ತನ್ವೀರ್ ಧ್ವನಿಪೆಟ್ಟಿಗೆಗೆ ಹಾನಿ, ತುಂಡಾಗಿರುವ ಕಿವಿ ಕುಟುಂಬಸ್ಥರಿಗೆ ಹಸ್ತಾಂತರ!
ತನ್ವೀರ್ ಕಿವಿ, ಧ್ವನಿಪೆಟ್ಟಿಗೆಗೆ ಹಾನಿ: ವೈದ್ಯರಿಂದ ಶಸ್ತ್ರಚಿಕಿತ್ಸೆ| ಕಿವಿಭಾಗ ಜೋಡಣೆ ಯತ್ನ ವಿಫಲ, ಪ್ಲಾಸ್ಟಿಕ್ ಸರ್ಜರಿಗೆ ಸಲಹೆ| ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸೇಠ್| ಐಸಿಯುನಿಂದ ವಾರ್ಡಿಗೆ ಶಿಫ್ಟ್
ಮೈಸೂರು[ನ.22]: ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು ಐಸಿಯುನಿಂದ ವಾರ್ಡಿಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಉಪೇಂದ್ರ ಶೆಣೈ ತಿಳಿಸಿದ್ದಾರೆ. ಇದೇ ವೇಳೆ ಮಚ್ಚಿನೇಟಿಗೆ ತುಂಡಾಗಿದ್ದ ಅವರ ಎಡಗಿವಿಯನ್ನು ಜೋಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಶಸ್ತ್ರಕ್ರಿಯೆ ಮಾಡಿ ತೆಗೆದು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆಯಾಗಿ ತನ್ವೀರ್ ಸೇಠ್ ಅವರ ದೇಹ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಇನ್ನೂ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದರು.
'ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ, 48 ಗಂಟೆ ಏನೂ ಹೇಳೋಕಾಗಲ್ಲ'
ತನ್ವೀರ್ ಅವರ ಕಿವಿಯ ಕೆಳಭಾಗ ಮಚ್ಚಿನೇಟಿಗೆ ತುಂಡಾಗಿದ್ದರಿಂದ ಅದಕ್ಕೆ ಹೊಲಿಗೆ ಹಾಕಲಾಗಿತ್ತು. ಆದರೆ ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ಹೀಗಾಗಿ ಆ ಜಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಕತ್ತಿನ ನರಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ವಲ್ಪ ಊತ ಕಾಣಿಸಿಕೊಂಡಿದೆ. ಅವರು ಮಾತನಾಡುವಾಗ, ನಗುವಾಗ ತುಟಿ ಸ್ವಲ್ಪ ಓರೆ ಆದಂತೆ ಕಂಡು ಬರುತ್ತಿದೆ. ಮುಂದಿನ ಮೂರು ವಾರಗಳ ನಂತರ ಇದು ಸರಿಹೋಗುವ ಸಾಧ್ಯತೆ ಇದೆ ಎಂದು ಹೇಳಿದರು.
ಧ್ವನಿಪೆಟ್ಟಿಗೆ ಹಾನಿ:
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ತಲೆ ಮತ್ತು ಕತ್ತು ತಜ್ಞ ವೈದ್ಯ ಡಾ.ದತ್ತಾಥ್ರಿ ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರ ಧ್ವನಿ ಪೆಟ್ಟಿಗೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರು ಆಸ್ಪತ್ರೆಗೆ ಬಂದಾಗ ಧ್ವನಿಪೆಟ್ಟಿಗೆ ಸರಿಯಾಗಿ ಕೆಲಸ ಮಾಡುತ್ತಿತ್ತು. ಬುಧವಾರ ಸಂಜೆಯಿಂದ ಈ ಸಮಸ್ಯೆ ಗೊತ್ತಾಗಿದೆ. ಆರಂಭದಲ್ಲಿ ಅವರ ಕತ್ತಿನ ಎಲ್ಲಾ ನರಗಳು ಸರಿಯಾಗಿವೆ ಎಂದುಕೊಂಡಿದ್ದೆವು. ಆದರೆ ಈ ಧ್ವನಿಗೆ ಸಂಬಂಧಿಸಿದ ನರ ದುರ್ಬಲ ಇರುವಂತೆ ಕಾಣಿಸುತ್ತಿದೆ. ಅದು ತಾನಾಗಿಯೇ ಸರಿಯಾಗುವ ಸಾಧ್ಯತೆ ಇದೆ. ಇದಕ್ಕೆ ಕೆಲವು ದಿನಗಳ ಸಮಯ ತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಶಾಸಕ ತನ್ವೀರ್ ಸೇಠ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು
ಈ ನಡುವೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ವೀರ್ ಸೇಠ್ ಅವರನ್ನು ವೈದ್ಯರು ಗುರುವಾರ ಸಂಜೆ ವೇಳೆಗೆ ವಾರ್ಡ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತುಂಡಾಗಿರುವ ಕಿವಿ ಕುಟುಂಬಸ್ಥರಿಗೆ ಹಸ್ತಾಂತರ
ತನ್ವೀರ್ ಸೇಠ್ ಅವರ ತುಂಡಾಗಿರುವ ಕಿವಿಯ ಭಾಗವನ್ನು ತನ್ವೀರ್ ಸೇಠ್ ಅವರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಅವರಿಗೆ ಹಸ್ತಾಂತರಿಸಲಾಗಿದೆ. ಅದು ಅವರ ದೇಹದ ಒಂದು ಭಾಗವಾದ್ದರಿಂದ ಮುಸ್ಲಿಂ ಧರ್ಮದ ಪ್ರಕಾರ ಅದನ್ನು ಅಂತ್ಯಕ್ರಿಯೆ ಮಾಡುತ್ತಾರೆ ಎಂದು ವೈದ್ಯ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.