Mekedatu Project ಜಾರಿಗಾಗಿ ಜ.19ಕ್ಕೆ ತಮಿಳುನಾಡು ಗಡಿ ಬಂದ್: ವಾಟಾಳ್ ನಾಗರಾಜ್!
*ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಘೋಷಣೆ
*ತಮಿಳುನಾಡು ವಿರುದ್ಧ ಕರಾಳ ದಿನಾಚರಣೆ ಆಚರಣೆ
*ಮೇಕೆದಾಟು ಯೋಜನೆಗೆ ಶಿಲಾನ್ಯಾಸ ಮಾಡಬೇಕು: ವಾಟಾಳ್
ಬೆಂಗಳೂರು (ಜ. 10): ಮೇಕೆದಾಟು ಯೋಜನೆ ಜಾರಿಗೆ (Mekedatu Project) ಒತ್ತಾಯಿಸಿ ಜ.19ರಂದು ತಮಿಳುನಾಡು (Tamil Nadu) ಗಡಿ ಬಂದ್ ಮಾಡುತ್ತೇವೆ ಎಂದು ಕನ್ನಡ ಚಳವಳಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ತಿಳಿಸಿದರು. ವಾಟಾಳ್ ಪಕ್ಷ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತಮಿಳುನಾಡು ವಿರುದ್ಧ ಕರಾಳ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ‘ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ವಿರೋಧ ಮಾಡುತ್ತಿರುವುದು ಅತ್ಯಂತ ಹೀನಾಯ ಹಾಗೂ ಬೇಜವಾಬ್ದಾರಿತನವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಜ. 19 ರಂದು ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದರು.
‘ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ಶಿಲಾನ್ಯಾಸ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಯಕತ್ವದಲ್ಲಿ ಎಲ್ಲಾ ಶಾಸಕರು ಒಟ್ಟಾಗಿ ಒಂದು ನಿಯೋಗವಾಗಿ ದೆಹಲಿಗೆ ತೆರಳಿ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಬೇಕು. ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಪ್ರಧಾನಮಂತ್ರಿಯವರ ಮೇಲೆ ತೀವ್ರ ಒತ್ತಡ ತರಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ: Mekedatu padayatra ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ, ಸ್ವಗ್ರಾಮದಲ್ಲಿ ಡಿಕೆಶಿ ಭಾವನಾತ್ಮಕ ಭಾಷಣ
‘ಮೇಕೆದಾಟು ಯೋಜನೆ ಜಾರಿ ಕುರಿತು ಕಾಂಗ್ರೆಸ್ ಪಾದಯಾತ್ರೆಗೆ ವಿರೋಧವಿಲ್ಲ. ಆದರೆ, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆಯನ್ನು ಜಾರಿ ಯಾಕೆ ಮಾಡಲಿಲ್ಲ. ಆದರೆ, ಈಗ ಸಂಗಮದಿಂದ ಪಾದಯಾತ್ರೆ ಆರಂಭ ಮಾಡಿದ್ದಾರೆ ಎಂದು ವ್ಯಂಗವಾಡಿದ ಅವರು ನಾವು 2006ರಲ್ಲಿ ಮೇಕೆದಾಟು ಜಾಗಕ್ಕೆ ಹೋಗಿ ಶಂಕುಸ್ಥಾಪನೆ ಮಾಡಿ ಬಂದಿದ್ದೇವೆ’ ಎಂದು ತಿಳಿಸಿದರು.
ಮೇಕೆದಾಟು ಡ್ಯಾಂ ಏಕೆ ಬೇಕು?
ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪು ಹಾಗೂ ಸುಪ್ರೀಂಕೋರ್ಟ್ ಆದೇಶದ ಬಳಿಕ, ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಹರಿಸಬೇಕು. ಉತ್ತಮ ಮುಂಗಾರಿನ ವರ್ಷದಲ್ಲಿ ಇದನ್ನು ಪೂರೈಸಲು ಸಮಸ್ಯೆಯೇ ಆಗುವುದಿಲ್ಲ. ಬೆಂಕಿ ಹೊತ್ತಿಕೊಳ್ಳುವುದೇ ಮಳೆ ಕಡಿಮೆಯಾದಾಗ. ಅಧಿಕ ಮಳೆಯಾದಾಗ ಕರ್ನಾಟಕದ ಜಲಾಶಯಗಳು ತುಂಬಿ, ಹೆಚ್ಚುವರಿ ನೀರೆಲ್ಲಾ ತಮಿಳುನಾಡು ಪಾಲಾಗುತ್ತದೆ. ಉದಾಹರಣೆಗೆ 2020-21ನೇ ಸಾಲಿನ ಜಲ ವರ್ಷ (ಜೂನ್‌ನಿಂದ ಮೇ)ದಲ್ಲಿ ಕರ್ನಾಟಕದಿಂದ 34 ಟಿಎಂಸಿ ನೀರು ನೆರೆರಾಜ್ಯಕ್ಕೆ ಹೆಚ್ಚುವರಿಯಾಗಿ ಹರಿದಿದೆ. 2018-19ನೇ ಜಲ ವರ್ಷದಲ್ಲಿ 227 ಟಿಎಂಸಿ, 2019-20ನೇ ಸಾಲಿನಲ್ಲಿ 98 ಟಿಎಂಸಿ ನೀರು ತಮಿಳುನಾಡಿಗೆ ಹೆಚ್ಚುವರಿಯಾಗಿ ಸಿಕ್ಕಿದೆ.
ಇದನ್ನೂ ಓದಿ: Mekedatu padayatra ಪಾದಯಾತ್ರೆ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ಯಾಕೆ? ಸ್ಪಷ್ಟನೆ ಕೊಟ್ಟ ಡಿಕೆಶಿ
4 ದಶಕಗಳ ಸರಾಸರಿಯನ್ನೇ ತೆಗೆದುಕೊಂಡರೂ ತಮಿಳುನಾಡಿಗೆ ನಿಗದಿತ ಕೋಟಾಕ್ಕಿಂತ ಹೆಚ್ಚುವರಿಯಾಗಿ 45 ಟಿಎಂಸಿ ನೀರು ಸಿಗುತ್ತಿದೆ. ಕರ್ನಾಟಕದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳ ಒಟ್ಟು ಸಾಮರ್ಥ್ಯ 115 ಟಿಎಂಸಿ. ಇವೆಲ್ಲಾ ಭರ್ತಿಯಾಗಿ, ಕಾವೇರಿ ಕಣಿವೆಯ ಕೆರೆ ಕಟ್ಟೆಗಳೆಲ್ಲಾ ಕೋಡಿ ಬಿದ್ದ ಮೇಲೆ ಸಿಗುವ ನೀರೆಲ್ಲಾ ತಮಿಳುನಾಡಿನದ್ದೇ. ಜತೆಗೆ ಅಣೆಕಟ್ಟೆಹಾಗೂ ಜಲಮಾಪನ ಕೇಂದ್ರವಿರುವ ಬಿಳಿಗುಂಡ್ಲು ನಡುವೆ ಬೀಳುವ ಮಳೆ ನೀರು ಕೂಡ ತಮಿಳುನಾಡಿಗೆ ಯಾವ ನಿಯಂತ್ರಣವೂ ಇಲ್ಲದೆ ಹರಿದುಹೋಗುತ್ತದೆ. ಈ ಹೆಚ್ಚುವರಿ ನೀರನ್ನು ತಮಿಳುನಾಡು ಕೂಡ ಸಂಪೂರ್ಣವಾಗಿ ಸಂಗ್ರಹಿಸಿಡಲು ಆಗುವುದಿಲ್ಲ. ಹೀಗಾಗಿ ಅದು ಸಮುದ್ರ ಸೇರುತ್ತದೆ. ಆ ನೀರನ್ನು ಹಿಡಿದಿಡಲು ಸಂಗಮದಿಂದ 4 ಕಿ.ಮೀ. ಕೆಳಭಾಗದಲ್ಲಿ 9000 ಕೋಟಿ ರು. ವೆಚ್ಚದಲ್ಲಿ ಅಣೆಕಟ್ಟೆನಿರ್ಮಿಸುವ ಉದ್ದೇಶ ಕರ್ನಾಟಕದ್ದು. ಅದೇ ಮೇಕೆದಾಟು ಡ್ಯಾಂ.