Pro Kabaddi League: ಕೊನೆಗೂ ಗೆಲುವಿನ ಹಳಿಗೆ ಮರಳಿದ ದಬಾಂಗ್ ಡೆಲ್ಲಿ
6 ಸೋಲುಗಳ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳಿದ ದಬಾಂಗ್ ಡೆಲ್ಲಿ
ತೆಲುಗು ಟೈಟಾನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿದ ನವೀನ್ ಕುಮಾರ್ ಪಡೆ
ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ದಬಾಂಗ್ ಡೆಲ್ಲಿ
ಪುಣೆ(ನ.09): 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಗೆಲುವಿನ ಹಳಿಗೆ ಮರಳಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಸತತ 6 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಡೆಲ್ಲಿ ಮಂಗಳವಾರ ತೆಲುಗು ಟೈಟಾನ್ಸ್ ವಿರುದ್ಧ 40-33 ಅಂಕಗಳಿಂದ ಜಯಗಳಿಸಿತು. ಟೈಟಾನ್ಸ್ 12 ಪಂದ್ಯಗಳಲ್ಲಿ 11ನೇ ಸೋಲು ಕಂಡಿತು. ಮೊದಲಾರ್ಧದಲ್ಲಿ ಡೆಲ್ಲಿ 12-17ರಿಂದ ಹಿಂದಿದ್ದರೂ ಕೊನೆಯಲ್ಲಿ ತೀವ್ರ ಪ್ರತಿರೋಧ ತೋರಿ ಜಯ ತನ್ನದಾಗಿಸಿಕೊಂಡಿತು. ಅಶು ಮಲಿಕ್(12), ನವೀನ್(09) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೈಟಾನ್ಸ್‌ನ ಸಿದ್ಧಾರ್ಥ್ ದೇಸಾಯಿ(14) ಹೋರಾಟ ವ್ಯರ್ಥವಾಯಿತು.
ಇನ್ನು, ಬೆಂಗಾಲ್ ವಾರಿಯರ್ಸ್-ಯು.ಪಿ.ಯೋಧಾಸ್ ನಡುವಿನ ಮೊದಲ ಪಂದ್ಯ 41-41 ಅಂಕಗಳಿಂದ ಟೈ ಆಯಿತು. ಬೆಂಗಾಲ್ ಮಣೀಂದರ್ ಸಿಂಗ್ 18, ಯೋಧಾಸ್‌ನ ರೋಹಿತ್ ತೋಮರ್ 16 ಅಂಕ ಗಳಿಸಿದರು.
ಇಂದಿನ ಪಂದ್ಯಗಳು:
ಬೆಂಗಳೂರು ಬುಲ್ಸ್-ಹರ್ಯಾಣ ಸ್ಟೀಲರ್ಸ್, ಸಂಜೆ 7.30ಕ್ಕೆ,
ತಮಿಳ್ ತಲೈವಾಸ್- ಪುಣೇರಿ ಪಲ್ಟಾನ್ ರಾತ್ರಿ 8.30ಕ್ಕೆ
ವಿಶ್ವ ಟಿಟಿ: ಮನಿಕಾ-ಸತ್ಯನ್ ಟಾಪ್-5ಗೆ ಲಗ್ಗೆ; ದಾಖಲೆ
ನವದೆಹಲಿ: ಭಾರತದ ತಾರಾ ಟೇಬಲ್ ಟೆನಿಸ್ ಜೋಡಿ ಮನಿಕಾ ಬಾತ್ರಾ-ಜಿ.ಸತ್ಯನ್ ವಿಶ್ವ ರ‍್ಯಾಂಕಿಂಗ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದು, ಈ ಸಾಧನೆ ಮಾಡಿದ ದೇಶದ ಮೊದಲ ಜೋಡಿ ಎನಿಸಿಕೊಂಡಿದೆ. ಸ್ಲೊವೇನಿಯಾದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಇವೆಂಟನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಈ ಜೋಡಿ ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿತು. ವೈಯಕ್ತಿಕ ವಿಭಾಗದಲ್ಲಿ ಸತ್ಯನ್ ಪುರುಷರ ಸಿಂಗಲ್ಸ್‌ನಲ್ಲಿ 39ನೇ, ಬಾತ್ರಾ ಮಹಿಳಾ ಸಿಂಗಲ್ಸ್‌ನಲ್ಲಿ 44ನೇ ಸ್ಥಾನದಲ್ಲಿದ್ದಾರೆ. ಇನ್ನು, ಮಹಿಳಾ ಡಬಲ್ಸ್‌ನಲ್ಲಿ ಬಾತ್ರಾ-ಅರ್ಚನಾ ಕಾಮತ್ ಜೋಡಿ 5ನೇ ಸ್ಥಾನದಲ್ಲಿದೆ.
ವಿಶ್ವ ರ‍್ಯಾಂಕಿಂಗ್: ಲಕ್ಷ್ಯ ಜೀವನಶ್ರೇಷ್ಠ 6ನೇ ಸ್ಥಾನಕ್ಕೆ
ನವದೆಹಲಿ: ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಬಿಡಬ್ಲ್ಯೂಎಫ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಲ್ಲೇ ಸೋತ ಹೊರತಾಗಿಯೂ 21 ವರ್ಷದ ಸೇನ್ ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ 2 ಸ್ಥಾನ ಪ್ರಗತಿ ಸಾಧಿಸಿದರು. ಅವರು ಸದ್ಯ 25 ಟೂರ್ನಿಗಳ ಮೂಲಕ 76,424 ಅಂಕಗಳನ್ನು ಹೊಂದಿದ್ದಾರೆ. ಕಿದಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಕ್ರಮವಾಗಿ 11, 12ನೇ ಸ್ಥಾನದಲ್ಲಿದ್ದಾರೆ. ಮಹಿಳಾ ರ‍್ಯಾಂಕಿಂಗ್‌ನಲ್ಲಿ 1 ಸ್ಥಾನ ಮೇಲೇರಿ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಫ್ರೆಂಚ್ ಓಪನ್ ಚಾಂಪಿಯನ್ ಪುರುಷ ಡಬಲ್ಸ್ ಜೋಡಿ 1 ಸ್ಥಾನ ಮೇಲಕ್ಕೇರಿ 7ನೇ ಸ್ಥಾನ ಪಡೆದಿದ್ದು, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ 5 ಸ್ಥಾನ, ತನಿಶಾ-ಇಶಾನ್ 2 ಸ್ಥಾನ ಜಿಗಿತ ಕಂಡಿದ್ದಾರೆ.
ನವೆಂಬರ್ 12, 13ಕ್ಕೆ ನೆಟ್ಟಕಲ್ಲಪ್ಪ ರಾಷ್ಟ್ರೀಯ ಈಜು ಕೂಟ
ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ(ಎನ್‌ಎಸಿ) ದಶಮಾನೋತ್ಸವ ಆಚರಣೆ ಅಂಗವಾಗಿ ನ.12, 13ಕ್ಕೆ ನಗರದಲ್ಲಿ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಈ ಬಗ್ಗೆ ಕೇಂದ್ರದ ಮುಖ್ಯಸ್ಥ ಡಾ.ವರುಣ್ ನಿಜಾವನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಚ್ಛೇದನದ ಬಗ್ಗೆ ಮತ್ತಷ್ಟು ಶಂಕೆ ಹುಟ್ಟಿಸುವ ಪೋಸ್ಟ್ ಹಾಕಿದ ಸಾನಿಯಾ ಮಿರ್ಜಾ
‘ಪದ್ಮನಾಭನಗರದಲ್ಲಿರುವ ಈಜು ಕೇಂದ್ರದಲ್ಲಿ ಕೂಟ ನಡೆಯಲಿದ್ದು, ವಿವಿಧ ರಾಜ್ಯಗಳಿಂದ 225 ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ, ಗುಂಪು 1, ಗುಂಪು 2ರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಲಿಂಪಿಯನ್ ಸಾಜನ್ ಪ್ರಕಾಶ್ ಉದ್ಘಾಟಿಸಲಿದ್ದಾರೆ. ವಿಶೇಷವಾಗಿ ಈ ಬಾರಿ ಸ್ಕಿನ್ಸ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನವಿದೆ’ ಎಂದರು. ಎನ್‌ಎಸಿ ಕಾರ್ಯಕ್ರಮ ಸಂಯೋಜಕ ಅಂಕುಶ್, ಮಾರುಕಟ್ಟೆವಿಭಾಗದ ಮುಖ್ಯಸ್ಥ ಅಭಿಷೇಕ್, ಮೇಲ್ವಿಚಾರಕ ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.