ಕುಸ್ತಿಪಟು ವಿನೇಶ್ ಫೋಗಟ್ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಭಾವನಾತ್ಮಕವಾಗಿ ಕಣ್ಣೀರಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ ಹೋರಾಟ ಮುಗಿಸಿ ತವರಿಗೆ ವಾಪಸ್ಸಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಿಟ್ಟ ಹೋರಾಟ ನಡೆಸಿದ್ದ ವಿನೇಶ್ ಕೊನೆಗೂ ಇಂದು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ವಿನೇಶ್ ಫೋಗಟ್‌ಗೆ ಸಹಪಾಠಿಗಳು ಹಾಗೂ ಅಭಿಮಾನಿಗಳಿಂದ ಭವ್ಯ ಸ್ವಾಗತ ನೀಡಲಾಯಿತು.
ಇನ್ನು ವಿನೇಶ್ ಫೋಗಟ್, ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆಯೇ ಮೆರವಣಿಗೆ ಮೂಲಕ ಅವರನ್ನು ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಭಾವುಕರಾದ ವಿನೇಶ್ ಫೋಗಟ್, ಕಣ್ಣೀರಿಟ್ಟರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ವಿನೇಶ್ ಫೋಗಟ್ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಸಹ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಫೂನಿಯಾ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿನೇಶ್ ಫೋಗಟ್ ಹಾಗೂ ಸಾಕ್ಷಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರು ಹಾಕಿದರು.
ವಿನೇಶ್ ಫೋಗಟ್ ಸತ್ತೇ ಹೋಗ್ತಾರೆ ಎಂದು ಆತಂಕಗೊಂಡಿದ್ದೆ: ಕೋಚ್ ವೋಲರ್ ಅಕೋಸ್
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಪ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್, ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಫೋಗಟ್ ಅವರ ತೂಕ 100 ಗ್ರಾಮ್ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಫೋಗಟ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠದ ಮೆಟ್ಟಿಲೇರಿದ್ದರು. ಆದರೆ ಆಗಸ್ಟ್ 14ರಂದು ವಿನೇಶ್ ಅರ್ಜಿಯನ್ನು ವಜಾಗೊಳಿಸುವ ಮೂಲಕ ಬೆಳ್ಳಿ ಗೆಲ್ಲುವ ಹರ್ಯಾಣ ಕುಸ್ತಿಪಟುವಿನ ಕನಸು ನುಚ್ಚುನೂರಾಗಿತ್ತು.
ವಿನೇಶ್ ಫೋಗಟ್ ಫೈನಲ್‌ವರೆಗಿನ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ. ಮೊದಲ ಸುತ್ತಿನಲ್ಲೇ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಸೋಲನ್ನೇ ಕಾಣದ ಜಪಾನಿನ ಯು ಸುಸಾಕಿಯನ್ನು ಮಣಿಸಿದ್ದರು. ಆ ಬಳಿಕ ಅದೇ ದಿನ ಇನ್ನಿಬ್ಬರು ಕುಸ್ತಿಪಟುಗಳನ್ನು ವಿನೇಶ್ ಮಣಿಸಿ ಫೈನಲ್ ಪ್ರವೇಶಿಸಿದ್ದರು.
Breaking: ವಿನೇಶ್ ಪೋಗಟ್ ಅರ್ಜಿ ವಜಾ, ಭಾರತಕ್ಕಿಲ್ಲ ಬೆಳ್ಳಿ ಪದಕ!
ಇನ್ನು ವಿನೇಶ್ ಅವರ ತೀರ್ಪನ್ನು ಅನರ್ಹಗೊಳಿಸಿದ ಬೆನ್ನಲ್ಲೇ ನೊಂದ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಘೋಷಿಸಿದ್ದರು. ಆದರೆ ಇದೀಗ ನಿವೃತ್ತಿ ವಾಪಾಸ್ ಪಡೆದು ಕುಸ್ತಿಗೆ ಮರಳುವ ಸುಳಿವನ್ನು ನೀಡಿದ್ದಾರೆ.
