ಬೆಂಗಳೂರು [ಮಾ.20]:  ರಾಜ್ಯದಲ್ಲಿ ಕೃಷಿಕರಲ್ಲದವರು ಹಾಗೂ ಕೋಟ್ಯಧಿಪತಿಗಳೂ ಸಹ ಕೃಷಿ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣೆ ಕಾಯಿದೆ- 1961ಕ್ಕೆ ತಿದ್ದುಪಡಿ ತಂದು ನಿಯಮ ‘79-ಎ’ ಹಾಗೂ ‘79-ಬಿ’ ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. 

ಪ್ರಸ್ತುತ ರಾಜ್ಯದಲ್ಲಿ ಕೃಷಿಕರು ಹಾಗೂ ಕೃಷಿ ಹಿನ್ನೆಲೆಯ ಕುಟುಂಬದವರು ಹಾಗೂ ಪಹಣಿ (ಆರ್‌ಟಿಸಿ) ಹೊಂದಿರುವವರು ಮಾತ್ರ ಕೃಷಿ ಜಮೀನು ಖರೀದಿಸಬಹುದು ಮತ್ತು ಇಂತಹವರ ಕೃಷಿಯೇತರ ಆದಾಯವು 25 ಲಕ್ಷ ರು.ಗಳ ಮಿತಿಯಲ್ಲಿರಬೇಕು ಎಂಬ ನಿಯಮವಿದೆ. ಈ ಎರಡೂ ನಿಯಮಗಳನ್ನು ರದ್ದು ಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ವಿಧೇಯಕ ಮಂಡಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.

ಆದರೆ, ಕೃಷಿ ಭೂಮಿಯನ್ನು ಬಂಡವಾಳ ಶಾಹಿ ಹಾಗೂ ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸುವ ವಿವಾದಾತ್ಮಕ ತೀರ್ಮಾನದ ಬಗ್ಗೆ ವಿಪಕ್ಷಗಳು ಹಾಗೂ ರೈತ ವಲಯದಲ್ಲಿ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ. ಇದರಿಂದ ರೈತರು ತಮ್ಮ ಜಮೀನು ಮಾರಿಕೊಂಡು ಬೀದಿಗೆ ಬೀಳುವಂತಾಗಲಿದೆ. ಅಲ್ಲದೆ ಕೃಷಿ ಉತ್ಪಾದನೆ ಕುಸಿಯುತ್ತದೆ ಎಂಬ ಆರೋಪ ವ್ಯಕ್ತವಾಗಿದೆ. 

ಆದಗ್ಯೂ ತನ್ನ ನಿರ್ಧಾರಕ್ಕೆ ಸರ್ಕಾರ ಕೊಡುವ ಕಾರಣವೇ ಬೇರೆ. ಕೃಷಿ ಭೂಮಿ ಖರೀದಿಗೆ ವಿಧಿಸಿ ರುವ ನಿರ್ಬಂಧದಿಂದ ಸಾವಿರಾರು ಪ್ರಕರಣಗಳಲ್ಲಿ ಕೃಷಿ ಜಮೀನು ಖರೀದಿದಾರರು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿ ಸುತ್ತಲೂ ಅಲೆಯುವಂತಾಗಿದೆ. ನಿಯಮದ ಹೆಸರಿನಲ್ಲಿ ಕೃಷಿ ಭೂಮಿ ಖರೀದಿದಾರರನ್ನು ಹಿಂಸಿಸುತ್ತಿದ್ದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಜತೆಗೆ ಕೃಷಿ ಮಾಡದೆ 22.07 ಲಕ್ಷ ಹೆಕ್ಟೇರ್ ಜಮೀನು ಪಾಳು ಬಿದ್ದಿದೆ. ಈ ಜಮೀನಿನಲ್ಲೂ ಕೃಷಿ ಚಟುವಟಿಕೆ ನಡೆಯುವಂತಾಗಲು ಕೃಷಿ ಜಮೀನು ಖರೀದಿ ಸರಳೀಕರಿಸುವ ಅಗತ್ಯವಿದೆ. ಈ ಕಾರಣಕ್ಕೆ ತಿದ್ದುಪಡಿ ಅಗತ್ಯ ಎಂಬ ವಾದವನ್ನು ಸರ್ಕಾರ ಮುಂದಿಟ್ಟಿದೆ.

ಹುಬ್ಬಳ್ಳಿಯಲ್ಲಿ ಕೊರೋನಾ ಭೀತಿ: ಮೂವರ ಮೇಲೆ ತೀವ್ರ ನಿಗಾ.

5 ವರ್ಷದ ಹಿಂದೆಯಷ್ಟೇ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ವಿಧಿಸಿದ್ದ ಆದಾಯದ ಮಿತಿಯನ್ನು 2 ಲಕ್ಷ ರು.ಗಳಿಂದ 25 ಲಕ್ಷ ರು.ಗಳಿಗೆ ವಿಸ್ತರಿಸಿತ್ತು. ಆಗ ಈ ಹೆಚ್ಚಳವನ್ನೇ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮಾತ್ರವಲ್ಲದೆ ಕಾಂಗ್ರೆಸ್ ಸದಸ್ಯರೂ ಸಹ ಬಲವಾಗಿ ವಿರೋಧಿಸಿದ್ದರು. ಈಗ ಅದೇ ಬಿಜೆಪಿ ಸರ್ಕಾರವು ಆದಾಯ ಮಿತಿಯನ್ನೇ ಸಂಪೂರ್ಣ ರದ್ದುಗೊಳಿಸಲು ಮುಂದಾಗಿದೆ. 

ಅಲ್ಲದೆ ಕೃಷಿಯೇತರರೂ ಕೃಷಿ ಜಮೀನು ಖರೀದಿಸಲು ಅವಕಾಶ ನೀಡುವ ಬಗ್ಗೆ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಅವರು ಮಾ.16  ರಂದು ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಇದೇ ವಿಧಾನಮಂಡಲ ಅಧಿವೇಶನದಲ್ಲಿ 79 ಎ ಹಾಗೂ 79 ಬಿ ನಿಯಮ ರದ್ದುಪಡಿಸುವ ತಿದ್ದುಪಡಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಲು ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.