ಬೆಂಗಳೂರು(ಅ.25): ಪ್ರೊ ಕಬಡ್ಡಿ 6ನೇ ಆವೃತ್ತಿಯ ಬೆಂಗಳೂರು ಚರಣ ನಿರೀಕ್ಷೆಯಂತೆ ಪುಣೆಗೆ ಸ್ಥಳಾಂತರವಾಗಿದೆ. ರಾಜ್ಯ ರಾಜಧಾನಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಆಯೋಜಿಸಲು ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಇನ್ನೂ ಅನುಮತಿ ನೀಡದ ಕಾರಣ ಬೆಂಗಳೂರು ಚರಣವನ್ನು ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಲು ಪ್ರೊ ಕಬಡ್ಡಿ ಲೀಗ್ ನಿರ್ಧರಿಸಿದೆ. ಹೀಗಾಗಿ, ನ.23ರಿಂದ ನ.29ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರೊ ಕಬಡ್ಡಿ ಪಂದ್ಯಗಳು ಅದೇ ದಿನಾಂಕಗಳಂದು ಪುಣೆಯಲ್ಲಿ ನಡೆಯಲಿವೆ.

ಮೊದಲ 4 ಆವೃತ್ತಿಗಳ ಸಂದರ್ಭದಲ್ಲಿ ಬೆಂಗಳೂರು ಚರಣ ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ, ಕಳೆದ ವರ್ಷ ಪ್ರೊ ಕಬಡ್ಡಿ 5ನೇ ಆವೃತ್ತಿ ಸಂದರ್ಭ ಕಂಠೀರವದಲ್ಲಿ ಬೆಂಗಳೂರು ಚರಣ ಆಯೋಜಿಸಲು ಅವಕಾಶ ಸಿಗದೆ, ಕಡೇ ಕ್ಷಣದಲ್ಲಿ ಮಹಾರಾಷ್ಟ್ರದ ನಾಗಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ 6ನೇ ಆವೃತ್ತಿಯ ಬೆಂಗಳೂರು ಚರಣವೂ ಮಹಾರಾಷ್ಟ್ರಕ್ಕೆ ವರ್ಗಾವಣೆ ಯಾಗುವುದರೊಂದಿಗೆ ಸತತ ಎರಡನೇ ವರ್ಷವೂ ಬೆಂಗಳೂರು ಹಾಗೂ ಇಲ್ಲಿನ ಕ್ರೀಡಾಭಿಮಾನಿಗಳು ಪ್ರೊ ಕಬಡ್ಡಿ ರಸದೌತಣದಿಂದ ವಂಚಿತರಾದಂತಾಗಿದೆ.

ಷರತ್ತಿಗೆ ಒಪ್ಪಿದರೂ ಕಿಮ್ಮತ್ತಿಲ್ಲ: 
ಕಂಠೀರವ ಕ್ರೀಡಾಂಗಣದಲ್ಲಿ ಕಬಡ್ಡಿ ಆಯೋಜಿಸಲು ಬೆಂಗಳೂರು ಬುಲ್ಸ್ ತಂಡ 2 ತಿಂಗಳು ಹಿಂದೆಯೇ ಅನುಮತಿ ಕೋರಿತ್ತು. ಇದಕ್ಕೆ ಪ್ರತಿಯಾಗಿ ಕ್ರೀಡಾ ಇಲಾಖೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿತ್ತು. ಲೈಟ್ ಹಾಕದಿರುವುದು, ಕ್ಯಾಮರಾ ಅಳವಡಿಸದಿರುವುದು ಸೇರಿದಂತೆ ಕೆಲವು ಪಾಲಿಸಲು ಸಾಧ್ಯವಿಲ್ಲದಂತಹ ಷರತ್ತುಗಳನ್ನು ಹಾಕಿತ್ತು. ಆದರೆ, ಬಹುತೇಕ ಷರತ್ತುಗಳನ್ನು ಬುಲ್ಸ್ ಆಡಳಿತ ಒಪ್ಪಿಕೊಂಡಿತ್ತು. ಈ ಬಗ್ಗೆ ‘ಕನ್ನಡಪ್ರಭ’ ಹಿಂದೆ ಕ್ರೀಡಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಪ್ರೊ ಕಬಡ್ಡಿ ಆಯೋಜಕರಿಂದ ಮನವಿಯೇ ಬಂದಿಲ್ಲ. ಕೋರಿಕೆ ಸಲ್ಲಿಸಿದರೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ವತಃ ಕ್ರೀಡಾ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅವರೇ ಭರವಸೆ ಇತ್ತಿದ್ದರು. ಆದರೆ, ಸ್ವತಃ ಉಪಮುಖ್ಯಮಂತ್ರಿಯ ಮಾತಿಗೇ ಕ್ರೀಡಾ ಇಲಾಖೆ ಸೊಪ್ಪು ಹಾಕಿಲ್ಲ. ಪ್ರೊ ಕಬಡ್ಡಿ ಆಯೋಜನೆಗೆ ಅನುಮತಿಯೇ ಸಿಕ್ಕಿಲ್ಲ. ಪರಿಣಾಮವಾಗಿ, ಸತತ 2ನೇ ಬಾರಿಗೆ ದೇಸೀ ಕ್ರೀಡೆಯ ಮನರಂಜನೆಯಿಂದ ಬೆಂಗಳೂರಿನ ಕಬಡ್ಡಿ ಪ್ರೇಮಿಗಳು ವಂಚಿತರಾಗಿದ್ದಾರೆ.

ನಿರಾಕರಿಸಲು ಕಾರಣವೇ ಇಲ್ಲ!:
ಬೆಂಗಳೂರಲ್ಲಿ ಕಬಡ್ಡಿಗೆ ಕಂಠೀರವ ಕ್ರೀಡಾಂಗಣವೇ ಬೇಕು ಎಂದು ಕೇಳಿದ್ದೆವು. ಕಳೆದ ವರ್ಷ ಬೆಂಗಳೂರಿನ ಚರಣ ಇದ್ದ ವೇಳೆಯಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಯಾವುದೋ ಟೂರ್ನಿ  ಆಯೋಜನೆಗೊಂಡಿತ್ತು. ಇದರ ನೆಪವೊಡ್ಡಿ ಆತಿಥ್ಯ ನೀಡಲಾಗಿರಲಿಲ್ಲ. ಆದರೆ ಈ ಬಾರಿ ಪ್ರೊ ಕಬಡ್ಡಿ ಆಯೋಜಿಸಲಾಗುತ್ತಿರುವ ದಿನಾಂಕಗಳಲ್ಲಿ ಯಾವ ಟೂರ್ನಿಯೂ ಇಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಕಬಡ್ಡಿ ಆತಿಥ್ಯಕ್ಕೆ ಅವಕಾಶ ನೀಡಬಹುದಾಗಿತ್ತು. ಕಬಡ್ಡಿ ಆಯೋಜನೆ ವೇಳೆ ಕ್ರೀಡಾಂಗಣಕ್ಕೆ ಯಾವುದೇ ಹಾನಿ ಉಂಟಾಗಿದ್ದರೂ ಅದನ್ನು ಬೆಂಗಳೂರು ಬುಲ್ಸ್ ಭರಿಸುತ್ತಿತ್ತು. ನಿಖರ ಕಾರಣ ಇಲ್ಲದೆ ಕ್ರೀಡಾಂಗಣದ ಆತಿಥ್ಯ ನಿರಾಕರಿಸಿರುವುದು ಬೇಸರ ತಂದಿದೆ. ಒಂದೊಮ್ಮೆ ಕಬಡ್ಡಿಗೆ ಆತಿಥ್ಯ ಸಿಕ್ಕಿದ್ದರೆ ಖುಷಿಯಾಗುತ್ತಿತ್ತು. ಕ್ರೀಡಾಭಿಮಾನಿಗಳಿಗೆ, ಕಬಡ್ಡಿ ಆಟಗಾರರಿಗೆ, ಹಿರಿಯ ಆಟಗಾರರಿಗೆ ಮತ್ತು ನಮ್ಮ ಕ್ರೀಡೆಗೆ ರಾಜ್ಯ ಸರ್ಕಾರ ಕೊಟ್ಟಂತಹ ಪ್ರೋತ್ಸಾಹವಾಗುತ್ತಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯದ ಮಾಜಿ ಕಬಡ್ಡಿ ಆಟಗಾರರು ಹೇಳುತ್ತಾರೆ.

ವರದಿ: ಸ್ಪಂದನ್ ಕಣಿಯಾರ್, ಧನಂಜಯ್ ಎಸ್. ಹಕಾರಿ, ಕನ್ನಡಪ್ರಭ