ಉದ್ದೀಪನ ಮದ್ದು ಸೇವನೆ ಪ್ರಕರಣ, ಎಂಆರ್ ಪೂವಮ್ಮಗೆ ಎರಡು ವರ್ಷ ನಿಷೇಧ ವಿಧಿಸಿದ ನಾಡಾ!
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಶಿಸ್ತು ಸಮಿತಿಯ ಮೂರು ತಿಂಗಳ ನಿಷೇಧ ಅಮಾನತು ಶಿಕ್ಷೆಯನ್ನು ರದ್ದು ಮಾಡಿದ ನಾಡಾ ಪ್ಯಾನೆಲ್, ಇದನ್ನು ಎರಡು ವರ್ಷಕ್ಕೆ ಏರಿಸಿದೆ.
ನವದೆಹಲಿ (ಸೆ. 20): ಏಷ್ಯನ್ ಗೇಮ್ಸ್ ರಿಲೇ ಚಿನ್ನದ ಪದಕ ವಿಜೇತೆ ಎಂ.ಆರ್.ಪೂವಮ್ಮ ಅವರಿಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ಮೇಲ್ಮನವಿ ಸಮಿತಿಯು ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಕೇವಲ ಮೂರು ತಿಂಗಳ ನಿಷೇಧವನ್ನು ನೀಡಿದ ಶಿಸ್ತಿನ ಸಮಿತಿಯ ನಿರ್ಧಾರವನ್ನು ಈ ಪ್ಯಾನೆಲ್ ರದ್ದು ಮಾಡಿದೆ. ಈ ನಿಷೇಧದ ಕಾರಣದಿಂದಾಗಿ ಎಂಆರ್ ಪೂವಮ್ಮ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಹಾಗೂ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಂತಾಗಿದೆ. 2021ರ ಫೆಬ್ರವರಿ 18 ರಂದು ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-1 ಸಮಯದಲ್ಲಿ ಪೂವಮ್ಮ ಅವರ ಸ್ಯಾಂಪಲ್‌ಅನ್ನು ಪರೀಕ್ಷೆ ಮಾಡಲಾಗಿತ್ತು. ಈ ಸ್ಯಾಂಪಲ್‌ನಲ್ಲಿ ನಿಷೇಧಿತ ಉದ್ದೀಪನವಾದ ಮೀಥೈಲ್ಹೆಕ್ಸಾನಿಮೈನ್ ಕಂಡುಬಂದಿತ್ತು. ಪೂವಮ್ಮ ಅವರ ಎ ಮತ್ತು ಬಿ ಮಾದರಿಗಳೆರಡೂ ಪಾಸಿಟಿವ್ ಫಲಿತಾಂಶ ಬಂದಿತ್ತು. ಆದರೆ ಪೂವಮ್ಮ ಮಾತ್ರ ತಾವು ನಿಷೇಧಿತ ಉದ್ದೀಪನ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಬೆಡ್‌ಟೈಮ್ ಲ್ಯಾಟೆ ಎಂಬ ಆಯುರ್ವೇದ ಉತ್ಪನ್ನವನ್ನು ತಾನು ಸೇವಿಸುತ್ತಿದ್ದೆ ಎಂದು ಹೇಳಿದ್ದರು. ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ಆಕೆಗೆ ಮೂರು ತಿಂಗಳ ಅಮಾನತು ಶಿಕ್ಷೆಯನ್ನು 2022ರ ಜೂನ್‌ನಲ್ಲಿ ನೀಡಿತ್ತು. ಆದರೆ, ನಾಡಾ ಈ ತೀರ್ಪಿನ ವಿರುದ್ಧವೇ ಮೇಲ್ಮನವಿ ಸಲ್ಲಿಕೆ ಮಾಡಿತ್ತು.
ಯಾವುದೇ ತರ್ಕಬದ್ಧ ಮಾನದಂಡ, ನಿಯಮ ಅಥವಾ ಮಾರ್ಗಸೂಚಿಗೆ ಬದ್ಧವಾಗಿರದೆ ಎಡಿಡಿಪಿ ಆಕೆಗೆ ಕಡಿಮೆ ಶಿಕ್ಷೆಯನ್ನು ನೀಡಿದೆ ಮತ್ತು ಆಕೆಯ ದೇಹದಲ್ಲಿ ಕಂಡುಬರುವ ವಸ್ತುವು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಂಡ ಕಾರ್ಯಕ್ಷಮತೆ ವರ್ಧಕವಾಗಿದೆ ಎಂದು ಮೇಲ್ಮನವಿ ಸಮಿತಿಯು ಭಾವಿಸಿದೆ. ಇದೀಗ ಪೂವಮ್ಮ ಅವರ ಮೇಲೆ ಎರಡು ವರ್ಷಗಳ ನಿಷೇಧ ಶಿಕ್ಷೆಯನ್ನು ವಿಧಿಸಿದೆ ಮತ್ತು ಮಾದರಿ ಸಂಗ್ರಹಣೆಯ ದಿನಾಂಕದಿಂದ (ಫೆಬ್ರವರಿ 18, 2021) ಅವರ ಎಲ್ಲಾ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.
ಪೂವಮ್ಮ ಅವರು 2018 ರ ಏಷ್ಯನ್ ಗೇಮ್ಸ್‌ನಲ್ಲಿ 4 X 400m ಮಹಿಳಾ ಮತ್ತು ಮಿಶ್ರ ರಿಲೇ ತಂಡಗಳಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. 2014 ರ ಏಷ್ಯನ್ ಗೇಮ್ಸ್‌ನಲ್ಲಿ 4 X 400 ಮೀಟರ್ಸ್ ರಿಲೇಯಲ್ಲಿ ಚಿನ್ನದ ಪದಕವನ್ನು ಗೆದ್ದ ತಂಡದ ಭಾಗವಾಗಿದ್ದರು. ಅವರು 2012 ರ ಏಷ್ಯನ್ ಕ್ರೀಡಾಕೂಟದಲ್ಲಿ (Asian Games) ವೈಯಕ್ತಿಕ 400 ಮೀಟರ್ ಕಂಚಿನ ಪದಕವನ್ನು ಗೆದ್ದರು. ಅವರಿಗೆ 2015 ರಲ್ಲಿ ಅರ್ಜುನ ಪ್ರಶಸ್ತಿ (Arjuna Award) ನೀಡಿ ಗೌರವಿಸಲಾಗಿತ್ತು.
MR Poovamma-Jithin Paul Marriage ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಜ್ಯದ ಅಥ್ಲೀಟ್ ಎಂ ಆರ್ ಪೂವಮ್ಮ
ಅಭಿನವ್ ಮುಖರ್ಜಿ ನೇತೃತ್ವದ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯು (nti-Doping Appeal Panel headed by Abhinav Mukherjee ) ತನ್ನ ಆದೇಶದಲ್ಲಿ, "ನಾವು ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ಅಂಗೀಕರಿಸಿದ 16.06.2022 ರ ಆದೇಶವನ್ನು ಬದಿಗಿರಿಸಿದ್ದೇವೆ ಮತ್ತು NADA ಮೇಲ್ಮನವಿಯನ್ನು ಅನುಮತಿಸಿದ್ದೇವೆ." ಪರಿಣಾಮವಾಗಿ, ಅನರ್ಹತೆಯ ಕಲಂ 10.2.2 ರ ಅಡಿಯಲ್ಲಿ ಅಥ್ಲೀಟ್‌ಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ' ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಏಷ್ಯನ್ ಅಥ್ಲೆಟಿಕ್ಸ್ ಕೂಟ: ಕನ್ನಡಿಗರು ಫೈನಲ್'ಗೆ
ಪೂವಮ್ಮ ಕ್ರೀಡಾ ಜೀವನ ಅಂತ್ಯ: ಕಳೆದ ವರ್ಷದ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಎಂಆರ್ ಪೂವಮ್ಮಗೆ (MR Poovamma) ಈಗ 32 ವರ್ಷ ವಯಸ್ಸು. ನಿಷೇಧ ಶಿಕ್ಷೆ ಮುಗಿಸುವ ವೇಳೆಗೆ ಅವರಿಗೆ 34 ವರ್ಷ ವಯಸ್ಸಾಗಿರುತ್ತದೆ. ಅವರ ಅಥ್ಲೆಟಿಕ್ಸ್ ಜೀವನದ ಸಂಧ್ಯಾಕಾಲದಲ್ಲಿ ಇಂಥದ್ದೊಂದು ಕಳಂಕ ಎದುರಾಗಿದ್ದು ಹಿನ್ನಡೆಗೆ ಕಾರಣವಾಗಿದೆ. ಬಹುಶಃ ಈ ತೀರ್ಪಿನೊಂದಿಗೆ ಅವರ ಕ್ರೀಡಾ ಜೀವನ ಕೂಡ ಅಂತ್ಯಕಂಡಂತಾಗಿದೆ.