ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಹೊಣೆಗೇಡಿತನ ವಸತಿ ಯೋಜನೆಗಳಿಗೆ ಗ್ರಹಣ!

ಕನಸಿನ ಮನೆ ನಿರ್ಮಿಸಿಕೊಂಡು ಸ್ವಂತ ಸೂರು ಹೊಂದಬೇಕೆಂಬ ಹುಕ್ಕೇರಿ ನಗರ ವ್ಯಾಪ್ತಿಯ ಬಡ ಕುಟುಂಬಗಳ ಬಯಕೆ ಈಡೇರಿಕೆ ಗಜಪ್ರಸವದಂತೆ ಸಾಗಿದೆ. ಪುರಸಭೆ ಅಧಿಕಾರಿಗಳ ಅಸಡ್ಡೆ, ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ಪಟ್ಟಣದ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಮಂದಗತಿಯಲ್ಲಿ ಸಾಗಿದೆ.

There is no money for housing schemes for the poor at bellagavi rav

ರವಿ ಕಾಂಬಳೆ

ಹುಕ್ಕೇರಿ (ಅ.31) :  ಕನಸಿನ ಮನೆ ನಿರ್ಮಿಸಿಕೊಂಡು ಸ್ವಂತ ಸೂರು ಹೊಂದಬೇಕೆಂಬ ಹುಕ್ಕೇರಿ ನಗರ ವ್ಯಾಪ್ತಿಯ ಬಡ ಕುಟುಂಬಗಳ ಬಯಕೆ ಈಡೇರಿಕೆ ಗಜಪ್ರಸವದಂತೆ ಸಾಗಿದೆ. ಪುರಸಭೆ ಅಧಿಕಾರಿಗಳ ಅಸಡ್ಡೆ, ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ಪಟ್ಟಣದ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಮಂದಗತಿಯಲ್ಲಿ ಸಾಗಿದೆ.

ಬಡವರ ವಸತಿ, ನಿವೇಶನ ವಿಚಾರದಲ್ಲಿ ಬರೀ ಚುನಾವಣೆ ಹೊಸ್ತಿಲಲ್ಲಿ ಮಾತ್ರ ಆಸಕ್ತಿ ತೋರುವ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು, ಬಳಿಕ ಅದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂಬುದಕ್ಕೆ ಹುಕ್ಕೇರಿ ನಗರದಲ್ಲಿ ವಾಜಪೇಯಿ, ಅಂಬೇಡ್ಕರ್, ಪಿಎಂಎವೈ, ಪುನರ್ವಸತಿ ಮತ್ತು ಸ್ಲಂ ಬೋರ್ಡ್ ಯೋಜನೆಗಳ ಭೌತಿಕ ಪ್ರಗತಿಯೇ ಸಾಕ್ಷಿಯಾಗಿದೆ.

ವಸತಿ ಯೋಜನೆಗಳ ಜಾರಿಗೆ ಸಚಿವ ಜಮೀರ್‌ ಅಹಮದ್‌ ಗಡುವು

ಪಟ್ಟಣದಲ್ಲಿ ವಸತಿ ಮತ್ತು ನಿವೇಶನ ವಿಚಾರದಲ್ಲಿ ಬಡವರೊಂದಿಗೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಚೆಲ್ಲಾಟ ಮುಂದುವರೆದಿದೆ. ವಸತಿ ರಹಿತರ ಪರದಾಟ ಹೆಚ್ಚುತ್ತಿದ್ದು, ಪುರಸಭೆ ವ್ಯಾಪ್ತಿಯಲ್ಲಿ ವಸತಿ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳ್ಳದೆ ಹೇಳೋರು, ಕೇಳೋರು ಇಲ್ಲವಾಗಿದೆ. ತನ್ಮೂಲಕ ವಸತಿ ಯೋಜನೆಗಳಿಗೆ ಗ್ರಹಣ ಬಡಿದಂತಾಗಿದೆ.

ವಾಜಪೇಯಿ ನಗರ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಪಿಎಂಎವೈ ಯೋಜನೆ ಸಹಾಯಧನದ ಕಂತು ಕಾಲ ಕಾಲಕ್ಕೆ ಬರುತ್ತಿಲ್ಲ ಎಂದು ಫಲಾನುಭವಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಾವೇ ಹಣ ಹೊಂದಿಸಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಬಹುತೇಕ ಬಡವರು ಸರ್ಕಾರದಿಂದ ಬರುವ ಸಹಾಯಧನಕ್ಕೆ ಎದುರು ನೋಡುತ್ತಿದ್ದಾರೆ.

ಫಲಾನುಭವಿಗಳಿಗೆ ಅನುದಾನ ಕೊಡಿಸುವಲ್ಲಿ ಸಂಬಂಧಿಸಿದ ಅಧಿಕಾರಿ-ಸಿಬ್ಬಂದಿ ತಲೆ ಕೆಡಿಸಿಕೊಳ್ಳದಿರುವುದು ಎದ್ದು ಕಾಣುತ್ತಿದೆ. ಕೆಲ ಫಲಾನುಭವಿಗಳ ಮನೆಗಳ ನಿರ್ಮಾಣದ ವಿವಿಧ ಹಂತದ ಜಿಪಿಎಸ್ ಮಾಡುವಲ್ಲಿಯೂ ಸಿಬ್ಬಂದಿ ಮೀನಮೇಷ ಎಣಿಸುತ್ತಿದ್ದಾರೆ ಎಂಬ ದೂರುಗಳಿವೆ. ಕಾಲಮಿತಿಯಲ್ಲಿ ಜಿಪಿಎಸ್ ಮಾಡಿ ಅಡಿಟ್ ಹಾಗೂ ಓಕೆ ಮಾಡಲು ಇಲ್ಲಸಲ್ಲದ ನೆಪ ಹೇಳುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

ಪುರಸಭೆಯಲ್ಲಿ ವಾಜಪೇಯಿ ಹಾಗೂ ಅಂಬೇಡ್ಕರ್ ಯೋಜನೆಯಡಿ 2021-22ರ ಅವಧಿವರೆಗೆ ಮಂಜೂರಾದ 414 ಮನೆಗಳ ಪೈಕಿ 255 ಪೂರ್ಣಗೊಂಡಿದ್ದು, 64 ವಿವಿಧ ಹಂತದಲ್ಲಿವೆ. ಉಳಿದಂತೆ 18 ಮನೆಗಳ ನಿರ್ಮಾಣ ಕಾರ್ಯ ಆರಂಭವೇ ಆಗಿಲ್ಲ. ಜತೆಗೆ ಬರೋಬ್ಬರಿ 77 ಮನೆಗಳನ್ನು ರದ್ದುಗೊಳಿಸಲಾಗಿದೆ. 2019-20 ಪಿಎಂಎವೈನಲ್ಲಿ ಮಂಜೂರಾದ 74 ಮನೆಗಳ ಪೈಕಿ 20 ಮಾತ್ರ ಪೂರ್ಣಗೊಂಡಿದ್ದು, 54 ಮನೆಗಳ ನಿರ್ಮಾಣ ನಿಧಾನಗತಿಯಲ್ಲಿ ಸಾಗಿದೆ.

ಸ್ಲಂ ಮನೆಗಳಿಗೂ ಅದೇ ಗತಿ:

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ(ಸ್ಲಂ ಬೋರ್ಡ್)ಯಿಂದ ಪಟ್ಟಣದ ವಿವಿಧ ಕಡೆಗಳಲ್ಲಿ 665 ಮನೆಗಳ ನಿರ್ಮಾಣ ಗುರಿ ನಿಗದಿಪಡಿಸಲಾಗಿದೆ. ಆದರೆ, ಫಲಾನುಭವಿಗಳ ವಂತಿಗೆ ವಿಚಾರ, ಅಧಿಕಾರಿಗಳ ಅಸಡ್ಡೆ ಮತ್ತಿತರ ತಿಕ್ಕಾಟದಿಂದ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ. ಇಲ್ಲಿನ ಹರಿಜನಕೇರಿಯಲ್ಲಿ 304, ಕೊರವರ ಗಲ್ಲಿಯಲ್ಲಿ 364 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಇದರಿಂದ ಬಾಡಿಗೆ ಮನೆಯಲ್ಲಿರುವ ಬಡಕುಟುಂಬಗಳು ಹೈರಾಣಗಿವೆ.

ಬೆಂಗಳೂರು: ಶೀಘ್ರ ಬಿಡಿಎ ಹುಣ್ಣಿಗೆರೆ ವಿಲ್ಲಾ ಮಾರಾಟ: ಬೆಲೆ ಇಂತಿದೆ

ನೆರೆ ಮನೆಗಳೂ ನಿಧಾನ:

ನೆರೆಹಾವಳಿಯಿಂದ ಹಾನಿಗೀಡಾದ ಮನೆಗಳ ಮರುನಿರ್ಮಾಣ ಕಾರ್ಯವೂ ಕುಂಟುತ್ತ ಸಾಗಿದೆ. 2019-20 ರಲ್ಲಿ ಎ ಮತ್ತು ಬಿ 2 ಕೆಟಗರಿಯ 89 ಮನೆಗಳ ನಿರ್ಮಾಣ ಪೈಕಿ 67 ಪೂರ್ಣಗೊಂಡಿದ್ದು, 13 ವಿವಿಧ ಹಂತದಲ್ಲಿವೆ. ಉಳಿದ 9 ಮನೆಗಳಿಗೆ ತಳಪಾಯವೇ ಹಾಕಿಲ್ಲ. 2020-21ರ ಬಿ2 ಕೆಟಗರಿಯ 14 ಮನೆಗಳ ಪೈಕಿ 4 ಪೂರ್ಣಗೊಂಡಿದ್ದರೆ, 7 ವಿವಿಧ ಹಂತದಲ್ಲಿದ್ದು, 3 ಆರಂಭವೇ ಆಗಿಲ್ಲ. 2021-22 ರಲ್ಲಿ ಎ ಮತ್ತು ಬಿ2 ಕೆಟಗರಿಯ 19 ಪೈಕಿ 4 ಪೂರ್ಣಗೊಂಡಿದ್ದು, 10 ವಿವಿಧ ಹಂತದಲ್ಲಿವೆ. 2 ಮನೆ ಆರಂಭಗೊಂಡಿಲ್ಲ.

ವಿವಿಧ ಚುನಾವಣೆ ನೀತಿ ಸಂಹಿತೆಯಿಂದ ಮನೆಗಳ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಹುಕ್ಕೇರಿ ಪುರಸಭೆಯಿಂದ ಮಂಜೂರಾದ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲಾಗುವುದು. ಜತೆಗೆ ನೆರೆಹಾವಳಿ, ಸ್ಲಂ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. --ಕಿಶೋರ ಬೆಣ್ಣಿ, ಮುಖ್ಯಾಧಿಕಾರಿ.

Latest Videos
Follow Us:
Download App:
  • android
  • ios