Asianet Suvarna News Asianet Suvarna News

ಮಲೇಷ್ಯಾ ಮಾಸ್ಟರ್ಸ್: 14 ತಿಂಗಳ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸಿಂಧುಗೆ ವಿಶ್ವ ನಂ.7, ವ್ಯಾಂಗ್ ಯಿ ಸವಾಲು ಎದುರಾಗಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

PV Sindhu reaches first final in 14 months at Malaysia Masters kvn
Author
First Published May 26, 2024, 10:18 AM IST

ಕೌಲಾಲಂಪುರ: ಕಳೆದೆರಡು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಬರೋಬ್ಬರಿ 14 ತಿಂಗಳುಗಳ ಬಳಿಕ ಸಿಂಧು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.

2 ಬಾರಿ ಒಲಿಂಪಿಕ್ ಪದಕ ವಿಜೇತೆ, ವಿಶ್ವ ಶ್ರೇಯಾಂಕದಲ್ಲಿ ಸದ್ಯ 15ನೇ ಸ್ಥಾನದಲ್ಲಿರುವ ಸಿಂಧು ಅವರು ಶನಿವಾರ 88 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಮಾಜಿ ವಿಶ್ವ ಚಾಂಪಿಯನ್, ಥಾಯ್ಲೆಂಡ್‌ ಬುಸಾನನ್ 13-21, 21-16, 21-12 ಗಳಲ್ಲಿ ಜಯಭೇರಿ ಬಾರಿಸಿದರು. 

ಮೊದಲ ಗೇಮ್‌ನಲ್ಲಿ ಬುಸಾನನ್ ಪ್ರಾಬಲ್ಯ ಸಾಧಿಸಿದರೂ ಪಟ್ಟು ಬಿಡದ ಸಿಂಧು ಕೊನೆ 2 ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸಿದರು. ಇದು ಬುಸಾನನ್ ವಿರುದ್ದ ಸಿಂಧುಗೆ ಲಭಿಸಿದ 18ನೇ ಗೆಲುವು. ಕೊನೆ ಬಾರಿ ಬುಸಾನನ್ ವಿರುದ್ಧ ಸಿಂಧು 2019ರಲ್ಲಿ ಸೋತಿದ್ದರು. 

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸಿಂಧುಗೆ ವಿಶ್ವ ನಂ.7, ವ್ಯಾಂಗ್ ಯಿ ಸವಾಲು ಎದುರಾಗಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

2 ವರ್ಷ ಬಳಿಕ ಪ್ರಶಸ್ತಿ ನಿರೀಕ್ಷೆ

ಸಿಂಧು 2022ರಲ್ಲಿ ಸ್ವಿಸ್ ಓಪನ್, ಸಿಂಗಾಪೂರ ಓಪನ್, ಸೆಯ್ಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಗೆದ್ದಿದ್ದರು. ಆ ಬಳಿಕ ಯಾವುದೇ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಕಳೆದ ವರ್ಷ ಸ್ಪೇನ್ ಮಾಸ್ಟರ್ಸ್ ಫೈನಲ್‌ಗೇರಿ ಸೋತಿದ್ದರು. 2024ರಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಇಂದಿನಿಂದ ಫ್ರೆಂಚ್‌ ಓಪನ್‌: ನಡಾಲ್‌, ಜೋಕೋ, ಇಗಾ, ಆಲ್ಕರಜ್‌ ಕಣಕ್ಕೆ

ಆರ್ಚರಿ ವಿಶ್ವಕಪ್: ಭಾರತ ಮಹಿಳಾ ತಂಡಕ್ಕೆ ಬಂಗಾರ

ಯೆಕೋನ್ (ದಕ್ಷಿಣ ಕೊರಿಯಾ): ಆರ್ಚರಿ ವಿಶ್ವಕಪ್ 2ನೇ ಹಂತದಲ್ಲಿ ಭಾರತದ ಮಹಿಳಾ ಕಾಂಪೌಂಡ್ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಶನಿವಾರ ಜ್ಯೋತಿ, ಪರ್‌ತ್ ಕೌರ್, ಅದಿತಿ ಸ್ವಾಮಿ ಅವರನ್ನೊಳಗೊಂಡ ವಿಶ್ವನಂ.1 ತಂಡ ಟರ್ಕಿ ವಿರುದ್ಧ 232-226 ಅಂಕ ಗಳಿಂದ ಜಯಗಳಿಸಿತು. 

ಇದು ಜ್ಯೋತಿ, ಕೌರ್, ಅದಿತಿಗೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ. ಇದೇ ವೇಳೆ ಕಾಂಪೌಂಡ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಜ್ಯೋತಿ ಹಾಗೂ ಪ್ರಿಯಾನ್ಸ್ ಅಮೆರಿಕ ಜೋಡಿ ವಿರುದ್ಧ 153-155 ಅಂಕಗಳ ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

2022ರ ಟಿ20 ವಿಶ್ವಕಪ್‌ಗೆ ಸೆಲೆಕ್ಟ್ ಆಗಿದ್ದೇ ಆರ್‌ಸಿಬಿ ಫ್ಯಾನ್ಸ್‌ಗಳಿಂದ..! ಅವರ ಸಪೋರ್ಟ್ ನಾನೆಂದೂ ಮರೆಯೊಲ್ಲ: ಡಿಕೆ

ಯೂತ್ ವೇಟ್‌ಲಿಫ್ಟಿಂಗ್: ಭರಾಲಿಗೆ ಚಿನ್ನದ ಪದಕ

ಲಿಮಾ(ಪೆರು): ಇಲ್ಲಿ ನಡೆಯುತ್ತಿರುವ ವಿಶ್ವಯೂತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬೇದಬ್ರಾತ್ ಭರಾಲಿ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 73 ಕೆ.ಜಿ. ವಿಭಾಗದಲ್ಲಿ 17 ವರ್ಷದ ಭರಾಲಿ 296 ಕೆ.ಜಿ. (ಸ್ಟ್ಯಾಚ್‌ನಲ್ಲಿ 136+ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 160 ಕೆ.ಜಿ.) ಭಾರ ಎತ್ತಿದರು. 

ಅಮೆರಿಕದ ಡ್ಯಾನ್ ಮೆಕ್ ಡೊನಾಲ್ಡ್ (284 ಕೆ.ಜಿ.) ಬೆಳ್ಳಿ ಹಾಗೂ ಉಕ್ರೇನ್‌ನ ಸಿರ್ಹಿ ಕೊಟೆಲೆವ್‌ಸ್ಕಿ(283 ಕೆ.ಜಿ.) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದೇ ವೇಳೆ ಪುರುಷರ 81 ಕೆ.ಜಿ. ವಿಭಾಗದಲ್ಲಿ ಸಾಯಿರಾಜ್ ಪರ್ದೇಶಿ ಸ್ಟ್ರಾಚ ಚ್‌ನಲ್ಲಿ 135 ಕೆ.ಜಿ. ಭಾರ ಎತ್ತಿ ಕಂಚು ಗೆದ್ದರು.

31ರಿಂದ ಮಂಗಳೂರಲ್ಲಿ ಸರ್ಫಿಂಗ್‌ ಕೂಟ ಆರಂಭ

ಮಂಗಳೂರು: 5ನೇ ಆವೃತ್ತಿ ಸರ್ಫಿಂಗ್ ಚಾಂಪಿಯನ್ ಶಿಪ್ ಮೇ 31ರಿಂದ ಜೂ.2 ರವರೆಗೆ ಮಂಗಳೂರಿನ ಸಸಿಹಿತ್ತು ಬೀಚ್‌ನಲ್ಲಿ ನಡೆಯಲಿದೆ. 3 ದಿನಗಳ ಕೂಟದಲ್ಲಿ ಪುರುಷ, ಮಹಿಳಾ ಮುಕ್ತ ವಿಭಾಗ, ಅಂಡರ್-16 ಬಾಲಕ, ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಭಾರತ ಸರ್ಫಿಂಗ್ ಫೆಡರೇಷನ್ ತಿಳಿಸಿದೆ.

Latest Videos
Follow Us:
Download App:
  • android
  • ios