ವಾಷಿಂಗ್ಟನ್(ನ.13): ಭೂಮಿ ಮೇಲೆ ಭಿನ್ನ ಭಿನ್ನ ಸಿದ್ಧಾಂತಗಳಿಗಾಗಿ ಬಡಿದಾಡಿದ ಮನುಷ್ಯ, ಸಾಕಷ್ಟು ಸಾವು-ನೋವುಗಳಿಗೆ ಕಾರಣೀಭೂತನಾಗಿದ್ದಾನೆ.

ಇನ್ನೇನು ಕೆಲವೇ ವರ್ಷಗಳಲ್ಲಿ ಭೂಮಿಯನ್ನು ನುಂಗಿ ಹಾಕಲಿರುವ ಮಾನವನ ಈ ಸೈದ್ಧಾಂತಿಕ ಬಡಿದಾಟ, ಬ್ರಹ್ಮಾಂಡವನ್ನೂ ತಲುಪುವ ಭಯ ಇದೀಗ ಶುರುವಾಗಿದೆ.

ಮಾನವನಿಂದಲೇ ಜನ್ಮ ತಳೆದಿರುವ ಸಿದ್ಧಾಂತಗಳು ಇದೀಗ ಖಗೋಳವನ್ನೂ ಆಳುವ ಭೀತಿ ಆರಂಭವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಸೌರಮಂಡಲದ ಅತ್ಯಂತ ಅಂಚಿನ ಕ್ಷುದ್ರಗ್ರಹ ಅಲ್ಟಿಮಾ ಟುಲೆ ಇದೀಗ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಸುಳಿಯಲ್ಲಿ ಸಿಲುಕಿದೆ.

ನಮ್ಮ ಸೌರಮಂಡಲದ ಕೊನೆಯ ಗ್ರಹಕಾಯವಾಗಿರುವ ಅಲ್ಟಿಮಾ ಟುಲೆ ಕ್ಷುದ್ರಗ್ರಹದ ಹೆಸರಿಗೆ ಇದೀಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

ಅಲ್ಟಿಮಾ ಟುಲೆ ಎಂಬುದು ನಾಜಿ ಪದವಾಗಿದ್ದು, ಮರೆತು ಹೋಗಿರುವ ಇತಿಹಾಸ ಕಂಡ ಕ್ರೂರ ಸರ್ವಾಧಿಕಾರಿ ಹಿಟ್ಲರ್ ಹಾಗೂ ಆತನ ನಾಜಿ ಸಿದ್ಧಾಂತದ ಹೆಸರು ಕ್ಷುದ್ರಗ್ರಹಕ್ಕೆ ಏಕೆ ಎಂದು ಕೆಲವು ಖಗೋಳ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.

ಕಳೆದ ಜನೆವರಿಯಲ್ಲಿ ಪ್ಲುಟೋ ಗ್ರಹದ ಅಧ್ಯಯನದಲ್ಲಿ ನಿರತವಾಗಿದ್ದ ನಾಸಾದ ನ್ಯೂ ಹೊರೈಜನ್ ನೌಕೆ ಅಲ್ಟಿಮಾ ಟುಲೆ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿತ್ತು. ಅಲ್ಟಿಮಾ ಟುಲೆ ಎಂದರೆ ಗೊತ್ತಿರುವ ಜಗತ್ತಿನ ಅತ್ಯಂತ ದೂರದ ವಸ್ತು ಎಂದರ್ಥ ಬರುತ್ತದೆ.

ಈ ಪದವನ್ನು ಜರ್ಮನ್ ರಾಷ್ಟ್ರೀಯವಾದಿಗಳು 20ನೇ ಶತಮನದ ಆರಂಭದಲ್ಲಿ ತಮ್ಮ ಆರ್ಯನ್ ಪೂರ್ವಿಕರ ಅಸ್ತಿತ್ವ ಗುರುತಿಸಲು ಬಳಸಿದ್ದರು ಎನ್ನಲಾಗಿದೆ.

ಅಲ್ಲದೇ ಟುಲೆ ಸೊಸೈಟಿ ಎಂಬ ಸಂಘಟನೆ ಕಟ್ಟಿ ಪ್ರೋಟೊ-ಇಂಡೋ-ಆರ್ಯನ್ ಜನಾಂಗದ ಸಿದ್ದಾಂತವನ್ನು ಪ್ರಚಾರಪಡಿಸಲಾಗಿತ್ತು. ಈ ಸಂಘಟನೆಯೇ ಮುಂದೆ ಹಿಟ್ಲರ್’ನ ನಾಜಿ ಪಕ್ಷದ ಹುಟ್ಟಿಗೆ ವೇದಿಕೆಯಾಗಿತ್ತು.

ಇಂತಹ ಜನಾಂಗೀಯವಾದಿ ಪದವನ್ನು ಕ್ಷುದ್ರಗ್ರಹಕ್ಕೆ ಇಡಬಾರದು ಎಂಬ ಒತ್ತಾಯದ ಹಿನ್ನೆಲೆಯಲ್ಲಿ, ಅಲ್ಟಿಮಾ ಟುಲೆಗೆ ಇದೀಗ ಅರೋಕೊತ್ ಎಂದು ಮರುನಾಮಕರಣ ಮಾಡಲಾಗಿದೆ.

ಅಮೆರಿಕದ ಪ್ರಾದೇಶಿಕ ಪಪೌಹಾಟನ್ ಭಾಷೆಯಲ್ಲಿ ಅರೋಕೊತ್ ಎಂದರೆ ಸ್ಕೈ(ಆಕಾಶ) ಎಂದಾಗುತ್ತದೆ.