Asianet Suvarna News Asianet Suvarna News

ಕುಸ್ತಿಯಿಂದ ಕ್ರಿಕೆಟ್‌ವರೆಗೆ: ಭಾರತದ ಕ್ರೀಡಾ ಕ್ಷೇತ್ರದ ಲೈಂಗಿಕ ದೌರ್ಜನ್ಯದ ಕರಾಳ ಮುಖದ ಅನಾವರಣ..!

ಕ್ರೀಡಾ ಕ್ಷೇತ್ರವನ್ನೂ ಬಿಟ್ಟಿಲ್ಲ ಲೈಂಗಿಕ ದೌರ್ಜನ್ಯಗಳ ಹೊಲಸು
ಈಗಾಗಲೇ ಹಲವು ಕೋಚ್ ಹಾಗೂ ಅಧಿಕಾರಿಗಳ ಮೇಲೆ ದೂರು ದಾಖಲು
ಕುಸ್ತಿ ಫೆಡರೇಷನ್‌ ತಲೆದಂಡಕ್ಕೆ ಭಾರತೀಯ ಕುಸ್ತಿಪಟುಗಳ ಆಗ್ರಹ

Wrestling to cricket allegations of sexual harassment rocked Indian sports all Sports fans need to know kvn
Author
First Published Jan 20, 2023, 1:18 PM IST


ಬೆಂಗಳೂರು(ಜ.20): ಇತ್ತೀಚೆಗಷ್ಟೇ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ಹಾಗೂ ಇತರ ಕುಸ್ತಿಪಟುಗಳು, ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ಭೂಷಣ್‌ ಶೆರನ್ ಅವರ ಎದುರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದು ಮತ್ತೊಮ್ಮೆ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿನ ಹೊಲಸಿನ ಅನಾವರಣ ಮಾಡಿದಂತಾಗಿದೆ.

ಭಾರತೀಯ ಕ್ರೀಡಾಕ್ಷೇತ್ರದಲ್ಲಿ ನಡೆಯುತ್ತಿರುವ ದೌರ್ಜನ್ಯ ಬೆಳಕಿಗೆ ಬಂದಿರುವುದು ಇದೇ ಮೊದಲೇನಲ್ಲ. ತೀರಾ ಇತ್ತೀಚೆಗೆ ಎನ್ನುವಂತೆ ಹರ್ಯಾಣದ ಮಂತ್ರಿಯೊಬ್ಬರ ಮೇಲೆ ಮಹಿಳಾ ಕೋಚ್ ಒಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದುದ್ದರ ಬಗ್ಗೆ ಆರೋಪ ಮಾಡಿದ್ದರು. ಈ ವಿಚಾರ ಮುಗಿಯುವುದರೊಳಗಾಗಿ ಇದೀಗ ಮತ್ತೊಮ್ಮೆ ಕ್ರೀಡಾ ಕ್ಷೇತ್ರದಲ್ಲಿ ಇದೇ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ದೇಶದಲ್ಲಿ ಘಟಿಸಿದ ಲೈಂಗಿಕ ದೌರ್ಜನ್ಯದ ಆರೋಪಗಳು ಹೀಗಿವೆ ನೋಡಿ

ಭಾರತ ಅಂಡರ್ 17 ಮಹಿಳಾ ಫುಟ್ಬಾಲ್ ತಂಡದ ಸಹಾಯಕ ಕೋಚ್ ಅಲೆಕ್ಸ್‌ ಆಂಬ್ರೋಸ್ ಮೇಲೆ ಆರೋಪ:

ಭಾರತ ಅಂಡರ್ 17 ಮಹಿಳಾ ಫುಟ್ಬಾಲ್ ತಂಡವು ಯೂರೋಪ್ ಪ್ರವಾಸ ಕೈಗೊಂಡ ವೇಳೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಲೈಂಗಿಕವಾಗಿ ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ 2022ರ ಜುಲೈನಲ್ಲಿ ಅಲೆಕ್ಸ್ ಆಂಬ್ರೋಸ್ ಅವರ ತಲೆದಂಡವಾಗಿತ್ತು. ಸಹಾಯಕ ಕೋಚ್ ಮೇಲೆ ಈ ಆರೋಪ ಕೇಳಿ ಬಂದ ಎರಡು ದಿನಗಳೊಳಾಗಿ ಭಾರತೀಯ ಫುಟ್ಬಾಲ್ ಫೆಡರೇಷನ್‌, ಆಂಬ್ರೋಸ್‌ಗೆ ಗೇಟ್‌ಪಾಸ್ ನೀಡಲಾಗಿತ್ತು.

ರಾಷ್ಟ್ರೀಯ ಸೈಕ್ಲಿಸ್ಟ್‌ ತಂಡದ ಕೋಚ್ ವಿರುದ್ದ ಅಸಭ್ಯ ವರ್ತನೆಯ ಆರೋಪ:

ವಿದೇಶದಲ್ಲಿ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಪಾಲ್ಗೊಂಡ ವೇಳೆ ಅಂದರೆ 2022ರ ಜೂನ್‌ನಲ್ಲಿ ಮಹಿಳಾ ಸೈಕ್ಲಿಸ್ಟ್‌ ಅಥ್ಲೀಟ್‌ವೊಬ್ಬರು ತಮ್ಮ ಜತೆಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆರ್‌ ಕೆ ಶರ್ಮಾ, ಅನುಚಿತವಾಗಿ ವರ್ತಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

ಮಹಿಳಾ ಅಥ್ಲೀಟ್‌ಗಳಿಂದ ತಮಿಳುನಾಡು ಕೋಚ್‌ ಪಿ ನಾಗರಾಜನ್ ವಿರುದ್ದ ಆರೋಪ:

ಕಳೆದ ಜುಲೈ 2021ರಲ್ಲಿ ತಮಿಳುನಾಡಿನ ಏಳಕ್ಕೂ ಅಧಿಕ ಮಹಿಳಾ ಅಥ್ಲೀಟ್‌ಗಳು ತಮಿಳುನಾಡಿ ಫೀಲ್ಡ್ ಅಂಡ್ ಟ್ರ್ಯಾಕ್ ಕೋಚ್ ಪಿ ನಾಗರಾಜನ್ ಅವರು ಕಳೆದ ಕೆಲ ವರ್ಷಗಳಿಂದಲೂ ತಮ್ಮ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮಿಳುನಾಡು ಕೋಚ್ ಪಿ. ನಾಗರಾಜನ್ ವಿರುದ್ದ ಲೈಂಗಿಕ ಅಸಭ್ಯ ವರ್ತನೆಯ ಆರೋಪ ಕೇಳಿ ಬಂದಿತ್ತು. 19 ವರ್ಷದ ಮಹಿಳಾ ಅಥ್ಲೀಟ್‌ ಮೊದಲ ಬಾರಿಗೆ ಈ ವಿಚಾರದ ಬಗ್ಗೆ ತುಟಿಬಿಚ್ಚಿದ್ದರು. ಆ ನಂತರ ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

ಕ್ರಿಕೆಟ್ ಆಟಗಾರ್ತಿಯ ಮೇಲೆ ಕೋಚ್ ಲೈಂಗಿಕ ಕಿರುಕುಳ, ನೆರವಿಗೆ ಬಂದ ಗಂಭೀರ್:

2020ರ ಜನವರಿ ತಿಂಗಳಿನಲ್ಲಿ ಆಗ್ನೇಯ ಡೆಲ್ಲಿಯ ನಿಜಾಮುದ್ದೀನ್‌ ಎನ್ನುವ ಏರಿಯಾದಲ್ಲಿ ಮಹಿಳಾ ಕ್ರಿಕೆಟರ್‌ ಮೇಲೆ ಕೋಚ್ ಲೈಂಗಿಕ ಕಿರುಕುಳ ನೀಡುವ ಕುರಿತಂತೆ ಎಫ್‌ಐಆರ್ ದಾಖಲಾಗಿತ್ತು. ಈ ವಿಚಾರದಲ್ಲಿ ತಮಗೆ ತೊಂದರೆಯಾಗುತ್ತಿದ್ದು, ತಮ್ಮ ನೆರವಿಗೆ ಬರಬೇಕು ಎಂದು ಮಾಜಿ ಕ್ರಿಕೆಟಿಗ ಪೂರ್ವ ಡೆಲ್ಲಿ ಸಂಸದ ಗೌತಮ್ ಗಂಭೀರ್ ಮೊರೆಹೋಗಿದ್ದ ಯುವತಿಗೆ, ಗಂಭೀರ್ ನೆರವಾಗಿದ್ದರು.

ಮಹಿಳಾ ಜಿಮ್ನಾಸ್ಟ್‌ ತಮ್ಮ ಕೋಚ್ ವಿರುದ್ದ ಅಶ್ಲೀಲ ಪದದ ಆರೋಪ:

2014ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಹಿಳಾ ಜಿಮ್ನಾಸ್ಟ್‌ವೊಬ್ಬರು ತಮ್ಮ ಕೋಚ್ ವಿರುದ್ದವೇ ಆರೋಪ ಮಾಡಿದ್ದರು. ಜಿಮ್ನಾಸ್ಟಿಕ್ ಕೋಚ್ ಮನೋಜ್ ರಾಣಾ ಹಾಗೂ ಸಹಾಯಕ ಕೋಚ್ ಚಂದನ್ ಪಾಠಕ್‌, ರಾಷ್ಟ್ರ ರಾಜಧಾನಿ ನವದೆಹಲಿ ಇಂದಿರಾ ಗಾಂಧಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಾಗ ಈ ಇಬ್ಬರು ತಮ್ಮ ಮೇಲೆ ಅಶ್ಲೀಲ ಪದಬಳಕೆ ಮಾಡಿದ್ದರು ಎಂದು ಆರೋಪಿಸಿದ್ದರು.   

ಭಾರತ ತಂಡದ ಹಾಕಿ ಕೋಚ್ ಮೇಲೆ ಆಟಗಾರ್ತಿ ಲೈಂಗಿಕ ದೌರ್ಜನ್ಯದ ಆರೋಪ

2010ರ ಜುಲೈನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸದಸ್ಯೆಯೊಬ್ಬರು, ತಂಡದ ಹೆಡ್‌ಕೋಚ್ ಹಾಗೂ ಓಲಿಂಪಿಯನ್‌ ಮಹರಾಜ್‌ ಕಿಶನ್‌ ಕೌಶಿಕ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯ ಮೇಲೂ ಗಂಭೀರ ಆರೋಪ:

2009ರಲ್ಲಿ ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯ ವಿರುದ್ದ, ರಾಜ್ಯ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೇ ಲೈಂಗಿಕವಾಗಿ ಸಹಕರಿಸಬೇಕು ಎಂದು ಒತ್ತಾಯಿಸಿದ್ದರು ಎಂದು ಮಹಿಳಾ ಕ್ರಿಕೆಟ್ ಆಟಗಾರ್ತಿ ಆರೋಪಿಸಿದ್ದರು. ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಚಾಮುಂಡೇಶ್ವರ್‌ನಾಥ್‌ ವಿರುದ್ದ ಈ ಗಂಭೀರ ಆರೋಪ ಕೇಳಿಬಂದಿತ್ತು.

ಸರ್ಕಾರದ ಭರವಸೆಗೆ ಒಪ್ಪದ ಕುಸ್ತಿಪಟುಗಳು; ಬ್ರಿಜ್‌ಭೂಷಣ್‌ ವಿರುದ್ಧ ಇಂದು ಎಫ್‌ಐಆರ್‌?

ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಸಿಕ್ಕ ಮಾಹಿತಿಯಂತೆ 2010ರಿಂದ 2020ರ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸುಮಾರು 45 ಕ್ಕೂ ಅಧಿಕ ಲೈಂಗಿಕ ದೌರ್ಜನ್ಯದ ದೂರುಗಳು ರಾಷ್ಟ್ರೀಯ ಕ್ರೀಡಾಪ್ರಾಧಿಕಾರದಲ್ಲಿಯೇ ಕೇಳಿ ಬಂದಿವೆ. ಈ ಪೈಕಿ 29 ಕೇಸ್‌ಗಳು ಕೋಚ್‌ಗಳ ವಿರುದ್ದವೇ ಬಂದಿರುವುದು ವಿಪರ್ಯಾಸ. ಇದೀಗ ಮತ್ತೆ ಹೊಸ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದ್ದು, ಭಾರತ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios