ.05): ತೇಲುವ ಗ್ರಹಗಳೆಂದೇ ಹೆಸರುವಾಸಿಯಾದ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಯಾವಾಗಲೂ ಇದ್ದಿದ್ದೇ. 65 ಮಿಲಿಯನ್ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ್ದ ಕ್ಷುದ್ರಗ್ರಹವೊಂದು ಈ ನೆಲದಿಂದ ಡೈನಾಸೋರ್‌ಗಳ ಸಂತತಿಯನ್ನೇ ನಾಶ ಮಾಡಿದ್ದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ.
ಅಮೆರಿಕದ ಖಗೋಳ ಅಧ್ಯಯನ ಸಂಸ್ಥೆ ನಾಸಾ ಭೂಮಿಗೆ ಸದಾ ಗಂಡಾಂತರಕಾರಿಯಾಗಿರುವ ಕ್ಷುದ್ರಗ್ರಹಗಳ ಕುರಿತು ನಿಗಾವಹಿಸಿದೆ. ಅದರಲ್ಲೂ ಭೂಮಿಯ ಅತ್ಯಂತ ಸಮೀಪದಲ್ಲಿ ಹಾದು ಹೋಗುವ ಕ್ಷುದ್ರಗ್ರಹಗಳ ಕುರಿತು ನಾಸಾ ಎಚ್ಚರದಿಂದ ಇರುತ್ತದೆ.
ಅದರಂತೆ ಇದೇ ಜ.10 ರಂದು 2019 UO ಎಂಬ ಕ್ಷುದ್ರಗ್ರಹ ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಲಿದ್ದು, ಈ ಕುರಿತು ನಾಸಾ ಎಚ್ಚರಿಕೆಯ ಕರೆಗಂಟೆಯನ್ನು ಮೊಳಗಿಸಿದೆ.
ಸುರಕ್ಷಿತ ವಸುಧೆ: OK ಕ್ಷುದ್ರಗ್ರಹ ನೀನೇಕೆ ಸಮೀಪ ಬಂದೆ?
2019 UO ಕ್ಷುದ್ರಗ್ರಹವನ್ನು ನಾಸಾ ಕಳೆದ ಅಕ್ಟೋಬರ್‌ನಲ್ಲಿ ಪತ್ತೆ ಹಚ್ಚಿದ್ದು, ಇದು ಸುಮಾರು 250-550 ಮೀಟರ್ ಸುತ್ತಳತೆಯನ್ನು ಹೊಂದಿದೆ ಎಂದು ತಿಳಿಸಿದೆ. ಇದು ಅಮೆರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್‌ನ ಎತ್ತರಕ್ಕೆ ಸಮನಾಗಿದೆ ಎನ್ನಲಾಗಿದೆ.
ಇದೇ ಜ.10ರಂದು 2019 UO ಕ್ಷುದ್ರಗ್ರಹ ಭೂಮಿಯಿಂದ ಕೇವಲ 2.8 ಮಿಲಿಯನ್ ಕಿ.ಮೀ ದೂರದಿಂದ ಹಾದು ಹೋಗಲಿದೆ ಎಂದು ನಾಸಾ ಎಚ್ಚರಿಸಿದೆ.
ಈ ವೇಳೆ 2019 UO ಕ್ಷುದ್ರಗ್ರಹ ಸೆಕೆಂಡ್‌ಗೆ ಬರೋಬ್ಬರಿ 9.40 ಕಿ.ಮೀ. ವೇಗದಲ್ಲಿ ಅಥವಾ ಗಂಟೆಗೆ 21,027 ಮೈಲು ವೇಗದಲ್ಲಿ ಸಂಚರಿಸಲಿದ್ದು, ಇದು ಭೂಮಿಗೆ ಅಪ್ಪಳಿಸಿದರೆ ಭಾರೀ ಅನಾಹುತ ಸಂಭವಿಸಿವುದು ಖಚಿತ ಎನ್ನಲಾಗಿದೆ.
ಅದಾಗ್ಯೂ 2019 UO ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಂಭವನೀಯತೆ ಕಡಿಮೆ ಎಂದಿರುವ ನಾಸಾ, ಸುರಕ್ಷಿತವಾಗಿ ಹಾದು ಹೋಗುವ ಭರವಸೆ ವ್ಯಕ್ತಪಡಿಸಿದೆ.