Praveen nettaru murder case: ಐವರು ಆರೋಪಿಗಳ ಮನೆಗೆ ಎನ್‌ಐಎ ನೋಟಿಸ್!
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿಯ (ಎನ್‌ಐಎ) ಅಧಿಕಾರಿಗಳ ತಂಡ ಮಂಗಳವಾರ ದ.ಕ. ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ಮಂಗಳೂರು/ಸೋಮವಾರಪೇಟೆ (ಜೂ.28) : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ಏಜೆನ್ಸಿಯ (ಎನ್‌ಐಎ) ಅಧಿಕಾರಿಗಳ ತಂಡ ಮಂಗಳವಾರ ದ.ಕ. ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದೆ.
ನೆಟ್ಟಾರು ಹತ್ಯೆ ಪ್ರಕರಣ(Praveen nettaru murder case )ದ ಐವರು ಆರೋಪಿಗಳಾದ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ಧಿಕ್, ಉಮರ್ ಫಾರೂಕ್, ನೌಷದ್ ಹಾಗೂ ಮಸೂದ್ ಅಗ್ನಾಡಿಗಾಗಿ ಎನ್‌ಐಎ ತಂಡ ತೀವ್ರ ಶೋಧ ಕಾರ್ಯ ಕೈಗೊಂಡಿದೆ. ಇವರ ಪತ್ತೆಗೆ ಈಗಾಗಲೇ ಆರೋಪಿಗಳ ಭಾವಚಿತ್ರ ಇರುವ ವಾಂಟೆಡ್ ಲಿಸ್ಟ್‌ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿತ್ತು. ಆರೋಪಿಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಆರೋಪಿಗಳ ಮನೆಗಳಿಗೆ ಭೇಟಿ ನೀಡಿ, ಮನೆಯವರ ವಿಚಾರಣೆ ನಡೆಸಿ, ಮನೆಗಳಿಗೆ ನೋಟಿಸ್ ಅಂಟಿಸಿದೆ.
ಕರಾವಳಿಯಂತೆ ಬಳ್ಳಾರಿಯಲ್ಲೂ ಪಿಎಫ್‌ಐ ಆ್ಯಕ್ಟಿವ್: ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ನೌಷದ್‌ನ ಮನೆಗೆ ಭೇಟಿ ನೀಡಿದ ತಂಡ, ಮನೆಯವರ ವಿಚಾರಣೆ ನಡೆಸಿತು. ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಈತನ ಮೇಲಿದೆ. ಆರೋಪಿಗಳಿಗೆ ನೌಷದ್ ತಮಿಳ್ನಾಡಿನ ಈರೋಡ್‌ನಲ್ಲಿ ಆಶ್ರಯ ಕಲ್ಪಿಸಿದ್ದ. ಬಳಿಕ, ಬೆಳ್ಳಾರೆ, ಸುಳ್ಯಗಳಿಗೂ ತಂಡ ಭೇಟಿ ನೀಡಿತು.
ಕೊಡಗಿಗೂ ಭೇಟಿ:
ನಂತರ, ಕೊಡಗಿನ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದ ಕಾನ್ವೆಂಟ್ ಬಾಣೆಯ ನಿವಾಸಿ ಅಬ್ಲುಲ್ ನಜೀರ್ ಮತ್ತು ಕಲ್ಕಂದೂರು ಗ್ರಾಮದ ನಿವಾಸಿ ಅಬ್ಲುಲ್ ರೆಹಮಾನ್ ಅಲಿಯಾಸ್ ಅದ್ರಮನ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿತು. ಇಬ್ಬರೂ ವಿದೇಶಕ್ಕೆ ತೆರಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇವರಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದ ಕಾರ್ಯಕರ್ತರಾಗಿದ್ದು, ಕೃತ್ಯ ಎಸಗಲು ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಇವರ ಮೇಲಿದೆ.
Praveen Nettaru Wife Job: ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕಕ್ಕೆ ಆದೇಶ
2022ರ ಜು.26ರಂದು ಬೆಳ್ಳಾರೆಯ ನೆಟ್ಟಾರಿನಲ್ಲಿ ಪ್ರವೀಣ್‌ನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೈವಾಡವಿರುವ ಶಂಕೆ ಮೇರೆಗೆ ಇದನ್ನು ಎನ್‌ಐಎ ತನಿಖೆಗೆ ಸರ್ಕಾರ ವಹಿಸಿತ್ತು. ಪ್ರಕರಣದ 21 ಆರೋಪಿಗಳ ಪೈಕಿ 16 ಮಂದಿಯನ್ನು ಎನ್‌ಐಎ ತಂಡ ಈಗಾಗಲೇ ಬಂಧಿಸಿದೆ.