ಕೊರೋನಾ 3ನೇ ಅಲೆ: ಮಕ್ಕಳಿಗೇ 95,000 ಬೆಡ್ ಬೇಕು..!
* ಕೊರೋನಾ ಪರಾಕಾಷ್ಠೆ ಮೆರೆದರೆ ಗರಿಷ್ಠ ಇಷ್ಟು ಹಾಸಿಗೆ ಅಗತ್ಯ
* ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿಯ ವರದಿಯಲ್ಲಿ ಉಲ್ಲೇಖ
* ವೈರಸ್ ತೀವ್ರತೆ ಹೆಚ್ಚಾದರೆ 3.4 ಲಕ್ಷ ಮಕ್ಕಳಿಗೆ ಸೋಂಕು ಸಂಭವ
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು(ಜೂ.27): ರಾಜ್ಯದಲ್ಲಿ ಮೂರನೇ ಅಲೆ ವೇಳೆ ಕೊರೋನಾ ಸೋಂಕು ಹೆಚ್ಚು ತೀವ್ರತೆ ತೋರಿದರೆ ಸೋಂಕಿತರ ಸಂಖ್ಯೆ ಗರಿಷ್ಠವಿದ್ದಾಗ (ಪೀಕ್) 18 ವರ್ಷದೊಳಗಿನ ಮಕ್ಕಳಿಗಾಗಿಯೇ ಬರೋಬ್ಬರಿ 95,216 ಬೆಡ್‌ಗಳ ಅಗತ್ಯತೆ ಬೀಳಲಿದೆ. ಈ ಪೈಕಿ ಬೇಕಾಗುವ ಐಸಿಯು/ಎಚ್‌ಡಿಯು ಬೆಡ್‌ಗಳೇ ಸಂಖ್ಯೆಯೇ 13,602 ಆಗಲಿದೆ. ಹೀಗಂತ ಮೂರನೇ ಅಲೆ ಸಿದ್ಧತೆ ಕುರಿತ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸಮಿತಿಯು ಕೊರೋನಾ ಸೋಂಕಿನ ತೀವ್ರತೆ ಹೆಚ್ಚು, ಸಾಧಾರಣ ಹಾಗೂ ಕಡಿಮೆ ಇರುವ ಮೂರು ಪ್ರತ್ಯೇಕ ಮಾದರಿಗಳಲ್ಲಿ ಸಂಭಾವ್ಯ ಸೋಂಕು ಹಾಗೂ ಅಗತ್ಯವಾಗಲಿರುವ ಬೆಡ್‌ಗಳ ಅಂದಾಜು ವರದಿ ಸಿದ್ಧಪಡಿಸಿದೆ. ಈ ವೇಳೆ ಕೊರೋನಾ ಪ್ರಕರಣಗಳ ತೀವ್ರತೆ ಹೆಚ್ಚಿದ್ದಾಗ 18 ವರ್ಷದೊಳಗಿನ 3,40,059 ಮಕ್ಕಳಿಗೆ ಸೋಂಕು ಉಂಟಾಗಬಹುದು. ಈ ವೇಳೆ ಶೇ.20ರಷ್ಟುಮಕ್ಕಳಿಗೆ ರೋಗ ಲಕ್ಷಣ ಕಾಣಿಸಿಕೊಳ್ಳಬಹುದು. 27,205 ಆಸ್ಪತ್ರೆ ಬೆಡ್, 13,602 ವೆಂಟಿಲೇಟರ್, ಐಸಿಯು, ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್) ಬೆಡ್, 54,409 ಕೊರೋನಾ ಆರೈಕೆ ಕೇಂದ್ರದ ಬೆಡ್ ಸೇರಿ ಬರೋಬ್ಬರಿ 95,216 ಬೆಡ್ ಮಕ್ಕಳ ಆರೈಕೆಗೆ ಅಗತ್ಯ ಬೀಳಲಿವೆ ಎಂದು ಹೇಳಿದೆ.
ಸಾಧಾರಣ ಸ್ಥಿತಿ ಇದ್ದರೆ 3.40 ಲಕ್ಷ ಮಂದಿ ಸೋಂಕಿತ ಮಕ್ಕಳ ಪೈಕಿ 23,804 ಆಸ್ಪತ್ರೆ ಬೆಡ್, 6,801 ಐಸಿಯು/ಎಚ್‌ಡಿಯು ಬೆಡ್, 43,358 ಕೊರೋನಾ ಆರೈಕೆ ಕೇಂದ್ರದ ಬೆಡ್ ಅಗತ್ಯ ಬೀಳಲಿದೆ. ಕಡಿಮೆ ತೀವ್ರತೆ ವರದಿಯಾದರೆ 13,602 ಆಸ್ಪತ್ರೆ ಬೆಡ್, 6,801 ಐಸಿಯು/ಎಚ್‌ಡಿಯು ಬೆಡ್, 30,605 ಕೊರೋನಾ ಆರೈಕೆ ಕೇಂದ್ರದ ಬೆಡ್ ಅಗತ್ಯ ಸೃಷ್ಟಿಯಾಗಲಿದೆ ಎಂದು ತಜ್ಞರ ಸಮಿತಿ ತನ್ನ ಮದ್ಯಂತರ ವರದಿಯಲ್ಲಿ ತಿಳಿಸಿದೆ.
3ನೇ ಎದುರಿಸಲು ರಣತಂತ್ರ: ಡಾ| ದೇವಿಶೆಟ್ಟಿ ಸಮಿತಿಯ ಮಹತ್ವದ ಸಲಹೆ!
ಜಿಲ್ಲಾಸ್ಪತ್ರೆಯಲ್ಲೂ ಕನಿಷ್ಠ 10 ಮಕ್ಕಳ ವೆಂಟಿಲೇಟರ್:
ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ನಿಯೋನಾಟಲ್ ವೆಂಟಿಲೇಟರ್, 1 ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್, 20 ಐಸಿಯು ಬೆಡ್, 20 ಇನ್‌ಫ್ಯೂಷನ್ ಪಂಪ್, 20 ಫಿಂಗರ್ ಪಲ್ಸ್ ಆಕ್ಸಿಮೀಟರ್, ಪಲ್ಸ್ ಆಕ್ಸಿಮೀಟರ್, 1 ಪೋರ್ಟೇಬಲ್ ಎಕ್ಸ್ ರೇ, 2 ಪೋರ್ಟೇಬಲ್ ಇಸಿಜಿ, ಶಿಫ್ಟಿಂಗ್ ಟ್ರಾಲಿ ಸಹಿತ 3 ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಯಾವ್ಯಾವ ಅತ್ಯಗತ್ಯ ಸಲಕರಣೆ ಮಕ್ಕಳ ಚಿಕಿತ್ಸೆಗೆ ಅಗತ್ಯವಿದೆ ಎಂಬ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಬಳಿಕ ಬೆಳಗಾವಿಯಲ್ಲೇ ಹೆಚ್ಚು ಸೋಂಕು?:
ರಾಜ್ಯದಲ್ಲಿ 0-18 ವರ್ಷದ 2.38 ಕೋಟಿ ಮಕ್ಕಳಿದ್ದಾರೆ ಎಂದು ಸಮಿತಿ ಅಂದಾಜಿಸಿದೆ. ಈ ಪೈಕಿ ಬೆಂಗಳೂರು (32.21 ಲಕ್ಷ) ಬಳಿಕ ಅತಿ ಹೆಚ್ಚು ಮಕ್ಕಳಿರುವುದು ಬೆಳಗಾವಿಯಲ್ಲಿ (20.01 ಲಕ್ಷ), ಬಳಿಕ ಕಲಬುರಗಿ 12.15 ಲಕ್ಷ, ಬಳ್ಳಾರಿ 11.04 ಲಕ್ಷ, ಮೈಸೂರು 10.71 ಲಕ್ಷ, ವಿಜಯಪುರ 10.02 ಲಕ್ಷ ಮಕ್ಕಳಿದ್ದಾರೆ. ಹೀಗಾಗಿ ಹೆಚ್ಚು ಮಕ್ಕಳಿರುವ ಜಿಲ್ಲೆಗಳಲ್ಲಿ ಹೆಚ್ಚು ಮಂದಿಗೆ ಸೋಂಕು ಹರಡುವ ಅಂದಾಜಿದ್ದು, ಬೆಡ್‌ಗಳ ಅಗತ್ಯತೆಯೂ ಹೆಚ್ಚಿದೆ. ಬೆಂಗಳೂರಿನಲ್ಲಿ ಪೀಕ್ ಸಮಯದಲ್ಲಿ 45,958 ಪ್ರಕರಣ ದಾಖಲಾದರೆ ಬೆಳಗಾವಿಯಲ್ಲಿ 28,546 ಮಕ್ಕಳಿಗೆ ಸೋಂಕು ಉಂಟಾಗುವ ಅಂದಾಜಿದೆ.
ಜಿಲ್ಲಾವಾರು ಐಸಿಯು ಅಗತ್ಯತೆ
ಕೊರೋನಾ 3ನೇ ಅಲೆ ಸಾಧಾರಣ ಸ್ಥಿತಿಯಲ್ಲಿದ್ದರೆ ರಾಜ್ಯದಲ್ಲಿ 6,801 ಐಸಿಯು/ಎಚ್‌ಡಿಯು ಬೆಡ್‌ಗಳ ಅಗತ್ಯ ಬೀಳಲಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 919, ಬಾಗಲಕೋಟೆಯಲ್ಲಿ 243, ಬೆಂಗಳೂರು ಗ್ರಾಮಾಂತರ 102, ಬೆಳಗಾವಿ 571, ಬಳ್ಳಾರಿ 315, ಬೀದರ್ 224, ಬಿಜಾಪುರ 286, ಚಾಮರಾಜನಗರ 101, ಚಿಕ್ಕಬಳ್ಳಾಪುರ 137, ಚಿಕ್ಕಮಗಳೂರು 112, ಚಿತ್ರದುರ್ಗ 183, ದಕ್ಷಿಣ ಕನ್ನಡ 206, ದಾವಣಗೆರೆ 216, ಧಾರವಾಡ 207, ಗದಗ 125, ಕಲಬುರಗಿ 347, ಹಾಸನ 171, ಹಾವೇರಿ 188, ಕೊಡಗು 56, ಕೋಲಾರ 172, ಕೊಪ್ಪಳ 187, ಮಂಡ್ಯ 176, ಮೈಸೂರು 306, ರಾಯಚೂರು 262, ರಾಮನಗರ 108, ಶಿವಮೊಗ್ಗ 185, ತುಮಕೂರು 271, ಉಡುಪಿ 105, ಉತ್ತರ ಕನ್ನಡ 148, ಯಾದಗಿರಿ ಜಿಲ್ಲೆಯಲ್ಲಿ 170 ಐಸಿಯು/ಎಚ್‌ಡಿಯು ಬೆಡ್ ಅಗತ್ಯ ಬೀಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.