ಬೆಂಗಳೂರು[ಅ.27]: ಕ್ರಿಕೆಟ್‌ನ ನಂತರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಪ್ರೊ ಕಬಡ್ಡಿ ಪಂದ್ಯಾವಳಿಯ ಮೊದಲ ನಾಲ್ಕು ಆವೃತ್ತಿಗಳ ಬೆಂಗಳೂರು ಚರಣದ ಪಂದ್ಯಗಳು ಯಾವುದೇ ಅಡೆತಡೆ ಇಲ್ಲದೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಆಗಿದ್ದರೂ, ಕಳೆದ ಹಾಗೂ ಈ ಬಾರಿ ಬೆಂಗಳೂರಿನಿಂದ ಎತ್ತಂಗಡಿಯಾಗಲು ಏನು ಕಾರಣ ಎಂಬುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ಇದನ್ನು ಓದಿ: ಬೆಂಗಳೂರು ಪ್ರೊ ಕಬಡ್ಡಿ ಪುಣೆಗೆ ಹೋಯ್ತು..!

ಕಳೆದ ಬಾರಿ ಕಡೇ ಕ್ಷಣದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರು ಬುಲ್ಸ್ ತಂಡ, ಈ ಬಾರಿ ಬಹಳ ಮುಂಚಿತವಾಗಿಯೇ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಕೋರಿ ಕ್ರೀಡಾ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ಆದರೆ, ಒಂದು ಬಾರಿಯಲ್ಲ, ಎರಡು ಬಾರಿ ಕೋರಿದರೂ ಸರ್ಕಾರದಿಂದ ಹಸಿರು ನಿಶಾನೆ ದೊರೆಯಲೇ ಇಲ್ಲ. ಪದೇ ಪದೇ ವಿಚಾರಿಸಿದರೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಸೂಕ್ತ ಭರವಸೆ ನೀಡಿಲ್ಲ. ಇನ್ನು ಆಗುವುದೇ ಇಲ್ಲ ಎಂಬಂತಹ ಸ್ಥಿತಿ ತಲುಪಿದಾಗ ದಿಕ್ಕೆಟ್ಟ ಬೆಂಗಳೂರು ಬುಲ್ಸ್ ತಂಡದ ಮಾಲಿಕರು ಬೆಂಗಳೂರು ಚರಣವನ್ನು ಪುಣೆಗೆ ಸ್ಥಳಾಂತರ ಮಾಡಿದ್ದಾರೆ. ಇದಾಗುತ್ತಿದ್ದಂತೆಯೇ ಕ್ರೀಡಾ ಇಲಾಖೆ ಅಧಿಕಾರಿಗಳು ‘ನಾವು ಅನುಮತಿ ಕೊಟ್ಟಿದ್ದೇವೆ, ಅವರು ಸಂಪರ್ಕಿಸಿಯೇ ಇಲ್ಲ’ ಎಂದು ವಿವಾದಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ಒಟ್ಟಾರೆಯಾಗಿ, ರಾಜ್ಯ ಕ್ರೀಡಾ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯೇ ಬೆಂಗಳೂರಿಂದ ಕಬಡ್ಡಿ ಹೊರಹೋಗಲು ಪ್ರಮುಖ ಕಾರಣ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಇದನ್ನು ಓದಿ: ಕೈತಪ್ಪಿದ ಅವಕಾಶ: ಕರ್ನಾಟಕ ಸರ್ಕಾರದ ವಿರುದ್ಧ ಬುಲ್ಸ್ ತಂಡ ಸಿಡಿಮಿಡಿ..!

ಜುಲೈನಲ್ಲೇ ಅರ್ಜಿ: ಬೆಂಗಳೂರು ಬುಲ್ಸ್ ತಂಡದ ಮೂಲಗಳು ‘ಕನ್ನಡಪ್ರಭ’ಕ್ಕೆ ನೀಡಿದ ಮಾಹಿತಿ ಪ್ರಕಾರ, ಜುಲೈ 19ರಂದೇ ಕ್ರೀಡಾ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರವರಿಗೆ ಪತ್ರದ ಮೂಲಕ ಆಯೋಜನೆಗೆ ಅನುಮಿತಿ ನೀಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಅರ್ಜಿ ಪರಿಶೀಲಿಸಿ ಆಗಸ್ಟ್ 1ರಂದು ಸಚಿವರು ಸಂಬಂಧಪಟ್ಟ ಇಲಾಖೆಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. ಆದರೆ ಈ ಪತ್ರ ತಲುಪಬೇಕಾದವರಿಗೆ ತಲುಪಲೇ ಇಲ್ಲ. ತಲುಪದಂತೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಆರೋಪವೂ ಇದೆ.

ಅ.3ಕ್ಕೆ ಮತ್ತೆ ಅರ್ಜಿ: ಈ ಮಧ್ಯೆ, ಆಗಸ್ಟ್ 22ರಂದು ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಯಿತು. ಅದರ ಪ್ರಕಾರ ನವೆಂಬರ್ 23ರಿಂದ 29ರವರೆಗೆ ಬೆಂಗಳೂರು ಚರಣದ ಪಂದ್ಯಗಳು ನಿಗದಿಯಾಗಿತ್ತು. ಅದಾಗಿ ಒಂದು ತಿಂಗಳು ಕಳೆದರೂ, ಕಂಠೀರವದಲ್ಲಿ ಆಯೋಜಿಸಲು ಅನುಮತಿ ಸಿಗುವ ಬಗ್ಗೆ ಕ್ರೀಡಾ ಇಲಾಖೆಯಿಂದ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಹಲವು ಬಾರಿ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತವೆ ಬೆಂಗಳೂರು ಬುಲ್ಸ್ ತಂಡದ ಮೂಲಗಳು.

ಈ ಕಾರಣಕ್ಕಾಗಿ ಅ.3ರಂದು ಬೆಂಗಳೂರು ಬುಲ್ಸ್ 2ನೇ ಬಾರಿಗೆ ಕ್ರೀಡಾಂಗಣವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅ.14ರಂದು ರಾಜ್ಯದ ಪ್ರಭಾವಿ ಸಚಿವರೊಬ್ಬರಿಗೆ ಮನವಿ ಮಾಡಿ, ಅವರೂ ಪ್ರೊ ಕಬಡ್ಡಿ ಆಯೋಜನೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಆದರೆ, ಕ್ರೀಡಾ ಇಲಾಖೆಯ ಅಧಿಕಾರಿಗಳು ಇದಕ್ಕೂ ಕವಡೆ ಕಿಮ್ಮತ್ತು ನೀಡಿಲ್ಲ ಎಂದು ಬುಲ್ಸ್ ಮೂಲಗಳಿಂದ ತಿಳಿದು ಬಂದಿದೆ. ಇಷ್ಟು ಸಾಲದು ಎಂಬಂತೆ ಪದೇ ಪದೇ ಕ್ರೀಡಾ ಇಲಾಖೆಯ ನಿರ್ದೇಶಕರು ಬದಲಾಗಿದ್ದಾರೆ. ಇದರಿಂದಾಗಿ ಗೊಂದಲ ಹೆಚ್ಚಿದೆ. ‘ನಿರ್ದೇಶಕರು ಬದಲಾಗಿದ್ದಾರೆ, ಕೆಲ ದಿನಗಳ ಕಾಲ ಬಿಟ್ಟು ಸಂಪರ್ಕಿಸಿ’ ಎಂದು ಅಧಿಕಾರಿಗಳು ಸೂಚಿಸಿದ್ದಾಗಿ ಬುಲ್ಸ್ ತಂಡದ ಮೂಲಗಳು ತಿಳಿಸಿವೆ. ಹೊಸ ನಿರ್ದೇಶಕರು ಅರ್ಜಿ ಕೈಗೆತ್ತಿಕೊಂಡು ಪರಿಶೀಲಿಸಿ ಅನುಮತಿ ನೀಡುವಷ್ಟರಲ್ಲಿ ಮತ್ತೊಬ್ಬರು ನಿಯೋಜನೆ ಗೊಂಡಿದ್ದು, ಅನುಮತಿ ಮತ್ತಷ್ಟು ವಿಳಂಬಗೊಳ್ಳಲು ಕಾರಣವಾಗಿದೆ.

ಇಷ್ಟೆಲ್ಲ ಆಗಿ, ಪಂದ್ಯಗಳಿಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದ ಕಾರಣ, ಅ.24ರಂದು ಬೆಂಗಳೂರು ಬುಲ್ಸ್ ತನ್ನ ತವರಿನ ಚರಣವನ್ನು ಪುಣೆಗೆ ಸ್ಥಳಾಂತರಗೊಳಿಸಲು ನಿರ್ಧರಿಸಿತು. ಇದೀಗ ಕ್ರೀಡಾ ಇಲಾಖೆ, ಬೆಂಗಳೂರಿನಲ್ಲಿ ಆಯೋಜಿಸಲು ಷರತ್ತಿನ ಅನುಮತಿ ನೀಡುವುದಾಗಿ ತಿಳಿಸಿದೆ. ಆದರೆ, ಈಗಾಗಲೇ ಪುಣೆಗೆ ಸ್ಥಳಾಂತರಗೊಂಡು ಸಿದ್ಧತೆಗಳು ನಡೆದಿರುವುದರಿಂದ ಈ ಬಾರಿಯಬೆಂಗಳೂರು ಚರಣ ಮತ್ತೆ ತವರಿಗೆ ವರ್ಗಾವಣೆ ಮಾಡುವುದು ಅಸಾಧ್ಯ ಎಂದು ಬುಲ್ಸ್ ತಂಡ ಸ್ಪಷ್ಟಪಡಿಸಿದೆ. ‘ಕ್ರೀಡಾ ಇಲಾಖೆ ನಿರ್ಧಾರವನ್ನು ಗೌರವಿಸುತ್ತೇವೆ, ಆದರೆ ಪುಣೆಯಿಂದ ಬೆಂಗಳೂರಿಗೆ ಮತ್ತೆ ಸ್ಥಳಾಂತರ ಮಾಡಲು ಕಷ್ಟ. ಅಗತ್ಯ ಸಿದ್ಧತೆ ಈಗಾಗಲೇ ಆಗಿದೆ’ ಎಂದು ಬುಲ್ಸ್ ಅಧಿಕಾರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಮ್ಮನ್ನು ಬುಲ್ಸ್ ಸಂಪರ್ಕಿಸಿಲ್ಲ:

ರಾಜ್ಯ ಕ್ರೀಡಾ ಇಲಾಖೆ ಬೆಂಗಳೂರು ಬುಲ್ಸ್ ಜುಲೈನಲ್ಲೇ ಅರ್ಜಿ ಸಲ್ಲಿಸಿದ್ದರೂ, ಆಗ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎನ್ನುವ ವಾದವನ್ನು ರಾಜ್ಯ ಕ್ರೀಡಾ ಇಲಾಖೆ ಮುಂದುವರಿಸಿದೆ.
ಈ ಕುರಿತು ‘ಕನ್ನಡಪ್ರಭ’ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ‘ಅ.5ರಂದು ಅರ್ಜಿ ನಮ್ಮ ಕೈತಲುಪಿತು. ಕ್ರೀಡಾ ಇಲಾಖೆಯ ಪೂರ್ವ ನಿಯೋಜಿತ ಕಾರ್ಯಕ್ರಮಗಳ ನಡುವೆಯೂ ಕೇವಲ ಹದಿನೇಳೇ ದಿನಗಳಲ್ಲಿ ಅವರಿಗೆ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿದ್ದೇವೆ’ ಎಂದರು.

3 ತಿಂಗಳು ಮೊದಲೇ ಕಾಯ್ದಿರಿಸಬೇಕಿಲ್ಲ

ಕಂಠೀರವ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಿದ್ದರೆ 3 ತಿಂಗಳು ಮುಂಚಿತವಾಗಿಯೇ ಅನುಮತಿ ಪಡೆಯಬೇಕು ಎನ್ನುವ ಕೆಲ ವರದಿಗಳನ್ನು ಜಿತೇಂದ್ರ ಶೆಟ್ಟಿ ನಿರಾಕರಿಸಿದ್ದಾರೆ. ‘ಈ ರೀತಿ ಯಾವುದೇ ನಿಯಮಗಳಿಲ್ಲ. ಕಾರ್ಯಕ್ರಮಕ್ಕೆ 3 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು. ಮುಂಚಿತವಾಗಿಯೇ ಅನುಮತಿ ನೀಡಿ, ಬಳಿಕ ಅದಕ್ಕಿಂತ ಹೆಚ್ಚಿನ ಆದ್ಯತೆಯುಳ್ಳ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಬೇಕಾದ ಪರಿಸ್ಥಿತಿ ಎದುರಾದರೆ ಅನುಮತಿ ರದ್ದುಗೊಳಿಸಲು ಸಾಧ್ಯವಿಲ್ಲ. 3 ತಿಂಗಳು ಮುಂಚಿತವಾಗಿಯೇ ಕ್ರೀಡಾಂಗಣ ಕಾಯ್ದಿರಿಸಬೇಕು ಎನ್ನುವ ವರದಿ ಸುಳ್ಳು’ ಎಂದು ಜಿತೇಂದ್ರ ಶೆಟ್ಟಿ ಹೇಳಿದ್ದಾರೆ.

- ಕನ್ನಡಪ್ರಭ ವಿಶೇಷ ವರದಿ