ಸೌಜನ್ಯ ಹತ್ಯೆ ಪ್ರಕರಣದ ತನಿಖೆಗೆ ಬಿಜೆಪಿ ಹೋರಾಟ: ಸೌಜನ್ಯ ತಾಯಿಗೆ ಮೋದಿ ಭೇಟಿ ಮಾಡಿಸುವ ಭರವಸೆ
ಉಜಿರೆ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಬೆಳ್ತಂಗಡಿ (ಆ.28): ಉಜಿರೆ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾನುವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಾಂಗಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಸೇರಿ ಹಲವು ಮುಖಂಡರ ಉಪಸ್ಥಿತಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಘೋಷಿಸಲಾಯಿತಲ್ಲದೆ, ಸೌಜನ್ಯಳ ತಾಯಿ ಕುಸುಮಾವತಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿಸಲು ವ್ಯವಸ್ಥೆ ಮಾಡಿಸುವ ಭರವಸೆ ನೀಡಲಾಯಿತು.
ಈ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ನ್ಯಾಯಾಲಯ ತನಿಖೆ ನಡೆಸಿ ಸಂತೋಷ್ ರಾವ್ ನಿರಪರಾಧಿ ಎಂದು ಹೇಳಿದೆ. ಇದರಿಂದ ಪ್ರಕರಣದ ಮರು ತನಿಖೆಗೆ ಅವಕಾಶವಿದೆ. ನ್ಯಾಯಾಲಯದ ಮೂಲಕವೇ ಇದರ ಮರು ತನಿಖೆಯಾಗಬೇಕು. ಈ ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು. ಇನ್ನು, ಬೆಳ್ತಂಗಡಿ ಮಾಜಿ ಶಾಸಕರಲ್ಲಿ ಪ್ರಕರಣದ ಬಗ್ಗೆ ಸಾಕ್ಷಿ ಇದ್ದರೆ ಅದನ್ನು ಬಹಿರಂಗಪಡಿಸಲಿ. ಅವರಿಗೆ ಭದ್ರತೆ ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈಗಾಗಲೇ ಸಿಬಿಐ ತನಿಖೆ ನಡೆದಿರುವುದರಿಂದ ಪ್ರಕರಣದ ಮರು ತನಿಖೆಗೆ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.
ಸೌಜನ್ಯ ಕೇಸ್ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ
ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಗೃಹ ಸಚಿವರು ಪ್ರಕರಣದ ತನಿಖೆ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಆದರೆ ಇದು ಮುಗಿದ ಅಧ್ಯಾಯವಲ್ಲ, ಹೋರಾಟದ ಆರಂಭ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲ ಸಂಘಟನೆಗಳ ಹೋರಾಟಕ್ಕೂ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು. ಸೌಜನ್ಯ ತಾಯಿ ಕುಸುಮಾವತಿ ಅವರು ಪ್ರಧಾನಿಯವರನ್ನು ಭೇಟಿ ಮಾಡಿಸಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಿಜೆಪಿಯಿಂದ ವ್ಯವಸ್ಥೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು. ಜತೆಗೆ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಆರೋಪಿಗಳು ಯಾರೆಂದು ಗೊತ್ತಿದ್ದರೆ ತನಿಖಾ ಸಂಸ್ಥೆಗೆ ಹೇಳಲಿ. ಗೊತ್ತಿದ್ದು ಅದನ್ನು ಮುಚ್ಚಿಡುವುದು ಕೂಡಾ ಅಪರಾಧವಾಗುತ್ತದೆ ಎಂದರು.
ಪ್ರಧಾನಿ ಭೇಟಿ ಮಾಡಿಸಿ: ಇದಕ್ಕೂ ಮುನ್ನ ಮಾತನಾಡಿದ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳ ಕೊಲೆ ಪ್ರಕರಣದಲ್ಲಿ 11 ವರ್ಷಗಳಿಂದ ನ್ಯಾಯ ಕೇಳುತ್ತಿದ್ದೇನೆ. ಆದರೆ ನನಗೆ ನ್ಯಾಯ ಸಿಗಲಿಲ್ಲ, ನನಗೆ ನ್ಯಾಯ ಒದಗಿಸಬೇಕು. ನನಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕು, ಅದಕ್ಕೆ ನೀವು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರಾದ ಹರೀಶ್ ಪೂಂಜ, ಭಾಗಿರಥಿ ಮುರುಳ್ಯ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಡಾ.ಭಾರತ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿಮತ್ತಿತರರು ಇದ್ದರು.
ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ: ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?
ದ.ಕ. ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಿಂದ ಬಸ್ಸುಗಳಲ್ಲಿ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಿರುಬಿಸಿಲಿದ್ದರೂ ನ್ಯಾಯ ಕೊಡಿ, ನ್ಯಾಯ ಕೊಡಿ ಎಂಬ ಒಕ್ಕಣೆಯ ಫಲಕಗಳನ್ನು ಹಿಡಿದು ಸಭೆಯ ಕೊನೆಯ ತನಕ ಭಾಗವಹಿಸಿದ್ದರು. ಸೌಜನ್ಯಾ ಹತ್ಯೆ ಪ್ರಕರಣದ ತಪ್ಪಿತಸ್ಥರನ್ನು ಪತ್ತೆಹಚ್ಚಿ ನ್ಯಾಯೋಚಿತ ಶಿಕ್ಷೆ ನೀಡುವಲ್ಲಿ ಈ ವರೆಗಿನ ತನಿಖೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಬಿಜೆಪಿ ದ.ಕ. ಜಿಲ್ಲಾ ಘಟಕ ಮನವಿ ಮಾಡಿದೆ. ಸೌಜನ್ಯ ಸಾವಿನ ಪ್ರಕರಣದಲ್ಲಿ ಮರು ತನಿಖೆಗೆ ಆಗ್ರಹಿಸಿ ಅವಿಭಜಿತ ದ.ಕ. ಜಿಲ್ಲಾ ಬಿಜೆಪಿ ಘಟಕ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮನವಿ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.