ಐತಿಹಾಸಿಕ ಬಾವಿಗಳು ನೀರಿನ ಮೂಲ ಆಗುವ ಬದಲು ಕಸದ ತೊಟ್ಟಿಗಳಾಗುತ್ತಿವೆ!
ಐತಿಹಾಸಿಕ ಬಾವಿಗಳು ನೀರಿನ ಮೂಲಗಳಾಗುವ ಬದಲಿಗೆ ಕಸದ ತೊಟ್ಟಿಗಳಾಗಿ ಮಾರ್ಪಡುತ್ತಿವೆ. ಗ್ರಾಪಂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಾವಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.
- ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ (ಸೆ.14) : ಐತಿಹಾಸಿಕ ಬಾವಿಗಳು ನೀರಿನ ಮೂಲಗಳಾಗುವ ಬದಲಿಗೆ ಕಸದ ತೊಟ್ಟಿಗಳಾಗಿ ಮಾರ್ಪಡುತ್ತಿವೆ. ಗ್ರಾಪಂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಾವಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.
ತಾಲೂಕಿನ ಕೇಸೂರು, ದೋಟಿಹಾಳ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಹಳೆಯ ಕಾಲದ ನೀರಿನ ಬಾವಿಗಳು ಸಾಕಷ್ಟು ಇವೆ. ಅವುಗಳ ಅಭಿವೃದ್ಧಿಗಾಗಿ ಸಂಬಂಧಪಟ್ಟಿರುವ ಅಧಿಕಾರಿಗಳು ಯಾವುದೇ ತರಹದ ಅಭಿವೃದ್ಧಿ ಕ್ರಮ ಕೈಗೊಂಡಿಲ್ಲ. ನೀರಿನ ಬಾವಿಗಳು ಈಗ ಅವನತಿಯತ್ತ ಹೊರಟಿವೆ. ಇವುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎನ್ನುವುದು ಗ್ರಾಮದ ನಿವಾಸಿಗಳು ಆಗ್ರಹ.
ಎಲ್ಲಿ ನೋಡಿದ್ರೂ ಶಾಲಾ ಕಟ್ಟಡದಲ್ಲಿ ಬಿರುಕು: ಮೂಲಭೂತ ಸೌಕರ್ಯವಿಲ್ಲದೇ ಸ್ಕೂಲ್ ಅಧ್ವಾನ..!
ಗಬ್ಬು ನಾರುತ್ತಿವೆ:
ಕೇಸೂರ ಗ್ರಾಮದ ಅಮ್ಮನಕಟ್ಟೆಯ ಹತ್ತಿರದ ಬಾವಿ, ನಾಗಪ್ಪನಕಟ್ಟೆಯ ಬಾವಿ, ವಾರ್ಡ್ 1ರಲ್ಲಿ ಬಸವೇಶ್ವರ ದೇವಸ್ಥಾನದ ಹತ್ತಿರದ ಬಾವಿ, ದೋಟಿಹಾಳ ಬಸ್ ನಿಲ್ದಾಣದಲ್ಲಿನ ಬಾವಿಯಲ್ಲಿ ಗ್ರಾಮದ ನಿವಾಸಿಗಳು ಮನೆ, ಅಂಗಡಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಬಾವಿಗೆ ಎಸೆಯುತ್ತಿದ್ದಾರೆ. ಇದರಿಂದ ಬಾವಿಗಳು ತ್ಯಾಜ್ಯದಿಂದ ತುಂಬಿ ತುಳುಕಾಡುತ್ತಾ ಗಬ್ಬೆದ್ದು ನಾರುತ್ತಿವೆ.
ತಾಲೂಕಿನ ಗೋತಗಿ ಗ್ರಾಮದಲ್ಲಿ ಐತಿಹಾಸಿಕ ಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಿದರೆ ನೂರಾರು ಬಾವಿಗಳು ಸಿಗುತ್ತವೆ. ಅನೇಕ ಬಾವಿಗಳಿಗೆ ಸುತ್ತಲೂ ಕಂಪೌಂಡ್ ಇಲ್ಲ. ಬಾವಿಗಳಲ್ಲಿ ಸಾರ್ವಜನಿಕರು ಕಸ ಕಡ್ಡಿ ಹಾಕುತ್ತಿದ್ದಾರೆ. ಕೆಲವೊಂದು ಬಾವಿಗೆ ಮಾತ್ರ ಕಂಪೌಂಡ್ ನಿರ್ಮಾಣ ಮಾಡಿದ್ದು ಕಂಡು ಬರುತ್ತದೆ.
ಬಾವಿಯೊಳಗೆ ಕ್ರಿಮಿಕೀಟಗಳು:
ನೀರಿನ ಬಾವಿಗಳು ಸುಮಾರು 100 ಅಡಿ ಆಳ ಇವೆ. ಬಾವಿಗಳ ನೀರು ಉಪಯೋಗ ಮಾಡದೇ ಇರುವುದರಿಂದ ಅದರಲ್ಲಿ ಕಸ ಕಡ್ಡಿಗಳನ್ನು ಹಾಕಲಾಗುತ್ತದೆ. ಇದರಿಂದ ನಿಂತ ನೀರಿನಲ್ಲಿ ಪಾಚಿ ಬೆಳೆದು ಅನೇಕ ರೀತಿಯ ಸೊಳ್ಳೆ, ನೊಣ ಉತ್ಪತ್ತಿಯಾಗುತ್ತಿವೆ. ಇದೇ ರೀತಿ ಪಾಳು ಬಿದ್ದಿರುವ ಬಾವಿಗಳಲ್ಲಿ ಸಣ್ಣಪುಟ್ಟ ಗಿಡಗಳು ಬೆಳೆದುಕೊಂಡಿದ್ದು ಇಂತಹ ಬಾವಿಗಳಲ್ಲಿ ಸರಿಸೃಪ, ಕಪ್ಪೆ ಸೇರಿದಂತೆ ಅನೇಕ ರೀತಿಯ ವಿಷಕಾರಿ ಜಂತುಗಳು ಹುಟ್ಟಿಕೊಂಡು ಯಾರು ಸಹ ಬಾವಿಯ ಹತ್ತಿರ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನರೇಗಾದಲ್ಲಿ ದುರಸ್ತಿಯಾಗಲಿ:
ನರೇಗಾ ಯೋಜನೆಯಡಿ ಹಳ್ಳದ ಹೂಳೆತ್ತುವುದು, ಕೆರೆ ಹೂಳೆತ್ತುವುದು, ಬದು ನಿರ್ಮಾಣ ಇನ್ನಿತರ ಕಾಮಗಾರಿಗಳ ಜೊತೆಗೆ ಗ್ರಾಮದ ಮಧ್ಯದಲ್ಲಿರುವ ಜಲಮೂಲಗಳಾದ ಬಾವಿಗಳು ಸದ್ಯ ಅವಸಾನದ ಅಂಚಿನಲ್ಲಿದ್ದು ಇಂತಹ ಬಾವಿಗಳಲ್ಲಿನ ಹೂಳೆತ್ತುವ ಕೆಲಸ ಮಾಡಬೇಕಾಗಿದೆ.
ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಶುಕ್ರವಾರದ ರಜೆ ಯಾಕೆ..? ಇದಕ್ಕಿದೆ ಐತಿಹಾಸಿಕ ಹಿನ್ನೆಲೆ..
ಗಣೇಶ ಹಬ್ಬ ಬಂತು:
ಗಣೇಶ ಚತುರ್ಥಿಯು ಸಮೀಪಿಸುತ್ತಿದ್ದು, ಕೂಡಲೇ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ನೀರಿನ ಬಾವಿಗಳ ಕಡೆ ಗಮನ ಹರಿಸಬೇಕು. ಬಾವಿಯಲ್ಲಿನ ಹೂಳು ಎತ್ತಿಸಿದರೆ ಗಣೇಶ ಮೂರ್ತಿ ವಿಸರ್ಜನೆಗೆ ಅನುಕೂಲವಾಗುತ್ತದೆ. ಬಾವಿ ಸ್ವಚ್ಛಗೊಳಿಸುವಂತೆ ಎರಡು ಮೂರು ಸಲ ಮನವಿ ಕೊಟ್ಟಿದ್ದರೂ ಗ್ರಾಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಕೇಸೂರು ಗೌಡರೊಬ್ಬರು ತಿಳಿಸಿದ್ದಾರೆ.
ಕೇಸೂರು, ದೋಟಿಹಾಳದಲ್ಲಿನ ಕೆಲವು ಬಾವಿಗಳು ಕಸಕಡ್ಡಿಗಳಿಂದ ತುಂಬಿವೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಕೂಡಲೇ ಬಾವಿಗಳನ್ನು ಸ್ವಚ್ಛತೆ ಮಾಡುವ ಕೆಲಸವಾಗಬೇಕು. ಜಲಮೂಲಗಳನ್ನು ಉಳಿಸಬೇಕಾಗಿದೆ.
- ವಿಷ್ಣು ಅಂಗಡಿ, ಕೇಸೂರು ಗ್ರಾಮದ ಯುವಕ
ತಾತ್ಕಾಲಿಕವಾಗಿ ಕುಡಿಯುವ ನೀರಿನ ಬಾವಿಯಲ್ಲಿ ಹಾಕಲಾದ ಕಸಕಡ್ಡಿ ಸ್ವಚ್ಛಗೊಳಿಸಿ ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಬಾವಿಗಳನ್ನು ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ.
-ಅಮೀನಸಾಬ ಅಲಾಂದಾರ, ಕೇಸೂರು ಗ್ರಾಪಂ ಪಿಡಿಒ