ಅರಣ್ಯ ರಕ್ಷಣೆಗೆ ಸಾಲುತ್ತಿಲ್ಲ ಸರ್ಕಾರದ ಅನುದಾನ: ಬಜೆಟ್‌ನಲ್ಲಿ ನೀಡುವ ಹಣದಲ್ಲಿ ಸಂಬಳಕ್ಕೇ 33% ಬೇಕು!
ಅರಣ್ಯ ಸಂರಕ್ಷಣೆಗೆ ಸರ್ಕಾರದಿಂದ ನೀಡುತ್ತಿರುವ ಅನುದಾನ ಮಾತ್ರ ತೀರಾ ಕಡಿಮೆ. ಬಜೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನದ ಪೈಕಿ ಶೇ.33ಕ್ಕೂ ಹೆಚ್ಚಿನ ಹಣ ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ನಿರ್ವಹಣಾ ಕಾರ್ಯಕ್ಕೆ ವ್ಯಯಿಸಲಾಗುತ್ತಿದ್ದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸಾಧ್ಯವಾಗದಂತಾಗಿದೆ.
ಗಿರೀಶ್ ಗರಗ
ಬೆಂಗಳೂರು (ಜ.19): ಅರಣ್ಯ ಸಂರಕ್ಷಣೆಯಾದರೆ ಮಾತ್ರ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿರುತ್ತದೆ. ಆದರೆ, ಅರಣ್ಯ ಸಂರಕ್ಷಣೆಗೆ ಸರ್ಕಾರದಿಂದ ನೀಡುತ್ತಿರುವ ಅನುದಾನ ಮಾತ್ರ ತೀರಾ ಕಡಿಮೆ. ಬಜೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನದ ಪೈಕಿ ಶೇ.33ಕ್ಕೂ ಹೆಚ್ಚಿನ ಹಣ ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ನಿರ್ವಹಣಾ ಕಾರ್ಯಕ್ಕೆ ವ್ಯಯಿಸಲಾಗುತ್ತಿದ್ದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸಾಧ್ಯವಾಗದಂತಾಗಿದೆ. ಹೀಗಾಗಿಯೇ ಇಲಾಖೆಗೆ ಹೆಚ್ಚಿನ ಪ್ರಮಾಣದ ಅನುದಾನ ನೀಡುವಂತೆ ಆಗ್ರಹಿಸಲಾಗುತ್ತಿದೆ.
ಅರಣ್ಯ ಸಂರಕ್ಷಣೆ ನಮ್ಮ ಗುರಿ ಎಂದು ಪ್ರತಿ ಸರ್ಕಾರಗಳು ಹೇಳಿಕೊಳ್ಳುತ್ತವೆ. ಪರಿಸರ ದಿನ ಸೇರಿದಂತೆ ಅರಣ್ಯ ಇಲಾಖೆಗೆ ಸೇರಿದ ಇನ್ನಿತರ ದಿನಗಳಂದು ಅರಣ್ಯ ರಕ್ಷಣೆಗೆ ಕೈಗೊಳ್ಳುವ ಯೋಜನೆಗಳ ಘೋಷಣೆಯನ್ನೂ ಮಾಡುತ್ತವೆ. ಆದರೆ, ಆ ಯೋಜನೆಗಳ ಸಾಕಾರಕ್ಕೆ ಮಾತ್ರ ಬಜೆಟ್ ಸಮಯದಲ್ಲಿ ಅನುದಾನ ನೀಡುವಲ್ಲಿ ಹಿಂದೇಟು ಹಾಕುತ್ತಿವೆ. ಕಳೆದ ನಾಲ್ಕೈದು ವರ್ಷಗಳಿಂದ ಅರಣ್ಯ ಇಲಾಖೆಗೆ ಪ್ರತಿ ಬಜೆಟ್‌ನಲ್ಲಿ 1,700 ಕೋಟಿ ರು.ನಿಂದ 2,100 ಕೋಟಿ ರು.ವರೆಗೆ ಮಾತ್ರ ಅನುದಾನ ನೀಡಲಾಗುತ್ತಿದೆ.
ಹಿಂದೂ ಅವಹೇಳನ ಕಾಂಗ್ರೆಸ್ ಅವನತಿಗೆ ಅಡಿಗಲ್ಲು: ಆರ್.ಅಶೋಕ್
ಆದರೆ, ಅದರಲ್ಲಿ ಶೇ.33ಕ್ಕೂ ಹೆಚ್ಚಿನ ಅನುದಾನ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆ ಸೇರಿದಂತೆ ಇನ್ನಿತರ ನಿರ್ವಹಣಾ ಕಾರ್ಯಗಳಿಗೇ ವ್ಯಯಿಸಲಾಗುತ್ತದೆ. ಹೀಗಾಗಿ ಅರಣ್ಯ ಇಲಾಖೆಯ ಬಹುದೊಡ್ಡ ಸಮಸ್ಯೆಗಳಾದ ಅರಣ್ಯ ಭೂಮಿ ಒತ್ತುವರಿ ತಡೆ, ಮಾನವ-ವನ್ಯಜೀವಿ ಸಂಘರ್ಷಗಳ ತಡೆ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಕನಿಷ್ಠ 4 ಸಾವಿರ ಕೋಟಿ ರು.ಗೂ ಹೆಚ್ಚಿನ ಅನುದಾನ ಸರ್ಕಾರ ಬಜೆಟ್‌ನಲ್ಲಿ ಮೀಸಲಿಡಬೇಕು ಎಂಬ ಆಗ್ರಹ ಹಿಂದಿನಿಂದಲೂಯಿದೆ.
ವೇತನ, ಆಡಳಿತಾತ್ಮಕ ನಿರ್ವಹಣೆಗೆ ಹೆಚ್ಚಿನ ವೆಚ್ಚ: 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ 2,100 ಕೋಟಿ ರು. ಅನುದಾನ ನಿಗದಿ ಮಾಡಿದೆ. ಅದರಲ್ಲಿ ಬಂಡವಾಳ ವೆಚ್ಚದ ರೂಪದಲ್ಲಿ 672 ಕೋಟಿ ರು. ಮೀಸಲಿರಿಸಲಾಗಿದೆ. ಹೀಗೆ ಸರ್ಕಾರ ಮೀಸಲಿಟ್ಟಿರುವ ಅನುದಾನದ ಪೈಕಿ 800 ಕೋಟಿ ರು.ಗಳನ್ನು ಸಿಬ್ಬಂದಿ ವೇತನ, ಆಡಳಿತಾತ್ಮಕ ನಿರ್ವಹಣಾ ವೆಚ್ಚಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಉಳಿದ 1,300 ಕೋಟಿ ರು.ಗಳಲ್ಲಿ ಅರಣ್ಯ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ, ಅರಣ್ಯೀಕರಣ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಹುಲಿ, ಆನೆ ಯೋಜನೆಗೆ 41 ಕೋಟಿ ರು.: ಪ್ರಸಕ್ತ ಸಾಲಿನಲ್ಲಿ ಹುಲಿ, ಆನೆಗಳ ಸಂರಕ್ಷಣೆಗಾಗಿ ಜಾರಿಗೊಳಿಸಲಾಗುವ ಹುಲಿ ಯೋಜನೆ ಮತ್ತು ಆನೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅದರಂತೆ ಕಳ್ಳಬೇಟೆ ತಡೆ ಸೇರಿದಂತೆ ಹುಲಿ ಮತ್ತು ಆನೆ ಸಂತತಿಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಈ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಪಾಲಾಗಿ ಹುಲಿ ಯೋಜನೆಗೆ 33.33 ಕೋಟಿ ರು. ಹಾಗೂ ಆನೆ ಯೋಜನೆಗೆ 8 ಕೋಟಿ ರು. ನಿಗದಿ ಮಾಡಲಾಗಿದೆ.
ಆನೆ ಬ್ಯಾರಿಕೇಡ್‌ಗೆ ಬೇಕಿದೆ ಹೆಚ್ಚಿನ ಆರ್ಥಿಕ ನೆರವು: ರಾಜ್ಯದ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ 6,395 ಆನೆಗಳಿವೆ. ಅವುಗಳು ಆಹಾರ ಅರಸಿ ನಾಡಿಗೆ ಬರುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಡಂಚಿನಲ್ಲಿ 640 ಕಿಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದ್ದು, ಈವರೆಗೆ 312 ಕಿಮೀ ಉದ್ದದ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗಾಗಿ 120 ಕೋಟಿ ರು. ಮೀಸಲಾಗಿದೆ. ಆದರೆ, ಇನ್ನೂ 120 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದ್ದು, ಹೆಚ್ಚುವರಿಯಾಗಿ 200 ಕೋಟಿ ರು. ಅವಶ್ಯಕತೆಯಿದೆ.
ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಪ್ರತ್ಯೇಕ ನಿಧಿ: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಯೋಜನೆ ರೂಪಿಸುವುದು ಸೇರಿದಂತೆ ಇನ್ನಿತರ ಕ್ರಮಕ್ಕೆ ಆರ್ಥಿಕ ನೆರವು ನೀಡಲು ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಪ್ರತ್ಯೇಕ ನಿಧಿ ಸ್ಥಾಪನೆಯ ಆಗ್ರಹವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ಕಡಿಮೆ ವಿದ್ಯುತ್ ಬಳಕೆದಾರರಿಗೆ ಗೃಹಜ್ಯೋತಿ ಅಡಿ ಹೆಚ್ಚು ಯುನಿಟ್: ಸಚಿವ ಎಚ್.ಕೆ.ಪಾಟೀಲ್
ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ಆನೆ ದಾಳಿ ತಡೆಗೆ ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆಗೆ ಹೆಚ್ಚುವರಿ ಅನುದಾನ, ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಪ್ರತ್ಯೇಕ ನಿಧಿ ಸ್ಥಾಪಿಸಿ ಅದಕ್ಕೆ 500 ಕೋಟಿ ರು. ಅನುದಾನ ನೀಡುವಂತೆ ಕೋರುತ್ತೇನೆ.
-ಈಶ್ವರ್ ಖಂಡ್ರೆ, ಅರಣ್ಯ ಸಚಿವ