ಕೊರೋನಾ ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗವಾಗಿ ಪಸರಿಸುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ನರೇಂದ್ರ ಮೋದಿಜಿಯವರೇ ವಹಿಸಬೇಕು ಎಂದು ದೇವರ ಸಂಕಲ್ಪ ಆಗಿತ್ತು ಎಂದು ಅನಿಸುತ್ತದೆ. ಇಲ್ಲದೇ ಹೋದರೆ ಈ ಅವಧಿಯಲ್ಲಿ ದೇಶವನ್ನು ಸುರಕ್ಷಿತವಾಗಿ ಮುನ್ನಡೆಸುವುದು ಅಷ್ಟು ಸುಲಭದ ಮಾತೇ ಅಲ್ಲ. ದೇಶದ 130 ಕೋಟಿ ನಾಗರಿಕರನ್ನು ತನ್ನ ಮನೆಯ ಸದಸ್ಯರು ಎಂದು ಅಂದುಕೊಂಡವರಿಗೆ ಮಾತ್ರ ಇದು ಸಾಧ್ಯ.

ದೇಶವನ್ನು ಒಂದು ದಿನ ಬಂದ್‌ ಮಾಡಿದರೆ ಆಗುವ ಆರ್ಥಿಕ ನಷ್ಟವನ್ನು ಪರಿಗಣಿಸುವಾಗ ಮೋದಿಜಿ ಮಾಚ್‌ರ್‍ ಕೊನೆಯ ವಾರದ ಆರಂಭದಲ್ಲಿ ತೆಗೆದುಕೊಂಡ ನಿರ್ಧಾರ ಚಿಕ್ಕದೇನಲ್ಲ. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆಡಳಿತಗಾರರು ತಮ್ಮ ಕೈಯಲ್ಲಿ ಆಗಲ್ಲ ಎಂದು ಕೈ ಎತ್ತಿದಾಗ 130 ಕೋಟಿ ಜನಸಂಖ್ಯೆವುಳ್ಳ ರಾಷ್ಟ್ರದ ಪ್ರಧಾನಿಯೊಬ್ಬರು ಏಕಕಾಲದಲ್ಲಿ ದೇಶದ ನಾಗರಿಕರ ಹೊಟ್ಟೆಪಾಡು ಮತ್ತು ದೇಶದ ಆರ್ಥಿಕತೆಯ ದೀಪಕ್ಕೆ ಬೇಕಾಗುವ ಉದ್ಯಮ ಎನ್ನುವ ಇಂಧನವನ್ನು ನಿರಂತರ ಚಲಾವಣೆಯಲ್ಲಿಡುವ ಕೆಲಸ ಮಾಡಿದರಲ್ಲ, ಅದು ಮೋದಿಯವರ ತಾಕತ್ತು.

ಬಡವರ ಕಷ್ಟಮೋದಿಗೆ ಗೊತ್ತು

ಕೊರೋನಾ ವೈರಸ್‌ ಸೋಂಕಿನಿಂದ ದೇಶದ ಆರ್ಥಿಕತೆಯ ಮೇಲೆ ಆದ ತೀವ್ರ ದುಷ್ಪರಿಣಾಮಗಳನ್ನು ಬಗೆಹರಿಸಲು ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಎರಡು ಮಾದರಿಯ ವಿಶೇಷ ಪ್ಯಾಕೇಜುಗಳನ್ನು ಅನುಷ್ಠಾನಗೊಳಿಸಿರುವುದು ಇಡೀ ದೇಶಕ್ಕೆ ಗೊತ್ತು. ಗೊತ್ತಿಲ್ಲ ಎಂದರೆ ಅದು ರಾಹುಲ… ಮತ್ತು ಸಿದ್ದರಾಮಯ್ಯನವರಿಗೆ ಮಾತ್ರ. ಹಿಂದೆಲ್ಲ ಒಂದೆರಡು ದಿನ ದೇಶ ಬಂದ್‌ ಆಗುವಾಗ ದುರ್ಬಲ ವರ್ಗದ ಜನರು ನಿತ್ಯದ ಆಹಾರವನ್ನು ಗಳಿಸಲು ದಾರಿ ಯಾವುದು ಎನ್ನುವ ಬೃಹತ್‌ ಪ್ರಶ್ನೆಗೆ ಉತ್ತರ ಸಿಗದೆ ಸಂಕಟ ಪಡುತ್ತಿದ್ದುದನ್ನು ನಾವು ನೋಡಿದ್ದೇವೆ.

ಬಂಗಲೆ ತೆರವಿಗೆ ಮೋದಿ ಬಳಿ ಸಮಯ ಕೋರಿಲ್ಲ:ಪ್ರಿಯಾಂಕ ಸ್ಪಷ್ಟನೆ

ಅದರಲ್ಲಿಯೂ ಈ ಬಾರಿ ವಾರಗಟ್ಟಲೆ ಲಾಕ್‌ಡೌನ್‌ ಎಂದರೆ ಅದನ್ನು ಕೇಳುವಾಗಲೇ ಬಡವರ ಕಷ್ಟಸುಲಭದಲ್ಲಿ ಐಷಾರಾಮಿ ಕುಟುಂಬಗಳಲ್ಲಿ ತಿಂದುಡು ಬೆಳೆದವರಿಗೆ ಅರ್ಥವಾಗುವಂತದ್ದಲ್ಲ. ಆದರೆ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಮೋದಿಜಿಯವರಿಗೆ ಬಡವರ ಆಹಾರದ ಸಮಸ್ಯೆಯನ್ನು ಯಾರೂ ಹೇಳಬೇಕಾಗಿರಲಿಲ್ಲ. ಏಕೆಂದರೆ ಸಣ್ಣವರಿರುವಾಗ ಪ್ರತಿ ಊಟವನ್ನು ಗಳಿಸುವುದಕ್ಕೆ ಆ ಪುಣ್ಯಾತ್ಮ ದುಡಿಯಬೇಕಿತ್ತು.

ಒಂದು ವೇಳೆ ಮೋದಿ ಬಿಟ್ಟು ರಾಹುಲ್, ಪ್ರಿಯಾಂಕಾ ಪ್ರಧಾನಿಯಾಗಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಬಡವರ ಮತ್ತು ಕೆಳಮಧ್ಯಮ ವರ್ಗದ ಹೊಟ್ಟೆಯ ಸಂಕಟವನ್ನು ಅರಿತಿರುವ ಮೋದಿಜಿಯವರು ಮಾರ್ಚ್ 24 ರಂದು ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ ನಂತರ ಮಾಚ್‌ರ್‍ 26ರಂದು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ದುರ್ಬಲ ವರ್ಗದವರ ರಕ್ಷಣೆಗೆ 1.7 ಲಕ್ಷ ಕೋಟಿ ರು. ವಿಶೇಷ ಪ್ಯಾಕೇಜ್‌ ಜಾರಿಗೊಳಿಸಿದರು. ಸುಮಾರು 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ ಅಥವಾ ಗೋಧಿ, ಒಂದು ಕೆಜಿ ಬೇಳೆಯನ್ನು ಏಪ್ರಿಲ…ನಿಂದ ಜೂನ್‌ ತನಕ ಘೋಷಿಸಲಾಗಿತ್ತು.

ಉಚಿತ ಅಡುಗೆ ಅನಿಲ, ನೇರ ಹಣ

ಈಗ ಈ ಯೋಜನೆಯನ್ನು ನವೆಂಬರ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಪ್ರಧಾನಮಂತ್ರಿ ಅನ್ನಪೂರ್ಣ ಯೋಜನೆಗೆ ಜೂನ್‌ ತಿಂಗಳ ಅಂತ್ಯದಲ್ಲಿ ಮಂಜೂರು ಮಾಡಲಾದ 90 ಸಾವಿರ ಕೋಟಿ ರುಪಾಯಿ ಸೇರಿದಂತೆ ಒಟ್ಟಿಗೆ 1.5 ಲಕ್ಷ ಕೋಟಿ ರುಪಾಯಿ ನಿಗದಿಪಡಿಸಲಾಗಿದೆ. ಇನ್ನು ಬಿಪಿಎಲ… ಕುಟುಂಬದ ಯಾವ ತಾಯಿಯೂ ಅಡಿಗೆ ಅನಿಲ ಸಿಲೆಂಡರ್‌ ಚಿಂತೆ ಇಲ್ಲದೇ ಇರಬೇಕು ಎನ್ನುವ ಉದ್ದೇಶದಿಂದ ದೇಶದ 8.2 ಕೋಟಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ತಿಂಗಳಿಗೆ ಒಂದು ಅಡಿಗೆ ಅನಿಲ ಸಿಲೆಂಡರ್‌ ಉಚಿತದಂತೆ 13 ಸಾವಿರ ಕೋಟಿ ವೆಚ್ಚದಲ್ಲಿ 3 ತಿಂಗಳು ಉಚಿತ ಅಡುಗೆ ಅನಿಲದ ಸಿಲಿಂಡರ್‌ ಅನ್ನು ನೀಡಲಾಗಿದೆ.

ಇನ್ನು ಸರ್ಕಾರದಿಂದ ನೇರವಾಗಿ ಸಹಾಯಧನ ಬ್ಯಾಂಕ್‌ ಖಾತೆಗೆ ತಲುಪಬೇಕೆಂಬ ಉದ್ದೇಶದಿಂದ ಮೋದಿಜಿಯವರು ಆರಂಭಿಸಿದ ಜನಧನ್‌ ಖಾತೆಯಲ್ಲಿ ತಿಂಗಳಿಗೆ 500 ರುಪಾಯಿಯಂತೆ ಮೂರು ತಿಂಗಳು 30,611 ಕೋಟಿ ರುಪಾಯಿ ವೆಚ್ಚದಲ್ಲಿ ಹಣ ಜಮಾ ಮಾಡಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಇದು ಮಾತೆಯರಿಗೆ ಚೈತನ್ಯ ನೀಡಿರುವುದು ಸುಳ್ಳಲ್ಲ. ಇನ್ನು ಮೂರು ಕೋಟಿ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ 1000 ಸಾವಿರ ರುಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ.

'ಸಚಿನ್ ಪೈಲಟ್‌ಗೆ ವೆಲ್‌ಕಮ್' ಬಿಜೆಪಿ ಅಗ್ರ ನಾಯಕನ ಬಹಿರಂಗ ಆಹ್ವಾನ

ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ 8.7 ಕೋಟಿ ರೈತರಿಗೆ 2000 ಹಣವನ್ನು ಆರ್ಥಿಕ ವರ್ಷದ ಆರಂಭದಲ್ಲಿಯೇ ವರ್ಗಾಯಿಸಲಾಗಿದೆ. ಇದರ ಮೊತ್ತವೇ 17,890 ಕೋಟಿ ಎಂದರೆ ಮೋದಿ ಯಾವ ರೀತಿಯಲ್ಲಿ ಕೃಷಿಕರ, ಮಾತೆಯರ, ಹಿರಿಯರ, ಅಂಗವಿಕಲರ, ವಿಧವೆಯರ, ಬಡವರ ಸಂಕಷ್ಟಮಯ ಜೀವನವನ್ನು ಸಮಗ್ರವಾಗಿ ಅನುಭವಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇದೆಲ್ಲ ಒಂದು ಕಡೆಯಾದರೆ ಭಾರತದ ಆರ್ಥಿಕ ಪುನರುತ್ಥಾನಕ್ಕೋಸ್ಕರ ಆತ್ಮನಿರ್ಭರ ಭಾರತ (ಸ್ವಯಂ ಅವಲಂಬಿತ) ತತ್ವದ ಅಡಿಯಲ್ಲಿ 20 ಲಕ್ಷ ಕೋಟಿ ರು. ವಿಶೇಷ ಪ್ಯಾಕೇಜ್‌ ಜಾರಿಗೆ ತಂದಿದೆ.

ಎಂಎಸ್‌ಎಂಇ ಪುನಶ್ಚೇತನ

ದೇಶದ ಜೀವಾಳ ಇರುವುದು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ (ಎಂಎಸ್‌ಎಂಇ) ಪುನಃಶ್ಚೇತನದಿಂದ ಎಂದು ಮೋದಿಯವರು ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿಯುವ ಮೊದಲೇ ತಿಳಿದುಬಿಟ್ಟಿದ್ದರು. ಗುಜರಾತಿನಂತಹ ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಆಡಳಿತ ಮಾಡಿದ್ದ ಮೋದಿಯವರಿಗೆ ಉದ್ಯೋಗ ಸೃಷ್ಟಿಮಾಡಬೇಕಾದರೆ ನಾವು ಎಂಎಸ್‌ಎಂಇಯನ್ನು ಬಲಪಡಿಸಬೇಕು ಎನ್ನುವ ದೂರದೃಷ್ಟಿಇತ್ತು.

ಲಾಕ್‌ಡೌನ್‌ ಆದಾಗ ಈ ಉದ್ಯಮ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು. ಈ ಕ್ಷೇತ್ರದ ಉದ್ಯಮಿಗಳಿಗೆ 3 ಲಕ್ಷ ಕೋಟಿ ರು. ಗ್ಯಾರಂಟಿ ರಹಿತ ಆಟೋಮ್ಯಾಟಿಕ್‌ ಸಾಲವನ್ನು ನೀಡಿದ್ದೇ ಈ ಕಾರಣದಿಂದ. 100% ಸರ್ಕಾರವೇ ಗ್ಯಾರಂಟಿ ಇರುವ ಈ ಸಾಲದಿಂದ ಅಂದಾಜು 45 ಲಕ್ಷ ಸಂಸ್ಥೆಗಳಿಗೆ ಲಾಭವಾಗಿದೆ. ಇನ್ನು ಆರ್ಥಿಕ ಒತ್ತಡದಲ್ಲಿರುವ ಎಂಎಸ್‌ಎಂಇಗಳ ಪುನರುಜ್ಜೀವನಕ್ಕೆ 20 ಸಾವಿರ ಕೋಟಿ ರು. ಸಾಲವನ್ನೂ ಸಹÜ ನೀಡಲಾಗುತ್ತಿದೆ. ಎಂಎಸ್‌ಎಂಇಗಳಲ್ಲಿ ಬಂಡವಾಳ ಹೂಡಲು 50 ಸಾವಿರ ಕೋಟಿ ರು. ಫಂಡ್‌ಗಳನ್ನು ಒದಗಿಸಲಾಗಿದೆ. ಇನ್ನು 200 ಕೋಟಿ ರು.ಗಿಂತಲೂ ಕಡಿಮೆ ಮೌಲ್ಯದ ಸರ್ಕಾರಿ ಯೋಜನೆಗಳಿಗೆ ಅಂತಾರಾಷ್ಟ್ರೀಯ ಟೆಂಡರ್‌ ಪ್ರಕ್ರಿಯೆ ರದ್ದು ಮಾಡಿ, ಅದರ ಲಾಭ ಇದೇ ಎಂಎಸ್‌ಎಂಇಗಳಿಗೆ ವರ್ಗಾಯಿಸಲಾಗಿದೆ.

ಕೃಷಿ ಬಗ್ಗೆ ಸರ್ಕಾರದ ದೂರದೃಷ್ಟಿ

ನೌಕರರು ಮತ್ತು ಸಂಸ್ಥಾಪಕರ ಇಪಿಎಫ್‌ ಭಾಗವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದ್ದು, 2500 ಕೋಟಿ ರುಪಾಯಿ ವೆಚ್ಚದಲ್ಲಿ 3.67 ಲಕ್ಷ ಸಂಸ್ಥೆಗಳಿಗೆ ಮತ್ತು 72.22 ಲಕ್ಷ ನೌಕರರಿಗೆ ಲಾಭವಾಗಲಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮೋದಿಜಿಯವರ ಕೃಷಿಕರ ಬಗ್ಗೆ ದೂರದೃಷ್ಟಿಎಷ್ಟಿತ್ತು ಎಂದರೆ ಕೃಷಿ ಕ್ಷೇತ್ರದಲ್ಲಿ 60 ವರ್ಷಗಳ ಹಿಂದಿನ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಆಹಾರ ಧಾನ್ಯ, ತೈಲ ಬೀಜ, ಬೇಳೆಕಾಳು, ತೈಲ, ಆಲೂಗಡ್ಡೆ ಮತ್ತು ಈರುಳ್ಳಿ ಈ ಆರು ವಸ್ತುಗಳನ್ನು ಕಾಯ್ದೆಯಿಂದ ಹೊರತರಲಾಗಿದೆ. ಇದರಿಂದಾಗಿ ಕೃಷಿಕರಿಗೆ ಈ ಆರು ಉತ್ಪನ್ನಗಳಿಗೆ ಆಕರ್ಷಕ ದರ ದೊರೆಯಲು ಅನುಕೂಲವಾಗುತ್ತದೆ.

'ನಿಮಿಷಕ್ಕೊಂದು ತೀರ್ಮಾನ, ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಹೆಚ್ಚಳ'

ಬಹಳ ಶ್ರೇಷ್ಠ ಬದಲಾವಣೆ ಮೋದಿಜಿ ಏನು ಮಾಡಿದರು ಎಂದರೆ, ಕೃಷಿಕರು ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಅಂತರ್‌ ರಾಜ್ಯ ನಿರ್ಬಂಧಗಳು ತೆರವಾಗಿವೆ. ಉತ್ತಮ ಆದಾಯ ಎಲ್ಲಿ ಸಿಗುತ್ತೋ ಅಲ್ಲಿ ರೈತನಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವ ಅವಕಾಶ ಹಿಂದೆ ಇರಲಿಲ್ಲ. ಇನ್ನು ನರೇಗಾ ಯೋಜನೆ, ಇದು ಆರಂಭಗೊಂಡ ನಂತರ 15 ವರ್ಷಗಳಲ್ಲಿ ಹೊಸ ದಾಖಲೆಯನ್ನು ಮೋದಿಜಿ ಬರೆದಿದ್ದಾರೆ.

41.77 ಕೋಟಿ ಮಾನವ ದಿನಗಳ ಕೆಲಸವನ್ನು 2.8 ಕುಟುಂಬಗಳಿಗೆ ಮೇ ತಿಂಗಳಲ್ಲಿ ನೀಡಲಾಗಿದೆ. ಇಲ್ಲಿಯ ತನಕ ಕೃಷಿ ಸಂಬಂಧಿತ ಕಾರ್ಯಗಳಿಗೆ ಸ್ಟಾರ್ಟ್‌ ಅಪ್‌ ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಮೊಟ್ಟಮೊದಲ ಬಾರಿಗೆ 1 ಲಕ್ಷ ಕೋಟಿ ರು. ಕೃಷಿ ಮೂಲ ನಿಧಿ ಸ್ಥಾಪನೆಯಾಗಿದೆ. ಇಲ್ಲಿಯ ತನಕ ಕೃಷಿ ಉತ್ಪನ್ನ ಆಧಾರಿತ ಆಹಾರ ತಯಾರಿಕಾ ಘಟಕಗಳ ಕಡೆಗೆ ಯಾವ ಸರ್ಕಾರ ಕೂಡ ಆಸಕ್ತಿ ವಹಿಸುತ್ತಿರಲಿಲ್ಲ. ಮೋದಿ ಸರ್ಕಾರ ಅದಕ್ಕೆ 10 ಸಾವಿರ ಕೋಟಿ ನೆರವು ನೀಡಿದೆ.

ಇದರಿಂದ 2 ಲಕ್ಷ ಅಸಂಘಟಿತ ಆಹಾರ ಉತ್ಪನ್ನ ಘಟಕಗಳಿಗೆ ತಂತ್ರಜ್ಞಾನ ಸುಧಾರಣೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಇನ್ನು ಕರಾವಳಿಯ ಮೀನುಗಾರ ಬಂಧುಗಳನ್ನು ಕೃಷಿಯ ಭಾಗವಾಗಿ ಪರಿಗಣಿಸಲಾಗಿದೆ. ಜಲಚರ ಕೃಷಿಗೆ 11 ಸಾವಿರ ಕೋಟಿ ಮತ್ತು ವಿಶೇಷ ಬಂದರು ನಿರ್ಮಾಣಕ್ಕೆ 9 ಸಾವಿರ ಕೋಟಿ ರು.ವನ್ನು ಹಂಚಿಕೆ ಮಾಡಲಾಗಿದೆ. ಪಶುಸಂಗೋಪನೆ ಮೂಲ ಸೌಕರ್ಯಕ್ಕೆ 15000 ಕೋಟಿ ರು. ಮೀಸಲಿಡಲಾಗಿದೆ. 14 ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕನಿಷ್ಠ 50% ದಿಂದ 83%ಗೆ ಏರಿಸಲಾಗಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಲಾಗಿದ್ದು, ವಿಶೇಷ ಪ್ಯಾಕೇಜ್‌ನಡಿ ಕಡಿಮೆ ದರದಲ್ಲಿ 62,870 ಕೋಟಿ ರು. ಸಾಲ ನೀಡಲಾಗಿದೆ.

ವಲಸೆ ಕಾರ್ಮಿಕರ ಪರ ಮೋದಿ

ಮೋದಿಜಿಯವರ ಮುಂದಿದ್ದ ಇನ್ನೊಂದು ಸವಾಲು ವಲಸೆ ಕಾರ್ಮಿಕರದ್ದು. ವಲಸೆ ಕಾರ್ಮಿಕರಿಗೆ ಎರಡು ತಿಂಗಳ ಕಾಲ 3,500 ಕೋಟಿ ರು. ವೆಚ್ಚದಲ್ಲಿ 5 ಕೆ.ಜಿ ಅಕ್ಕಿ/ ಗೋಧಿ ಮತ್ತು 1 ಕೆ.ಜಿ. ಬೇಳೆ ನೀಡಲಾಗಿದೆ. ಅದಕ್ಕಾಗಿ 3,500 ಕೋಟಿ ರು. ಮೀಸಲಿಡಲಾಗಿದೆ. ತಮ್ಮ ತಮ್ಮ ಊರಿಗೆ ಹಿಂತಿರುಗಿರುವ ವಲಸೆ ಕಾರ್ಮಿಕರಿಗೆ 40 ಸಾವಿರ ಕೋಟಿ ರು. ಹೆಚ್ಚುವರಿ ವೆಚ್ಚದಲ್ಲಿ 300 ಕೋಟಿ ಮಾನವ ದಿನಗಳ ಉದ್ಯೋಗ ನೀಡಲಾಗುತ್ತಿದೆ.

ಇದರಿಂದ ವಲಸೆ ಕಾರ್ಮಿಕರು ಮೂಲ ಊರಿನಲ್ಲಿ ಇದ್ದರೂ ಜೀವನಕ್ಕೆ ಏನು ಕೊರತೆಯಾಗದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಗರೀಬ… ಕಲ್ಯಾಣ್‌ ರೋಜಗಾರ್‌ ಯೋಜನೆಯಡಿ ವಲಸೆ ಕಾರ್ಮಿಕರು ಅಧಿಕವಾಗಿರುವ 6 ರಾಜ್ಯಗಳ 116 ಜಿಲ್ಲೆಗಳ 50 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ 125 ದಿನಗಳ ಉದ್ಯೋಗ ಮತ್ತು ವೇತನವನ್ನು ಕೂಡ ಹೆಚ್ಚು ಮಾಡಲಾಗಿದೆ.

ಒಂದು ರಾಷ್ಟ್ರ ಒಂದು ಪಡಿತರ

ಕಾಂಗ್ರೆಸ್‌ ಅವಧಿಯ ನರೇಗಾ ಯೋಜನೆಗೂ ಮೋದಿ ಸರ್ಕಾರದ ನರೇಗಾ ಯೋಜನೆಗೂ ಸಾಕಷ್ಟುಅಂತರವಿದೆ. 2020-21ರಲ್ಲಿ ಕಾರ್ಮಿಕರ ಒಳಿತಿಗಾಗಿಯೇ 1,51,000 ಕೋಟಿ ರು. ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಇದು ಹಿಂದಿನ ವರ್ಷಗಳಿಗಿಂತ 4 ಪಟ್ಟು ವೆಚ್ಚವಾಗಿದೆ. ಇನ್ನು ವಲಸೆ ಕಾರ್ಮಿಕರಿಗೆ ಇದ್ದ ಅತಿ ದೊಡ್ಡ ಅಡಚಣೆ ಪಡಿತರ ಚೀಟಿಯದ್ದು. ಅದಕ್ಕಾಗಿ ‘ಒಂದು ರಾಷ್ಟ್ರ ಒಂದು ರೇಶನ್‌ ಕಾರ್ಡ್‌’ ಎನ್ನುವ ನಿಯಮ ಜಾರಿಗೆ ತರಲಾಗಿದೆ.

ಇದರ ಪರಿಣಾಮವಾಗಿ ನಾಗರಿಕರು ತಮ್ಮ ರೇಶನ್‌ ಕಾರ್ಡ್‌ನಿಂದ ಪಡಿತರವನ್ನು ದೇಶದ ಯಾವುದೇ ಭಾಗದಿಂದಲೂ ಪಡೆಯಬಹುದು. ಅಗಸ್ಟ್‌ 2020ರೊಳಗೆ ದೇಶದ 23 ರಾಜ್ಯಗಳಲ್ಲಿನ 67 ಕೋಟಿ ಅಂದರೆ ಸುಮಾರು 83 ಭಾಗ ಫಲಾನುಭವಿಗಳಿಗೆ ಅನುಕೂಲವಾಗಿದೆ. ಆತ್ಮನಿರ್ಭರ ಭಾರತ ತತ್ವದ ಅಡಿಯಲ್ಲಿ ದುರ್ಬಲ ವರ್ಗದವರನ್ನು ಸಬಲೀಕರಣ ಮಾಡುವ ಗುರಿಯನ್ನು ಎಷ್ಟುಯೋಜನಾಬದ್ಧವಾಗಿ ಮಾಡಲಾಗಿದೆ ಎಂದರೆ ಮಾನವ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಾಳಜಿಯನ್ನೂ ಸರ್ಕಾರ ಹೊಂದಿದೆ.

ಉದಾಹರಣೆಗೆ ಬೀದಿಬದಿ ವ್ಯಾಪಾರಿಗಳ ವಿಷಯವನ್ನೇ ತೆಗೆದುಕೊಳ್ಳಿ. 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ 10 ಸಾವಿರ ಸಾಲ ನೀಡಲಾಗುತ್ತದೆ. ಅದಕ್ಕಾಗಿ 5 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಇನ್ನು 50 ಸಾವಿರಗಿಂತಲೂ ಕಡಿಮೆ ಸಾಲ ಪಡೆಯುವ ಮುದ್ರಾ ಯೋಜನೆಯ ಶಿಶು ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಲಾಗಿದೆ. ಇನ್ನು 63 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ ಗ್ಯಾರಂಟಿ ಇಲ್ಲದೇ ನೀಡುತ್ತಿದ್ದ ಸಾಲವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ.

ಕಲ್ಲಿದ್ದಲು ಖಾಸಗೀಕರಣ

ಇನ್ನು ಸಾಲದ ಮೇಲಿನ ಬಡ್ಡಿಯ ದರವನ್ನೂ ಇಳಿಸಿರುವುದು ಮತ್ತು ಬ್ಯಾಂಕುಗಳ ಮೂಲಕ ಹಣಕಾಸು ವಲಯದಲ್ಲಿರುವ ಹಣದ ಮುಗ್ಗಟ್ಟನ್ನು ಸಡಿಲಗೊಳಿಸಲು 3.74 ಲಕ್ಷ ಕೋಟಿ ರು. ಹಣದ ಹರಿವು ನೀಡಿರುವುದು ದೇಶದ ಉದ್ಯಮದ ಆರ್ಥಿಕ ಚೈತನ್ಯವನ್ನು ಹೆಚ್ಚಿಸುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಲಿದೆ. ಕಲ್ಲಿದ್ದಲು ನಿಕ್ಷೇಪದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದರೂ ಪ್ರತಿ ವರ್ಷ 1 ಲಕ್ಷ ಕೋಟಿ ರು.ಗಿಂತಲೂ ಅಧಿಕ ಕಲ್ಲಿದ್ದಲ್ಲನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಈ ವಿರೋಧಾಭಾಸಕ್ಕೆ ಮಂಗಳ ಹಾಡಿ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಲು ಕಲ್ಲಿದ್ದಲು ಮತ್ತು ಖನಿಜಗಳ ಗಣಿಗಾರಿಕೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ.

ಇಂತಹ ಸಂಕಷ್ಟಕಾಲದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಸಹಾಯಹಸ್ತ ಬಹಳ ಪ್ರಮುಖವಾಗಿರುತ್ತದೆ. 2020-21ರ ಸಾಲಿನಲ್ಲಿ ರಾಜ್ಯ ಸರ್ಕಾರದ ಸಾಲದ ಮಿತಿಯನ್ನು ಜಿಡಿಪಿಯ ಮೂರರಿಂದ ಐದು ಶೇಕಡಾಕ್ಕೆ ಏರಿಸಲಾಗಿದೆ. ಇದರಿಂದ ದೇಶದ ಎಲ್ಲಾ ರಾಜ್ಯಗಳಿಗೆ 4.28 ಲಕ್ಷ ಕೋಟಿ ರು. ಹೆಚ್ಚುವರಿ ಸಾಲ ದೊರೆಯಲಿದೆ. ಪ್ರಧಾನಿ ಜಾರಿಗೆ ತರುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆ ರಾಜ್ಯ ಸರ್ಕಾರದ ಮೇಲೆ ಕೂಡ ಇದೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ಯಾಕೇಜು ಗಳೊಂದಿಗೆ, ರಾಜ್ಯದ ಅನುದಾನವನ್ನೂ ಸೇರಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಇದಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಭಿನಂದಿಸಿದ್ದಾರೆ. ಆದರೆ ರಾಹುಲ… ಗಾಂಧಿ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯ ಉಳಿಯಲು ಮೊಸರಲ್ಲಿ ಕಲ್ಲು ಹುಡುಕಲೇಬೇಕಿದೆ. ‘ಲೆಕ್ಕ ಕೊಡಿ’ ಅಭಿಯಾನ ಎನ್ನುವುದು ಅವರೆಲ್ಲರ ವಿಫಲ ಷಡ್ಯಂತ್ರದ ಫಲ ಎನ್ನುವುದನ್ನು ದೇಶದ, ರಾಜ್ಯದ ಜನಸಾಮಾನ್ಯರು ಅರ್ಥ ಮಾಡಿಕೊಂಡಿದ್ದಾರೆ. ಈ ಮೇಲೆ ಹೇಳಿದ ಅಷ್ಟೂಪ್ಯಾಕೇಜುಗಳು, ಯೋಜನೆಗಳು ಪ್ರತಿ ಮನೆಮನಗಳಿಗೆ ತಲುಪುತ್ತಿವೆ. ಆ ಹೊಟ್ಟೆಉರಿ ತಾಳಲಾರದೇ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿಗಳು ಒದ್ದಾಡುತ್ತಿರುವುದು ರಾಜ್ಯಕ್ಕೆ ಗೊತ್ತಾಗುತ್ತಿದೆ!

- ನಳಿನ್‌ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ