Asianet Suvarna News Asianet Suvarna News

ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿರುವ ಹೆಮ್ಮೆಯ ರೈತ

ಕೇವಲ ಮಳೆ ನೀರನ್ನೇ ಸದ್ಭಳಕೆ ಮಾಡಿಕೊಂಡು ಹೇಗೆ ತೋಟ ಉಳಿಸಿಕೊಳ್ಳಬೇಕೆಂಬುದನ್ನು ತೋರಿಸಿ ಕೊಟ್ಟ ರವೀಶ್ ಗೂಳೂರು| ತಮ್ಮ ನೈಸರ್ಗಿಕ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ ಸುತ್ತಮುತ್ತಲಿನ ಕೃಷಿಕರಿಗೂ ಮಾದರಿಯಾದ ರೈತ|  

Raveesh Golur from Tumakuru Honored With Suvarna Kannadaprabha Raita Ratna Award grg
Author
Bengaluru, First Published Feb 12, 2021, 1:41 PM IST

ರೈತರತ್ನ ರವೀಶ್ ಗೂಳೂರು
ವಿಭಾಗ: ನೈಸರ್ಗಿಕ ಕೃಷಿ
ಊರು, ಜಿಲ್ಲೆ: ಗೂಳೂರು, ತುಮಕೂರು

ತುಮಕೂರು(ಫೆ.12): ರಾಸಾಯನಿಕ ಗೊಬ್ಬರವಿಲ್ಲದೆ ನೈಸರ್ಗಿಕವಾಗಿ ಕೃಷಿ ಪದ್ಧತಿಯಡಿ ಬೇಸಾಯ.

ಸಾಧನೆ ವಿವರ: 

ಐಟಿಐ ಪದವೀಧರರಾದ ರವೀಶ್ ಗೂಳೂರು, ಹಿಂದಿನಿಂದಲೂ ಕೃಷಿಯತ್ತ ಹೆಚ್ಚು ಆಕರ್ಷಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಓದು ಮುಗಿದಾಕ್ಷಣವೇ ಕೃಷಿಗೆ ಧುಮುಕಿದರು. ಆದರೆ ಇವರ ದುರಾದೃಷ್ಟವೆಂಬಂತೆ ಅಂತರ್ಜಲ ಬತ್ತಿ ಹೋದ ಕಾರಣದಿಂದಾಗಿ ಇವರ ತೋಟದಲ್ಲಿದ್ದ ನೀರಿನ ಮೂಲಗಳಾದ ಬೋರ್‌ವೆಲ್‌ಗಳು ನೀರು ತೆಗೆಯಲು ಅನರ್ಹವಾದವು.

ಇದರಿಂದ ಧೃತಿಗೆಡದ ಗೂಳೂರು ತೋಟದಲ್ಲಿ ಮತ್ತೆ ಬೋರ್‌ವೆಲ್‌ಗಳನ್ನು ಕೊರೆಸಿದರು. ಈ ರೀತಿಯಾಗಿ ತೋಟದಲ್ಲಿ ಒಟ್ಟಾರೆ 38 ಲಕ್ಷ ರು. ವೆಚ್ಚದಲ್ಲಿ 22 ಬೋರ್‌ವೆಲ್‌ಗಳನ್ನು ಹಾಕಿಸಿದರು. ಭೂಮಿಯ ಅಂತರಾಳದಲ್ಲಿ ನೀರಿದ್ದರೆ ಅಲ್ಲವೇ, ಬೋರ್‌ವೆಲ್‌ಗೆ ನೀರು ಬೀಳುವುದು. ಹೀಗಾಗಿ ಇವರು ಹಾಕಿಸಿದ್ದ ಅಷ್ಟೂ ಬೋರ್‌ವೆಲ್‌ಗಳು ಕೆಲಸಕ್ಕೆ ಬಾರದೆ ನಿಷ್ಕ್ರಿಯವಾದವು. ಈ ಹಂತದಲ್ಲಿ ಗೂಳೂರು ಅವರ ಕೈಹಿಡಿದದ್ದೇ ನೈಸರ್ಗಿಕ ಕೃಷಿ ಎಂಬ ಈ ಪರಿಕಲ್ಪನೆ. ಕೇವಲ ಮಳೆ ನೀರನ್ನೇ ಸದ್ಭಳಕೆ ಮಾಡಿಕೊಂಡು ಹೇಗೆ ತೋಟ ಉಳಿಸಿಕೊಳ್ಳಬೇಕೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಜೊತೆಗೆ ತಮ್ಮ ನೈಸರ್ಗಿಕ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ ಸುತ್ತಮುತ್ತಲಿನ ಕೃಷಿಕರಿಗೂ ಮಾದರಿ ರೈತರಾಗಿದ್ದಾರೆ.

ಇದೀಗ ಗೂಳೂರು ಅವರ ಕೇವಲ 5 ಎಕರೆ ಕೃಷಿ ಭೂಮಿಯಲ್ಲಿ 500 ರಿಂದ 550 ಸಸ್ಯರಾಶಿಗಳ ಸಂಗ್ರಹವಿದೆ. 70-80 ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಹೆಚ್ಚು ನೀರು ಅವಲಂಬಿಸದ ಲೋನಿ, ಮಸಾಲೆ ಪದಾರ್ಥಗಳು, ಕರ್ಪೂರ, ಗೋಡಂಬಿ, ಬೆಣ್ಣೆಹಣ್ಣು, ಕರ್ಜೂರ ಸೇರಿದಂತೆ ಇನ್ನಿತರ ಹಣ್ಣಿನ ಗಿಡಗಳನ್ನು ಸಹ ಬೆಳೆದಿದ್ದಾರೆ.

ಲ್ಯಾಬ್ ಇಲ್ಲ, ಪ್ರಯೋಗವಿಲ್ಲ: ಕೋಳಿಯ ಹೊಸ ತಳಿ ಕಂಡುಹಿಡಿದ ಹಳ್ಳಿ ಹೈದ

ಗಮನಾರ್ಹ ಅಂಶ: 

ಗೂಳೂರು ಅವರು ಈ ಕೃಷಿಯ ಮೂಲಕ ಸುತ್ತಮುತ್ತಲಿನವರಿಗೆ ಮಾದರಿಯಾಗಿದ್ದಾರಷ್ಟೇ ಅಲ್ಲದೆ ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಹೌದು, ಗೂಳೂರು ಅವರು ತಮ್ಮ ತೋಟದಲ್ಲಿ ನಾನಾ ಬಗೆಯ ಹಣ್ಣು, ಅಡಕೆ, ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ. ಜೊತೆಗೆ ಕಾಡುಗೆಡ್ಡೆಗಳನ್ನು ಉದ್ದೇಶಪೂರ್ವಕವಾಗಿ ಬೆಳೆಯುತ್ತಾರೆ. ಈ ಕಾಡುಗೆಡ್ಡೆಗಳನ್ನು ತಿನ್ನಲು ಇಲಿಗಳು ಬರುತ್ತವೆ. ಇಲಿಗಳನ್ನು ಆಹಾರವಾಗಿ ಅವಲಂಬಿಸಿರುವ ಹಾವುಗಳ ಸಂತತಿಯೂ ಹೆಚ್ಚುತ್ತದೆ. ಹಾವು ಮತ್ತು ಇಲಿಗಳು ಕ್ರಿಮಿ-ಕೀಟಗಳನ್ನು ತಿನ್ನುವುದರಿಂದ ಯಾವುದೇ ಕೀಟ ನಾಶಕವಿಲ್ಲದೆ ಬೆಳೆಗಳನ್ನು ಹಾನಿ ಮಾಡಬಹುದಾದ ಕ್ರಿಮಿ-ಕೀಟಗಳ ನಾಶವಾಗಲಿದೆ. ಇದರಿಂದ ಜೀವ ವೈವಿಧ್ಯವೂ ಹೆಚ್ಚಲಿದೆ.

ವರ್ಷಕ್ಕೆ 5-6 ಬಾರಿ ಅಣಬೆ ಫಸಲು ಕೈಗೆ ಬರುತ್ತದೆ. ವರ್ಷಕ್ಕೆ 70-80 ಕೆಜಿ ಜೇನುತುಪ್ಪ ತೆಗೆಯುತ್ತಾರೆ. ಒಟ್ಟಾರೆ ವಾರ್ಷಿಕ 5 ರಿಂದ 8 ಲಕ್ಷ ರು. ವರಮಾನ. ಜೊತೆಗೆ ಇವರ ಮಾದರಿ ಕೃಷಿ ಭೂಮಿಗೆ ಪಂಜಾಬ್, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಜನ ಕೃಷಿ ಪ್ರವಾಸವನ್ನು ಕೈಗೊಳ್ಳುತ್ತಾರೆ. 

Follow Us:
Download App:
  • android
  • ios