ವ್ಯಾಕ್ಸಿನ್ ಸಿಗದೆ ಪರದಾಟ: 2ನೇ ಡೋಸ್ ಲಸಿಕೆ ಬೇಕಾದವರಿಗೆ ಆದ್ಯತೆ ನೀಡಿ, ಸುಧಾಕರ್
ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ| ಆಸ್ಪತ್ರೆಯಿಂದ ಆಸ್ಪತ್ರೆಗೆ ಜನರ ಅಲೆದಾಟ| ಗಂಟೆಗಟ್ಟಲೇ ಕಾದರು ಕೂಡ ಲಸಿಕೆ ಸಿಗದೆ ನಿರಾಸೆಯಿಂದ ಹಿಂತಿರುಗುತ್ತಿರುವ ಹಿರಿಯ ಜೀವಗಳು|
ಬೆಂಗಳೂರು(ಮೇ.08): ರಾಜ್ಯದಲ್ಲಿ ಕೋವಿಡ್ ಲಸಿಕೆಯ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಮೊದಲ ಡೋಸ್ ಲಸಿಕೆ ಪಡೆದುಕೊಂಡ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಸಹ ಅಸ್ವಸ್ಥತೆ ಹೊಂದಿರುವವರು ಎರಡನೇ ಡೋಸ್ ಲಸಿಕೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಯ ಕೊರತೆ ಕಳೆದ ಹತ್ತು- ಹದಿನೈದು ದಿನಗಳಿಂದಲೂ ಇದೆ. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಸಮಸ್ಯೆ ಕಾಡಲಾರಂಭಿಸಿದೆ. ಈ ಹಿಂದೆ ಪೂರೈಕೆ ಆಗುತ್ತಿದ್ದ ಲಸಿಕೆಯ ಅರ್ಧದಷ್ಟುಕೂಡ ಸದ್ಯ ಆಸ್ಪತ್ರೆಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಗಂಟೆಗಟ್ಟಲೇ ಕಾದರು ಕೂಡ ಲಸಿಕೆ ಸಿಗದೆ ಹಿರಿಯ ಜೀವಗಳು ನಿರಾಸೆಯಿಂದ ಹಿಂತಿರುಗುವಂತೆ ಆಗಿದೆ.
"
60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು ಸಹ ಅಸ್ವಸ್ಥತೆ ಹೊಂದಿರುವವರಿಗೆ ಮಾರ್ಚ್ 1ರಿಂದ ಮತ್ತು 45 ವರ್ಷ ಮೇಲ್ಪಟ್ಟಎಲ್ಲರಿಗೂ ಏ.1ರಿಂದ ಲಸಿಕೆ ಅಭಿಯಾನ ಆರಂಭವಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪಡೆಯಲು 6 ರಿಂದ 8 ವಾರಗಳ ಅವಧಿ ನಿಗದಿಯಾಗಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದವರು ಮೊದಲ ಡೋಸ್ ಲಸಿಕೆ ಪಡೆದ ನಾಲ್ಕರಿಂದ ಆರು ವಾರದೊಳಗೆ ಎರಡನೇ ಡೋಸ್ ಪಡೆಯಬೇಕಿದೆ. ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆಯನ್ನೇ ಹೆಚ್ಚು ವಿತರಿಸಲಾಗಿದೆ.
ಮೇ 15ರ ಬಳಿಕ 18+ ವಯಸ್ಸಿನವರಿಗೆ ಲಸಿಕೆ: ಸಚಿವ ಸುಧಾಕರ್
ಆದರೆ ಇದೀಗ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡರೂ ಲಸಿಕೆ ಪಡೆಯಲು ಆಗುತ್ತಿಲ್ಲ. ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಉದ್ದನೆಯ ಸಾಲು ಇರುತ್ತದೆ. ನಾವು ಕಾದರೂ ಲಸಿಕೆ ಸಿಗುವ ಯಾವುದೇ ಭರವಸೆಯಿಲ್ಲ. ನನ್ನ ಎರಡನೇ ಡೋಸ್ ಲಸಿಕೆ ಪಡೆಯಲು ಕಳೆದ ಎರಡ್ಮೂರು ದಿನಗಳಿಂದ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಡುವಂತೆ ಆಗಿದೆ ಎಂದು ಹಲವರು ದೂರುತ್ತಿದ್ದಾರೆ.
ಕೆಲ ಆಸ್ಪತ್ರೆಗಳು ಟೋಕನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಮೊದಲು ಬಂದವರಿಗೆ ಆದ್ಯತೆ ಕೊಡುತ್ತಿವೆ. ಆದರೆ ಇಲ್ಲಿಯೂ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ಸಿಗುತ್ತಿಲ್ಲ. ಸದ್ಯ ಮೊದಲ ಡೋಸ್ ಪಡೆಯುವರಿಗಿಂತ ಎರಡನೇ ಡೋಸ್ ಪಡೆಯುವವರಿಗೆ ಲಸಿಕಾ ಕೇಂದ್ರದಲ್ಲಿ ಹೆಚ್ಚಿನ ಒತ್ತು ನೀಡಬೇಕು. ಇಲ್ಲದೆ ಹೋದರೆ ಲಸಿಕಾ ಅಭಿಯಾನ ಯಶ ಕಾಣುವುದು ಕಷ್ಟ. ಎರಡನೇ ಡೋಸ್ ಲಸಿಕೆಗೆಂದೇ ಪ್ರತಿ ಕೇಂದ್ರದಲ್ಲಿಯೂ ಪ್ರತ್ಯೇಕ ವ್ಯವಸ್ಥೆ ಇರಬೇಕು ಅಥವಾ ಮಧ್ಯಾಹ್ನ 12 ಗಂಟೆ ತನಕ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ ನೀಡಲಿ ಎಂದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಾರ್ಚ್ ಏಪ್ರಿಲ್‌ನಲ್ಲಿ ಪ್ರತಿದಿನ 50 ಸಾವಿರ ಡೋಸ್ ಲಸಿಕೆ ವಿತರಿಸುತ್ತಿದ್ದ ಬಿಬಿಎಂಪಿಗೆ ಸದ್ಯ ಪ್ರತಿದಿನ 20 ಸಾವಿರ ಡೋಸ್ ಮಾತ್ರ ಬರುತ್ತಿದೆ. ಬಂದಿರುವ ಲಸಿಕೆಯನ್ನು ವಿವಿಧ ವಾರ್ಡ್‌ಗಳಿಗೆ ಸಮಾನವಾಗಿ ಬಿಬಿಎಂಪಿ ಹಂಚುತ್ತಿದೆ. ಈ ಹಿಂದೆ 300 ಡೋಸ್‌ಗಿಂತ ಹೆಚ್ಚು ಡೋಸ್ ಲಸಿಕೆಯನ್ನು ಪ್ರತಿದಿನ ವಿತರಿಸುತ್ತಿದ್ದ ಆಸ್ಪತ್ರೆಗಳಿಗೆ ಈಗ 100 ರಿಂದ 150 ಡೋಸ್ ಲಸಿಕೆ ಮಾತ್ರ ಬರುತ್ತಿದೆ. ಇದು ಮಧ್ಯಾಹ್ನದ ಹೊತ್ತಿಗೆ ಮುಗಿದು ಹೋಗುತ್ತಿದೆ.
ಅತ್ತ ಖಾಸಗಿ ಆಸ್ಪತ್ರೆಗಳಲ್ಲಿಯೂ ಎರಡನೇ ಡೋಸ್ ಲಸಿಕೆಯ ತೀವ್ರ ಅಭಾವ ಸೃಷ್ಟಿಯಾಗಿದ್ದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆಯ ಮೇರೆಗೆ ಲಸಿಕೆ ಒದಗಿಸುವಂತೆ ಮನವಿ ಮಾಡಿದೆ.
ಲಸಿಕೆ ಉತ್ಪಾದನೆ ಮಾಡುವ ಕಂಪನಿಗಳ ಲಸಿಕೆ ಸರಬರಾಜಿನಲ್ಲಿ ವಿಳಂಬವಾಗುತ್ತಿದೆ. ಒಂದು ವಾರದಲ್ಲಿ 12 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ನೀಡಲು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona