Pro Kabaddi League: ಎರಡು ಸೋಲಿನ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
ಕೊನೆಗೂ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಳಿಗೆ ಮರಳಿದ ಬುಲ್ಸ್ ಪಡೆ
ಹರ್ಯಾಣ ಸ್ಟೀಲರ್ಸ್ ವಿರುದ್ದ 3 ಅಂಕಗಳ ರೋಚಕ ಜಯ
ಪುಣೆ(ನ.10): ಸತತ 2 ಸೋಲಿನಿಂದ ಕುಗ್ಗಿದ್ದ ಬೆಂಗಳೂರು ಬುಲ್ಸ್ 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಗೆಲುವಿನ ಹಳಿಗೆ ಮರಳಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಬುಧವಾರ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬುಲ್ಸ್ 36-33 ಅಂಕಗಳಿಂದ ಜಯಗಳಿಸಿತು. ಹರ್ಯಾಣ ಸ್ಟೀಲರ್ಸ್ 6ನೇ ಸೋಲಿನೊಂದಿಗೆ 11ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಮೊದಲಾರ್ಧದಲ್ಲೇ ಹರ್ಯಾಣವನ್ನು 2 ಬಾರಿ ಆಲೌಟ್ ಮಾಡಿದ ಬುಲ್ಸ್, 20 ನಿಮಿಷಗಳ ಆಟದ ಬಳಿಕ 27-11ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಸ್ವಲ್ಪ ಮಂಕಾದ ಬುಲ್ಸ್ ಕೊನೆ 2 ನಿಮಿಷ ಬಾಕಿ ಇದ್ದಾಗ ಆಲೌಟ್ ಆಗಿ ಆತಂಕಕ್ಕೀಡಾಯಿತು. ಆದರೆ ಒತ್ತಡಕ್ಕೆ ಮಣಿಯದೆ ಗೆಲುವನ್ನು ತನ್ನದಾಗಿಸಿಕೊಂಡಿತು. ರೈಡಿಂಗ್‌ನಲ್ಲಿ ನೀರಜ್ 9, ಟ್ಯಾಕಲ್‌ನಲ್ಲಿ ಮಹೇಂದ್ರ ಸಿಂಗ್ 5 ಅಂಕ ಗಳಿಸಿದರು. ಹರ್ಯಾಣ ಸ್ಟೀಲರ್ಸ್ ತಂಡದ ಮೀತು ಶರ್ಮಾ(10) ಹೋರಾಟ ವ್ಯರ್ಥವಾಯಿತು.
Pro Kabaddi League: ಕೊನೆಗೂ ಗೆಲುವಿನ ಹಳಿಗೆ ಮರಳಿದ ದಬಾಂಗ್ ಡೆಲ್ಲಿ
ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 35-34 ಅಂಕಗಳ ರೋಚಕ ಗೆಲುವು ಸಾಧಿಸಿ ಪುಣೇರಿ ಪಲ್ಟನ್ ಮತ್ತೆ ಅಗ್ರಸ್ಥಾನಕ್ಕೇರಿತು. ಪಂದ್ಯದ ಬಹುತೇಕ ಸಮಯ ಅಂಕ ಗಳಿಕೆಯಲ್ಲಿ ಹಿಂದಿದ್ದ ಪುಣೆ, ಕೊನೆ ಕೆಲ ನಿಮಿಷಗಳಲ್ಲಿ ಪುಟಿದೆದ್ದು ಜಯ ಒಲಿಸಿಕೊಂಡಿತು.
ಏಷ್ಯನ್ ಬಾಕ್ಸಿಂಗ್: ಫೈನಲ್‌ಗೇರಿದ ಲವ್ಲೀನಾ ಬೊರ್ಗೋಹೈನ್
ಅಮ್ಮಾನ್: ಭಾರತದ ತಾರಾ ಬಾಕ್ಸರ್‌ಗಳಾದ ಲವ್ಲೀನಾ ಬೊರ್ಗೋಹೈನ್, ಆಲ್ಫಿಯಾ ಪಠಾಣ್, ಪರ್ವೀನ್ ಮೀನಾಕ್ಷಿ, ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ್ದಾರೆ. 75 ಕೆ.ಜಿ. ವಿಭಾಗದ ಸೆಮೀಸ್‌ನಲ್ಲಿ ಲವ್ಲೀನಾ ದಕ್ಷಿಣ ಕೊರಿಯಾದ ಸಿಯೋಂಗ್ ವಿರುದ್ದ ಗೆದ್ದರೆ, ಆಲ್ಫಿಯಾ, ಕಜಕಸ್ಥಾನದ ಲಜ್ಜತ್ ವಿರುದ್ದ ಜಯಿಸಿದರು. ಇನ್ನುಳಿದಂತೆ ಮೀನಾಕ್ಷಿ ಹಾಗೂ ಪರ್ವೀನ್ ಕೂಡಾ ಫೈನಲ್ ಪ್ರವೇಶಿಸಿದ್ದಾರೆ.
ಮಂಗ್ಳೂರಲ್ಲಿ ಡಿಸೆಂಬರ್ 9ರಿಂದ ರಾಷ್ಟ್ರೀಯ ಬ್ಯಾಡ್ಮಿಂಟನ್
ಮಂಗಳೂರು: ಇದೇ ಮೊದಲ ಬಾರಿ ಅಖಿಲ ಭಾರತ ಮುಕ್ತ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮಂಗಳೂರಿನಲ್ಲಿ ಡಿಸೆಂಬರ್ 9, 10, 11ಕ್ಕೆ ನಡೆಯಲಿದೆ. ನಗರದ ಯು.ಎಸ್.ಮಲ್ಯ ಬ್ಯಾಡ್ಮಿಂಟನ್ ಕೇಂದ್ರದಲ್ಲಿ ಕೂಟ ಆಯೋಜನೆಗೊಳ್ಳಲಿದ್ದು, ಪುರುಷ ಹಾಗೂ ಮಹಿಳಾ ವಿಭಾಗದ ಜೊತೆಗೆ ಬಾಲಕ, ಬಾಲಕಿಯರ ವಿಭಾಗದಲ್ಲೂ ಸ್ಪರ್ಧೆಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ನ.25 ಕೊನೆ ದಿನವಾಗಿದ್ದು, 8884409014 ಅನ್ನು ಸಂಪರ್ಕಿಸಬಹುದು.