Karnataka Rain| 100ರ ಗಡಿ ದಾಟಿದ ತರಕಾರಿ, ಪೆಟ್ರೋಲಿಗಿಂತ ದುಬಾರಿ

*   ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲ ಕಚ್ಚಿದ ಬೆಳೆಗಳು
*   ತರಕಾರಿ ಪೂರೈಕೆಯಲ್ಲಿ ಕೊರತೆ
*   ಸೊಪ್ಪು, ಈರುಳ್ಳಿ, ಟೊಮೇಟೊ, ಕ್ಯಾರಟ್‌, ಕ್ಯಾಪ್ಸಿಕಂ ಸೇರಿ ಬಹುತೇಕ ತರಕಾರಿ ಬೆಲೆ ದಿಢೀರ್‌ ಏರಿಕೆ
 

Vegetable Prices Rise More Expensive Than Petrol grg

ಬೆಂಗಳೂರು(ನ.21):  ರಾಜ್ಯಾದ್ಯಂತ(Karnataka) ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ(Rain) ರೈತರು ಬೆಳೆದಿರುವ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಮಾರುಕಟ್ಟೆಗಳಲ್ಲಿ ಇದೇ ಮೊದಲ ಬಾರಿಗೆ ಬದನೆಕಾಯಿ, ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ ತೊಗರಿಕಾಯಿಯಂತಹ ಹಲವು ತರಕಾರಿಗಳು ನೂರರ ಗಡಿ ತಲುಪಿವೆ.

ಎಲ್ಲಾ ರೀತಿಯ ಹಣ್ಣು, ತರಕಾರಿ(Vegetable), ಸೊಪ್ಪುಗಳ ದರ ಏರಿಕೆ ಬಿಸಿ ತಟ್ಟಿದೆ. ಮುಂದಿನ ಒಂದು ತಿಂಗಳ ಕಾಳ ಇದೇ ರೀತಿ ಬೆಲೆ ಏರಿಕೆ ಮುಂದುವರೆಯಲಿದ್ದು, ಸಾಮಾನ್ಯ ಜನತೆಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಳೆಯಿಂದಾಗಿ ತೋಟ, ಹೊಲಗಳಲ್ಲಿ ಸಾಕಷ್ಟು ನೀರು ನಿಂತಿದೆ. ತೋಟದಲ್ಲೇ ಬೆಳೆಗಳು(Crop) ಕೊಳೆಯುತ್ತಿವೆ. ಇದರಿಂದ ಟೊಮೇಟೊ ಮಾತ್ರವಲ್ಲದೆ, ಈರುಳ್ಳಿ, ಬೆಂಡೆಕಾಯಿ, ತೊಂಡೆಕಾಯಿ, ಕ್ಯಾರಟ್‌, ಕ್ಯಾಪ್ಸಿಕಾಂ ಸೇರಿದಂತೆ ಹಲವು ತರಕಾರಿಗಳ ಕೊರತೆಯಾಗುತ್ತಿದ್ದು, ಇದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕೆ.ಆರ್‌.ಮಾರುಕಟ್ಟೆಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ.

ಮಳೆಯಿಂದ ಬಾರದ ತರಕಾರಿ : ದರ ಭಾರಿ ದುಬಾರಿ

ಈರುಳ್ಳಿ ಮತ್ತಷ್ಟು ಏರುವ ಸಾಧ್ಯತೆ

ಈರುಳ್ಳಿ ಮಳೆಯಲ್ಲಿ ನೆಂದಿರುವುದರಿಂದ ಒಳ ಪದರಗಳು ಮತ್ತು ಬುಡ ಕೊಳೆತಿರುತ್ತದೆ. ಪ್ರಸ್ತುತ ಈರುಳ್ಳಿ ಬೆಲೆ 50-60 ರು. ತಲುಪಿದೆ. ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಎಪಿಎಂಸಿ(APMC) ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ನಲ್ಲಿ(Hopcoms) ತರಕಾರಿ ದರ (ಕೆ.ಜಿ.ಗೆ ರು.ಗಳಲ್ಲಿ)

ಬೀನ್ಸ್‌ 72
ಬಿಳಿ ಬದನೆಕಾಯಿ 99
ಕ್ಯಾಪ್ಸಿಕಂ 130
ಬಜ್ಜಿ ಮೆಣಸಿನಕಾಯಿ 67
ಟೊಮೇಟೊ 92
ನುಗ್ಗೆಕಾಯಿ 275
ಊಟಿ ಕ್ಯಾರಟ್‌ 104
ನಾಟಿ ಕ್ಯಾರಟ್‌ 100
ಹೂಕೋಸು ಒಂದಕ್ಕೆ 54
ಬೆಂಡೆಕಾಯಿ 76
ಮೂಲಂಗಿ 62
ಹೀರೇಕಾಯಿ 90
ಸೊಪ್ಪುಗಳು ಕಟ್ಟಿಗೆ
ಮೆಂತ್ಯ ಸೊಪ್ಪು 135
ಪಾಲಾಕ್‌ ಸೊಪ್ಪು 100
ದಂಟಿನ ಸೊಪ್ಪು 72
ಸಬ್ಬಕ್ಕಿ 80
ಅರಿವೆ ಸೊಪ್ಪು 72
ಕೊತ್ತಂಬರಿ ನಾಟಿ 88

ಕೈ ಕಚ್ಚುತ್ತಿದೆ ತರಕಾರಿ ಬೆಲೆ : 200 ದಾಟಿದ ಕಟ್ಟು ಕೊತ್ತಂಬರಿ ಸೊಪ್ಪು

ಅಕಾಲಿಕ ಮಳೆ, ಗಾಳಿಗೆ ನೂರಾರು ಎಕರೆ ಬೆಳೆ ನಾಶ

ಮರಿಯಮ್ಮನಹಳ್ಳಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆ, ಗಾಳಿಗೆ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಬೆಳೆದು ನಿಂತಿದ್ದ ಭತ್ತ, ರಾಗಿ, ಕಬ್ಬು, ಅಲಸಂದಿ, ಶೇಂಗಾ ಸೇರಿದಂತೆ ಇತರೆ ಬೆಳೆಗಳು ನೆಲಕ್ಕುರಳಿದೆ.

ಡಣಾಯಕನಕೆರೆ ಮಾಗಾಣಿ ಪ್ರದೇಶ, ಗರಗ-ನಾಗಲಾಪುರ, ಚಿಲಕನಹಟ್ಟಿ, ವೆಂಕಟಾಪುರ, ವ್ಯಾಸನಕೆರೆ, ಡಣಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬೆಳೆ ಹಾನಿ ಆಗಿದ್ದು, 25 ಹೆಕ್ಟೇರ್‌ ಭತ್ತ, 10 ಹೆಕ್ಟೇರ್‌ ರಾಗಿ, 8 ಹೆ. ಕಬ್ಬು, 20 ಹೆ. ಅಲಸಂದಿ, 15 ಹೆ. ಶೇಂಗಾ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗ ವರದಿಯಾಗಿದೆ.

ಹೋಬಳಿಯ ಇತರೆ ಗ್ರಾಮಗಳಾದ ಬ್ಯಾಲಕುಂದಿ, ಗೊಲ್ಲರಹಳ್ಳಿ, ವ್ಯಾಸನಕೆರೆ, ವೆಂಕಟಾಪುರ, ನಂದಿಬಂಡಿ, ತಿಮ್ಮಲಾಪುರ, ಹಾರುವನಹಳ್ಳಿ, ಚಿಲಕನಹಟ್ಟಿ, ಪೋತಲಕಟ್ಟೆಸೇರಿದಂತೆ ವಿವಿಧ ಭಾಗಗಳಲ್ಲಿ ಭತ್ತದ ಬೆಳೆ ಬಹುತೇಕ ನೆಲ ಕಚ್ಚಿದೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಷ್ಟಉಂಟಾದ ಹೊಲ-ಗದ್ದೆಗಳಿಗೆ ವೀಕ್ಷಣೆ ಮಾಡಿ ಹಾನಿಯನ್ನು ಭರಿಸಲು ಸರ್ಕಾರಕ್ಕೆ ವರದಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಮರಿಯಮ್ಮನಹಳ್ಳಿ ಹೋಬಳಿಯ ಗ್ರಾಮಲೆಕ್ಕಾಧಿಕಾರಿಗಳು ಬೆಳೆ ನಷ್ಟಉಂಟಾಗಿರುವ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಕಾರ್ಯದಲ್ಲಿ ತೊಡಗಿಕೊಂಡು ರೈತರ ಹೊಲ-ಗದ್ದೆಗಳಲ್ಲಿ ಉಂಟಾಗಿರುವ ಬೆಳೆ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.

ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಸುಮಾರು 80 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ರಾಗಿ, ಶೇಂಗಾ, ಅಲಸಂದಿ ಸೇರಿದಂತೆ ಇತರೆ ಬೆಳೆಗಳು ನಷ್ಟು ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಇದೇ ರೀತಿಯಲ್ಲಿ ಯಾವ ಯಾವ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎನ್ನುವುದನ್ನು ಸಮೀಕ್ಷೆ ನಡೆಸಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಅ​ಧಿಕಾರಿ ಶಿವಮೂರ್ತಿ ರಾಥೋಡ ತಿಳಿಸಿದ್ದಾರೆ.
 

 

Latest Videos
Follow Us:
Download App:
  • android
  • ios