Asianet Suvarna News Asianet Suvarna News

ಕೆಪಿಎಸ್ಸಿ ಎಡವಟ್ಟಿಂದ ಬಡ ಅಭ್ಯರ್ಥಿಗಳಿಗೆ ಅನ್ಯಾಯ: ಕನ್ನಡದ ಪ್ರಶ್ನೆ, ಅನುವಾದದಲ್ಲಿ ಸಮಸ್ಯೆ, ಗಣ್ಯರ ಆಕ್ರೋಶ

ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತ ಪ್ರಶ್ನೆಗಳ ಅಧ್ವಾನಗಳ ಪಟ್ಟಿ ಮತ್ತಷ್ಟು ದೊಡ್ಡದಾಗುತ್ತಲೇ ಇದೆ. ಪತ್ರಿಕೆಗಳನ್ನು ಗಹನವಾಗಿ ನೋಡಿದಾಗ ಒಂದೊಂದೇ ತಪ್ಪುಗಳು ಬಹಿರಂಗವಾಗುತ್ತಿವೆ. 

Injustice to poor candidates by KPSC stumbling block Kannada question problem in translation gvd
Author
First Published Aug 30, 2024, 8:38 AM IST | Last Updated Aug 30, 2024, 8:38 AM IST

ಬೆಂಗಳೂರು (ಆ.30): ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತ ಪ್ರಶ್ನೆಗಳ ಅಧ್ವಾನಗಳ ಪಟ್ಟಿ ಮತ್ತಷ್ಟು ದೊಡ್ಡದಾಗುತ್ತಲೇ ಇದೆ. ಪತ್ರಿಕೆಗಳನ್ನು ಗಹನವಾಗಿ ನೋಡಿದಾಗ ಒಂದೊಂದೇ ತಪ್ಪುಗಳು ಬಹಿರಂಗವಾಗುತ್ತಿವೆ. ಕನ್ನಡದಲ್ಲಿ ಗರಿಷ್ಠ ತಪ್ಪುಗಳಾಗಿರುವುದರಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು, ಗ್ರಾಮೀಣ ಭಾಗದವರು, ಸರ್ಕಾರಿ ನೌಕರಿಯ ಕನಸು ಕಂಡಿರುವ ಬಡವರ ಮಕ್ಕಳಿಗೆ ಭಾರಿ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಜಾಲತಾಣಗಳಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಕಾರಣ ಮರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿ ಎಡವಟ್ಟಿನ ವಿರುದ್ಧ ಧ್ವನಿ ಎತ್ತಿರುವ ಅಭ್ಯರ್ಥಿಗಳ ಜೊತೆಗೆ ವಿರೋಧ ಪಕ್ಷಗಳ ನಾಯಕರು, ಶಾಸಕರು, ಸಂಸದರು, ಗಣ್ಯರು, ಡಾ.ರಾಜ್‌ಕುಮಾರ್ ಅಕಾಡೆಮಿ ಸೇರಿದಂತೆ ವಿವಿಧ ಕೋಚಿಂಗ್ ಇನ್ಸ್‌ಟಿಟ್ಯೂಟ್‌ಗಳು ಹಾಗೂ ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಪತ್ರಿಕೆಯಲ್ಲಿನ ಲೋಪಗಳನ್ನು ನಮ್ಮ ಗಮನಕ್ಕೆ ತರಲಾಗಿದ್ದು, ಪರೀಕ್ಷೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ, ಕಷ್ಟಪಟ್ಟು ಓದಿರುವ ಅಭ್ಯರ್ಥಿಗಳ ಧ್ವನಿಯನ್ನು ನಾವು ಗೌರವಿಸಬೇಕು ಎಂದು ಡಾ.ರಾಜ್‌ಕುಮಾರ್ ಅಕಾಡೆಮಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ

ಕನ್ನಡಿಗರಿಗೆ ವ್ಯವಸ್ಥಿತ ವಂಚನೆ: ಕನ್ನಡಿಗರಿಗೆ ಜಲನೀತಿ, ಶಿಕ್ಷಣ ನೀತಿಗಳಲ್ಲಿ ಈಗಾಗಲೇ ವಂಚನೆಯಾಗುತ್ತಿರುವಂತೆ ಇದು ನೌಕರಿ ನೀತಿಯಲ್ಲಾಗುತ್ತಿರುವ ವ್ಯವಸ್ಥಿತ ವಂಚನೆ. ಇದನ್ನು ಪಕ್ಷಾತೀತವಾಗಿ ಖಂಡಿಸಿ ವಂಚಕರನ್ನು ಕಾನೂನಿನಡಿಯಲ್ಲಿ ಶಿಕ್ಷಿಸಿ ಸರಿಯಾದ ಮರುಪರೀಕ್ಷೆ ನಡೆಸಬೇಕು. ಇಂತಹ ವಂಚನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

ತಪ್ಪು ಹೇಗೆ ಬದುಕಬೇಕು!: ‘ಒಂದು ತಪ್ಪು ಹೇಗೆ ಬದುಕಬೇಕೆಂಬುದರ ಬಗೆಗಿನ ಒಂದು ತಪ್ಪು ಸಿದ್ಧಾಂತಕ್ಕೆ ಹೊಣೆಯಾಗಿದ್ದಿದ್ದರೆ ಹೇಗೋ ಹಾಗೆ ಅದು ತಪ್ಪೆಂದು ತೋರುತ್ತದೆ!’ ಇದು ಪತ್ರಿಕೆ-2ರಲ್ಲಿ ವಿವರಣಾತ್ಮಕ ಪ್ರಶ್ನೆಯಲ್ಲಿನ ಎರಡನೇ ವಾಕ್ಯದಲ್ಲಿ ಮುದ್ರಣವಾಗಿರುವ ಸಾಲು. ಅಭ್ಯರ್ಥಿಗಳು ಇದನ್ನು ಓದಿದರೆ ತಲೆ ಸುತ್ತು ಬರುವಂತಿದೆ.

ಅನುವಾದ ಮತ್ತು ಲೋಪಗಳ ಪಟ್ಟಿ
- ಪತ್ರಿಕೆ -1ರಲ್ಲಿ ‘ಕೆಳಗಿನ ಯಾವ ಘಟ್ಟಗಳು ಮಧ್ಯ, ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?’ ಎಂಬ ಪ್ರಶ್ನೆಗೆ 5 ಉತ್ತರಗಳನ್ನು ನೀಡಲಾಗಿದೆ. ಕನ್ನಡ ಮುದ್ರಣದಲ್ಲಿ ಆಯ್ಕೆ ಸಂಖ್ಯೆ 3ರಲ್ಲಿ ‘4 ಹೇಳಿಕೆಗಳು ಸರಿ ಇವೆ’ ಎಂದು ಇದೆ. ಇಂಗ್ಲೀಷ್‌ನಲ್ಲಿ ‘Only 3 statements are correct’ ಎಂದು ಗೊಂದಲ ಮೂಡಿಸಲಾಗಿದೆ.

- ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರ ನೀಡಬೇಕಿರುವ ಪ್ರಶ್ನೆಯೊಂದರಲ್ಲಿ, Triennial (ಮೂರು ವರ್ಷಗಳಿಗೊಮ್ಮೆ) ಎಂಬುದನ್ನು, ಕನ್ನಡದಲ್ಲಿ ಅನುವಾದದಲ್ಲಿ ‘ತ್ರೈಮಾಸಿಕ’ ಎಂದು ಗೊಂದಲ ಮೂಡಿಸಲಾಗಿದೆ.

- ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಪ್ರಮಾಣ ‘ದ್ವಿಗುಣಗೊಂಡಿದೆ’ (doubled) ಎಂದು ಬರೆಯುವ ಬದಲು, ‘ಎರಡರಷ್ಟಕ್ಕಿಂತ ಹೆಚ್ಚಾಗಿದೆ’ ಎಂದು ಮುದ್ರಿಸಿ ಗೊಂದಲ ಸೃಷ್ಟಿಸಲಾಗಿದೆ.

- ಪ್ರಶ್ನೆಯೊಂದರಲ್ಲಿ, ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆ ಜಾರಿಗೊಳಿಸಿದ ನಂತರ ಎರಡು ಬಾರಿ ಮಾತ್ರ ಸರ್ಕಾರ ಗುರಿಗಳನ್ನು ಸಾಧಿಸಿದೆ ಎಂದು ಬರೆಯುವ ಬದಲು, ‘ಎಂಆರ್‌ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡು ಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ’ ಎಂದು ಮುದ್ರಿಸಲಾಗಿದೆ.

- ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ಪ್ರಶ್ನೆಪುಸ್ತಕವನ್ನು ‘ಪ್ರಶ್ನೆಪುಸ್ತಿಕೆ’ ಎಂದು ಬರೆಯಲಾಗಿದೆ.

- ವಿವರಣಾತ್ಮಕ ಪ್ರಶ್ನೆಯೊಂದರಲ್ಲಿ ನಿರ್ದೇಶನವನ್ನು ‘ನಿರ್ದೇಷನ’ ಎಂದು ಬರೆಯಲಾಗಿದೆ. ಅಸಲಿಗೆ ಇಂಗ್ಲೀಷಿನಲ್ಲಿ Directions ಎಂದು ಇದೆ. ಅದಕ್ಕೆ ಕನ್ನಡದಲ್ಲಿ ಸೂಚನೆಗಳು ಎಂದು ಬರೆಯುವುದು ಅರ್ಥಪೂರ್ಣ ಎನಿಸುತ್ತಿತ್ತು.

- ಆರ್‌ಟಿಇ ಕಾಯ್ದೆಯ ತಿದ್ದುಪಡಿ ಬಳಿಕ, ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಖಾಸಗಿ ಶಾಲೆಗಳನ್ನು ‘ನೊರೆಹೊರೆಯ ಶಾಲೆಗಳು’ ಎಂದು ಪರಿಗಣಿಸುವುದನ್ನು ಕೈಬಿಡಲಾಗಿದೆ, ಎಂದು ಬರೆಯುವ ಬದಲು, ‘ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ನೆರೆಹೊರೆಯ ಶಾಲೆಗಳು ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿಯನ್ನು ಮಾಡಲಾಗಿದೆ’ ಎಂದು ಅಸಂಬದ್ಧವಾಗಿ ಬರೆಯಲಾಗಿದೆ.

- ನದಿಗಳು, ಕಣಿವೆಗಳು, ನದಿ ಹರಿಯುವ ಮಾರ್ಗ, ಕಣಿವೆಗಳ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ ಪ್ರಶ್ನೆಯೊಂದರ ಕನ್ನಡ ಅನುವಾದ ಅರ್ಥಪೂರ್ಣವಾಗಿಲ್ಲ. ಇಂಗ್ಲೀಷ್‌ನಲ್ಲಿ ಓದಿ ಅರ್ಥೈಸಿಕೊಳ್ಳಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಇದೇ ರೀತಿ ಇವೆ. ಎರಡೂ ಪ್ರಶ್ನೆ ಓದುವುದರಿಂದ ಅಭ್ಯರ್ಥಿಗಳ ಸಮಯ ವ್ಯರ್ಥವಾಗುತ್ತದೆ.

ಬಿಜೆಪಿಗರು, ಆರೆಸ್ಸೆಸ್‌ ವಿರುದ್ಧ ರಾಜ್ಯ ಸರ್ಕಾರ ಕೆಐಎಡಿಬಿ ಭೂ ಪ್ರತ್ಯಸ್ತ್ರ: ಸಚಿವ ಎಂ.ಬಿ.ಪಾಟೀಲ್‌

ಇಂಗ್ಲಿಷ್ ಉಪನ್ಯಾಸಕರಿಂದ ಎಡವಟ್ಟು?: ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಆಯಾ ವಿಷಯಗಳ ತಜ್ಞರಿಂದ ಸಿದ್ಧಪಡಿಸಿ, ಗೌಪ್ಯವಾಗಿ (ಕಂಪ್ಯೂಟರೀಕೃತ ಆಯ್ಕೆ) ಅಗತ್ಯವಿರುವಷ್ಟು ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಗೆ ಸೇರ್ಪಡೆಗೊಳಿಸಲಾಗುತ್ತದೆ. ಪರೀಕ್ಷೆಯ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ವಾಕ್ಯ, ವ್ಯಾಕರಣ, ವಾಸ್ತವಾಂಶ ಮತ್ತಿತರ ಅಂಶಗಳು ಸರಿಯಾಗಿವೆ ಎಂಬುದನ್ನು ಯಾರೊಬ್ಬರೂ ಪರಿಶೀಲಿಸುವುದಿಲ್ಲ. ಸರಿ ಇರುವಂತೆ ನೋಡಿಕೊಳ್ಳುವುದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರ ಜವಾಬ್ದಾರಿ ಆಗಿರುತ್ತದೆ. ಕೆಎಎಸ್ ಪರೀಕ್ಷೆ ಪತ್ರಿಕೆಗಳಲ್ಲಿನ ಕನ್ನಡ ಮುದ್ರಣ ಗಮನಿಸಿದರೆ, ಪ್ರಶ್ನೆಗಳನ್ನು ಇಂಗ್ಲೀಷ್‌ ಉಪನ್ಯಾಸಕರು ಸಜ್ಜುಗೊಳಿಸಿದ್ದು, ಕನ್ನಡ ಅನುವಾದದ ವೇಳೆ ಎಡವಟ್ಟು ಮಾಡಿರುವಂತೆ ಕಾಣಿಸಿದೆ. ಗೂಗಲ್ ಟ್ರಾನ್ಸ್‌ಲೇಟ್ ಅಥವಾ ಎಐ ಟ್ರಾನ್ಸ್‌ಲೇಟ್ ಕೂಡ ಅಲ್ಲ ಎಂದು ಬಿಂಬಿಸುವ ಪ್ರಯತ್ವವೂ ನಡೆದಿದೆ ಎಂಬುದು ಪ್ರಶ್ನೆಗಳು ಹಾಗೂ ವಾಕ್ಯಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ಬಹುತೇಕ ಅನುವಾದ ದೋಷವು ವಿಜ್ಞಾನ, ಅರ್ಥಶಾಸ್ತ್ರ, ಮನೋ ಸಾಮರ್ಥ್ಯ, ಗಣಿತ ಮತ್ತು ವಿವರಣಾತ್ಮಕ ಪ್ರಶ್ನೆಗಳಲ್ಲಿ ಕಂಡು ಬಂದಿದೆ.

Latest Videos
Follow Us:
Download App:
  • android
  • ios