ದರ್ಶನ್ ಚಿತ್ರರಂಗದಿಂದ ಬ್ಯಾನ್ ವಿಚಾರ ನಮ್ ಕೈಲಿಲ್ಲ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್
ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರ ನಮ್ಮ ಕೈಯಲ್ಲಿ ಇಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದರು.
ಚಿತ್ರದುರ್ಗ (ಜೂ.16): ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರ ನಮ್ಮ ಕೈಯಲ್ಲಿ ಇಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದರು. ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿತ್ರೋದ್ಯಮ ಕಲಾವಿದರು, ವಿತರಕರು ಹಾಗೂ ನಿರ್ದೇಶಕರ ಸಂಘ ಒಳಗೊಂಡಿದ್ದು, ಎಲ್ಲರೂ ಒಟ್ಟಾಗಿ ಸೇರಿ ತೀರ್ಮಾನ ಕೈಗೊಳ್ಳಬೇಕು. ಕೊಲೆ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಈಗಲೇ ಏನನ್ನು ಹೇಳಲು ಆಗುವುದಿಲ್ಲವೆಂದರು.
ಚಿತ್ರದುರ್ಗದಲ್ಲಿ ನಾವು ಈ ತರಹದ ಸುದ್ದಿಗೋಷ್ಠಿ ಮಾಡುತ್ತೇವೆ ಅಂದುಕೊಂಡಿರಲಿಲ್ಲ. ಅತ್ಯಂತ ದುಃಖಕರ ಸಂಗತಿ ಇದಾಗಿದೆ. ಕೊಲೆ ಪ್ರಕರಣವ ಪೊಲೀಸರು ಉತ್ತಮವಾಗಿ ತನಿಖೆ ಮಾಡುತ್ತಿದ್ದಾರೆ. ಯಾರೇ ಮಾಡಿದ್ರೂ ತಪ್ಪು ತಪ್ಪೆ. ವಾಣಿಜ್ಯ ಮಂಡಳಿ ಇಂತಹ ತಪ್ಪುಗಳನ್ನು ಹಲವಾರು ಬಾರಿ ಖಂಡಿಸಿದೆ. ರೇಣುಕಾಸ್ವಾಮಿ ನಿವಾಸಕ್ಕೆ ಹೋದಾಗ ದುಃಖತಪ್ತರ ನೋಡಿ ನಮಗೂ ಕಣ್ಣೀರು ಬಂತು. ನಾವು ಅವರಿಗೆ ಸಂತಾಪ ಹೇಳಲು ಬಂದಿದ್ದೇವೆಯೇ ವಿನಹ ಯಾವುದೇ ರಾಜಿಗಾಗಿ ಅಲ್ಲವೆಂದರು. ಪಿಲ್ಮ್ ಚೇಂಬರ್ ವತಿಯಿಂದ ಅವರಿಗೆ 5 ಲಕ್ಷ ರು. ನೆರವು ನೀಡಿದ್ದೇವೆ. ಇಡೀ ಚಿತ್ರರಂಗ ಅವರೊಟ್ಟಿಗೆ ನಿಲ್ಲಲಿದೆ.
ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ದರ್ಶನ್ ಗ್ಯಾಂಗ್ ಟಾರ್ಚರ್!
ಈ ಫ್ಯಾನ್ ಫಾಲೋವರ್ಸ್‌ನಿಂದ ಸಮಸ್ಯೆಗಳಾಗುತ್ತಿವೆ. ಹಿಂದೆ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್ ಅವರಿಗೂ ಅಭಿಮಾನಿ ಸಂಘಗಳಿದ್ದವು. ಆದರೆ, ಅವುಗಳು ಈ ರೀತಿಯಾಗಿ ಇರುತ್ತಿರಲಿಲ್ಲ. ಈಗಿನ ಅಭಿಮಾನಿ ಸಂಘಗಳು ಪ್ರಚೋದನೆಗೆ ಒಳಗಾಗುತ್ತಿವೆ. ಈ ಕಾರಣಕ್ಕಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು ಇದೆ. ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಮಹಾ ಅಪರಾಧ. ಅಭಿಮಾನಿಗಳಿಗೆ ಸಲಹೆನೀಡಿ, ಆದರೆ ಪ್ರಚೋದನೆ ಮಾಡಿ ಇಂತಹ ಕೆಲಸ ಯಾರು ಮಾಡಬೇಡಿ. ಚಿತ್ರರಂಗ ನಂಬಿದ ಸಾವಿರಾರು ಜನ ಇದ್ದಾರೆ ಎಂದು ನಾಯಕ ನಟರಿಗೆ ಮನವಿ ಮಾಡಿದರು.
ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ತಪ್ಪು ಮಾಡುವುದು ಮನುಷ್ಯನ ಸಹಜ ಗುಣ, ಆದ್ರೆ ಈ ರೀತಿ ಮಾಡಬಾರದಿತ್ತು. ಇದಕ್ಕೆ ಚಿತ್ರರಂಗ ಹೊಣೆ ಅಲ್ಲ. ಅವರೊಬ್ಬರಿಂದ ನಾವೆಲ್ಲ ತಲೆ ತಗ್ಗಿಸುವ ಕೆಲಸವಾಗಿದೆ. ಹಿಂದೆ ರಾಜಕುಮಾರ, ವಿಷ್ಣುವರ್ಧನ್ ಸೇರಿದಂತೆ ಹಿರಿಯರ ನಟರಿಗೆ ಗೌರವ ಕೊಡುತ್ತಿದ್ದರು. ಆದರೆ ಯುವ ನಟರಿಂದ ಸಿನಿಮಾ ಫೀಲ್ಡ್ ದಾರಿ ತಪ್ಪುತ್ತಿದೆ. ದರ್ಶನ್ ಪ್ರಕರಣವ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಯಾರೂ ಮೂಗು ತೂರಿಸಬಾರದು. ನಾವು ಯಾರ ಪ್ರಭಾವಕ್ಕೂ ಒಳಗಾಗಿ ರಾಜಿ ಸೂತ್ರಕ್ಕೆ ಇಲ್ಲಿಗೆ ಬಂದಿಲ್ಲ. ರೇಣುಕಾಸ್ವಾಮಿ ಕುಟುಂಬದ ಜೊತೆ ಇರುತ್ತೇವೆ ಎಂದು ಹೇಳಲು ಆಗಮಿಸಿದ್ದೇವೆ ಎಂದರು.
ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟಿದ್ದು ಬೆಂಗಳೂರಿನ ಬಿಜೆಪಿ ಶಾಸಕರ ಸಂಬಂಧಿ ದೀಪಕ್
ಚಲನಚಿತ್ರ ವಾಣಿಜ್ಯ ಮಂಡಳಿಯ ಖಜಾಂಚಿ ಜಯಸಿಂಹ ಮುಸುರಿ ಮಾತನಾಡಿ, ದರ್ಶನ್ ಹತ್ಯೆ ಪ್ರಕರಣ ಚಿತ್ರರಂಗಕ್ಕೆ ಹೊಸದು. ಈ ಹಿಂದೆ ಇಂತಹ ಘಟನೆಗಳು ನಡೆದಿರಲಿಲ್ಲ. ಅದಕ್ಕಾಗಿ ಇಡೀ ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಾಸ್ವಾಮಿ ಅವರ ಮನೆಗೆ ತೆರಳಿ ಕ್ಷಮೆ ಕೇಳಿದೆ. ದರ್ಶನ್ ಸಿನಿಮಾ ಬ್ಯಾನ್ ಬಗ್ಗೆ ನಾವು ಅಷ್ಟು ಸುಲಭವಾಗಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಚಾರ್ಚ್ ಸೀಟ್ ನೋಡಿದ ಮೇಲೆ ನಾವು ಆರೋಪಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ಕೆಲ ನಿರ್ಮಾಪಕರು ಬಂಡವಾಳ ಹೂಡಿದ್ದು ಅಂತವರನ್ನು ಕರೆಸಿ ಮಾತನಾಡುತ್ತೇವೆ. ಏಕಾಏಕಿ ಬ್ಯಾನ್ ಬಗ್ಗೆ ನಾವು ತುರ್ತು ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಜಯಸಿಂಹ ಮುಸುರಿ ಹೇಳಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಚಿನ್ನೇಗೌಡ, ಬಿ.ಕಾಂತರಾಜ್, ಸೇರಿದಂತೆ ಹಲವು ನಿರ್ಮಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.