Ultimate Kho Kho League: ಎರಡನೇ ಗೆಲುವು ದಾಖಲಿಸಿದ ಚೆನ್ನೈ, ಒಡಿಶಾ
ರೋಚಕ ಪಂದ್ಯಗಳಿಗೆ ಸಾಕ್ಷಿಯಾದ ಅಲ್ಟಿಮೇಟ್ ಖೋ ಖೋ ಲೀಗ್
ಮುಂಬೈ ಕಿಲಾಡೀಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಕ್ವಿಕ್ ಗನ್ಸ್
ಒಡಿಶಾ ಜುಗರ್‌ನಟ್ಸ್ ತಂಡವು ರಾಜಸ್ಥಾನ ವಾರಿಯರ್ಸ್ ಎದುರು ಭರ್ಜರಿ ಜಯ
ಪುಣೆ(ಆ.20): ಚೆನ್ನೈ ಕ್ವಿಕ್ ಗನ್ಸ್ ಹಾಗೂ ಒಡಿಶಾ ಜಗರ್‌ನಟ್ಸ್ ತಂಡಗಳು ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿವೆ. ಇಲ್ಲಿ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಕಿಲಾಡೀಸ್ ಹಾಗೂ ರಾಜಸ್ಥಾನ ವಾರಿಯರ್ಸ್ ತಂಡಗಳು ರೋಚಕ ಸೋಲು ಅನುಭವಿಸಿವೆ.
ನಾಯಕ ಅಮಿತ್ ಪಾಟೀಲ್ ಹಾಗೂ ಆಲ್ರೌಂಡರ್ ರಾಮ್‌ಜೀ ಕಶ್ಯಪ್ ಅದ್ಭುತ ಪ್ರದರ್ಶನದ ನೆರವಿನಿಂದ ಚೆನ್ನೈ ಕ್ವಿಕ್ ಗನ್ಸ್ ತಂಡವು ಮುಂಬೈ ಕಿಲಾಡೀಸ್ ವಿರುದ್ದ 20 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸಿವೆ. ಚೆನ್ನೈ ಪರ ನಾಯಕನ ಆಟ ಪ್ರದರ್ಶಿಸಿದ ಅಮಿತ್ ಪಾಟೀಲ್ ಡಿಫೆನ್ಸ್ ವಿಭಾಗದಲ್ಲಿ 3 ನಿಮಿಷ ಹಾಗೂ 41 ಸೆಕೆಂಡ್‌ಗಳ ಕಾಲ ಕೋರ್ಟ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ರಾಮ್‌ಜೀ ಕಶ್ಯಪ್ ಎದುರಾಳಿ ತಂಡದ 6 ಆಟಗಾರರನ್ನು ಔಟ್ ಮಾಡುವ ಮೂಲಕ 14 ಅಂಕಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು.
ಕಳೆದ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಚೊಚ್ಚಲ ಗೆಲುವು ಕಂಡು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಚೆನ್ನೈ ಕ್ವಿಕ್ ಗನ್ಸ್ ತಂಡವು, ಆಕ್ರಮಣಕಾರಿಯಾಟದ ಮೂಲಕ ಗಮನ ಸೆಳೆಯಿತಾದರೂ ಮುಂಬೈ ಕಿಲಾಡೀಸ್ ತಂಡವು ಮೊದಲ 7 ನಿಮಿಷಗಳಲ್ಲಿ 26-2 ಅಂಕಗಳ ಮುನ್ನಡೆ ಸಾಧಿಸಿತು. ಹೀಗಿದ್ದೂ ಇದಕ್ಕೆ ಪ್ರತಿಯಾಗಿ ಚೆನ್ನೈ ಕ್ವಿಕ್ ಗನ್ಸ್ ತಂಡವು ದ್ವಿತಿಯಾರ್ಧದಲ್ಲಿ 37 ಅಂಕಗಳನ್ನು ಗಳಿಸುವ ಮೂಲಕ 39-26 ಅಂಕಗಳಿಂದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.
ತಪ್ಪಿಸಿಕೊಂಡು ಓಡಿ ಹೋಗಲು ಯತ್ನ, ಬಾಸ್ಕೆಟ್‌ಬಾಲ್ ಆಟಗಾರ್ತಿಯ ಕ್ರೀಡಾಂಗಣದಿಂದ ಕೆಳಕ್ಕೆ ತಳ್ಳಿದ ಕಾಮುಕರು!
ಇನ್ನು ಮತ್ತೊಂದೆಡೆ, ದಾಳಿ ವಿಭಾಗದಲ್ಲಿ ವಜಿರ್ ಸುಬಾಶಿಸ್ ಸಂತ್ರಾ ಅವರ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ಒಡಿಶಾ ಜುಗ್ಗರ್‌ನಟ್ಸ್ ತಂಡವು ರಾಜಸ್ಥಾನ ವಾರಿಯರ್ಸ್ ಎದುರು 19 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ವಜಿರ್ ಸುಬಾಶಿಸ್ ಸಂತ್ರಾ, ರಾಜಸ್ಥಾನ ವಾರಿಯರ್ಸ್ ತಂಡದ ಐವರು ಆಟಗಾರರನ್ನು ಔಟ್ ಮಾಡುವ ಮೂಲಕ ಒಟ್ಟು 14 ಅಂಕಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ತಮ್ಮ ಅದ್ಭುತ ಡೈವಿಂಗ್ ಕೌಶಲ್ಯದ ಮೂಲಕ ವಜಿರ್ ಸುಬಾಶಿಸ್ ಸಂತ್ರಾ ಗಮನ ಸೆಳೆದರು. ವಜಿರ್ ಸುಬಾಶಿಸ್ ಸಂತ್ರಾ ಅವರಿಗೆ ನಿಲೇಶ್ ಜಾಧವ್ ಹಾಗೂ ಆದಿತ್ಯ ಕುಡಾಲೆ ಉತ್ತಮ ಸಾಥ್ ನೀಡಿ ಕ್ರಮವಾಗಿ 9 ಹಾಗೂ 8 ಅಂಕಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು.