French Open ರೋಲ್ ಮಾಡೆಲ್ ನಡಾಲ್ ಜೊತೆ ಪ್ರಶಸ್ತಿಗಾಗಿ ಕಾದಾಡಿದ ರುಡ್!
* ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಜಯಿಸಿದ ರಾಫೆಲ್ ನಡಾಲ್
* ತಮ್ಮ ಶಿಷ್ಯ ಕ್ಯಾಸ್ಪೆರ್ ರುಡ್ ಎದುರು ಗೆದ್ದು ಬೀಗದ ಕಿಂಗ್ ಆಫ್ ಕ್ಲೇ
* 2018ರಲ್ಲಿ ನಡಾಲ್ ಅಕಾಡೆಮಿಗೆ ಸೇರ್ಪಡೆಯಾಗಿದ್ದ ಕ್ಯಾಸ್ಪೆರ್ ರುಡ್
ಪ್ಯಾರಿಸ್(ಜೂ.06): ಈ ಬಾರಿ ಫ್ರೆಂಚ್ ಓಪನ್‌ನಲ್ಲಿ (French Open) ನಡಾಲ್‌ಗೆ ಪ್ರತಿಸ್ಪರ್ಧಿಯಾಗಿದ್ದ ಕ್ಯಾಸ್ಪೆರ್ ರುಡ್‌ಗೆ ನಡಾಲ್ ಅವರೇ ರೋಲ್ ಮಾಡೆಲ್. ರಾಫೆಲ್ ನಡಾಲ್ (Rafael Nadal) ಅವರ ಟೆನಿಸ್ ಅಕಾಡೆಮಿಯಲ್ಲೇ ತರಬೇತಿ ಪಡೆಯುತ್ತಿರುವ ರುಡ್ ತಮ್ಮ ನೆಚ್ಚಿನ ಟೆನಿಸಿಗನ ವಿರುದ್ಧವೇ ಒಂದು ದಿನ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಆಡುತ್ತೇನೆಂದು ಭಾವಿಸಿರಲಿಕ್ಕಿಲ್ಲ. ಸ್ಪೇನ್‌ನ ಮನಾಕೋರ್ ಎಂಬಲ್ಲಿರುವ ನಡಾಲ್ ಅವರ ಅಕಾಡೆಮಿಗೆ ರುಡ್ 2018ರಲ್ಲಿ ಸೇರ್ಪಡೆಯಾಗಿದ್ದರು. ಬಳಿಕ ಈವರೆಗೂ ಅವರು ಅಲ್ಲೇ ತರಬೇತಿ ಪಡೆಯುತ್ತಿದ್ದು, ನಡಾಲ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಹಲವು ತಂತ್ರಗಳನ್ನು ಕಲಿತು ಟೆನಿಸ್‌ನಲ್ಲಿ ಮೇಲೇರುತ್ತಿದ್ದಾರೆ.
‘ನನಗೆ ನಡಾಲ್ ಅವರೇ ಎಲ್ಲದಕ್ಕೂ ಸ್ಫೂರ್ತಿ. ಓರ್ವ ಅಥ್ಲೀಟ್ ಹೇಗಿರಬೇಕೆಂದು ನಡಾಲ್ ಅವರನ್ನು ನೋಡಿ ಕಲಿಯಬೇಕು. ಅವರೊಂದಿಗೇ ಬೆಳೆದ ನಾನು ಈಗ ಫೈನಲ್ ಆಡುತ್ತಿರುವುದು ನಿಜಕ್ಕೂ ದೊಡ್ಡ ಸಂಗತಿ’ ಎಂದು ರುಡ್ ಫೈನಲ್‌ಗೂ ಮುನ್ನ ಪ್ರತಿಕ್ರಿಯಿಸಿದ್ದರು. ಇನ್ನು ದಾಖಲೆಯ 22ನೇ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿ ಮಾತನಾಡಿದ ಸ್ಪೇನ್ ಟೆನಿಸಿಗ, ಮುಂದೆ ಏನಾಗುತ್ತೋ ಗೊತ್ತಿಲ್ಲ. ಆದರೆ ಹೋರಾಟ ಮುಂದುವರಿಯಲಿದೆ. ಇನ್ನಷ್ಟುಕಾಲ ಟೆನಿಸ್ ಅಂಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಾಯದಂತಹ ಕಠಿಣ ಸಮಯದಲ್ಲೂ ನಮ್ಮ ತಂಡ ಜೊತೆಗಿಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಯಾವತ್ತೋ ನಿವೃತ್ತಿಯಾಗುತ್ತಿದ್ದೆ ಎಂದು ರಾಫೆಲ್ ನಡಾಲ್ ಹೇಳಿದ್ದಾರೆ.
ಫ್ರೆಂಚ್ ಓಪನ್ ಗೆದ್ದ ಅತೀ ಹಿರಿಯ ಟೆನಿಸಿಗ
36 ವರ್ಷದ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಗೆದ್ದ ಅತೀ ಹಿರಿಯ ಟೆನಿಸಿಗ ಎನಿಸಿಕೊಂಡಿದ್ದಾರೆ. ನಡಾಲ್ ಅವರು ಶುಕ್ರವಾರವಷ್ಟೇ 36ನೇ ವರ್ಷಕ್ಕೆ ಕಾಲಿಟ್ಟಿದ್ದರು. 2005ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆದಾಗ ಅವರಿಗೆ ಕೇವಲ 19 ವರ್ಷವಾಗಿತ್ತು.
ಆಡಿದ ಎಲ್ಲಾ 13 ಪೈನಲಲ್ಲೂ ಜಯ
‘ಕಿಂಗ್ ಆಫ್ ಕ್ಲೇ’ ಎಂದೇ ಕರೆಸಿಕೊಳ್ಳುವ ರಾಫೆಲ್ ನಡಾಲ್ ಈವರೆಗೆ 14 ಬಾರಿ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಆಡಿದ್ದು, ಎಲ್ಲಾ ಬಾರಿಯೂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2005ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಫೈನಲ್‌ಗೇರಿದ್ದ ಅವರು 2008ರ ವರೆಗೆ ಸತತ 4 ವರ್ಷವೂ ಚಾಂಪಿಯನ್ ಆಗಿದ್ದರು. 2009ರಲ್ಲಿ 4ನೇ ಸುತ್ತಲ್ಲೇ ಸೋತ ನಂತರ 2010-14ರಲ್ಲಿ ಸತತ 5 ಬಾರಿ ಫೈನಲ್‌ಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಆ ನಂತರ 2017-20ರಲ್ಲಿ ಸತತ 4 ಬಾರಿ ಚಾಂಪಿಯನ್ ಆದ ನಡಾಲ್ 2021ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದರು.
ವೀಸಾ ಸಮಸ್ಯೆ ಇತ್ಯರ್ಥ: ಫ್ರಾನ್ಸ್‌ಗೆ ತೆರಳಲಿರುವ ಪ್ಯಾರಾ ಅಥ್ಲೀಟ್‌ಗಳು
ನವದೆಹಲಿ: 2 ಪ್ಯಾರಾಲಿಂಪಿಕ್ ಪದಕ ವಿಜೇತ ಸಿಂಗರಾಜ್ ಅಧಾನ ಸೇರಿದಂತೆ ಭಾರತದ ಆರು ಮಂದಿಗೆ ಕೊನೆಗೂ ಫ್ರಾನ್ಸ್ ವೀಸಾ ಕೈ ಸೇರಿದ್ದು, ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಶನಿವಾರ ಅಧಾನ ಮಾತ್ರವಲ್ಲದೇ ಶೂಟರ್‌ಗಳಾದ ರಾಹುಲ್ ಜಾಖರ್, ದೀಪಿಂದರ್ ಸಿಂಗ್ ಹಾಗೂ ಇತರೆ ಮೂವರು ಸಿಬ್ಬಂದಿಗೂ ವೀಸಾ ಸಿಕ್ಕಿರಲಿಲ್ಲ.
French Open: ರಾಫಾ 22 ಗ್ರ್ಯಾನ್‌ಸ್ಲಾಂ ಒಡೆಯ..!
ಹೀಗಾಗಿ ಕೂಟದಿಂದ ಹೊರಬೀಳುವ ಸಾಧ್ಯತೆ ಇತ್ತು. ಬಳಿಕ ಫ್ರಾನ್ಸ್ ರಾಯಭಾರಿ ಕಚೇರಿ ಮೂಲಕ ಸಮಸ್ಯೆ ಬಗೆಹರಿಸಿದ್ದು, ಎಲ್ಲರೂ ಭಾನುವಾರ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಉಳಿದಂತೆ ಪ್ಯಾರಾಲಿಂಪಿಕ್ ಚಿನ್ನ ವಿಜೇತ ಅವನಿ ಲೇಖರಾ ಸೇರಿದಂತೆ 14 ಶೂಟರ್‌ಗಳು, 8 ಸಿಬ್ಬಂದಿಗೆ ಮೊದಲೇ ವೀಸಾ ಲಭಿಸಿದ್ದು, ಶನಿವಾರವೇ ಫ್ರಾನ್ಸ್‌ಗೆ ತೆರಳಿದ್ದಾರೆ.
ಚೊಚ್ಚಲ ಹಾಕಿ ಫೈವ್ಸ್: ಭಾರತ ಚಾಂಪಿಯನ್
ಲುಸ್ಸಾನೆ: ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ಎಫ್‌ಐಎಚ್ ಹಾಕಿ ಫೈವ್ಸ್ ಟೂರ್ನಿಯಲ್ಲಿ ಭಾರತ ಹಾಗೂ ಉರುಗ್ವೆ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ. ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಭಾರತ 6-4 ಗೋಲುಗಳಿಂದ ಪೋಲಂಡನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಇದಕ್ಕೂ ಮೊದಲು ಭಾನುವಾರವೇ ನಡೆದ ಲೀಗ್ ಹಂತದ ಕೊನೆ ಎರಡು ಪಂದ್ಯಗಳಲ್ಲಿ ಭಾರತ ಮಲೇಷ್ಯಾ ಮತ್ತು ಪೋಲೆಂಡನ್ನು ಸೋಲಿಸಿತ್ತು.
ಮಹಿಳಾ ವಿಭಾಗದಲ್ಲಿ ಸ್ವಿಜರ್‌ಲೆಂಡ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಉರುಗ್ವೆ ಚಾಂಪಿಯನ್ ಆಯಿತು. ಭಾರತ ತಂಡ ಲೀಗ್ ಹಂತದಲ್ಲಿ 4 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು ಫೈನಲ್ ಪ್ರವೇಶಿಸಲು ವಿಫಲವಾಯಿತು.