Belagavi Winter Session: ಹಿಂದು-ಮುಸ್ಲಿಮರ ಹತ್ಯೆ: ಪರಿಷತ್‌ನಲ್ಲಿ ಗದ್ದಲ
ಕರಾವಳಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಹಿಂದು-ಮುಸ್ಲಿಂ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಸಂಬಂಧ ಮೇಲ್ಮನೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕಾವೇರಿದ ಚರ್ಚೆ, ಆರೋಪ-ಪ್ರತ್ಯಾರೋಪ, ವಾಗ್ವಾದ ಹೆಚ್ಚಾದ ಪರಿಣಾಮ ಸಭಾಪತಿಗಳು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
ವಿಧಾನ ಪರಿಷತ್ (ಡಿ.29) : ಕರಾವಳಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಹಿಂದು-ಮುಸ್ಲಿಂ ಕಾರ್ಯಕರ್ತರ ಹತ್ಯೆ ಪ್ರಕರಣಗಳ ಸಂಬಂಧ ಮೇಲ್ಮನೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕಾವೇರಿದ ಚರ್ಚೆ, ಆರೋಪ-ಪ್ರತ್ಯಾರೋಪ, ವಾಗ್ವಾದ ಹೆಚ್ಚಾದ ಪರಿಣಾಮ ಸಭಾಪತಿಗಳು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
ಹರಿಪ್ರಸಾದ್ ಆಕ್ರೋಶ:
ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯಮ 330ರ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮಾತನಾಡಿ, ಬುದ್ಧಿವಂತರ, ಸಾಕ್ಷರತೆ ಹೆಚ್ಚಿರುವ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆಗಳ ಮುಖಾಂತರ ಶಾಂತಿ ಕದಡುವ ಕೆಲಸವಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳಿಂದ ಧರ್ಮದ ಅಮಲಿನಲ್ಲಿ ತೇಲುತ್ತಿದೆ. ಒಂದು ಕೋಮಿನ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿದರೆ, ಅಂತಹದ್ದೇ ಪ್ರಕರಣಗಳಲ್ಲಿ ಮತ್ತೊಂದು ಕೋಮಿನವರ ವಿರುದ್ಧ ದುರ್ಬಲ ಸೆಕ್ಷನ್‌ಗಳನ್ನು ಹಾಕಲಾಗುತ್ತದೆ. ಸರ್ಕಾರದ ಈ ರೀತಿಯ ಧೋರಣೆಗಳಿಂದಲೇ ಈ ಕೊಲೆಗಳಾಗುತ್ತಿವೆ ಎಂದು ಆರೋಪಿಸಿದರು.
Border dispute: ಮುಂಬೈ ಕೇಂದ್ರಾಡಳಿತ ಮಾಡಿ: ಪರಿಷತ್‌ನಲ್ಲಿ ಆಗ್ರಹ
ಆರಗ ತಿರುಗೇಟು:
ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಧರ್ಮದ ಆಧಾರದಲ್ಲಿ ಕೇಸುಗಳನ್ನು ಹಾಕುವುದಿಲ್ಲ. ಅಪರಾಧದ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಈ ರಾಜ್ಯದಲ್ಲಿ ಎಲ್ಲ ಧರ್ಮದವರಿಗೂ ಒಂದೇ ಕಾನೂನು. ಪೊಲೀಸರು ನಾವು-ನೀವು ಹೇಳಿದಂತೆ ಪ್ರಕರಣ ದಾಖಲಿಸುವುದಿಲ್ಲ. ಅಷ್ಟಕ್ಕೂ ಪಿಎಫ್‌ಐ ಇಷ್ಟುಬೆಳೆಯಲು ಯಾರು ಕಾರಣ? ಟಿಪ್ಪು ಜಯಂತಿಯಿಂದ ಎಷ್ಟುಕೊಲೆಗಳಾದವು. 2017ರಲ್ಲಿ 30 ಸಾವಿರ ಮಂದಿಯ ಮೇಲೆ ರೌಡಿ ಪಟ್ಟಿತೆರೆಯಲಾಯಿತು. ಅದರಲ್ಲಿ ಹಿಂದೂ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತರಾಟೆಗೆ ತೆಗೆದುಕೊಂಡರು. ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ನಜೀರ್ ಅಹ್ಮದ್ ಈ ವಿಷಯವಾಗಿ ಮಾತನಾಡಿದರು.
ನಾಲಾಯಕ್ ಗೃಹ ಸಚಿವ: ಹರಿಪ್ರಸಾದ್
‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಿಜೆಪಿ ನಾಯಕರ ರೀತಿ ಮಾತನಾಡುತ್ತಿದ್ದಾರೆ. ಹಿಂದು ಆಗಲಿ ಅಥವಾ ಮುಸ್ಲಿಂ ಆಗಲಿ ಯಾರದೇ ಕೊಲೆಗಳು ಆಗಬಾರದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಎಂಬುದು ನಮ್ಮ ಆಗ್ರಹವಾಗಿದೆ. ಆದರೆ, ಗೃಹ ಸಚಿವರು ಸಂಘದ ಕಾರ್ಯಕರ್ತನ ರೀತಿ ಮಾತಾಡುತ್ತಿದ್ದಾರೆ. ಗೃಹ ಸಚಿವರಾಗಲು ನಾಲಾಯಕ್’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಪ್ರತಿಪಕ್ಷದ ಮೇಲೆ ಮುಗಿಬಿದ್ದರು. ಸದನಲ್ಲಿ ಕೆಲ ಕಾಲ ಗದ್ದಲ ಏರ್ಪಟ್ಟಿತು.
ಸಿದ್ದು ವಿರುದ್ಧ ಕೋಟ ಕಿಡಿ:
ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹಿಂದೂಗಳ ಸರಣಿ ಕೊಲೆಗಳಾದವು. ಅವರು ಯಾವೊಂದು ಕುಟುಂಬಕ್ಕೆ ಸಾಂತ್ವನ ಹೇಳುವುದು ಒತ್ತಟ್ಟಿಗಿರಲಿ, ಹತ್ಯೆಯಾದ ಎಂದು ಘೋಷಿಸಲೂ ಇಲ್ಲ. ಪರಿಹಾರ ದೂರದ ಮಾತು. 175 ಪ್ರಕರಣಗಳನ್ನು ವಾಪಸ್ ಪಡೆದು, 1,600 ಆರೋಪಿಗಳನ್ನು ಬಿಡುಗಡೆ ಮಾಡಿದರು. ಅವರೆಲ್ಲಾ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ ಎಂದರು.
ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್, ಚುನಾವಣೆ ದೃಷ್ಟಿಯಿಂದ ಬಿಜೆಪಿ ಸರ್ಕಾರ ಮತ್ತು ತನ್ನ ಅಂಗ ಸಂಸ್ಥೆಗಳಿಂದ ಈ ಕೊಲೆ ಪ್ರಕರಣಗಳು ಮತ್ತು ಪಕ್ಷಪಾತ ಧೋರಣೆ ಆಗುತ್ತಿದೆ. ಇದು ಮುಂದೆಯೂ ಆಗಲಿದೆ ಎಂದು ಟೀಕಿಸಿದರು.
ಬಿಜೆಪಿಯ ಭಾರತಿ ಶೆಟ್ಟಿಮಾತನಾಡಿ, ಅಪರಾಧ ಹಿಂದೂ ಮಾಡಲಿ ಅಥವಾ ಮುಸ್ಲಿಂ ಮಾಡಲಿ ತಪ್ಪೇ. ಆ ಕೃತ್ಯಗಳನ್ನು ಪೋಷಣೆ ಮಾಡುವುದನ್ನು ನಿಲ್ಲಿಸಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡುವುದು, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಸರಿ ಅಲ್ಲ ಎಂದು ಹೇಳಿದರು.
ನಜೀರ್ ಅಹಮ್ಮದ್ ಮಾತನಾಡಿ, ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಟೀಕಿಸುವುದು ಎಷ್ಟುಸರಿ? ಯಾವ ಸಂದೇಶ ನಾವು ಸಮಾಜಕ್ಕೆ ನೀಡುತ್ತಿದ್ದೇವೆ? ಎರಡೂ ಪಕ್ಷಗಳ ಸದಸ್ಯರ ಸಭೆ ಕರೆದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಧರ್ಮ ಕೊಲೆ ಮಾಡು ಎಂದು ಹೇಳಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಪಿಎಫ್‌ಐ ನಿಷೇಧ ಗುಜರಾತ್ ಚುನಾವಣೆಯ ಗಿಮಿಕ್: ಹರಿಪ್ರಸಾದ್
‘ರಾಜ್ಯದಲ್ಲಿ ಎರಡು ಕಾನೂನುಗಳಿವೆ, ಮುಸ್ಲಿಮರಿಗೆ ರಕ್ಷಣೆ ನೀಡಲು ಆಗುವುದಿಲ್ಲ ಎಂದು ಹೇಳಿಬಿಡಿ. ಹಾಗೂ ಅವರಿಂದ ತೆರಿಗೆ ಸಂಗ್ರಹ ಮಾಡುವುದನ್ನು ನಿಲ್ಲಿಸಿ’ ಎಂದು ಆಗ್ರಹಿಸಿದ ಅವರು, ‘ದಕ್ಷಿಣ ಕನ್ನಡದಲ್ಲಿ ಮರಳು ದಂಧೆ, ಪೆಟ್ರೋಲಿಯಂ ದಂಧೆ, ಇತ್ತೀಚೆಗೆ ಗಾಂಜಾ ದಂಧೆ ಹಿನ್ನೆಲೆಯಲ್ಲಿ ಕೊಲೆಗಳಾಗುತ್ತಿವೆ. ಆದರೆ, ಅದಕ್ಕೆ ಧರ್ಮದ ಲೇಪನ ಮಾಡಲಾಗುತ್ತಿದೆ. ಹೆಣದ ಮೇಲೆ ರಾಜಕಾರಣ ಸಲ್ಲದು. ಕೊಲೆಯಾದ ಹಿಂದೂ ಕಾರ್ಯಕರ್ತನ ಮನೆಗೆ ಹೋಗಿ ಮುಖ್ಯಮಂತ್ರಿ ಸಾಂತ್ವನ ಹೇಳುತ್ತಾರೆ. ಮುಸ್ಲಿಂ ಯುವಕನ ಮನೆಗೆ ಹೋಗುವುದೇ ಇಲ್ಲ. ಇಬ್ಬಗೆಯ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.