Pro Kabaddi League: ಬೆಂಗಳೂರು ಬುಲ್ಸ್‌ಗೆ ಪ್ಲೇ-ಆಫ್ ಪಂದ್ಯದಲ್ಲಿ ಡೆಲ್ಲಿ ಸವಾಲು
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಾಯ
ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದ ಬೆಂಗಳೂರು ಬುಲ್ಸ್
ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಸವಾಲು
ಹೈದರಾಬಾದ್(ಡಿ.09): 9ನೇ ಆವೃತ್ತಿಯ ಪ್ರೊ ಕಬಡ್ಡಿ ಪ್ಲೇ ಆಫ್‌ಗೆ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಪ್ರವೇಶಿಸಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಸೆಣಸಲಿದೆ. ಮತ್ತೊಂದು ಎಲಿಮಿನೇಟರ್ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಯುಪಿ ಯೋಧಾಸ್ ತಂಡಗಳು ಮುಖಾಮುಖಿಯಾಗಲಿವೆ.
ಗುರುವಾರ ನಡೆದ ಬೆಂಗಾಲ್ ವಾರಿಯರ್ಸ್ ವಿರುದ್ದದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 46-46ರಲ್ಲಿ ಟೈ ಸಾಧಿಸಲು ಯಶಸ್ವಿಯಾಯಿತು. ಇದರೊಂದಿಗೆ ನವೀನ್ ಕುಮಾರ್ ನೇತೃತ್ವದ ದಬಾಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆರನೇ ತಂಡವಾಗಿ ಪ್ಲೇ ಆಫ್‌ಗೇರುವಲ್ಲಿ ಯಶಸ್ವಿಯಾಯಿತು. ಪ್ಲೇ ಆಫ್ ರೇಸ್‌ನಲ್ಲಿದ್ದ ಗುಜರಾತ್ ಜೈಂಟ್ಸ್, ಹರ್ಯಾಣ ಸ್ಟೀಲರ್ಸ್, ಬೆಂಗಾಲ್ ವಾರಿಯರ್ಸ್ ನಿರಾಸೆ ಅನುಭವಿಸಿದವು. ಇನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟಾನ್ ತಂಡಗಳು ಸೆಮಿಫೈನಲ್‌ಗೇರಿದವು.
Pro Kabaddi League ಬೆಂಗಳೂರು ಬುಲ್ಸ್‌ಗೆ 3ನೇ ಸ್ಥಾನ ಖಚಿತ, ಪ್ಲೇ-ಆಫ್‌ಗೆ ತಲೈವಾಸ್ ಪ್ರವೇಶ
2022ನೇ ಸಾಲಿನ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಲೀಗ್ ಹಂತ ಮುಕ್ತಾಯದ ವೇಳೆಗೆ 15 ಗೆಲುವುಗಳ ಸಹಿತ 79 ಅಂಕಗಳೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಮೊದಲ ಸ್ಥಾನ ಪಡೆದರೆ, ಪುಣೇರಿ ಪಲ್ಟಾನ್ 14 ಗೆಲುವು ಹಾಗೂ 2 ಟೈಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಇನ್ನು ಬೆಂಗಳೂರು ಬುಲ್ಸ್, ಯುಪಿ ಯೋಧಾಸ್, ತಮಿಳ್ ತಲೈವಾಸ್ ಹಾಗೂ ದಬಾಂಗ್ ಡೆಲ್ಲಿ ಕ್ರಮವಾಗಿ ಮೊದಲ 6 ಸ್ಥಾನ ಪಡೆದಿವೆ.
ಬ್ಯಾಡ್ಮಿಂಟನ್ ವಿಶ್ವ ಟೂರ್: ಪ್ರಣಯ್‌ಗೆ 2ನೇ ಸೋಲು
ಬ್ಯಾಂಕಾಕ್: ಭಾರತದ ಎಚ್.ಎಸ್.ಪ್ರಣಯ್ ಋುತು ಅಂತ್ಯದ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಚೀನಾದ ಲು ಗುವಾಂಗ್ ಝು ವಿರುದ್ಧ 21-23, 21-17, 19-21 ಗೇಮ್‌ಗಳಲ್ಲಿ ಸೋತರು. ಮೊದಲ ಪಂದ್ಯದಲ್ಲೂ ಪ್ರಯಣ್ ಸೋಲುಂಡಿದ್ದರು.
ವಿಶ್ವಕಪ್ ಸೋಲು: ಸ್ಪೇನ್ ಕೋಚ್ ಎನ್ರಿಕೆ ತಲೆದಂಡ!
ದೋಹಾ: ವಿಶ್ವಕಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕ್ಕೊ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಬೆನ್ನಲ್ಲೇ ಸ್ಪೇನ್ ತಂಡದ ಪ್ರಧಾನ ಕೋಚ್ ಲೂಯಿಸ್ ಎನ್ರಿಕೆ ತಲೆದಂಡವಾಗಿದೆ. ಎನ್ರಿಕೆ ಬದಲು 61 ವರ್ಷದ ಡೆ ಲಾ ಫ್ಯುಯೆಂಟೆ ಅವರನ್ನು ಕೋಚ್ ಆಗಿ ನೇಮಿಸಲಾಗಿದೆ. ಫ್ಯುಯೆಂಟೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ಬೆಳ್ಳಿ ಪದಕ ಗೆದ್ದಾಗ ತಂಡದ ಕೋಚ್ ಆಗಿದ್ದರು.
ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಹಜಾರ್ಡ್ ಗುಡ್‌ಬೈ!
ಬ್ರಸ್ಸೆಲ್ಸ್: ವಿಶ್ವಕಪ್ ಗುಂಪು ಹಂತದಲ್ಲೇ ತಮ್ಮ ತಂಡ ಹೊರಬಿದ್ದ ಪರಿಣಾಮ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ಬೆಲ್ಜಿಯಂನ ತಾರಾ ಆಟಗಾರ ಏಡನ್ ಹಜಾರ್ಡ್ ನಿವೃತ್ತಿ ಪಡೆದಿದ್ದಾರೆ. ಹಜಾರ್ಡ್ 2008ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 31ನೇ ವಯಸ್ಸಿಗೇ ನಿವೃತ್ತಿ ಪಡೆದಿರುವ ಅವರು ಬೆಲ್ಜಿಯಂ ಪರ 126 ಪಂದ್ಯಗಳನ್ನಾಡಿ 33 ಗೋಲುಗಳನ್ನು ಬಾರಿಸಿದ್ದಾರೆ. ತಮ್ಮ ನಿವೃತ್ತಿ ನಿರ್ಧಾರವನ್ನು ಹಜಾರ್ಡ್ ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದರು. ಕ್ಲಬ್ ಫುಟ್ಬಾಲ್‌ನಲ್ಲಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.