ಗ್ರ್ಯಾಂಡ್ ಕ್ಯಾನ್ಯನ್(ಫೆ.06): ಗ್ರ್ಯಾಂಡ್ ಕ್ಯಾನ್ಯನ್ ಪರ್ವತಗಳ ಸಮುಚ್ಛಯದ ರಸಿಕತೆ ಅಮೆರಿಕ ಪ್ರವಾಸ ಮಾಡಿದ ರಸಿಕರು ಚೆನ್ನಾಗಿ ಬಲ್ಲರು. ಅಮೆರಿಕದ ಇತಿಹಾಸವನ್ನು ಗ್ರ್ಯಾಂಡ್ ಕ್ಯಾನ್ಯನ್ ಶಿಖರಗಳ ಕಲ್ಲುಗಳು ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡಿವೆ.

ಒಂದರ್ಥದಲ್ಲಿ ಅಮೆರಿಕದ ಪ್ರಸಿದ್ಧ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗ್ರ್ಯಾಂಡ್ ಕ್ಯಾನ್ಯನ್’ಗೆ ಮೊದಲನೇ ಸ್ಥಾನ.  ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾದ ಗ್ರ್ಯಾಂಡ್ ಕ್ಯಾನ್ಯನ್, ಅರಿಜೋನ ರಾಜ್ಯದ ಉತ್ತರ ಭಾಗದ ಕೊಲೆರಾಡೋ ಪ್ರಸ್ಥಭೂಮಿಯಲ್ಲಿ ವಿಶಾಲವಾಗಿ ಹರಡಿಕೊಂಡಿದೆ.

ಇಂತಹ ಅದ್ಭುತ ಪರ್ವತ ಪ್ರದೇಶದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ವಿಹಂಗಮ ದೃಶ್ಯವನ್ನು ನೋಡಿದವರೇ ವಿವರಿಸಬಲ್ಲರು.  ಗ್ರ್ಯಾಂಡ್ ಕ್ಯಾನ್ಯನ್ ಖಗೋಳ ಪ್ರಿಯರ ನೆಚ್ಚಿನ ತಾಣವೂ ಹೌದು. ಶಿಖರಗಳ ಅಂಚಿನಿಂದ ದಿಗಂತವನ್ನು ಸೀಳುವುದು ಅದ್ಯಾರಿಗೆ ತಾನೆ ಬೇಡ ಹೇಳಿ.

ಅದರಂತೆ ಖಗೋಳ ಪ್ರಿಯ ಕ್ಯಾಮರಾಮನ್ ಓರ್ವ ಕ್ಲಿಕ್ಕಿಸಿದ ಗ್ರ್ಯಾಂಡ್ ಕ್ಯಾನ್ಯನ್ ಸೂರ್ಯಾಸ್ತದ ಚಿತ್ರದಲ್ಲಿ ನಮ್ಮ ಹಾಲುಹಾದಿ(ಮಿಲ್ಕಿ ವೇ) ಗ್ಯಾಲಕ್ಸಿ ಸ್ಪಷ್ಟವಾಗಿ ಕಾಣುತ್ತಿದ್ದು, ಖಗೋಳ ಪ್ರಿಯರ ಕಣ್ಣರಳಿಸುವಂತೆ ಮಾಡಿದೆ.

ಗ್ರ್ಯಾಂಡ್ ಕ್ಯಾನ್ಯನ್ ಪರ್ವತ ಪ್ರದೇಶದಿಂದ ಕ್ಲಿಕ್ಕಸಿದ ಈ ಫೋಟೋದಲ್ಲಿ ಸೂರ್ಯಾಸ್ತದ ವೇಳೆ ಕಡುಗೆಂಪು ಬಣ್ಣದಲ್ಲಿ ಕ್ಷಿರಪಥ ಕಂಡಿರುವುದು ಬ್ರಹ್ಮಾಂಡದ ಶಿಷ್ಯರಿಗೆ ರಸದೌತಣವನ್ನೇ ಉಣ ಬಡಿಸಿದೆ.

ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ಅರಿಜೋನಾದ ಕೊಲೊರಾಡೋ ನದಿಯ ಅಂಚಿನಿಂದ ಈ ಫೋಟೋ ಕ್ಲಿಕ್ಕಿಸಲಾಗಿದ್ದು, ಸೂರ್ಯಾಸ್ತದ ಕಾರಣಕ್ಕೆ ಶಿಖರಗಳು ಕೆಂಪು ಬಣ್ಣದಲ್ಲಿ ಹೊಳೆಯುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತದೆ.

ಗಣಿತ ಮೀರಿದ ಲೆಕ್ಕ: ಜ್ಯೋತಿರ್ವರ್ಷದಲ್ಲಿ ಮಿಲ್ಕಿ ವೇ ಸುತ್ತಳತೆ ಇದೀಗ ಪಕ್ಕಾ!

ಇದೇ  ವೇಳೆ ಮಿಲ್ಕಿ ವೇ ಗ್ಯಾಲಕ್ಸಿ ಕೂಡ ಕಡುಗೆಂಪು ಬಣ್ಣದಲ್ಲಿ ಮಿಂದೆದ್ದು ಹೊಳೆಯುತ್ತಿದ್ದು, ನಕ್ಷತ್ರಗಳು, ನೀಹಾರಿಕೆ ಮತ್ತು ಧೂಳಿನ ಮೋಡಗಳು ನಮ್ಮ ಅನಂತತೆಯ ಸಾಕ್ಷಿಯಾಗಿ ಕಂಗೊಳಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ಗ್ರ್ಯಾಂಡ್ ಕ್ಯಾನ್ಯನ್:

ಗ್ರ್ಯಾಂಡ್ ಕ್ಯಾನ್ಯನ್ ಅಮೆರಿಕದ ಅರಿಜೊನ ಪ್ರಾಂತ್ಯದಲ್ಲಿದ್ದು, ಇದು ಕೊಲೆರಾಡೋ ನದಿಯ ಕೊರೆತದಿಂದ ಉಂಟಾದ ಆಳ ಕಂದರಗಳನ್ನು ಒಳಗೊಂಡಿದೆ. ಇದು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದ್ದು, 446 ಕಿ.ಮೀ.ಉದ್ದ ಹಾಗೂ 29 ಕಿ.ಮೀ ಅಗಲವಾಗಿದೆ. ಕೆಲವು ಕಡೆಗಳಲ್ಲಿ ಇದರ ಆಳ 1,800 ಮೀಟರ್’ಗಳಿಗೂ ಅಧಿಕ.

ಗ್ರ್ಯಾಂಡ್ ಕ್ಯಾನ್ಯನ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಆರಿಜೋನ ರಾಜ್ಯದ ಉತ್ತರ ಭಾಗದ ಕೊಲೆರಾಡೋ ಪ್ರಸ್ಥಭೂಮಿಯಲ್ಲಿ, ಕಾಲೊರಾಡೋ ನದಿಯ ಕೊರೆತದಿಂದ ಸಂಭವಿಸಿರುವ ಆಳವಾದ ಒಂದು ಪ್ರದೇಶ. ಇಲ್ಲಿನ ಶಿಖರಗಳ ಅಗಲ 4-18 ಮೈಲಿಗೂ ಅಧಿಕ ಎಂಬುದು ವಿಶೇಷ. ಗ್ರ್ಯಾಂಡ್ ಕ್ಯಾನ್ಯನ್ ಪರ್ವತ ಪ್ರದೇಶವನ್ನು 1554ರಲ್ಲಿ ಕೊರೊನಾಡೋ ಪರಿಶೋಧನ ತಂಡ ಪತ್ತೆ ಹಚ್ಚಿತು.