Asianet Suvarna News Asianet Suvarna News

ಮಾರಣಾಂತಿಕ ಕಾಯಿಲೆಯಿಂದ ಮುಖ ವಿಕಾರ: Black Fungus ಸೋಂಕಿತರಿಗೆ ಕೃತಕ ಮೂಗು..!

*   ಬ್ಲ್ಯಾಕ್‌ ಫಂಗಸ್‌ನಿಂದ 350 ಮಂದಿಯ ಮುಖ, ಮೂಗು, ಕಣ್ಣು, ದವಡೆಯೇ ಮಾಯ
*   ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
*  ಸ್ಟಿರಾಯ್ಡ್‌ ಔಷಧಿ ತಂದಿಟ್ಟಿದ್ದ ಆಪತ್ತು
 

Artificial Nose for Black Fungus Patients in Bengaluru grg
Author
Bengaluru, First Published Jan 16, 2022, 9:12 AM IST

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಜ.15): ರಾಜ್ಯದಲ್ಲಿ(Karnataka) ಕೋವಿಡ್‌ನ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಲ್ಲಿ ಬ್ಲ್ಯಾಕ್‌ ಫಂಗಸ್‌ (Black Fungus) ಎಂಬ ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡು ಮುಖ, ಮೂಗು, ಕಣ್ಣು, ದವಡೆಗಳನ್ನೇ ಕಳೆದುಕೊಂಡಿರುವ 350ಕ್ಕೂ ಹೆಚ್ಚು ರೋಗಿಗಳಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ(Bowring  Hospital) ಶಸ್ತ್ರ ಚಿಕಿತ್ಸೆ ನಡೆದಿದ್ದು, ಇದೀಗ ಆ ರೋಗಿಗಳಿಗೆ ಕೃತಕ ಅಂಗಾಂಗ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿತ್ತು. ಆದರೆ ಅವರ ಪುನಶ್ಚೇತನವೂ ಕೂಡ ಅತಿ ಮುಖ್ಯವಾಗಿದ್ದ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆಯನ್ನು ಅರಿತ ಬೌರಿಂಗ್‌ ಆಸ್ಪತ್ರೆಯು ತಮ್ಮಲ್ಲಿ ಚೇತರಿಸಿಕೊಂಡ 90ಕ್ಕೂ ಹೆಚ್ಚು ರೋಗಿಗಳಿಗೆ(Patients) ಕೃತಕವಾದ ದವಡೆ, ಮೂಗು, ಕಣ್ಣು ಅಳವಡಿಸಿ ಅವರ ಪುನಶ್ಚೇತನಕ್ಕೆ ಪಣ ತೊಟ್ಟಿದೆ. ಕೃತಕ ಅಂಗಾಂಗಗಳನ್ನು(Artificial Organs) ಇಂಡಿಯನ್‌ ಪ್ರೋಸ್ಟೊಡಾಂಟಿಸ್ಟ್‌ ಸೊಸೈಟಿ (Indian Dental Society) ನೀಡಿದ್ದು, ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಬಂದು ಉಚಿತವಾಗಿ ಚಿಕಿತ್ಸೆ ನೀಡಿ ಅಂಗಾಂಗಗಳನ್ನು ಜೋಡಿಸುತ್ತಿದ್ದಾರೆ.

ಬ್ಲಾಕ್‌ಫಂಗಸ್‌ನಿಂದ ಕಿಡ್ನಿಗೂ ಅಪಾಯ: ದೆಹಲಿಯಲ್ಲಿ ವಿಶ್ವದ ಮೊದಲ ಪ್ರಕರಣ!

ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಮತ್ತು ಡೀನ್‌ ಡಾ. ಎಚ್‌.ವಿ.ಮನೋಜ್‌ಕುಮಾರ್‌ ‘ಕನ್ನಡಪ್ರಭ’ಕ್ಕೆ(Kannada Prabha) ಈ ಬಗ್ಗೆ ಮಾಹಿತಿ ನೀಡಿ, ಕಪ್ಪು ಶಿಲೀಂಧ್ರ ಕಾಯಿಲೆಯಿಂದ ಬಳಲಿ ಚೇತರಿಸಿಕೊಂಡ ರೋಗಿಗಳ ಪುನಶ್ಚೇತನ ಪ್ರಯತ್ನ ಅತ್ಯಂತ ಯಶಸ್ವಿಯಾಗಿ ನಮ್ಮಲ್ಲಿ ನಡೆದಿದೆ. ಸುಮಾರು 100 ಮಂದಿಗೆ ಯಶಸ್ವಿಯಾಗಿ ಕೃತಕ ಅಂಗಾಂಗ ಅಳವಡಿಸಿದ್ದೇವೆ. ಇನ್ನು ಕೆಲವರಿಗೆ ಅಳವಡಿಸಲಿದ್ದೇವೆ ಎಂದು ಹೇಳಿದರು.
ಬೌರಿಂಗ್‌ ಆಸ್ಪತ್ರೆಯಲ್ಲಿ 90 ಮಂದಿಗೆ ಈಗಾಗಲೇ ಕೃತಕ ಅಂಗ ಜೋಡಿಸಲಾಗಿದೆ. ಇನ್ನು 25 ಮಂದಿಗೆ ಜೋಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಡೆಂಟಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಗಿರುವ ಡಾ. ಅನೂಪ್‌ ನಾಯರ್‌, ತಮ್ಮ ಸಂಸ್ಥೆಯಲ್ಲಿ ಸುಮಾರು 25 ಮಂದಿಗೆ ನಾವು ಪುನಶ್ಚೇತನ ನಡೆಸಿದ್ದೇವೆ. ಬ್ಲ್ಯಾಕ್‌ ಫಂಗಸ್‌ನ ಶಸ್ತ್ರ ಚಿಕಿತ್ಸೆಗೆ(Surgery) ಒಳಗಾದವರಿಗೆ ಪುನಶ್ಚೇತನ ಅನಿವಾರ್ಯ ಆಗಿರುತ್ತದೆ. ಶಸ್ತ್ರ ಚಿಕಿತ್ಸೆಯ ಬಳಿಕ ಅನೇಕರಿಗೆ ನೀರು ಕುಡಿಯಲು, ಆಹಾರ ಜಗಿಯಲು ಕೂಡ ಸಾಧ್ಯವಿರುವುದಿಲ್ಲ. ಕಣ್ಣು ಗುಡ್ಡೆಯನ್ನೇ ತೆಗೆದ ಹಾಕಬೇಕಾದ ಪ್ರಕರಣವೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂತವೈದ್ಯರ ಸಮಾಜವು ರೋಗಿಗಳ ನೋವಿಗೆ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲೇ ಮೊದಲು: ಬೆಂಗ್ಳೂರು ವೈದ್ಯರೊಬ್ಬರಲ್ಲಿ ಬ್ಲ್ಯಾಕ್‌, ಗ್ರೀನ್‌ ಫಂಗಸ್‌ ಪತ್ತೆ..!

ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಒಂದೂವರೆಯಿಂದ ಎರಡು ಲಕ್ಷ ರುಪಾಯಿ ಖರ್ಚಾಗಬಹುದು. ನಾವು ಸುಮಾರು 50 ರಿಂದ 60 ಸಾವಿರ ರು. ಬೆಲೆಯ ಉಪಕರಣಗಳನ್ನು ಉಚಿತವಾಗಿ ರೋಗಿಗಳಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಟಿರಾಯ್ಡ್‌ ಔಷಧಿ ತಂದಿಟ್ಟಿದ್ದ ಆಪತ್ತು

ಎರಡನೇ ಅಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಸ್ಟಿರಾಯ್ಡ್‌ ಔಷಧಿಗಳನ್ನು(Steroid Medicine) ಹೆಚ್ಚಿನ ಪ್ರಮಾಣದಲ್ಲಿ ನೀಡಿದ್ದು, ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣ. ಆದರೆ ಈ ಬಾರಿ ಸೋಂಕಿನ ಗಂಭೀರ ಪ್ರಕರಣಗಳು ಕಡಿಮೆ ಇರುವುದರಿಂದ ಸ್ಟಿರಾಯ್ಡ್‌ ಔಷಧಿಯ ಮೊರೆ ಹೋಗುವರ ಪ್ರಮಾಣವು ಕಡಿಮೆ ಇರಬಹುದು. ಆದರೆ ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್‌ ಔಷಧಿಯನ್ನು ಸೇವಿಸಬೇಡಿ ಎಂದು ಡಾ. ಅನೂಪ್‌ ನಾಯರ್‌ ಮನವಿ ಮಾಡುತ್ತಾರೆ.

120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಳಗಾವಿ(Belagavi: ಕೋವಿಡ್‌ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಬ್ಲ್ಯಾಕ್‌ ಫಂಗಸ್‌ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

ಮೇ 5, 2021ರಂದು ಬ್ಲ್ಯಾಕ್‌ ಫಂಗಸ್‌ ರೋಗಿಯು ಕಂಡು ಬಂದಿದ್ದು, ಸುಮಾರು 120ಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕೋವಿಡ್‌ ಸೋಂಕಿಗೆ ಒಳಗಾಗಿದ್ದ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಆಸ್ಪತ್ರೆಯ ತಜ್ಞವೈದ್ಯರು ಯಶಸ್ವಿಯಾಗಿದ್ದರು.
 

Follow Us:
Download App:
  • android
  • ios