Rafael Nadal: ಮೊದಲ ಬಾರಿಗೆ ತಂದೆಯಾಗುತ್ತಿದ್ದಾರೆ ಟೆನಿಸ್ ದಿಗ್ಗಜ ರಾಫಾ..!

* ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಫೆಲ್ ನಡಾಲ್
* ವಿಂಬಲ್ಡನ್‌ ಟೂರ್ನಿಗೆ ಸಿದ್ದತೆ ನಡೆಸುತ್ತಿರುವ ನಡಾಲ್
* 36ನೇ ವಯಸ್ಸಿಗೆ ಮೊದಲ ಬಾರಿಗೆ ತಂದೆಯಾಗಲಿರುವ ಸ್ಪೇನ್ ಟೆನಿಸಿಗ

Tennis Legend Rafa Nadal to become father for the first time wife Maria Francisca Perello is expecting says report kvn

ಸ್ಪೇನ್‌(ಜೂ.16): 2022ರ ಟೆನಿಸ್‌ ಸೀಸನ್‌ ಅದ್ಭುತವಾಗಿ ಆರಂಭಿಸಿರುವ 22 ಗ್ರ್ಯಾನ್‌ ಸ್ಲಾಂ ಒಡೆಯ ಹಾಗೂ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ (French Open) ಚಾಂಪಿಯನ್‌ ರಾಫೆಲ್ ನಡಾಲ್‌ (Rafael Nadal) ಪಾಲಿಗೆ ಇದೇ ವರ್ಷ ಮತ್ತೊಂದು ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. 'ಕಿಂಗ್ ಆಫ್ ಕ್ಲೇ' ಖ್ಯಾತಿಯ ನಡಾಲ್ ಇದೀಗ ಮೊದಲ ಬಾರಿಗೆ ತಂದೆಯಾಗುವ ಹೊಸ್ತಿಲಲ್ಲಿದ್ದಾರೆ ಎಂದು ವರದಿಯಾಗಿದೆ.

ಸ್ಪಾನೀಷ್ ಮ್ಯಾಗಜೀನ್‌ 'ಹೊಲಾ' (Hola) ವರದಿಯ ಪ್ರಕಾರ, ರಾಫೆಲ್ ನಡಾಲ್ ಹಾಗೂ ಪತ್ನಿ ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಇದೀಗ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಅವರ ಇತ್ತೀಚಿಗಿನ ಫೋಟೋವೊಂದರಲ್ಲಿ ಆಕೆ ಗರ್ಭ ಧರಿಸಿದ್ದಾರೆಂಬ ಗಾಳಿ ಸುದ್ದಿ ಹರಿದಾಡಲಾರಂಭಿಸಿದೆ. ಆದರೆ ಈ ಕುರಿತಂತೆ ರಾಫೆಲ್ ನಡಾಲ್ ಇಲ್ಲವೇ ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರಾಫೆಲ್ ನಡಾಲ್ ಹಾಗೂ ಮರಿಯಾ ಫ್ರಾನ್ಸಿಕಾ ಪೆರೆಲ್ಲೊ ಹದಿಹರೆಯದ ವಯಸ್ಸಿನಿಂದಲೇ ಜತೆಯಾಗಿಯೇ ಇದ್ದರು. ಕಳೆದ ಮೂರು ವರ್ಷಗಳ ಹಿಂದಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ರಾಫೆಲ್ ನಡಾಲ್‌ಗೆ ಮಗುವನ್ನು ಹೊಂದಬೇಕು ಎನ್ನುವ ಆಸೆ ಈ ಹಿಂದಿನಿಂದಲೂ ಇತ್ತು ಎನ್ನುವುದು ಜಗಜ್ಜಾಹೀರಾಗಿತ್ತು. ಇದೀಗ ತಮ್ಮ 36ನೇ ವಯಸ್ಸಿಗೆ ನಡಾಲ್‌ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಕಾತರರಾಗಿದ್ದಾರೆ. ಇನ್ನು ಟೆನಿಸ್‌ನಲ್ಲಿ ರಾಫೆಲ್‌ ನಡಾಲ್ ಅವರ ಸಾಂಪ್ರದಾಯಿಕ ಎದುರಾಳಿಗಳಾದ ರೋಜರ್ ಫೆಡರರ್ (Roger Federer) ಹಾಗೂ ನೋವಾಕ್ ಜೋಕೋವಿಚ್ ಈಗಾಗಲೇ ತಂದೆಯಾದ ಖುಷಿಯನ್ನು ಅನುಭವಿಸುತ್ತಲೇ ಸ್ಪರ್ಧಾತ್ಮಕ ಟೆನಿಸ್‌ನಲ್ಲಿಯೂ ಯಶಸ್ವಿಯಾಗಿದ್ದಾರೆ.

ರಾಫೆಲ್ ನಡಾಲ್, ದಾಖಲೆಯ 14ನೇ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಬಳಿಕ ತಮ್ಮದೇ ಆದ ನೌಕೆಯಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರೊಟ್ಟಿಗೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದರ ಜತೆಗೆ ಈ ತಿಂಗಳಿನಲ್ಲೇ ಜರುಗಲಿರುವ ವಿಂಬಲ್ಡನ್ ಟೆನಿಸ್‌ ಗ್ರ್ಯಾನ್‌ ಸ್ಲಾಂಗೂ ಸಿದ್ದತೆ ನಡೆಸುತ್ತಿದ್ದಾರೆ. ಪಾದಾದ ನೋವಿನಿಂದ ಸುಧಾರಿಸಿಕೊಂಡರೆ ನಡಾಲ್, ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಟೆನಿಸ್ ರ‍್ಯಾಂಕಿಂಗ್‌‌: ಫ್ರೆಂಚ್ ಓಪನ್ ಗೆದ್ದು 4ನೇ ಸ್ಥಾನಕ್ಕೇರಿದ ರಾಫೆಲ್ ನಡಾಲ್..!

ಎಡಗಾಲಿನ ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಫೆಲ್ ನಡಾಲ್‌, ವೈದ್ಯರ ಸಲಹೆಯಿಂದ ಫಿಟ್ನೆಸ್ ಪಡೆದುಕೊಂಡು 2022ರ ಆವೃತ್ತಿಯನ್ನು ಭರ್ಜರಿಯಾಗಿಯೇ ಆರಂಭಿಸಿ ಸತತ 2 ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿ ಬೀಗಿದ್ದಾರೆ. ಟೆನಿಸ್‌ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ರಾಫಾ, ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್‌ ಸ್ಲಾಂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಜೀವನದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಫೆಲ್ ನಡಾಲ್, ಮುಂಬರುವ ವಿಂಬಲ್ಡನ್ ಮೇಲೆ ಚಿತ್ತ ನೆಟ್ಟಿದ್ದಾರೆ. ಬರೋಬ್ಬರಿ 12 ವರ್ಷಗಳ ಬಳಿಕ ನಡಾಲ್‌ ಇದೀಗ ವಿಂಬಲ್ಡನ್ (Wimbledon) ಗೆಲ್ಲುವ ಕನಸು ಕಾಣುತ್ತಿದ್ದಾರೆ.

ರಾಫೆಲ್ ನಡಾಲ್‌ ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಿದ್ದರಿಂದ ಪ್ರತಿ ಪಂದ್ಯಕ್ಕೂ ಮುನ್ನ ವೈದ್ಯರೊಂದಿಗೆ ಪ್ಯಾರಿಸ್‌ಗೆ ತೆರಳಿ ನೋವು ನಿವಾರಕ ಇಂಜೆಕ್ಷನ್ ಪಡೆದು ಕೋರ್ಟ್‌ಗೆ ಹಾಜರಾಗುತ್ತಿದ್ದರು. ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದ ನಡಾಲ್, 14ನೇ ಫ್ರೆಂಚ್ ಓಪನ್ ಹಾಗೂ ಒಟ್ಟಾರೆ 22ನೇ ಗ್ರ್ಯಾನ್ ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios