Pro Kabaddi League: ಹರ್ಯಾಣ ಸ್ಟೀಲರ್ಸ್‌ಗೆ ಶರಣಾದ ಬೆಂಗಳೂರು ಬುಲ್ಸ್‌

ಸತತ 5 ಗೆಲುವಿನ ಬಳಿಕ ಮೊದಲ ಸೋಲು ಕಂಡ ಬೆಂಗಳೂರು ಬುಲ್ಸ್‌
ಹರ್ಯಾಣ ಸ್ಟೀಲರ್ಸ್‌ ಎದುರು 2 ಅಂಕಗಳ ರೋಚಕ ಸೋಲುಂಡ ಬುಲ್ಸ್‌
ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಎದುರು ಪುಣೇರಿ ಪಲ್ಟನ್ ಜಯಭೇರಿ

Pro Kabaddi League Haryana Steelers beat Bengaluru Bulls by 2 point margin kvn

ಪುಣೆ(ನ.02): ಸತತ 5 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಬೆಂಗಳೂರು ಬುಲ್ಸ್‌ 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಂಗಳವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ಧ 27-29 ಅಂಕಗಳ ಸೋಲುಕಂಡಿತು. ಸೋಲಿನ ಹೊರತಾಗಿಯೂ ಬೆಂಗಳೂರು ಬುಲ್ಸ್‌ 35 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, ಹರ್ಯಾಣ ಸ್ಟೀಲರ್ಸ್‌ 5ನೇ ಸ್ಥಾನಕ್ಕೇರಿತು. ಭರತ್‌ 20 ನಿಮಿಷಕ್ಕೂ ಹೆಚ್ಚು ಕಾಲ ಅಂಕಣದಿಂದ ಹೊರಗುಳಿದಿದ್ದು, ವಿಕಾಸ್‌ ಖಂಡೋಲ ಕೇವಲ 1 ಅಂಕ ಗಳಿಸಿದ್ದು ಬೆಂಗಳೂರು ಬುಲ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.

ಅಂಕಗಳ ಆಧಾರದಲ್ಲಿ ಹರ್ಯಾಣ ಸ್ಟೀಲರ್ಸ್‌ ಆರಂಭದಲ್ಲೇ ಮುನ್ನಡೆ ಸಾಧಿಸಿದ್ದರೂ ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ತೀವ್ರ ಹೋರಾಟ ಕಂಡುಬಂತು. ಮೊದಲಾರ್ಧದಲ್ಲಿ 10-13 ಅಂಕಗಳಿಂದ ಹಿಂದಿದ್ದ ಬುಲ್ಸ್‌ ದ್ವಿತೀಯಾರ್ಧದ ಆರಂಭದಲ್ಲೇ ಆಲೌಟಾಗಿ ಮತ್ತಷ್ಟು ಹಿನ್ನಡೆ ಅನುಭವಿಸಿತು. ಕೊನೆ ರೈಡ್‌ನಲ್ಲಿಹರ್ಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ ಸೋಲಿನ ಅಂತರವನ್ನು ತಗ್ಗಿಸಿತು. ಭರತ್‌(10) ಮತ್ತೊಂದು ಸೂಪರ್‌ 10 ಸಾಧನೆ ಮಾಡಿದರು. ಮೀತು(09) ಹರ್ಯಾಣ ಸ್ಟೀಲರ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಂಗಳವಾರ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌, ದಬಾಂಗ್‌ ಡೆಲ್ಲಿ ವಿರುದ್ಧ 43-38 ಅಂಕಗಳಿಂದ ಜಯಗಳಿಸಿತು. ಮೊದಲ 5 ಪಂದ್ಯ ಗೆದ್ದಿದ್ದ ಡೆಲ್ಲಿಗೆ ಇದು ಸತತ 5ನೇ ಸೋಲು ಎನಿಸಿಕೊಂಡಿತು. ಮೊದಲಾರ್ಧದ ಅಂತ್ಯದ ವೇಳೆಗೆ ಪುಣೇರಿ ಪಲ್ಟಾನ್ ತಂಡವು 23-17 ಅಂಕಗಳೊಂದಿಗೆ ಬರೋಬ್ಬರಿ 6 ಅಂಕಗಳ ಮುನ್ನಡೆ ಸಾಧಿಸಿತ್ತು. ಇನ್ನು ದ್ವಿತಿಯಾರ್ಧದಲ್ಲೂ ಅದೇ ಮುನ್ನಡೆ ಕಾಯ್ದುಕೊಂಡ ಪುಣೇರಿ ಪಲ್ಟಾನ್ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Pro Kabaddi League ಮತ್ತೊಂದು ಥ್ರಿಲ್ಲರ್ ಪಂದ್ಯ ಗೆದ್ದ ಬೆಂಗಳೂರು ಬುಲ್ಸ್‌

ಪುಣೇರಿ ಪಲ್ಟಾನ್ ತಂಡದ ಪರ ರೈಡರ್‌ಗಳಾದ ಮೋಹಿತ್ ಗೋಯತ್ ಹಾಗೂ ಆಕಾಶ್ ಶಿಂಧೆ ತಲಾ 13 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ಫಜಲ್ ಅಟ್ರಾಚಲಿ ಹಾಗೂ ಸೋಂಬೀರ್ ಢಿಪೆಡಿಂಗ್‌ನಲ್ಲಿ ತಲಾ 4 ಅಂಕ ಗಳಿಸುವ ಮೂಲಕ ಡೆಲ್ಲಿ ಎದುರು ಪ್ರಾಬಲ್ಯ ಮೆರೆಯಲು ಯಶಸ್ವಿಯಾದರು. ಇನ್ನೊಂದೆಡೆ ದಬಾಂಗ್ ಡೆಲ್ಲಿ ತಂಡದ ಪರ ಒನ್‌ ಮ್ಯಾನ್ ಆರ್ಮಿ ನವೀನ್ ಕುಮಾರ್ 16 ಅಂಕಗಳನ್ನು ಗಳಿಸಿದರಾದರೂ, ಉಳಿದ ಆಟಗಾರರು ಉತ್ತಮ ಸಾಥ್ ನೀಡದ ಹಿನ್ನೆಲೆಯಲ್ಲಿ ಪಂದ್ಯವನ್ನು ಕೈಚೆಲ್ಲಬೇಕಾಗಿ ಬಂದಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟಾನ್ 2ನೇ,  ದಬಾಂಗ್ ಡೆಲ್ಲಿ 3ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು:
ಯು ಮುಂಬಾ-ತೆಲುಗು ಟೈಟಾನ್ಸ್‌, ಸಂಜೆ 7.30ಕ್ಕೆ
ಬೆಂಗಾಲ್‌-ತಲೈವಾಸ್‌, ರಾತ್ರಿ 8.30ಕ್ಕೆ

Latest Videos
Follow Us:
Download App:
  • android
  • ios