ಟೆನಿಸ್ ರ‍್ಯಾಂಕಿಂಗ್: ಫ್ರೆಂಚ್ ಓಪನ್ ಗೆದ್ದು 4ನೇ ಸ್ಥಾನಕ್ಕೇರಿದ ರಾಫೆಲ್ ನಡಾಲ್..!
* ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್
* ಎಟಿಪಿ ಟೆನಿಸ್ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೇರಿದ ಸ್ಪೇನ್ ಟೆನಿಸಿಗ
* ಅಮೆರಿಕದ ಕೊಕೊ ಗಾಫ್ ಜೀವನ ಶ್ರೇಷ್ಠ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ
ಪ್ಯಾರಿಸ್(ಜೂ.07): 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ (French Open Champion) ಗೆಲ್ಲುವ ಮೂಲಕ ಗ್ರ್ಯಾನ್‌ಸ್ಲಾಂ ಸಂಖ್ಯೆಯನ್ನು 22ಕ್ಕೆ ಏರಿಸಿರುವ ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್ ನಡಾಲ್ ಎಟಿಪಿ ಟೆನಿಸ್ ರ‍್ಯಾಂಕಿಂಗ್‌ನಲ್ಲಿ (ATP Rankings) 4ನೇ ಸ್ಥಾನಕ್ಕೇರಿದ್ದಾರೆ. ಮಹಿಳಾ ಟೆನಿಸ್‌ನ ಹೊರ ತಾರೆ ಅಮೆರಿಕದ ಕೊಕೊ ಗಾಫ್ ಜೀವನ ಶ್ರೇಷ್ಠ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ನಡಾಲ್‌ಗೆ ಯಾವ ಕ್ಷಣದಲ್ಲೂ ರುಡ್ ಸರಿಸಾಟಿ ಎನಿಸಿಕೊಳ್ಳಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಫೈನಲ್ ಪಂದ್ಯ ಕೆಲ ಹೋರಾಟದ ಹೊರತಾಗಿಯೂ ಏಕಪಕ್ಷೀಯವಾಗಿಯೇ ಸಾಗಿತು. ಸುಮಾರು 2 ಗಂಟೆ 18 ನಿಮಿಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ 6-3, 6-3, 6-0 ಅಂತರದಲ್ಲಿ ರುಡ್‌ರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟರು. ನಡಾಲ್ ಅವರ ಆಕರ್ಷಕ, ಪ್ರಬಲ ಹೊಡೆತಗಳ ಮುಂದೆ ರುಡ್‌ಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ರುಡ್ ಅವರ ಕನಸು ಭಗ್ನಗೊಂಡಿತು.
36 ವರ್ಷದ ರಾಫೆಲ್ ನಡಾಲ್ (Rafael Nadal) ಭಾನುವಾರ ನಾರ್ವೆಯ ಕ್ಯಾಸ್ಪೆರ್ ರುಡ್ ಅವರನ್ನು ಸೋಲಿಸಿ ಫ್ರೆಂಚ್ ಓಪನ್ ಗೆದ್ದಿದ್ದರು. ಸೋಮವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ 1ಸ್ಥಾನ ಮೇಲಕ್ಕೇರಿ 4ನೇ ಸ್ಥಾನ ಪಡೆದಿದ್ದಾರೆ. 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಸರ್ಬಿಯಾದ ನೋವಾಕ್ ಜೋಕೋವಿಚ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ನಂತರದ ಸ್ಥಾನಗಳಲ್ಲಿದ್ದಾರೆ. ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಹಾಗೂ ಡಬಲ್ಸ್‌ನ ರನ್ನರ್-ಅಪ್ 18ರ ಗಾಫ್ 10 ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ಪಡೆದರೆ, ಸಿಂಗಲ್ಸ್ ಪ್ರಶಸ್ತಿ ವಿಜೇತ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ದೇಹ ಸ್ಪಂದಿಸಿದರೆ ಮಾತ್ರ ವಿಂಬಲ್ಡನ್ ಸ್ಪರ್ಧೆ: ನಡಾಲ್
ಪ್ಯಾರಿಸ್: ರಾಫೆಲ್ ನಡಾಲ್ ಕೆಲ ಸಮಯದಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ನಿವೃತ್ತಿ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಫ್ರೆಂಚ್ ಓಪನ್ (French Open) ಬಳಿಕ ಪ್ರತಿಕ್ರಿಯಿಸಿದ ಅವರು, ನನಗೆ ಈ ನೋವಿನೊಂದಿಗೆ ಮುಂದುವರಿಯಲು ಆಗುತ್ತಿಲ್ಲ. ಇದಕ್ಕೊಂದು ಪರಿಹಾರ ಹುಡುಕುತ್ತಿದ್ದೇನೆ. ಇದು ಶೀಘ್ರ ಗುಣಮುಖರಾಗಲು ಎಲ್ಲಾ ದಾರಿಗಳನ್ನು ನೋಡುತ್ತಿದ್ದೇನೆ. ಪ್ರತೀ ಪಂದ್ಯಕ್ಕೂ ನೋವು ನಿವಾರಕ ಮದ್ದು ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಇದು ಹೀಗೆ ಮುಂದುವರಿದೆ ಆಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ವಿಂಬಲ್ಡನ್ ಆಡಲು ನನ್ನ ದೇಹ ಸ್ಪಂದಿಸಿದರೆ ಖಂಡಿತಾ ವಿಂಬಲ್ಡನ್ ಆಡಲಿದ್ದೇನೆ. ಅಂತಹ ದೊಡ್ಡ ಟೂರ್ನಿಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
French Open ರೋಲ್ ಮಾಡೆಲ್ ನಡಾಲ್ ಜೊತೆ ಪ್ರಶಸ್ತಿಗಾಗಿ ಕಾದಾಡಿದ ರುಡ್!
ಕ್ರೀಡಾ ತಾರೆಗಳಿಂದ ಶ್ಲಾಘನೆ
22ನೇ ಗ್ರ್ಯಾನ್‌ಸ್ಲಾಂ ಗೆದ್ದ ನಡಾಲ್‌ಗೆ ಜಾಗತಿಕ ಮಟ್ಟದಲ್ಲಿ ಕ್ರೀಡಾ ತಾರೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಎಬಿ ಡಿ ವಿಲಿಯರ್ಸ್, ಮಾಜಿ ಕೋಚ್ ರವಿ ಶಾಸ್ತ್ರಿ, ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ ಕ್ಯಾರೋಲಿನ್ ವೋಜ್ನಿಯಾಕಿ, ಸ್ಟೆಫಾನೊಸ್ ಸಿಟ್ಸಿಪಾಸ್ ಜೊತೆ ಫುಟ್ಬಾಲ್ ತಾರೆಗಳು ಕೂಡಾ ನಡಾಲ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.