ಸಮಾಜದೊಳಗಿನ ಭಿನ್ನತೆಯನ್ನು ಮೀರುವುದೂ ಕ್ರೀಡೆಯ ಉದ್ದೇಶ: ಗೋಪಾಲ್ ಹೊಸೂರ್
* ಬೆಂಗಳೂರಿನಲ್ಲಿ 'ಹ್ಯಾವಿಂಗ್ ಎ ಬಾಲ್ ಇನ್ ದಿ ವಾಟರ್ಸ್' ಕೃತಿ ಬಿಡುಗಡೆ
* ಹಿರಿಯ ಪತ್ರಕರ್ತ ಎಸ್ ಎಸ್ ಕುಮಾರ್ ರಚಿಸಿರುವ ಪುಸ್ತಕ ಬಿಡುಗಡೆ ಮಾಡಿದ ಗೋಪಾಲ್ ಹೊಸೂರ್
* ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮೀರಿ ದೇಶ ಕಟ್ಟುವುದೇ ಕ್ರೀಡೆಯ ಉದ್ದೇಶವೆಂದ ಗೋಪಾಲ್ ಹೊಸೂರ್
ಬೆಂಗಳೂರು(ಜು.03): ಕೇವಲ ಪದಕ, ಪ್ರಶಸ್ತಿಗಳನ್ನು ಗೆಲ್ಲುವುದಷ್ಟೇ ಕ್ರೀಡೆಯ ಉದ್ದೇಶವಲ್ಲ. ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮೀರಿ ಸಾಮಾಜಿಕವಾಗಿ ಬೆರೆಯುವ ಮೂಲಕ ದೇಶವನ್ನು ಕಟ್ಟುವುದೇ ಕ್ರೀಡೆಯ ಉದ್ದೇಶವಾಗಿದೆ ಎಂದು ಕರ್ನಾಟಕ ಈಜು ಒಕ್ಕೂಟದ ಅಧ್ಯಕ್ಷ ಗೋಪಾಲ್ ಹೊಸೂರ್ ಹೇಳಿದ್ದಾರೆ. ಭಾನುವಾರ ಇಲ್ಲಿನ ಹನುಮಂತನಗರದಲ್ಲಿನ ಉದಯಭಾನು ಕಲಾ ಸಂಘದಲ್ಲಿ ವಸಂತ ವಿಹಾರ ವಾಟರ್ ಪೋಲೋ ಕ್ಲಬ್ ಆಯೋಜಿಸಿದ್ದ ಶ್ರೀ ಎಸ್ ಎಸ್ ಕುಮಾರ್ ರಚಿಸಿದ್ದ 'ಹ್ಯಾವಿಂಗ್ ಎ ಬಾಲ್ ಇನ್ ದಿ ವಾಟರ್ಸ್' (Having A Ball in The Water ) ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಯಾವುದೇ ಸಮಾಜದ ಆರ್ಥಿಕತೆ ಹಾಗೂ ಸಾಮಾಜಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಕ್ರೀಡೆಯು ನೆರವಾಗುತ್ತದೆ. ಅದೇ ರೀತಿ ಜಲಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಮಾಡಿರುವ ಸಾಧನೆಯನ್ನು ಗೋಪಾಲ್ ಹೊಸೂರ್ ಸ್ಮರಿಸಿದರು. ಕಳೆದ ಮೂರು ದಶಕಗಳ ಅವಧಿಯಲ್ಲಿ ಕರ್ನಾಟಕದ ಈಜುಪಟುಗಳು ರಾಷ್ಟ್ರ ಮಟ್ಟದಲ್ಲಿ ಯಾವುದೇ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಸಹಾ ಪ್ರತಿ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕರ್ನಾಟಕದಲ್ಲಿ ಈಜು ಕ್ರೀಡೆಯೂ ಸಾಕಷ್ಟು ಅಭಿವೃದ್ದಿ ಹೊಂದಿದೆ. ಬೆಂಗಳೂರು ಭಾರತದ ಈಜು ಕಾಶಿ ಎನಿಸಿಕೊಂಡಿದೆ ಎಂದು ಗೋಪಾಲ್ ಹೊಸೂರ್ ಬಣ್ಣಿಸಿದ್ದಾರೆ.
ಹೊಸ ತಲೆಮಾರಿನ ಈಜುಪಟುಗಳಿಗೆ ಅಪಾರ ಪ್ರೋತ್ಸಾಹ ಹಾಗೂ ಯಶಸ್ಸು ಸಿಗುತ್ತಿದೆ. ಕ್ರೀಡಾಪಟುಗಳ ಪೋಷಕರ ತ್ಯಾಗ ಹಾಗೂ ಪ್ರೋತ್ಸಾಹದಿಂದಲೇ ಹೊಸ ತಲೆಮಾರಿನ ಕ್ರೀಡಾಪಟುಗಳು ಹೆಚ್ಚು ಯಶಸ್ಸು ಕಾಣುತ್ತಿದ್ದಾರೆ ಎಂದು ಗೋಪಾಲ್ ಹೊಸೂರ್ ಹೇಳಿದ್ದಾರೆ.
Having A Ball in The Water: ರಾಜ್ಯದ ವಾಟರ್ ಪೋಲೋ ಕ್ರೀಡಾಪಟುಗಳ ಕುರಿತಾದ ಕೃತಿ ಬಿಡುಗಡೆ
ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಷೇತ್ರಿಯ ನಿರ್ದೇಶಕರಾದ ಋತು ಎ ಪಾತಿಕ್ ಮಾತನಾಡಿ, ವಾಟರ್ ಪೋಲೋ ಕ್ರೀಡೆಯನ್ನು ವಿಸ್ತಾರವಾಗಿ ಪರಿಚಯಿಸುವ ಕೃತಿ ಇದಾಗಿದೆ. ಇಂತಹ ಪ್ರಯತ್ನಗಳು ಹೆಚ್ಚಾಗಬೇಕು. ಲೇಖಕರು ಸ್ವತಃ ಕ್ರೀಡಾಪಟುವಾಗಿದ್ದವರು. ಕ್ರೀಡಾಪತ್ರಕರ್ತರಾಗಿ ಕ್ರೀಡೆಯನ್ನು ನೋಡಿದ್ದಾರೆ. ಈ 'ಹ್ಯಾವಿಂಗ್ ಎ ಬಾಲ್ ಇನ್ ದಿ ವಾಟರ್ಸ್' ಕೃತಿಯು ವಾಟರ್ ಪೋಲೋ ಪಟುಗಳಿಗೆ ಸ್ಪೂರ್ತಿಯಾಗಬಲ್ಲದು ಎಂದು ಹೇಳಿದರು.
ಬಸವನಗುಡಿ ಈಜುಕೊಳದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಶ್ರೀ ಎಸ್ ಎಸ್ ಕುಮಾರ್ ಅವರು ಕೃತಿಯನ್ನು ಪರಿಚಯಿಸಿ ಮಾತನಾಡಿದರು. ಇನ್ನು ವಸಂತ ವಿಹಾರ ವಾಟರ್ ಪೋಲೋ ಕ್ಲಬ್ ಅಧ್ಯಕ್ಷರಾದ ಎಸ್ ಎನ್ ಪ್ರಭುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನು ಇದೇ ವೇಳೆ ಕರ್ನಾಟಕ ಈಜು ಸಂಸ್ಥೆಯ ಉಪಾಧ್ಯಕ್ಷರಾದ ಎಸ್ ಆರ್ ಸಿಂಧ್ಯಾ ಹಾಗೂ ಅಂತರಾಷ್ಟ್ರೀಯ ವಾಟರ್ ಪೋಲೋ ತರಬೇತುದಾರರಾದ ಎಂ ಎಸ್ ಭೂಷಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.