ಅವಳನ್ನ ರೇಪ್ ಮಾಡಿದ್ದೀನಾ..? ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆ ಮೇಲೆ ದರ್ಪ ತೋರಿದ್ದಲ್ಲದೇ ಆಕೆ ಮೇಲೆ ರೇಪ್ ಮಾಡಿದ್ದೇನೆಯೇ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 03): ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ಇಂದು (ಶನಿವಾರ)ಬೆಳಗ್ಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ದರ್ಪ ತೋರಿದ್ದಾರೆ. ಸಾಲದಕ್ಕೆ ಇದೀಗ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ವಳೆ ನಾಲಿಗೆ ಹರಿಬಿಟ್ಟಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ತಮಗೆ ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆಯ ಮೇಲೆ ದರ್ಪ ತೊರಿದ್ದಲ್ಲದೆ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತನ್ನ ನಡೆಗೆ ವಿರೋಧ ವ್ಯಕ್ತವಾದ ನಂತರ ಅದರ ಸುದ್ದಿವಾಹಿನಿಯೊಂದರ ಜತೆ ಮಾತನಾಡಿರುವ ಅವರು, ಮಹಿಳೆಯನ್ನು ನಾನು ರೇಪ್ ಮಾಡಿದ್ದೇನೆಯೆ? ಎಂದಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಓರ್ವ ಶಾಸಕರಾಗಿ ಈ ರೀತಿ ಪದ ಬಳಕೆ ಮಾಡುವುದು ಸರಿಯೇ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
BJP MLA ಅರವಿಂದ ಲಿಂಬಾವಳಿ ದರ್ಪ; ಪ್ರಶ್ನಿಸಿದ್ದಕ್ಕೆ ಮಹಿಳೆ ಪೊಲೀಸರ ವಶಕ್ಕೆ
ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಕಟ್ಟಡದ ಕೆಲ ಭಾಗಗಳನ್ನು ತೆರವುಗೊಳಿಸುವ ವೇಳೆ ರುತ್ ಸಗಾಯಿ ಮೇರಿ ಅಮೀಲಾ ಎಂಬುವವರು ದಾಖಲೆ ಪತ್ರಗಳನ್ನು ಮುಂದಿಟ್ಟು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲು ಬಂದರು. ಆದರೆ ಮಹಿಳೆಗೆ ಪರಿಹಾರ ನೀಡುವ ಬದಲು ದಾಖಲೆಗಳನ್ನು ಕಿತ್ತುಕೊಳ್ಳಲು ಶಾಸಕರು ಯತ್ನಿಸಿದರು. ಪತ್ರ ಕೊಡಲು ಹಿಂದೇಟು ಹಾಕಿದ ಮಹಿಳೆಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅರವಿಂದ ಲಿಂಬಾವಳಿ ಏಕವಚನದಲ್ಲಿ ಮಾತನಾಡಿದ್ದರು.
ವಿಡಿಯೋದಲ್ಲಿ ಶಾಸಕ ಲಿಂಬಾವಳಿ ಮಾತುಗಳು ಸ್ಪಷ್ಟವಾಗಿ ಕೇಳುತ್ತವೆ. "ಒತ್ತುವರಿ ಮಾಡಿಕೊಂಡು ಈಗ ನ್ಯಾಯ ಕೇಳಲು ಬರ್ತೀಯಾ. ನಿನಗೆ ಮಾನ ಮರ್ಯಾದೆ ಏನೂ ಇಲ್ವಾ. ನನಗೂ ಬೇರೆ ಭಾಷೆ ಬರತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು. ಒದ್ದು ಒಳಗೆ ಹಾಕಿ ಇವಳನ್ನ," ಎಂದು ಅರವಿಂದ ಲಿಂಬಾವಳಿ ಏಕವಚನದಲ್ಲಿ ಮಹಿಳೆಯ ಮೇಲೆ ಕಿರುಚಾಡಿದ್ದಾರೆ.
ಮಹಿಳೆ ಇದಕ್ಕೆ ಪ್ರತ್ಯುತ್ತರವಾಗಿ, "ಮರ್ಯಾದೆ ಕೊಟ್ಟು ಮಾತನಾಡಿ, ಬಾಯಿಗೆ ಬಂದಂತೆ ಮಾತನಾಡಬೇಡಿ. ಹೆಣ್ಣು ಎಂಬ ಗೌರವ ಇರಲಿ. ನೀವು ನನಗೂ ಶಾಸಕರು, ಎಲ್ಲರಿಗೂ ಶಾಸಕರು," ಎಂದಿದ್ದಾರೆ. ಅದಾದ ನಂತರ ಮಹಿಳಾ ಪೊಲೀಸ್ ಒಬ್ಬರು ಬಂದು ಮಹಿಳೆಯನ್ನು ಬಲವಂತದಿಂದ ವಶಕ್ಕೆ ಪಡೆಯುತ್ತಾರೆ. ನಂತರ ಆಕೆಯನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದರು.