Asianet Suvarna News Asianet Suvarna News

ಸೈಕಲ್‌, ಶೂ ಅನುದಾನ ಮಕ್ಕಳ ಖಾತೆಗೇ ವರ್ಗ?: ಸರ್ಕಾರ ಚಿಂತನೆ

ಶಾಲೆ ಆರಂಭವಾದರೂ ಮಕ್ಕಳಿಗೆ ಶೂ ಬರಲಿಲ್ಲ, ಸೈಕಲ್‌ ಕೊಡಲಿಲ್ಲ ಎಂಬ ಆರೋಪಗಳಿಂದ ಮುಕ್ತವಾಗಲು ಮುಂದಿನ ಶೈಕ್ಷಣಿಕ ಸಾಲಿನಿಂದ ಶೂ, ಸಾಕ್ಸ್‌ ಮತ್ತು ಸೈಕಲ್‌ ಅನುದಾನವನ್ನು ನೇರ ಮಕ್ಕಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. 

Government thinking For Cycle and Shoes grant category to childrens account gvd
Author
First Published Jan 18, 2023, 7:23 AM IST

ಲಿಂಗರಾಜು ಕೋರಾ

ಬೆಂಗಳೂರು (ಜ.18): ಶಾಲೆ ಆರಂಭವಾದರೂ ಮಕ್ಕಳಿಗೆ ಶೂ ಬರಲಿಲ್ಲ, ಸೈಕಲ್‌ ಕೊಡಲಿಲ್ಲ ಎಂಬ ಆರೋಪಗಳಿಂದ ಮುಕ್ತವಾಗಲು ಮುಂದಿನ ಶೈಕ್ಷಣಿಕ ಸಾಲಿನಿಂದ ಶೂ, ಸಾಕ್ಸ್‌ ಮತ್ತು ಸೈಕಲ್‌ ಅನುದಾನವನ್ನು ನೇರ ಮಕ್ಕಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಗಳು ಬದಲಾದರೂ ಉಚಿತ ಶೂ, ಸಾಕ್ಸ್‌ ಭಾಗ್ಯ ಯೋಜನೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಆದರೆ, 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್‌ ವಿತರಣೆ ಯೋಜನೆ 2018ರಿಂದ ಸ್ಥಗಿತಗೊಂಡಿದೆಯಾದರೂ ಮುಂದಿನ ಸಾಲಿನಿಂದ ಪುನಾರಂಭಿಸಲು ಸರ್ಕಾರ ಆಲೋಚಿಸಿದೆ. ಹಾಗಾಗಿ 2022-23ನೇ ಸಾಲಿನಲ್ಲಿ ಈ ಎರಡೂ ಯೋಜನೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಆಗುವ ವೆಚ್ಚದ ಮೊತ್ತವನ್ನು ಆಯಾ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಲು ಆಲೋಚಿಸಲಾಗುತ್ತಿದೆ.

ಸರ್ಕಾರದಲ್ಲಿ ಇಂತಹ ಚಿಂತನೆ ಆರಂಭಗೊಳ್ಳಲು ಶೂ, ಸೈಕಲ್‌ ವಿತರಣೆಯಷ್ಟೇ ಅಲ್ಲ. ಅವುಗಳ ಗುಣಮಟ್ಟದ ಬಗ್ಗೆ ಅಪಸ್ವರ ನಿರಂತರವಾಗಿ ಕೇಳಿಬರುತ್ತಿರುವುದೂ ಕಾರಣ. ಜತೆಗೆ ಸರ್ಕಾರ ನೀಡುತ್ತಿರುವ ಹಣದಲ್ಲಿ ಗುಣಮಟ್ಟದ ಶೂ, ಸೈಕಲ್‌ ನೀಡಲು ಸಾಧ್ಯವಿಲ್ಲ ಎಂಬ ಆರೋಪಗಳು ಇವೆ. ಇದೇ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲಿ ಶೂ, ಸಾಕ್ಸ್‌ ಖರೀದಿಸಿ ವಿತರಿಸುವ ಜವಾಬ್ದಾರಿಯನ್ನು ಆಯಾ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ವಹಿಸಲಾಗಿದೆ.

ಜ.19ಕ್ಕೆ ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ: ಲಂಬಾಣಿ ಧಿರಿಸಲ್ಲಿ 50000 ಮಹಿಳೆಯರು ಸ್ವಾಗತಕ್ಕೆ ಸಜ್ಜು

ಆದರೂ, ಸರ್ಕಾರ ಪ್ರತಿ ಜೊತೆ ಶೂಗೆ ನೀಡುವ ಗರಿಷ್ಠ 275 ರು. ಹಣದಿಂದ ಗುಣಮಟ್ಟದ ಶೂ ನೀಡಲು ಸಾಧ್ಯವಿಲ್ಲ ಎಂಬ ಆರೋಪ ಎಸ್‌ಡಿಎಂಸಿಗಳಿಂದಲೂ ಕೇಳಿಬಂದಿತ್ತು. ಬಳಿಕ ಸರ್ಕಾರ ತಾನು ನೀಡುವ ಹಣದ ಜತೆಗೆ ದಾನಿಗಳ ಸಹಕಾರ ಪಡೆದು ಗುಣಮಟ್ಟದ ಶೂ ಖರೀದಿಸಬಹುದು ಎಂಬ ಅವಕಾಶ ನೀಡಿತ್ತು. ಇದರ ಮುಂದುವರೆದ ಭಾಗವಾಗಿ ಮಕ್ಕಳ ಖಾತೆಗೇ ಹಣ ಜಮೆ ಮಾಡಿದರೆ ಪೋಷಕರೂ ಒಂದಷ್ಟುಹಣ ಕೂಡಿಸಿ ತಮ್ಮ ಮಕ್ಕಳಿಗೆ ಇನ್ನಷ್ಟುಗುಣಮಟ್ಟದ ಶೂ, ಸಾಕ್ಸ್‌ ಅಥವಾ ತಮ್ಮ ಮಕ್ಕಳು ಬಯಸುವ ಸೈಕಲ್‌ ಕೊಡಿಸಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರವಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಒಂದೆರಡು ಸುತ್ತಿನ ಚರ್ಚೆಗಳಾಗಿವೆ. ಇದಕ್ಕೆ ಕೆಲ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರೆ ಇನ್ನು ಕೆಲವರು ಆಕ್ಷೇಪ ಎತ್ತಿದ್ದಾರೆ. ಯೋಜನೆ ವಿಳಂಬವಾಗಬಾರದೆಂಬ ಉದ್ದೇಶದಿಂದ ಮಕ್ಕಳ ಖಾತೆಗೆ ಹಣ ಹಾಕಿದಾಗ ಪೋಷಕರಿಂದಲೇ ಶೂ, ಸೈಕಲ್‌ ಕೊಡಿಸುವುದು ವಿಳಂಬವಾದರೆ ಯಾರನ್ನು ಪ್ರಶ್ನಿಸುವುದು? ಅಥವಾ ಯಾವುದಾದರೂ ಪ್ರಕರಣಗಳಲ್ಲಿ ಪೋಷಕರು ಆ ಹಣವನ್ನು ಬೇರೆ ಕೆಲಸಕ್ಕೆ ಬಳಸಿಕೊಂಡರೆ ಏನು ಮಾಡುವುದು? ಯಾರನ್ನು ದೂರುವುದು ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂತಹ ಸಮಸ್ಯೆ ಆಗದಂತೆ ಪರಿಹಾರ ಕಂಡುಕೊಂಡು ಡಿಬಿಟಿ ಮಾಡಬಹುದು ಎಂದು ಕೆಲ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ವಿಷಯ ಇನ್ನೂ ಚರ್ಚಾ ಹಂತದಲ್ಲಿದೆ. ಇನ್ನೂ ಕೆಲವು ಸಭೆಗಳನ್ನು ನಡೆಸಿ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಯೋಜನೆಗಳು ಆರಂಭವಾಗಿದ್ದು ಯಾವಾಗ?: ಸಿದ್ದರಾಮಯ್ಯ ಅವರ ಸರ್ಕಾರ 2015-16ನೇ ಸಾಲಿನಿಂದ ಆರಂಭಿಸಿದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ ಭಾಗ್ಯ ಯೋಜನೆ ಸರ್ಕಾರಗಳು ಬದಲಾದರೂ ನಿರಂತರವಾಗಿ ನಡೆದುಕೊಂಡು ಬಂದಿವೆ. ಪ್ರತೀ ವರ್ಷ ಸುಮಾರು 1 ಕೋಟಿ ಮಕ್ಕಳಿಗೆ ಶೂ, ಸಾಕ್ಸ್‌ ನೀಡಲು ಸರ್ಕಾರ ನೂರಾರು ಕೋಟಿ ರು. ಅನುದಾನ ನೀಡುತ್ತಿದೆ. ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ 2006-07ರಿಂದ ಆರಂಭಿಸಿದ 8ನೇ ತರಗತಿ ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್‌ ವಿತರಿಸುವ ಯೋಜನೆಯನ್ನು 2007-08ರಲ್ಲಿ ಗಂಡು ಮಕ್ಕಳಿಗೂ ವಿಸ್ತರಿಸಿ ಮುಂದುವರೆಸಲಾಯಿತು. 

Namma Metro ಪಿಲ್ಲರ್‌ ದುರಂತಕ್ಕೆ ಕೊನೆಗೂ ಕಾರಣ ಪತ್ತೆ!

ಆದರೆ, 2017-18ರಲ್ಲಿ 172 ಕೋಟಿ ರು. ವೆಚ್ಚ ಮಾಡಿ 8ನೇ ತರಗತಿಯ 5.05 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸೈಕಲ್‌ ನೀಡಿದ್ದೇ ಕೊನೆ.  ನಂತರದ ವರ್ಷಗಳಲ್ಲಿ ಆರ್ಥಿಕ ಇಲಾಖೆಯ ಅನುಮತಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸ್ಥಗಿತಗೊಂಡಿದೆ. ಶಿಕ್ಷಣ ತಜ್ಞರು, ಪೋಷಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ನೇ ಸಾಲಿನಲ್ಲಿ ಸೈಕಲ್‌ ವಿತರಣೆ ಪುನಾರಂಭಿಸುವುದಾಗಿ ಭರವಸೆ ನೀಡಿದರೂ ಕಾರ್ಯಸಾಧುವಾಗಿಲ್ಲ. ಆದರೆ, 2023ನೇ ಸಾಲಿನಿಂದ ಈ ಯೋಜನೆಯನ್ನು ಮತ್ತೆ ಆರಂಭಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios