Pro Kabaddi: ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ಸೆಮಿಫೈನಲ್‌ಗೇರಿದ ಬೆಂಗಳೂರು ಬುಲ್ಸ್!
ಭರ್ಜರಿ ನಿರ್ವಹಣೆ ನೀಡಿದ ಬೆಂಗಳೂರು ಬುಲ್ಸ್ ತಂಡ ಹಾಲಿ ಚಾಂಪಿಯನ್ ದಬಾಂಗ್ ದೆಹಲಿ ತಂಡವನ್ನು ದೊಡ್ಡ ಅಂತರದಿಂದ ಮಣಿಸುವ ಮೂಲಕ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಮುಂಬೈ (ಡಿ.13): ದೊಡ್ಡ ಅಂತರದಿಂದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿದ ಬೆಂಗಳುರು ಬುಲ್ಸ್ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ56-24 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು. ಗುರುವಾರ ನಡೆಯಲಿರುವ ಉಪಾಂತ್ಯ ಕದನದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಹಾಗೂ ಲೀಗ್ ಹಂತದಲ್ಲಿ ಭರ್ಜರಿ 15 ಪಂದ್ಯ ಗೆಲ್ಲುವ ಮೂಲಕ ಗಮನ ಸೆಳೆದಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಪಂದ್ಯದಲ್ಲಿ ಒಟ್ಟು ನಾಲ್ಕು ಬಾರಿ ಎದುರಾಳಿಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್, ಭಾರೀ ವಿಶ್ವಾಸದ ಗೆಲುವಿನೊಂದಿಗೆ ಸೆಮಿಫೈನಲ್ ಹಂತ ಪ್ರವೇಶಿಸಿದೆ.
ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೈಡರ್‌ಗಳಾದ ಭರತ್ ಹಾಗೂ ವಿಕಾಸ್ ಖಂಡೋಲಾ, ತಂಡದ 56 ಅಂಕಗಳ ಪೈಕಿ 28 ಅಂಕಗಳನ್ನು ಇವರೇ ಸಂಪಾದನೆ ಮಾಡಿದರು. ಭರತ್ ಬರೋಬ್ಬರಿ 15 ಅಂಕ ಸಂಪಾದನೆ ಮಾಡಿದರೆ, ವಿಕಾಸ್ ಖಂಡೋಲಾ 13 ಅಂಕ ಗಳಿಸಿದರು. ಪೊನ್ ಪಾರ್ತಿಬನ್ ಸುಬ್ರಮಣ್ಯಂ ಡಿಫೆಂಡಿಂಗ್ ವಿಭಾಗದಲ್ಲಿ ಗಳಿಡಿದ 7 ಅಂಕಗಳು ಬುಲ್ಸ್ ಅಬ್ಬರಕ್ಕೆ ಸಾಕ್ಷಿ ಎನಿಸುವಂತಿತ್ತು.
ಪಂದ್ಯದ ಮೊದಲ ನಿಮಿಷದಿಂದಲೇ ಎದುರಾಳಿಯ ಮೇಲೆ ಮುಗಿಬಿದ್ದಂತೆ ಆಟವಾಡಿದ ಬೆಂಗಳೂರು ಬುಲ್ಸ್, ಮೊದಲ ಅವಧಿಯ ಆಟದ ಮುಕ್ತಾಯದ ವೇಳೆಗೆ 31-15ರ ಮುನ್ನಡೆ ಕಂಡುಕೊಂಡಿತ್ತು. ಈ ಅವಧಿಯಲ್ಲಿ ಎರಡು ಬಾರಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ್ದ ಬೆಂಗಳೂರು ಬುಲ್ಸ್, 2ನೇ ಅವಧಿಯ ಆಟದಲ್ಲೂ ಎರಡು ಬಾರಿ ಆಲೌಟ್ ಮಾಡಿತು. ಆ ಮೂಲಕ ಹಾಲಿ ಋತುವಿನಲ್ಲಿ ಡೆಲ್ಲಿ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಗೆದ್ದಂತಾಗಿದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ 3ನೇ ಸ್ಥಾನಿಯಾಗಿ ಬೆಂಗಳೂರು ಪ್ಲೇ ಆಫ್‌ಗೆ ಏರಿದ್ದರೆ, 6ನೇ ಸ್ಥಾನಿಯಾಗಿ ಡೆಲ್ಲಿ ಪ್ಲೇ ಆಫ್ ಹಂತಕ್ಕೇರಿತ್ತು. ಈ ಸೀಸನ್‌ನಲ್ಲಿ ಒಟ್ಟು 257 ರೈಡ್ ಪಾಯಿಂಟ್ ಸಂಪಾದನೆ ಮಾಡಿದ್ದ ಭರತ್ ಪ್ಲೇ ಆಫ್‌ನಲ್ಲಿ ಮತ್ತೊಮ್ಮೆ ತಂಡಕ್ಕೆ ಆಧಾರವಾದರು.
Pro Kabaddi League ಬೆಂಗಳೂರು ಬುಲ್ಸ್‌ಗೆ 3ನೇ ಸ್ಥಾನ ಖಚಿತ, ಪ್ಲೇ-ಆಫ್‌ಗೆ ತಲೈವಾಸ್ ಪ್ರವೇಶ
ಡಿಫೆಂಡಿಂಗ್ ವಿಭಾಗದಲ್ಲಿ ಪೊನ್‌ಪಾರ್ತಿಬನ್ ಹಾಗೂ ಸೌರಭ್ ನಂದಾಲ್ ಅದ್ಭುತ ನಿರ್ವಹಣೆ ನೀಡಿದರೆ, ರೈಡಿಂಗ್‌ನಲ್ಲಿ ಭರತ್ ಹಾಗೂ ವಿಕಾಸ್ ಖಂಡೋಲಾಗೆ ನೀರಜ್ ನರ್ವಾಲ್ ಕೂಡ ಸಾಥ್ ನೀಡಿದರು. ಇದರಿಂದಾಗಿ ಬೆಂಗಳೂರು ಬುಲ್ಸ್ ಸರಾಗವಾಗಿ 50 ಅಂಕಗಳ ಗಡಿ ದಾಟಿತು. ಇನ್ನು ದಬಾಂಗ್ ದೆಹಲಿ ಪರವಾಗಿ ಸ್ಟಾರ್ ರೈಡರ್ ನವೀನ್ ಕುಮಾರ್ ಸಂಪೂರ್ಣ ವೈಫಲ್ಯ ಕಂಡರು. 17 ಬಾರಿ ರೈಡ್‌ಗೆ ಇಳಿದಿದ್ದ ನವೀನ್ ಕುಮಾರ್ ಕೇವಲ 8 ಅಂಕ ಮಾತ್ರ ಸಂಪಾದನೆ ಮಾಡಿದರು. ಇದರಲ್ಲಿ ಐದು ರೈಡ್‌ಗಳು ವಿಫಲವಾಗಿದ್ದವು. ಇನ್ನೊಂದೆಡೆ ಆಲ್ರೌಂಡರ್ ವಿಜಯ್ ಮಲೀಕ್ 6 ಅಂಕ ಸಂಪಾದನೆ ಮಾಡಿದರು.
Pro Kabaddi League: ಬೆಂಗಳೂರು ಬುಲ್ಸ್‌ಗೆ ಪ್ಲೇ-ಆಫ್ ಪಂದ್ಯದಲ್ಲಿ ಡೆಲ್ಲಿ ಸವಾಲು
ಆ ಲೆಕ್ಕಾಚಾರದಲ್ಲಿ ನೋಡುವುದಾದರೆ, ಬೆಂಗಳೂರು ಬುಲ್ಸ್ ತಂಡ ಭರತ್ ಒಟ್ಟು 18 ರೈಡ್‌ಗೆ ಇಳಿದ್ದರು. ಇದರಲ್ಲಿ ಮೂರು ಬಾರಿ ಮಾತ್ರ ವಿಫಲರಾಗಿದ್ದರೆ, 12 ಬಾರಿ ಸಕ್ಸಸ್‌ಫುಲ್ ರೈಡ್ ಮಾಡಿದ್ದರು. ಇವರಿಗೆ ಸಾಥ್ ನೀಡಿದ ವಿಕಾಸ್ ಖಂಡೋಲಾ ಕೂಡ 18 ರೈಡ್‌ಗಳಲ್ಲಿ 13 ಅಂಕ ಸಂಪಾದನೆ ಮಾಡಿದರು. ವಿಕಾಸ್ ಖಂಡೋಲಾ ತಮ್ಮ ರೈಡಿಂಗ್‌ನಲ್ಲಿ ಒಮ್ಮೆಯೂ ಎದುರಾಳಿಗಳ ಡಿಫೆಂಡಿಂಗ್ ಟೀಮ್‌ಗೆ ಸಿಕ್ಕಿರಲಿಲ್ಲ.
ಸೇಡು ತೀರಿಸಿಕೊಂಡ ಬುಲ್ಸ್: ಮೊದಲ ಸೀಸನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಬೆಂಗಳೂರು ಬುಲ್ಸ್, 2ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. 2018ರಲ್ಲಿ ಬುಲ್ಸ್ ತಂಡ ಚಾಂಪಿಯನ್ ಆಗಿದ್ದರೆ, ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್‌ನಲ್ಲಿ ದಬಾಂಗ್ ಡೆಲ್ಲಿ ತಂಡದ ವಿರುದ್ಧವೇ 38-44 ರಿಂದ ಸೋಲು ಕಂಡಿತ್ತು. ಈಗ ಆ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.