ಒಂಟಿ ಸಲಗ ಸೆರೆಗೆ ದಸರಾ ಆನೆಗಳು: ಇಂದಿನಿಂದ ಕಾರ್ಯಾಚರಣೆ
- ಒಂಟಿ ಸಲಗ ಸೆರೆಗೆ ದಸರಾ ಆನೆಗಳು: ಇಂದಿನಿಂದ ಕಾರ್ಯಾಚರಣೆ
- ಮೂಡಿಗೆರೆ ತಾಲೂಕಿನಲ್ಲಿ ಕಾರ್ಯಾಚರಣೆ, ನಾಗರಹೊಳೆಯಿಂದ ಬಂದಿರುವ 6 ಆನೆಗಳು
- 100 ಸಿಬ್ಬಂದಿ 3 ತಂಡಗಳಲ್ಲಿ ಭಾಗಿ
ಚಿಕ್ಕಮಗಳೂರು (ಅ.31) : ಕಳೆದ 8 ವರ್ಷಗಳಿಂದ ಜನ ವಸತಿ ಪ್ರದೇಶದಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಒಂಟಿ ಸಲಗ ಸೆರೆ ಹಿಡಿಯಲು ಮೂಡಿಗೆರೆ ತಾಲೂಕಿಗೆ ನಾಗರಹೊಳೆಯಿಂದ 6 ಆನೆಗಳನ್ನು ಕರೆಸಿಕೊಳ್ಳಲಾಗಿದೆ. 100 ಮಂದಿ ಅರಣ್ಯ ಸಿಬ್ಬಂದಿ ಒಳಗೊಂಡ 3 ತಂಡಗಳನ್ನು ರಚಿಸಲಾಗಿದೆ. ಮೂವರು ಪಶು ವೈದ್ಯರು ಹಾಗೂ ಮೈಸೂರು ದಸರಾ ಜಂಬು ಸವಾರಿ ವೇಳೆಯಲ್ಲಿ ಮೆರವಣಿಗೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದ ಅಭಿಮನ್ಯು, ಗೋಪಾಲಸ್ವಾಮಿ, ಗಣೇಶ, ಪ್ರಶಾಂತ್ ಸೇರಿದಂತೆ 6 ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.
ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ: ಅಪಾರ ಬೆಳೆ ಹಾನಿ
ಮೂಡಿಗೆರೆ ವಲಯ ವ್ಯಾಪ್ತಿಯ ಊರುಬಗೆ, ಹಳೇಕೆರೆ, ಗೌಡಹಳ್ಳಿ, ಹೆಮ್ಮದಿ, ಕುಂಬರಡಿ, ಅಡ್ಡಗುಡ್ಡ, ಹೊನ್ನೆಕೊಯಿಲು, ಸತ್ತಿಗೌನಹಳ್ಳಿ, ಬೈರಾಪುರ, ಹೊಸಕೆರೆ, ಮೇಕನಗದ್ದೆ, ಗುತ್ತಿ, ದೇವರಮನೆ, ಮತ್ತು ಕೋಗಿಲೆ ಮುಂತಾದ ಗ್ರಾಮಗಳಲ್ಲಿ ಸುಮಾರು 20-25 ವರ್ಷ ಪ್ರಯಾದ ಗಂಡಾನೆ ಹಾಗೂ ಮಾನವ ನಡುವೆ ಹಲವು ಬಾರಿ ಸಂಘರ್ಷ ಆಗಿದೆ. ಮಕ್ಕಳು, ವಯೋವೃದ್ಧರು ಆನೆಯ ಉಪಟಳವನ್ನು ಕಣ್ಣಾರೆ ಕಂಡಿದ್ದಾರೆ. ಈವರೆಗೆ ಇಬ್ಬರು ಆನೆ ದಾಳಿಗೆ ಮೃತಪಟ್ಟಿದ್ದಾರೆ. ಬೆಳೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಹಲವು ಬಾರಿ ಗ್ರಾಮದ ರಸ್ತೆಗಳಲ್ಲಿ ಈ ಆನೆ ಹಾದುಹೋಗಿದೆ. ಇದರಿಂದಾಗಿ ಹಲವು ವರ್ಷಗಳಿಂದ ಜನ ಭಯಭೀತರಾಗಿದ್ದಾರೆ.
ಎರಡನೇ ಪ್ರಯೋಗ:
ಈ ಆನೆಯ ಸೆರೆಗೆ ಸರ್ಕಾರ ಕಳೆದ ಎರಡೂವರೆ ತಿಂಗಳ ಹಿಂದೆ ಅನುಮತಿ ನೀಡಿತ್ತು. ಆನೆ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೈಬೈಲು ಬಿಡಾರದಿಂದ ಆನೆಗಳನ್ನು ಕರೆಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಾನುಮತಿ ಆನೆಯನ್ನು ಬಳಸಿಕೊಂಡು ಹಾನಿಟ್ರ್ಯಾಪ್ ಮಾಡುವ ಪ್ರಯತ್ನವೂ ಸಹ ನಡೆದಿತ್ತು. ಅರಣ್ಯ ಇಲಾಖೆಯ ಈ ತಂತ್ರಗಾರಿಕೆಗೆ ಆನೆ ಕ್ಯಾರೆ ಎನ್ನಲಿಲ್ಲ, ಒಂಟಿ ಸಲಗ ಬಲಿಷ್ಠವಾಗಿದ್ದರಿಂದ ಹಾಗೂ ಮಳೆ ಮುಂದುವರಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ನಾಗರಹೊಳೆಯ ಸಾಕಾನೆಗಳು ಬಳಸಿಕೊಂಡಿದ್ದರಿಂದ ದಸರಾ ಮುಗಿದು, ಆನೆಗಳು ತಮ್ಮ ಸ್ವಸ್ಥಾನಕ್ಕೆ ಬರುವವರೆಗೆ ಕಾದು, ನಂತರದಲ್ಲಿ ಸರ್ಕಾರಕ್ಕೆ ಅರಣ್ಯ ಇಲಾಖೆ ಕೋರಿಕೆ ಸಲ್ಲಿಸಿದ ಬಳಿಕ ಭಾನುವಾರ 6 ಆನೆಗಳು ನಾಗರಹೊಳೆಯಿಂದ ಆಗಮಿಸಿವೆ. ಸೋಮವಾರದಿಂದ ಎರಡನೇ ಹಂತದ ಪ್ರಯೋಗ ಮುಂದುವರಿಯಲಿದೆ.
ಸದ್ಯ ಹೆಣ್ಣಾನೆ ಬಳಕೆ ಇಲ್ಲ:
ಸಕ್ರೈಬೈಲು ತಂಡದಲ್ಲಿದ್ದ ಆನೆಗಳ ಜತೆಗೆ ಭಾನುಮತಿ ಹೆಣ್ಣಾನೆ ತರಿಸಿಕೊಳ್ಳಲಾಗಿತ್ತು. ಆದರೆ, ನಾಗರಹೊಳೆಯಿಂದ ಬಂದಿರುವುದು 6 ಗಂಡಾನೆಗಳು, ಈ ತಂಡದಲ್ಲಿರುವ ಕಾವೇರಿ ಮತ್ತು ವಿಜಯ ಹೆಣ್ಣಾನೆಗಳು ಸದ್ಯ ಗರ್ಭಿಣಿಯಾಗಿವೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಈ ರೀತಿಯ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲಾಗದು. ಅಗತ್ಯ ಬಿದ್ದರೆ, ಪಶು ವೈದ್ಯರೊಂದಿಗೆ ಚರ್ಚಿಸಿ ಅವರು ಒಪ್ಪಿಗೆ ನೀಡಿದ ನಂತರವೇ ಮತ್ತೊಮ್ಮೆ ಭಾನುಮತಿ ಆನೆಗಳನ್ನು ಕರೆಸಿಕೊಳ್ಳಲಾಗುವುದು ಎಂದು ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಎನ್.ಇ. ಕ್ರಾಂತಿ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕಾಡಾನೆ ಹಾವಳಿ ತಡೆಯಲು ತಮಿಳುನಾಡು ಮಾದರಿಯ ರೋಪ್ ಫೆನ್ಸ್ ಯೋಜನೆ: ಜಾವೇದ್ ಅಕ್ತರ್
ಸದ್ಯ ಆನೆ ಬೀಡು ಬಿಟ್ಟಿರುವ ಪ್ರದೇಶ ತುಂಬಾ ಕಠಿಣವಾಗಿದೆ. ಬೆಟ್ಟಗುಡ್ಡಗಳು ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಾಗಿಲ್ಲ. ಬಲಿಷ್ಠವಾಗಿರುವ ಒಂಟಿ ಸಲಗ ಹಿಡಿಯಲು ನಾಗರಹೊಳೆಯ ಬಲಿಷ್ಟಆನೆಗಳನ್ನು ಕರೆಸಿಕೊಳ್ಳಲಾಗಿದೆ.
ಆನೆಯ ಲೊಕೇಷನ್ ಪತ್ತೆ
100 ಮಂದಿ ಅರಣ್ಯ ಸಿಬ್ಬಂದಿ, 3 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿಯೊಂದು ತಂಡದಲ್ಲಿ ಓರ್ವರು ಪಶು ವೈದ್ಯರು ನಿಯೋಜಿಸಲಾಗಿದೆ. ಬಿಳಿಗಿರಿ ರಂಗನಬೆಟ್ಟವನ್ಯಧಾಮದ ಡಾ. ಮುಬೀನ್ ರೆಹಮನ್, ನಾಗರಹೊಳೆಯ ಡಾ.ರಮೇಶ್, ಚಿಕ್ಕಮಗಳೂರಿನ ಡಾ.ಯಶಸ್ ಕಾರ್ಯಾಚರಣೆಯಲ್ಲಿ ಇದ್ದಾರೆ.
ಭಾನುವಾರ ಬಂದಿರುವ ಆನೆಗಳು ಹಾಗೂ ತಂಡಗಳು ಆನೆಯ ಇರುವಿಕೆಯನ್ನು ಪತ್ತೆ ಹಚ್ಚಲಿವೆ. ಸದ್ಯ ಇಲಾಖೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಊರುಬಗೆ ಬಳಿ ಆನೆ ಬೀಡು ಬಿಟ್ಟಿದೆ. ಅದನ್ನು ಖಚಿತ ಪಡಿಸಿಕೊಳ್ಳಲು ಸೋಮವಾರ ಬೆಳಗ್ಗೆಯೇ ಸ್ಥಳಕ್ಕೆ ತಂಡ ಭೇಟಿ ನೀಡಲಿದೆ. ಬಳಿಕ ಪ್ಲಾನ್ ಮಾಡಿಕೊಂಡು ಕಾರ್ಯಾಚರಣೆ ನಡೆಸಲಿವೆ.
ಆನೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಗಲಿದೆ. ಈ ಸಂಬಂಧ ಪೊಲೀಸ್ ಇಲಾಖೆ, ಮೆಸ್ಕಾಂ, ಆ ಭಾಗದ ಗ್ರಾಮಸ್ಥರಿಗೆ, ಶಿಕ್ಷಣ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಕಾರ್ಯಚರಣೆ ಮುಕ್ತಾಯ ಆಗುವವರೆಗೆ ಆ ಪ್ರದೇಶಗಳಲ್ಲಿರುವ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಲು ಹಾಗೂ ಅರಣ್ಯ ಇಲಾಖೆಯ ತಂಡಗಳಿಗೆ ಸೂಕ್ತ ಸಹಕಾರ ನೀಡಬೇಕು
- ಎನ್.ಇ.ಕ್ರಾಂತಿ, ಡಿಎಫ್‌ಓ, ಚಿಕ್ಕಮಗಳೂರು