Wrestlers Protest: ಮತ್ತೊಂದು ಟೂರ್ನಿಗೆ ಕುಸ್ತಿಪಟುಗಳು ಗೈರು!

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರ ತಲೆದಂಡಕ್ಕೆ ಒತ್ತಾಯ
ಭಾರತದ ತಾರಾ ಕುಸ್ತಿಪಟುಗಳಿಂದ ಮುಂದುವರೆದ ಪ್ರತಿಭಟನೆ
ಈ ವರ್ಷದ 3ನೇ ರ‍್ಯಾಂಕಿಂಗ್‌‌ ಟೂರ್ನಿಗೂ ಗೈರಾಗಲು ಕುಸ್ತಿಪಟುಗಳ ತೀರ್ಮಾನ

Wrestlers Protesting at Delhi Jantar Mantar deciding to miss major International tournament kvn

ನವದೆಹಲಿ(ಮೇ.03): ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರ ತಲೆದಂಡ, ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ತಾರಾ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ವಿನೇಶ್‌ ಫೋಗಾಟ್‌, ಸಾಕ್ಷಿ ಮಲಿಕ್‌ ಈ ವರ್ಷದ 3ನೇ ರ‍್ಯಾಂಕಿಂಗ್‌‌ ಟೂರ್ನಿಗೂ ಗೈರಾಗಲು ನಿರ್ಧರಿಸಿದ್ದಾರೆ. 

ಜೂನ್‌ 1ರಿಂದ 4ರ ವರೆಗೂ ಕಿರ್ಗಿಸ್ತಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈ ಮೂವರು ಖಚಿತಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಕೊನೆ ಬಾರಿಗೆ ಸ್ಪರ್ಧಾತ್ಮಕ ಕುಸ್ತಿಯಲ್ಲಿ ಕಾಣಿಸಿಕೊಂಡಿದ್ದ ಈ ಮೂವರು, ಈ ವರ್ಷ ಜಾಗ್ರೆಬ್‌ ಹಾಗೂ ಕೈರೋನಲ್ಲಿ ನಡೆದಿದ್ದ ರ‍್ಯಾಂಕಿಂಗ್‌‌ ಟೂರ್ನಿಗಳಿಗೆ ಗೈರಾಗಿದ್ದರು. ಜೊತೆಗೆ ಕಳೆದ ತಿಂಗಳು ನಡೆದ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಸ್ಪರ್ಧಿಸಿರಲಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿರುವ ಭಜರಂಗ್‌, ‘ಯಾವುದೇ ಪಂದ್ಯಾವಳಿಯಲ್ಲಿ ಸ್ಪರ್ಧಿಸುವುದಕ್ಕಿಂತ ನಮಗೆ ಪ್ರತಿಭಟನೆಯೇ ಮುಖ್ಯ’ ಎಂದಿದ್ದಾರೆ. ಇನ್ನು ದೆಹಲಿ ಪೊಲೀಸರ ಭದ್ರತೆಯನ್ನೂ ಈ ಮೂವರು ನಿರಾಕರಿಸಿದ್ದಾರೆ.

ಟೆನಿಸ್‌ ದಿಗ್ಗಜೆ ಸೆರೆನಾ ವಿಲಿಯಮ್ಸ್‌ 2ನೇ ಬಾರಿಗೆ ಗರ್ಭಿಣಿ

ನ್ಯೂಯಾರ್ಕ್: 23 ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿಗಳ ಒಡತಿ, ಅಮೆರಿಕದ ದಿಗ್ಗಜ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ 2ನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಸೋಮವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸೆರೆನಾ ಮಾಧ್ಯಮಗಳಿಗೆ ತಾವು 2ನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಖಚಿತಪಡಿಸಿದರು. 2017ರಲ್ಲಿ ಸೆರೆನಾಗೆ ಹೆಣ್ಣು ಮಗು ಜನಿಸಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಸೆರೆನಾ ವೃತ್ತಿಪರ ಟೆನಿಸ್‌ನಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು.

ಆರ್ಚರಿ: ಭಾರತಕ್ಕೆ ನಾಲ್ಕು ಪದಕ ಖಚಿತ

ತಾಷ್ಕೆಂಟ್‌: ಆರ್ಚರಿ ವಿಶ್ವಕಪ್‌ 2ನೇ ಹಂತದಲ್ಲಿ ಭಾರತೀಯರು ಅತ್ಯುತ್ತಮ ಪ್ರದರ್ಶನ ತೋರಿದ್ದು, ತಂಡ ವಿಭಾಗದ ನಾಲ್ಕೂ ಸ್ಪರ್ಧೆಗಳಲ್ಲಿ ಫೈನಲ್‌ಗೆ ಪ್ರವೇಶಿಸಿ, 4 ಪದಕ ಖಚಿತಪಡಿಸಿದ್ದಾರೆ. ಮೃನಾಲ್‌, ತುಷಾರ್‌, ಜಯಂತ ಅವರನ್ನೊಳಗೊಂಡ ಪುರುಷರ ರೀಕರ್ವ್ ತಂಡ ಸೆಮೀಸ್‌ನಲ್ಲಿ ಉಜ್ಬೇಕಿಸ್ತಾನ ವಿರುದ್ಧ ಜಯಿಸಿತು. ಶುಕ್ರವಾರ ಫೈನಲ್‌ನಲ್ಲಿ ಚೀನಾ ಎದುರಾಗಲಿದೆ. 

ಕ್ರಿಕೆಟ್ ಅಭಿಮಾನಿಗಳಲ್ಲಿ ದಿಗ್ಭ್ರಮೆ ಮೂಡಿಸಿದ ಕೊಹ್ಲಿ vs ಗಂಭೀರ್‌ ಕಾಳಗ!

ಸಂಗೀತಾ, ಪ್ರಾಚಿ, ತನಿಷಾ ಅವರನ್ನೊಳಗೊಂಡ ಮಹಿಳೆಯರ ರೀಕರ್ವ್‌ ತಂಡ ಸೆಮೀಸ್‌ನಲ್ಲಿ ಉಜ್ಬೇಕಿಸ್ತಾನವನ್ನು ಸೋಲಿಸಿ ಚೀನಾ ವಿರುದ್ಧ ಫೈನಲ್‌ ನಿಗದಿಪಡಿಸಿಕೊಂಡಿತು. ಕಾಂಪೌಂಡ್‌ ವಿಭಾಗದ ಸೆಮೀಸ್‌ನಲ್ಲಿ ಅಭಿಷೇಕ್‌, ಕುಶಾಲ್‌ ಹಾಗೂ ಅಮಿತ್‌ ಅವರ ತಂಡ ಸೆಮೀಸ್‌ನಲ್ಲಿ ಸೌದಿ ಅರೇಬಿಯಾವನ್ನು ಸೋಲಿಸಿತು. ಫೈನಲ್‌ನಲ್ಲಿ ಹಾಂಕಾಂಗ್‌ ಎದುರಾಗಲಿದೆ. ಪರ್ಣೀತ್‌, ಪ್ರಗತಿ ಹಾಗೂ ರಾಗಿಣಿ ಅವರನ್ನೊಳಗೊಂಡ ಮಹಿಳಾ ತಂಡವೂ ಫೈನಲಲ್ಲಿ ಹಾಂಕಾಂಗ್‌ ವಿರುದ್ಧ ಸೆಣಸಲಿದೆ.

ವಿಶ್ವ ಬಾಕ್ಸಿಂಗ್‌: ಪ್ರಿ ಕ್ವಾರ್ಟರ್‌ಗೆ ಆಶಿಶ್‌

ತಾಷ್ಕೆಂಟ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಆಶಿಶ್‌ ಚೌಧರಿ ಇಲ್ಲಿ ನಡೆಯುತ್ತಿರುವ ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನ 80 ಕೆ.ಜಿ. ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಮಾಜಿ ಏಷ್ಯಾ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಇರಾನ್‌ನ ಮೇಯ್ಸಮ್‌ ಘೇಶ್ಲಾಘಿ ವಿರುದ್ಧ 4-1ರಲ್ಲಿ ಗೆಲುವು ಸಾಧಿಸಿದರು. 

ಅಂತಿಮ 16ರ ಸುತ್ತಿನಲ್ಲಿ ಆಶಿಶ್‌ಗೆ ಕಠಿಣ ಸವಾಲು ಎದುರಾಗಲಿದ್ದು, 2 ಬಾರಿ ಒಲಿಂಪಿಕ್‌ ಚಾಂಪಿಯನ್‌ ಕ್ಯೂಬಾದ ಆರ್ಲೆನ್‌ ಲೊಪೆಜ್‌ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ 86 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಹಷ್‌ರ್‍ ಚೌಧರಿ, ಆಸ್ಪ್ರೇಲಿಯಾದ ಬಿಲ್ಲಿ ಮೆಕ್‌ಅಲಿಸ್ಟರ್‌ ವಿರುದ್ಧ 0-5ರಲ್ಲಿ ಸೋಲುಂಡರು. ಬುಧವಾರ 71 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ನಿಶಾಂತ್‌ ದೇವ್‌, 2021ರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಅಜರ್‌ಬೈಜಾನ್‌ನ ಸರ್ಖಾನ್‌ ವಿರುದ್ಧ ಮೊದಲ ಸುತ್ತಿನಲ್ಲಿ ಆಡಲಿದ್ದಾರೆ.

Latest Videos
Follow Us:
Download App:
  • android
  • ios