ಇಂದು ಮಹರ್ಷಿ ವಾಲ್ಮೀಕಿ ಜಯಂತಿ: ಎಂದೂ ಬಾಡದ ದೇವಕುಸುಮ ವಾಲ್ಮೀಕಿ ಋಷಿ
ರಾಮಾಯಣದ ಮೂಲಕ ಭಾರತವನ್ನು, ತಮ್ಮ ಬದುಕಿನ ಮೂಲಕ ದಮನಿತರನ್ನು ಬೆಳಗಿದ ಮಹಾಮುನಿ
ಬನ್ನೂರು ಕೆ.ರಾಜು
ಬೆಂಗಳೂರು(ಅ.28): ವಾಲ್ಮೀಕಿ ಮಹರ್ಷಿಗಳು ಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ. ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ. ಅದರಲ್ಲೂ ವಿಶೇಷವಾಗಿ ಶೂದ್ರ ವರ್ಗದಲ್ಲಿ ಅರಳಿದ ಮಹಾ ಕಾವ್ಯ ಪುಷ್ಪವಾಗಿ ಭುವಿಯಗಲಕೂ ಬಾನೆತ್ತರಕೂ ಘಮಘಮಿಸುತ್ತಿದ್ದಾರೆ.
ಪಿತೃವಾಕ್ಯ ಪರಿಪಾಲನೆ ಎಂಬ ಮಾತು ಬಂದಾಗ ನಮಗೆ ತಕ್ಷಣ ರಾಮ ನೆನಪಿಗೆ ಬರುತ್ತಾನೆ. ತಂದೆ ದಶರಥ ಮಹಾರಾಜನ ಮಾತು ನಡೆಸಿ ಕೊಡಲು ರಾಜ್ಯ ಸೇರಿದಂತೆ ಸರ್ವಸ್ವವನ್ನೂ ತೊರೆದು ಕಾಡಿಗೆ ಹೊರಟ ಮರ್ಯಾದಾ ಪುರುಷೋತ್ತಮ ರಾಮ. ಪತಿಯೇ ಪರಮಾತ್ಮನೆಂದು ರಾಮನನ್ನು ಹಿಂಬಾಲಿಸಿದ ಪತ್ನಿ ಸೀತಾದೇವಿ, ಅಣ್ಣ-ಅತ್ತಿಗೆಗೆ ಸಂರಕ್ಷಕನಾಗಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿದ ಸೋದರ ಲಕ್ಷ್ಮಣ, ಸಿಂಹಾಸನದಲ್ಲಿ ಅಣ್ಣನ ಪಾದುಕೆಗಳನ್ನೇ ಇಟ್ಟು ಅಣ್ಣನ ಹೆಸರಿನಲ್ಲೇ ರಾಜಾಳ್ವಿಕೆ ನಡೆಸುವ ಭ್ರಾತೃತ್ವಕ್ಕೊಂದು ಪರ್ಯಾಯ ಪದದಂತಿದ್ದ ತಮ್ಮ ಭರತ, ಕಾಡಿನಲ್ಲಿ ಸೀತೆಯನ್ನು ಕದ್ದೊಯ್ದ ರಾವಣಾಸುರ, ಸ್ವಾಮಿ ನಿಷ್ಠೆಯ ಭಕ್ತ ಹನುಮಂತನ ಲಂಕಾ ದಹನ, ಸೀತಾಮಾತೆಯನ್ನು ಬಂಧಮುಕ್ತಗೊಳಿಸಲು ಲಂಕೆಗೆ ಮುತ್ತಿಗೆ ಹಾಕಿದ ವಾನರ ಸೇನೆ, ಕೆಡುಕಿಗೆ ಬೆನ್ನು ತಿರುಗಿಸಿ ಒಳಿತಿಗೆ ಶರಣಾಗಿ ಸಹೋದರ ರಾವಣನನ್ನೇ ಬಿಟ್ಟು ಬಂದು ರಾಮನ ಬೆನ್ನಿಗೆ ನಿಲ್ಲುವ ವಿಭೀಷಣ, ಮಹಾ ಪತಿವ್ರತೆಯರ ಸಾಲಿನಲ್ಲಿ ನಿಲ್ಲುವ ರಾವಣನ ಸತಿ ಸಾಧ್ವಿ ಮಂಡೋದರಿ, ಲಂಕಾಧಿಪತಿ ರಾವಣನ ಸಂಹಾರ, ಸೀತಾಮಾತೆಯ ಬಿಡುಗಡೆ, ಮತ್ತೆ ಸೀತೆಯ ವನವಾಸ, ಕಾಡಿನಲ್ಲಿ ಲವ-ಕುಶರ ಜನನ.... ಹೀಗೆ ಈ ಎಲ್ಲಾ ಘಟನೆಗಳ, ಪಾತ್ರಗಳ ಹಿನ್ನೆಲೆಯಲ್ಲಿ ಬರುವ ಅನೇಕ ಕಥೆಗಳನ್ನು ಸಾಮಾನ್ಯವಾಗಿ ಬಹುತೇಕ ಎಲ್ಲರೂ ಕೇಳಿಯೇ ಇರುತ್ತಾರೆ.
Valmiki Jayanti: ರಾಷ್ಟ್ರಪತಿಗೆ ಆಹ್ವಾನ ನೀಡಲು ಸಿದ್ಧತೆ
ಇವೆಲ್ಲವೂ, ನಮ್ಮ ಭಾರತೀಯ ಸಂಸ್ಕೃತಿಯ ತಾಯಿ ಬೇರಿನಂತಿರುವ, ಈ ನೆಲದ ಆದಿ ಕಾವ್ಯ ಎಂದು ಪರಿಗಣಿಸಲ್ಪಟ್ಟಿರುವ ''ರಾಮಾಯಣ'' ಎಂಬ ಪ್ರಾಚೀನ ಮಹಾ ಕಾವ್ಯದಲ್ಲಿ ಕಾಣಬರುವ ಪಾತ್ರಗಳು. ಇದರ ಸೃಷ್ಟಿಕರ್ತರು ವಾಲ್ಮೀಕಿ ಮಹರ್ಷಿಗಳು. ರಾಮಾಯಣದಂತಹ ಜೀವನ ಮೌಲ್ಯಗಳುಳ್ಳ ಮಹಾಕಾವ್ಯವನ್ನು ಕಟ್ಟಿಕೊಟ್ಟ ವಾಲ್ಮೀಕಿಯನ್ನು ನಮ್ಮ ಪರಂಪರೆ ಬಹಳ ಗೌರವದಿಂದ ನೆನೆಯುತ್ತದೆ. ವಾಲ್ಮೀಕಿ ರಾಮಾಯಣವು ಅನೇಕ ಕಾವ್ಯ, ಕಥೆ, ಪುರಾಣ, ಇತಿಹಾಸಕ್ಕೆ ಆಕರವಾಗಿದೆ.
ಡಕಾಯಿತನು ವಾಲ್ಮೀಕಿಯಾದ ಕತೆ
ಮಹರ್ಷಿ ವಾಲ್ಮೀಕಿ ಕುರಿತಂತೆ ಅನೇಕ ಕಥೆಗಳು, ದಂತಕಥೆಗಳಿವೆ. ಇವುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ಕಥೆಯ ಪ್ರಕಾರ ಈತ ''ಪ್ರಚೇತಸ'' ಎಂಬ ಋಷಿಯ ಮಗ. ಈತನಿಗೆ ''ರೂಕ್ಷ'' ''ರತ್ನ'' ಎಂಬ ಹೆಸರುಗಳ ಜೊತೆಗೆ ಪ್ರಚೇತಸ ಮುನಿಯ ಪುತ್ರನಾಗಿದ್ದರಿಂದ ''ಪ್ರಾಚೇತಸ'' ಎನ್ನುವ ಹೆಸರುಗಳು ಇದ್ದವು. ಬಾಲ್ಯದಿಂದಲೂ ರೂಕ್ಷನಿಗೆ ದುಷ್ಟರ ಸಹವಾಸವೇ ಹೆಚ್ಚಾಗಿತ್ತು. ಹಾಗಾಗಿ ಬೆಳೆಯುತ್ತಾ ಹೋದಂತೆ ದುಷ್ಟಬುದ್ಧಿಯೂ ಬೆಳೆದು ದೊಡ್ಡ ಡಕಾಯಿತನಾದ. ಮದುವೆಯಾಗಿ ಸಂಸಾರಸ್ಥನಾದ ಮೇಲೂ ಕುಟುಂಬವನ್ನು ಸಾಕಲು ದರೋಡೆ ಮುಂದುವರೆಸಿದ. ಕಾಡಿನ ಹಾದಿಯಲ್ಲಿ ಪ್ರಯಾಣಿಸುತ್ತಿದ್ದವರನ್ನು ಅಡ್ಡಗಟ್ಟಿ ಹೊಡೆದು ಅವರಲ್ಲಿದ್ದ ಧನ-ಕನಕಗಳನ್ನು ಲೂಟಿ ಮಾಡುತ್ತಿದ್ದ. ಒಮ್ಮೆ ನಾರದ ಮುನಿಗಳು ಮತ್ತು ಸಪ್ತ ಋಷಿಗಳು ರೂಕ್ಷನಿದ್ದ ಆ ಕಾಡು ಹಾದಿಯಲ್ಲಿ ಬಂದರು. ಅವರನ್ನೂ ಬಿಡದೆ ಅಡ್ಡ ಹಾಕಿ ಅವರ ಮೇಲೆರಗಿದ ರೂಕ್ಷನು ‘ನಿಮ್ಮ ಬಳಿ ಇರುವುದೆಲ್ಲವನ್ನು ನನಗೆ ಕೊಟ್ಟುಬಿಡಿ. ಇಲ್ಲವೆಂದರೆ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ’ ಎಂದು ಅಬ್ಬರಿಸಿದ. ಆಗ ನಾರದ ಮುನಿಗಳು ‘ನೋಡಪ್ಪ ರೂಕ್ಷ, ನಮ್ಮ ಹತ್ತಿರ ಕಮಂಡಲ ಬಿಟ್ಟರೆ ಬೇರೇನೂ ಇಲ್ಲ. ಬೇಕಾದರೆ ಇದನ್ನೂ ನೀನೇ ತೆಗೆದುಕೊಳ್ಳುವೆಯಂತೆ. ಆದರೆ ಅದಕ್ಕೂ ಮುಂಚೆ ನೀನೇಕೆ ದರೋಡೆಯಂತಹ ಕಳ್ಳತನದ ದಾರಿ ಹಿಡಿದಿರುವೆ ಎಂಬುದನ್ನು ಹೇಳು’ ಎಂದರು.
ಆಗ ತಕ್ಷಣವೇ ರೂಕ್ಷನು ‘ನನ್ನ ಹೆಂಡತಿ ಮಕ್ಕಳನ್ನು ಸಾಕುವುದಕ್ಕಾಗಿ’ ಎಂದ. ಆಗ ನಾರದ ಮುನಿಗಳು ‘ಹೌದಾ, ಹಾಗಾದರೆ ಎಲ್ಲರನ್ನೂ ಗೋಳು ಹುಯ್ದುಕೊಂಡು ಹಿಂಸಿಸುವ ನೀನು ಮಾಡುವ ಪಾಪ ಕಾರ್ಯದಲ್ಲಿ ನಿನ್ನ ಹೆಂಡತಿ-ಮಕ್ಕಳು ಪಾಲು ತೆಗೆದುಕೊಳ್ಳುತ್ತಾರೆಯೇ? ಮೊದಲು ಹೋಗಿ ಅವರನ್ನು ಕೇಳಿಕೊಂಡು ಬಾ’ ಎಂದರು. ಕೂಡಲೇ ರೂಕ್ಷನು ತನ್ನ ಮನೆಯತ್ತ ನಡೆದು ನಾರದರು ಕೇಳಿದಂತೆ ಅದೇ ಪ್ರಶ್ನೆಯನ್ನು ಹೆಂಡತಿ-ಮಕ್ಕಳಲ್ಲಿ ಕೇಳಿದ. ಆಗ ಅವರು ‘ನಮ್ಮನ್ನು ಸಾಕೋದು ನಿನ್ನ ಕರ್ತವ್ಯ. ಇದಕ್ಕಾಗಿ ದರೋಡೆಯಂತಹ, ಕಳ್ಳತನದಂತಹ ಪಾಪ ಕೃತ್ಯಗಳನ್ನು ಮಾಡಲು ನಾವ್ಯಾರೂ ನಿನಗೆ ಹೇಳಿಲ್ಲ. ಹಾಗಾಗಿ ನಿನ್ನ ಪಾಪ ಕಾರ್ಯಕ್ಕೆ ನೀನೇ ಹೊಣೆ. ಅದರಲ್ಲಿ ಪಾಲು ತೆಗೆದುಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟರು. ಆಗ ರೂಕ್ಷನಿಗೆ ತನ್ನ ತಪ್ಪಿನ ಅರಿವಾಗಿ ಜ್ಞಾನೋದಯವಾಯಿತು. ಕೂಡಲೇ ನಾರದ ಮುನಿಯತ್ತ ಬಂದ ಅವನು ತನಗೆ ಮೋಕ್ಷ ಕರುಣಿಸುವಂತೆ ಬೇಡಿಕೊಂಡ. ಅದಕ್ಕೆ ನಾರದ ಮುನಿಗಳು ಈ ಸಪ್ತ ಋಷಿಗಳ ಜೊತೆಯಲ್ಲಿ ಮತ್ತೆ ನಾನು ಇದೇ ಸ್ಥಳಕ್ಕೆ ಮರಳಿ ಬರುವ ತನಕ ನೀನು ಇಲ್ಲೇ ರಾಮ ನಾಮ ಜಪಿಸುತ್ತಿರು ಎನ್ನುತ್ತಾರೆ.
ಆದರೆ ಎಷ್ಟು ಪ್ರಯತ್ನಿಸಿದರು ರೂಕ್ಷನ ಬಾಯಲ್ಲಿ ರಾಮನಾಮ ಬರುವುದೇ ಇಲ್ಲ. ಆಗ ನಾರದರು ‘ಅಲ್ಲಿ ನೋಡು, ರೂಕ್ಷ ಮರಗಳಿವೆಯಲ್ಲ. ನೀನು ಆ ಮರ ಆ ಮರ ಎಂದು ಹೇಳು’ ಎಂದರು. ಅದರಂತೆ ರೂಕ್ಷನು ಹೇಳುತ್ತಾ ಹೋದ. ಅದು ‘ರಾಮ ರಾಮ’ ಎಂದಾಯಿತು. ಈ ಜಪ ನಿರಂತರವಾಗಿ ಸಾಗಿತು. ಹೀಗೆ ಮೈಮರೆತು ಧ್ಯಾನಸ್ಥನಾಗಿ ಅದೆಷ್ಟೋ ವರ್ಷಗಳ ಕಾಲ ರೂಕ್ಷನು ರಾಮನಾಮ ಜಪಿಸುತ್ತಿದ್ದಾಗ ಅವನ ಸುತ್ತ ಬೃಹದಾಕಾರವಾಗಿ ಹಾವಿನ ಹುತ್ತ ಬೆಳೆಯಿತು. ರೂಕ್ಷನು ಹುತ್ತದೊಳಗೆ ಸೇರಿ ಮರೆಯಾಗಿ ಹೋದ. ಹೀಗಾಗಿ ಅವನು ಅಲ್ಲಿ ಕಾಣಿಸದಿದ್ದರೂ ಹುತ್ತದೊಳಗಿನಿಂದ ಅವನು ಹೇಳುತ್ತಿದ್ದ ರಾಮ ನಾಮ ದೊಡ್ಡದಾಗಿ ಕೇಳುತ್ತಲೇ ಇತ್ತು. ಅನೇಕ ವರ್ಷಗಳ ನಂತರ ನಾರದ ಮುನಿಗಳ ಜೊತೆಯಲ್ಲಿ ಸಪ್ತ ಋಷಿಗಳು ಬಂದರು. ರಾಮನಾಮ ಜಪದಲ್ಲಿ ಮುಳುಗಿಹೋಗಿದ್ದ ರೂಕ್ಷನನ್ನು ಪ್ರೀತಿಯಿಂದ ಕೂಗಿ ಕರೆದರು. ಅವರ ದನಿಯನ್ನು ಕೇಳಿದೊಡನೆ ರೂಕ್ಷ ಹುತ್ತವನ್ನು ಒಡೆದುಕೊಂಡು ಹೊರಬಂದ. ಸಂಸ್ಕೃತದಲ್ಲಿ ಹುತ್ತವನ್ನು ''ವಲ್ಮೀಕ'' ಎನ್ನುತ್ತಾರೆ. ಆದ್ದರಿಂದ ಹುತ್ತವನ್ನು ಭೇದಿಸಿಕೊಂಡು ಹೊರಬಂದ ರೂಕ್ಷನು ಅಂದಿನಿಂದ ವಾಲ್ಮೀಕಿ ಮಹರ್ಷಿಯಾದ.
ರಾಮಾಯಣ ರಚನೆಯ ಹಿನ್ನೆಲೆ
ನಂತರ ವಾಲ್ಮೀಕಿ ಮಹರ್ಷಿಯು ತಮಸಾ ನದಿ ತೀರದಲ್ಲಿ ಆಶ್ರಮವೊಂದನ್ನು ಕಟ್ಟಿಕೊಂಡು ಜೀವನ ನಡೆಸತೊಡಗಿದರು. ಒಮ್ಮೆ ಸ್ನಾನಕ್ಕೆಂದು ಹೋದಾಗ ಆಕಾಶದಲ್ಲಿ ಸರಸವಾಡುತ್ತಿದ್ದ ಕ್ರೌಂಚ ಪಕ್ಷಿಗಳು ಕಾಣಿಸಿದವು. ಅದೇ ಸಮಯಕ್ಕೆ ಬೇಡನೊಬ್ಬ ಬಂದು ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಲ್ಲಲು ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಚೀರಲಾರಂಭಿಸಿತು. ಈ ಹೃದಯವಿದ್ರಾವಕ ಘಟನೆಯನ್ನು ಕಂಡು ವಾಲ್ಮೀಕಿ ಮಹರ್ಷಿ ಕರುಣೆ, ದುಃಖ, ಕೋಪದಿಂದ ಕುದಿಯುತ್ತಾರೆ.
ಮಾ ನಿಷಾದ ಪ್ರತಿಷ್ಠಾಮ್ ತ್ವಮಗಮಃ ಶಾಸ್ವತೀಃ ಸಮಾಃ ।
ಯತ್ಕ್ರೌಂಚ ಮಿಥುನಾದೇಕ ಮವಧೀಃ ಕಾಮಮೋಹಿತಮ್ ।।
ಎಂಬ ಮಾತು ವಾಲ್ಮೀಕಿಯ ಬಾಯಿಯಿಂದ ಹೊರಬರುತ್ತದೆ. ‘ಅಕಾರಣಕ್ಕಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ, ನಿನ್ನ ಪಾಪದ ಫಲವಾಗಿ ನೀನು ಈ ಕೂಡಲೇ ಸಾಯಿ’ ಎಂದು ಬೇಡನಿಗೆ ವಾಲ್ಮೀಕಿ ಶಾಪ ನೀಡುತ್ತಾರೆ. ಈ ಕರುಣಾಜನಕ ಶ್ಲೋಕವು ಸಾಮಾನ್ಯ ಗದ್ಯ ರೂಪದಲ್ಲಿರದೆ ಪ್ರಾಸಬದ್ಧವಾಗಿ ಲಯ ಮತ್ತು ಛಂದಸ್ಸುಗಳನ್ನೊಳಗೊಂಡು ಕಾವ್ಯಾತ್ಮಕವಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬ್ರಹ್ಮದೇವ ನೇರವಾಗಿ ವಾಲ್ಮೀಕಿ ಮಹರ್ಷಿಗಳ ಬಳಿ ಬಂದು ಇದೇ ಶ್ಲೋಕ ರೂಪದಲ್ಲಿ ''ರಾಮಾಯಣ'' ಮಹಾ ಕಾವ್ಯವನ್ನು ರಚಿಸುವಂತೆ ಕೇಳಿಕೊಂಡರು. ಅದರಂತೆ ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳುಳ್ಳ ಬೃಹತ್ ರಾಮಾಯಣ ಮಹಾ ಕಾವ್ಯವನ್ನು ಬರೆದರು. ಈ ರಾಮಾಯಣ ಮಹಾಕಾವ್ಯವು ಬಾಲಕಾಂಡ, ಅಯೋಧ್ಯಾಕಾಂಡ, ಕಿಷ್ಕಿಂಧಾ ಕಾಂಡ, ಅರಣ್ಯಕಾಂಡ, ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ ಹೀಗೆ ಏಳು ಕಾಂಡಗಳಲ್ಲಿ ರಚಿಸಲ್ಪಟ್ಟಿದೆ.
ವಂದೇ ವಾಲ್ಮೀಕಿ ಕೋಕಿಲಮ್
ಬೇಡನಾಗಿ ಹುಟ್ಟಿದರೂ, ದರೋಡೆಕೋರನಾದರೂ, ಪರಿವರ್ತನೆಯ ಕುಲುಮೆಯಲ್ಲಿ ಉರಿದು ಜ್ಞಾನದಗ್ನಿಯಲ್ಲಿ ಮಿಂದೆದ್ದು ತಮ್ಮ ಜ್ಞಾನಾಸ್ತ್ರದಿಂದ ಜಗತ್ತನ್ನೇ ಗೆದ್ದು ಮಹರ್ಷಿಯ ಪಟ್ಟಕ್ಕೇರಿ ರಾಮಾಯಣ ಮಹಾಕಾವ್ಯದ ಮೂಲಕ ಆದಿಕವಿಯಾಗಿ ಇಡೀ ಜಗತ್ತಿಗೆ ಸುಜ್ಞಾನದ ಮಹಾ ಬೆಳಕು ಸುರಿದ ಮಹಾಮುನಿ ವಾಲ್ಮೀಕಿ ಎಂದರೆ ಯಾವತ್ತೂ ಅದು ಕೇವಲ ಒಂದು ಹೆಸರೆನಿಸದೆ ಭರತ ಭೂಮಿಯ ಸುಸಂಸ್ಕೃತಿಯ ಭವ್ಯ ಸಂಪತ್ತೆನಿಸುತ್ತದೆ. ವಾಲ್ಮೀಕಿ ಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ. ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ. ಅದರಲ್ಲೂ ವಿಶೇಷವಾಗಿ ಶೂದ್ರ ವರ್ಗದಲ್ಲಿ ಅರಳಿದ ಮಹಾಕಾವ್ಯ ಪುಷ್ಪವಾಗಿ ಭುವಿಯಗಲಕೂ ಬಾನೆತ್ತರಕೂ ಘಮಘಮಿಸುತ್ತಿದ್ದಾರೆ. ಇದು ಎಂದೂ ಬಾಡದ ದೇವ ಕುಸುಮ, ಇದಕ್ಕಿಲ್ಲ ಯಾವುದೂ ಸರಿಸಮ!
ತಳ ಜಾತಿಗಳ ಶಿಕ್ಷಣ, ಉದ್ಯೋಗಕ್ಕೆ ಒತ್ತು: ಸಿಎಂ
ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಮ್
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್
ಕಾವ್ಯವೆಂಬ ಮರದ ಮೇಲೆ ಕುಳಿತು ರಾಮ ರಾಮಾ ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದನೆ ಎಂಬುದು ಇದರರ್ಥ. ವಾಲ್ಮೀಕಿ ಮಹರ್ಷಿಯನ್ನು ಕೊಂಡಾಡುವ ಈ ಶ್ಲೋಕವು ಬುಧ ಕೌಶಿಕ ಋಷಿಯು ಬರೆದಿರುವ ಶ್ರೀರಾಮ ರಕ್ಷಾ ಸ್ತೋತ್ರದಲ್ಲಿದೆ. ಪ್ರಪಂಚದಲ್ಲೇ ಬಹಳ ಪ್ರಾಚೀನ ಮಹಾ ಕಾವ್ಯವೆಂದು ಹೇಳಲಾಗುವ ರಾಮಾಯಣ ಮಹಾಕಾವ್ಯದ ಕರ್ತೃ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಇರುವ ಪ್ರಸಿದ್ಧ ಶ್ಲೋಕವಿದು.
ತ್ರೇತಾಯುಗದಲ್ಲಿ ಆಗಿಹೋದ ಮಹಾಜ್ಞಾನಿಗಳು ವಾಲ್ಮೀಕಿ ಮುನಿಗಳು. ಇವರು ಬರೆದ ರಾಮಾಯಣ ಮಹಾಕಾವ್ಯವು ಮಾನವಕೋಟಿಗೆ ಮಹಾ ಮಾರ್ಗದರ್ಶನ. ತಮ್ಮ ಮಹತ್ಕೃತಿಯಂತೆಯೇ ಈ ಮಹರ್ಷಿಯ ಬದುಕು ಕೂಡ ಮಹಾ ರೋಚಕ, ಅಷ್ಟೇ ಬೋಧ ಪ್ರದಾಯಕ. ಒಂದು ರೀತಿ ಇವರೇ ಒಂದು ಜ್ಞಾನದ ಮಹಾ ಪಾಠಶಾಲೆ. ನಮ್ಮ ನೆಲದ ಸಿರಿ ಹಿರಿಮೆಯನ್ನು ಹೆಚ್ಚಿಸಿರುವ ಇಂತಹ ಮೇರು ಕೃತಿ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು ಉತ್ತರ ರಾಮಾಯಣದಲ್ಲಿ ಸ್ವತಃ ತಾವೇ ಒಂದು ಪಾತ್ರವಾಗಿ ಬರುತ್ತಾರೆ. ಶ್ರೀರಾಮನು ತುಂಬು ಗರ್ಭಿಣಿಯಾದ ತನ್ನ ಮಡದಿ ಸೀತಾದೇವಿಯನ್ನು ವನವಾಸಕ್ಕೆ ಕಳುಹಿಸಿದಾಗ ಸೀತಾ ಮಾತೆಗೆ ಆಸರೆ ನೀಡುವವರು ವಾಲ್ಮೀಕಿ ಮುನಿಗಳೇ. ಮುಂದೆ ಸೀತಾಮಾತೆಗೆ ಅವಳಿ ಗಂಡು ಮಕ್ಕಳು ಜನಿಸಿದಾಗ ವಾಲ್ಮೀಕಿ ಮಹರ್ಷಿಗಳೇ ಆ ಮಕ್ಕಳಿಗೆ ಲವ-ಕುಶ ಎಂದು ನಾಮಕರಣ ಮಾಡಿ ಅವರನ್ನು ಸಕಲ ವಿದ್ಯಾ ಪಾರಂಗತರನ್ನಾಗಿ ಮಾಡುತ್ತಾರೆ. ನಂತರ ಅವರು ಸೀತಾಮಾತೆಯ ಜೊತೆ ಸೇರಿ ರಾಮನನ್ನು ಕೂಡಿಕೊಳ್ಳುತ್ತಾರೆ.