Good News: ಶೀಘ್ರದಲ್ಲೇ ಮಹಿಳಾ ಪ್ರೊ ಕಬಡ್ಡಿ ಲೀಗ್ ಆರಂಭ?
ಮಹಿಳಾ ಐಪಿಎಲ್ ಟೂರ್ನಿ ಬೆನ್ನಲ್ಲೇ ಮಹಿಳಾ ಪ್ರೊ ಕಬಡ್ಡಿಗೆ ಚಾಲನೆ
ಮಹಿಳೆಯರಿಗೆ ಫ್ರಾಂಚೈಸಿ ಆಧಾರಿತ ಲೀಗ್ ಆರಂಭಿಸಲು ಆಯೋಜಕರು ಚಿಂತನೆ
ಸದ್ಯದಲ್ಲಿಯೇ ಮಹಿಳಾ ಕಬಡ್ಡಿ ಲೀಗ್‌ಗೆ ಅಧಿಕೃತ ಚಾಲನೆ ಸಿಗುವ ಸಾಧ್ಯತೆ
ನವದೆಹಲಿ(ಮಾ.03): ಮಹಿಳಾ ಐಪಿಎಲ್ನ ಚೊಚ್ಚಲ ಆವೃತ್ತಿಗೆ ಚಾಲನೆ ಸಿಗಲು ಕ್ಷಣಗಣನೆ ಆರಂಭವಾಗುತ್ತಿರುವಾಗಲೇ ಕಬಡ್ಡಿಯಲ್ಲೂ ಮಹಿಳೆಯರಿಗೆ ಫ್ರಾಂಚೈಸಿ ಆಧಾರಿತ ಲೀಗ್ ಆರಂಭಿಸಲು ಆಯೋಜಕರು ಚಿಂತನೆ ನಡೆಸುತ್ತಿದ್ದಾರೆ. ಪುರುಷರ ಪ್ರೊ ಕಬಡ್ಡಿಯನ್ನು ಯಶಸ್ವಿಯಾಗಿ ಆಯೋಜಿಸಿಸುತ್ತಿರುವ ಮಶಾಲ್ ಸ್ಪೋರ್ಟ್ಸ್ ಸಂಸ್ಥೆಯು ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್(ಎಕೆಎಫ್ಐ), ಅಂತಾರಾಷ್ಟ್ರೀ ಕಬಡ್ಡಿ ಫೆಡರೇಶನ್(ಐಕೆಎಫ್) ಸಹಯೋಗದೊಂದಿಗೆ ಮಹಿಳಾ ಲೀಗ್ ಆರಂಭಿಸುವ ನಿರೀಕ್ಷೆಯಲ್ಲಿದೆ.
ಈ ಬಗ್ಗೆ ಮಶಾಲ್ ಸ್ಪೋರ್ಟ್ಸ್ ಸಿಇಒ ಅನುಪಮ್ ಗೋಸ್ವಾಮಿ ಪ್ರತಿಕ್ರಿಯಿಸಿದ್ದು, ‘ವೃತ್ತಿಪರ ಮಹಿಳಾ ಕಬಡ್ಡಿ ಲೀಗ್ ಈಗ ನಮ್ಮ ಮುಂದಿರುವ ಯೋಜನೆ. ಲೀಗ್ ಆರಂಭಿಸುವ ಬಗ್ಗೆ ಎಕೆಎಫ್ಐ, ಐಕೆಎಫ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದಿದ್ದಾರೆ. 2016ರಲ್ಲಿ ಮಹಿಳೆಯರಿಗಾಗಿ 3 ತಂಡಗಳ ಲೀಗ್ ಆರಂಭಿಸಿದ್ದರೂ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ.
ಜಸ್ವಿನ್ ರಾಷ್ಟ್ರೀಯ ದಾಖಲೆ!
ಬಳ್ಳಾರಿ: 2ನೇ ಆವೃತ್ತಿಯ ಇಂಡಿಯಾ ಓಪನ್ ಎಸೆತ ಮತ್ತು ಜಿಗಿತ ಚಾಂಪಿಯನ್ಶಿಪ್ನಲ್ಲಿ ತಾರಾ ಲಾಂಗ್‌ಜಂಪ್ ಪಟು ಜೆಸ್ವಿನ್ ಆಲ್ಡಿರನ್ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಪುರುಷರ ವಿಭಾಗದಲ್ಲಿ ತಮಿಳುನಾಡಿನ ಜೆಸ್ವಿನ್ 8.42 ಮೀ. ದೂರಕ್ಕೆ ಜಿಗಿದು ಚಿನ್ನ ಗೆದ್ದರು.
ಇದರೊಂದಿಗೆ ಮುರಳಿ ಶ್ರೀಶಂಕರ್(8.36 ಮೀ.) ದಾಖಲೆ ಪತನಗೊಂಡಿತು. ಅಲ್ಲದೇ 8.40 ಮೀ. ದಾಟಿದ ಭಾರತದ ಮೊದಲ ಅಥ್ಲೀಟ್ ಎನ್ನುವ ದಾಖಲೆಗೂ ಪಾತ್ರರಾದರು. ಪುರುಷರ ಟ್ರಿಪಲ್ ಜಂಪ್ನಲ್ಲಿ ತಮಿಳುನಾಡಿದ ಪ್ರವೀಣ್(17.17 ಮೀ.) ನೂತನ ಕೂಟ ದಾಖಲೆ ಬರೆದರು. ಇದೇ ವೇಳೆ ಮಹಿಳೆಯರ ಪೋಲ್ವಾಲ್ಟ್ನಲ್ಲಿ ಕರ್ನಾಟಕದ ಸಿಂಧುಶ್ರೀ, ವಿಭಾ ಕ್ರಮವಾಗಿ ಚಿನ್ನ, ಬೆಳ್ಳಿ, ಹೈಜಂಪ್ನಲ್ಲಿ ಅಭಿನಯ ಶೆಟ್ಟಿಬೆಳ್ಳಿ ಗೆದ್ದರು.
ಸಹ ಆಟಗಾರರಿಗೆ ಮೆಸ್ಸಿ ಚಿನ್ನದ ಐಫೋನ್ ಗಿಫ್ಟ್!
ಬ್ಯೂನಸ್ ಐರಿಸ್: ಐತಿಹಾಸಿಕ ಫಿಫಾ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಸಹ ಆಟಗಾರರು, ಸಿಬ್ಬಂದಿಗೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ದುಬಾರಿ ಬೆಲೆಯ ‘ಚಿನ್ನದ ಐಫೋನ್’ ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ತಯಾರಿಸಲಾದ 24 ಕ್ಯಾರಟ್ ಚಿನ್ನದ ಕೇಸ್ ಹೊಂದಿರುವ 35 ಐಫೋನ್ಗಳನ್ನು ಮೆಸ್ಸಿ ತರಿಸಿದ್ದು, ಎಲ್ಲಾ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗೆ ವಿತರಿಸಿದ್ದಾರೆ ಎಂದು ವರದಿಯಾಗಿದೆ.
Indian Super League: ಪ್ಲೇ-ಆಫ್‌ನಲ್ಲಿ ಇಂದು ಬಿಎಫ್‌ಸಿ-ಕೇರಳ ಫೈಟ್
ಈ ಮೊಬೈಲ್‌ಗಳಿಗೆ ಒಟ್ಟು 1,75,000 ಪೌಂಡ್(ಸುಮಾರು 1.73 ಕೋಟಿ ರು.) ಖರ್ಚು ಮಾಡಿರುವುದಾಗಿ ಹೇಳಲಾಗಿದೆ. ಪ್ರತಿ ಮೊಬೈಲ್ನ ಮೇಲೆ ಆಯಾ ಆಟಗಾರರ ಹೆಸರು, ಜೆರ್ಸಿ ಸಂಖ್ಯೆ ಹಾಗೂ ಅರ್ಜೆಂಟೀನಾ ತಂಡದ ಲೋಗೋ ಕೂಡಾ ಮುದ್ರಿಸಲಾಗಿದೆ.
ಮೇ 21ಕ್ಕೆ ಬೆಂಗ್ಳೂರು 10ಕೆ ಮ್ಯಾರಥಾನ್
ಬೆಂಗಳೂರು: 15ನೇ ಆವೃತ್ತಿಯ ಪ್ರತಿಷ್ಠಿತ ಬೆಂಗಳೂರು 10ಕೆ ಮ್ಯಾರಥಾನ್ ಮೇ 21ರಂದು ನಡೆಯಲಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮ್ಯಾರಥಾನ್ನಲ್ಲಿ ದೇಶ ಹಾಗೂ ವಿದೇಶದ ಹಲವು ಎಲೈಟ್ ಅಥ್ಲೀಟ್ಗಳು ಸೇರಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮಾರ್ಚ್ 1ರಿಂದ ನೋಂದಣಿ ಆರಂಭಗೊಂಡಿದ್ದು, ಏಪ್ರಿಲ್ 28ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.