Ultimate Kho Kho: ಹ್ಯಾಟ್ರಿಕ್ ಗೆಲುವು ಸಾಧಿಸಿದ ಚೆನ್ನೈ; ಅಂಕಪಟ್ಟಿ ತೆಲುಗು ಯೋಧಾಸ್‌ಗೆ ಅಗ್ರಸ್ಥಾನ
ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಚೆನ್ನೈ ಕ್ವಿಕ್ ಗನ್ಸ್
ಮುಂಬೈ ಕಿಲಾಡೀಸ್ ಮಣಿಸಿ ಅಗ್ರಸ್ಥಾನಕ್ಕೇರಿದ ತೆಲುಗು ಟೈಟಾನ್ಸ್
ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯ
ಪುಣೆ(ಆ.24): ಭರ್ಜರಿ ಫಾರ್ಮ್‌ನಲ್ಲಿರುವ ಚೆನ್ನೈ ಕ್ವಿಕ್ ಗನ್ಸ್ ತಂಡವು ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಬೀಗಿದೆ. ಗುಜರಾತ್ ಜೈಂಟ್ಸ್ ಎದುರು ಭರ್ಜರಿ ಪ್ರದರ್ಶನ ತೋರಿದ ಚೆನ್ನೈ ಕ್ವಿಕ್ ಗನ್ಸ್ ತಂಡವು 2 ಅಂಕಗಳ ರೋಚಕ ಜಯ ಸಾಧಿಸಿದೆ. ಇನ್ನೊಂದೆಡೆ ಮುಂಬೈ ಕಿಲಾಡೀಸ್ ಎದುರು ಅಮೋಘ ಪ್ರದರ್ಶನ ತೋರಿ 12 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದ ತೆಲುಗು ಯೋಧಾಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನನ್ನು ಭದ್ರಪಡಿಸಿಕೊಂಡಿದೆ.
ಇಲ್ಲಿನ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡು ರೋಚಕ ಪಂದ್ಯಗಳಿಗೆ ಖೋ ಖೋ ಅಭಿಮಾನಿಗಳು ಸಾಕ್ಷಿಯಾದರು. ಲೀಗ್ ಹಂತದ ಪಂದ್ಯಾವಳಿಗಳಲ್ಲಿ ರಾಮಜೀ ಕಶ್ಯಪ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಆರು ಮಾಡುವುದರ ಸಹಿತ ಒಟ್ಟು 20 ಅಂಕಗಳನ್ನು ಗಳಿಸಿ ಗಮನ ಸೆಳೆದರು. ಇವರ ಅದ್ಭುತ ಪ್ರದರ್ಶನದ ನೆರವಿನೊಂದಿಗೆ ಚೆನ್ನೈ ಕ್ವಿಕ್ ಗನ್ಸ್ ತಂಡವು 53-51 ಅಂಕಗಳ ಅಂತರದಲ್ಲಿ ಗುಜರಾತ್ ಜೈಂಟ್ಸ್ ತಂಡದ ಎದುರು ಗೆಲುವು ದಾಖಲಿಸಿದೆ. ಇನ್ನು ಚೆನ್ನೈ ಕ್ವಿಕ್ ಗನ್ಸ್ ಪರ ಮದನ್ ಕೂಡಾ 11 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.
ಇನ್ನು ತೆಲುಗು ಯೋಧಾಸ್ ಹಾಗೂ ಮುಂಬೈ ಕಿಲಾಡೀಸ್ ತಂಡಗಳ ನಡುವಿನ ಕಾದಾಟದಲ್ಲಿ ತೆಲುಗು ಯೋಧಾಸ್ ಪರ ನಾಯಕ ಪ್ರಜ್ವಲ್ ಕೆ ಎಚ್ ಹಾಗೂ ಸಚಿನ್ ಭಾರ್ಗೊ ಮಿಂಚಿನ ಪ್ರದರ್ಶನ ತೋರುವ ಮೂಲಕ ತೆಲುಗು ತಂಡವು 12 ಅಂಕಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕನ ಆಟ ಪ್ರದರ್ಶಿಸಿದ ಪ್ರಜ್ವಲ್ 3 ನಿಮಿಷ ಹಾಗೂ ಒಂದು ಸೆಕೆಂಡ್‌ಗಳ ಕಾಲ ಆಕರ್ಷಕ ಡಿಫೆಂಡಿಂಗ್ ಮಾಡುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಸಚಿನ್ ಭಾರ್ಗೊ ಆಲ್ರೌಂಡ್ ಪ್ರದರ್ಶನದ ಮೂಲಕ 10 ಅಂಕ ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ತೆಲುಗು ಯೋಧಾಸ್ ತಂಡವು 55-43 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದರೇ, ಮುಂಬೈ ಕಿಲಾಡೀಸ್ ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ ತೆಲುಗು ಯೋಧಾಸ್ ತಂಡವು, ಗುಜರಾತ್ ಜೈಂಟ್ಸ್ ತಂಡವನ್ನು ಹಿಂದಿಕ್ಕಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Ultimate Kho Kho League: ಎರಡನೇ ಗೆಲುವು ದಾಖಲಿಸಿದ ಚೆನ್ನೈ, ಒಡಿಶಾ
ಇನ್ನು ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಒಡಿಶಾ ಜುಗರ್‌ನಟ್ಸ್ ತಂಡವು ಮುಂಬೈ ಕಿಲಾಡೀಸ್ ತಂಡದ ಸವಾಲನ್ನು ಎದುರಿಸಲಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಚೆನ್ನೈ ಕ್ವಿಕ್ ಗನ್ಸ್ ತಂಡವು ರಾಜಸ್ಥಾನ ವಾರಿಯರ್ಸ್ ತಂಡವನ್ನು ಎದುರಿಸಲಿದೆ.