11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನಲ್ಲಿ ಸಚಿನ್‌ಗೆ ಜಾಕ್‌ಪಾಟ್ ಹೊಡೆದಿದೆ. ಇನ್ನು ಬೆಂಗಳೂರು ಬುಲ್ಸ್ ತಂಡವು ಸ್ಟಾರ್ ಆಟಗಾರನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮುಂಬೈ: ತಾರಾ ರೈಡರ್ ಸಚಿನ್ ತನ್ವಾರ್ ಪ್ರೊ ಕಬಡ್ಡಿ ಇತಿಹಾಸದಲ್ಲೇ 11ನೇ ಅತಿ ದುಬಾರಿ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಗುರುವಾರ 11ನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜಿನಲ್ಲಿ 25 ವರ್ಷದ ಸಚಿನ್‌ರನ್ನು ತಮಿಳ್ ತಲೈವಾಸ್ ತಂಡ ಬರೋಬ್ಬರಿ 2.15 ಕೋಟಿ ರು. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು. ಇನ್ನು ಬೆಂಗಳೂರು ಬುಲ್ಸ್ ತಂಡವು ತಾರಾ ರೈಡರ್ ಅಜಿಂಕ್ಯ ಪವಾರ್ ಅವರನ್ನು 1.10 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಇದಷ್ಟೇ ಅಲ್ಲದೇ ಡುಬ್ಕಿ ಸ್ಪೆಷಲಿಸ್ಟ್ ಪ್ರದೀಪ್ ನರ್ವಾಲ್ ಅವರನ್ನು 70 ಲಕ್ಷ ರುಪಾಯಿಗೆ ಬೆಂಗಳೂರು ಬುಲ್ಸ್ ಪಾಲಾದರು. ಪ್ರದೀಪ್ ನರ್ವಾಲ್, ಬೆಂಗಳೂರು ಬುಲ್ಸ್ ತಂಡದ ಮೂಲಕವೇ ಪ್ರೊ ಕಬಡ್ಡಿಗೆ ಕಾಲಿಟ್ಟಿದ್ದರು.
ಕಳೆದ ವರ್ಷ ಪವನ್ ಶೆರಾವತ್‌ರನ್ನು ತೆಲುಗು ಟೈಟಾನ್ಸ್ ತಂಡ 2.6 ಕೋಟಿ ರು. ನೀಡಿ ಖರೀದಿಸಿತ್ತು. ಪ್ರೊ ಕಬಡ್ಡಿಯ ದುಬಾರಿ ಆಟಗಾರ ಎನಿಸಿಕೊಂಡಿರುವ ಪವನ್‌ರನ್ನು ಈ ಬಾರಿ ಟೈಟಾನ್ಸ್ ತಂಡ ಹರಾಜಿಗೂ ಮುನ್ನ ಕೈಬಿಟ್ಟಿತ್ತು. ಆದರೆ ಹರಾಜಿನಲ್ಲಿ ಅವರನ್ನು ಟೈಟಾನ್ಸ್ ತಂಡ ಎಫ್‌ಬಿಎಂ(ಫೈನಲ್ ಬಿಡ್ ಮ್ಯಾಚ್) ಕಾರ್ಡ್ ಬಳಸಿ ತನ್ನಲ್ಲೇ ಉಳಿಸಿಕೊಂಡಿತು. ಅವರು ಈ ಬಾರಿ ₹1.725 ಕೋಟಿಗೆ ಬಿಕರಿಯಾದರು.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಅಥ್ಲೀಟ್ಸ್ ಚಾಂಪಿಯನ್: ಪ್ರಧಾನಿ ಮೋದಿ ಬಣ್ಣನೆ
ಇದೇ ವೇಳೆ ಇರಾನ್‌ನ ತಾರಾ ಆಲ್ರೌಂಡರ್ ಮೊಹಮದ್ ರೆಜಾ ಶಾದ್ಲೂ 2.07 ಕೋಟಿ ರು.ಗೆ ಹರ್ಯಾಣ ಸ್ಟೀಲರ್ಸ್ ಪಾಲಾದರು. ಕಳೆದ ವರ್ಷ ಅವರನ್ನು ಪುಣೇರಿ ಪಲ್ಟನ್ ತಂಡ ₹2.35 ಕೋಟಿ ರು. ನೀಡಿ ಖರೀದಿಸಿತ್ತು. ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ತಂಡ ಅವರನ್ನು ಹರಾಜಿಗೂ ಮುನ್ನ ಕೈಬಿಟ್ಟಿತ್ತು.
ಇನ್ನು, ತಾರಾ ರೈಡರ್ ಗುಮಾನ್ ಸಿಂಗ್ ಗುಜರಾತ್ ಜೈಂಟ್ಸ್ ತಂಡಕ್ಕೆ 1.97 ಕೋಟಿಗೆ ಹರಾಜಾದರೆ, ಕಳೆದ ಕೆಲ ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್‌ನ ಪ್ರಮುಖ ಆಟಗಾರನಾಗಿದ್ದ ಭರತ್ ಹೂಡಾ ಅವರನ್ನು ಯುಪಿ ಯೋಧಾಸ್ ತಂಡ 1.30 ಕೋಟಿ ರು. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.
ಇಂದು, ನಾಳೆ ಪ್ರೊ ಕಬಡ್ಡಿ ಆಟಗಾರರ ಹರಾಜು: ಪವನ್, ಭರತ್ ಆಕರ್ಷಣೆ
ಮಣೀಂದರ್ ಸಿಂಗ್(1.15 ಕೋಟಿ ರು.)ರನ್ನು ಬೆಂಗಾಲ್ ವಾರಿಯರ್ಸ್ ತಂಡ ಫೈನಲ್ ಬಿಡ್ ಮ್ಯಾಚ್ ಕಾರ್ಡ್ ಬಳಸಿ ತನ್ನಲ್ಲೇ ಉಳಿಸಿಕೊಂಡಿತು.
ಡಿಫೆಂಡರ್‌ಗಳಾದ ಸುನಿಲ್ ಕುಮಾರ್ ₹1.015 ಕೋಟಿಗೆ ಯು ಮುಂಬಾ ಪಾಲಾದರೆ, ಕೃಷನ್ ತೆಲುಗು ಟೈಟಾನ್ಸ್‌ಗೆ ₹70 ಲಕ್ಷಕ್ಕೆ, ಫಜಲ್ ಅಟ್ರಾಚಲಿ ₹50 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್‌ಗೆ ಬಿಕರಿಯಾದರು.
ಟಾಪ್-5 ದುಬಾರಿ ಆಟಗಾರರು
ಆಟಗಾರ ಮೊತ್ತ(ಕೋಟಿ ರು.ಗಳಲ್ಲಿ) ತಂಡ
ಸಚಿನ್ 2.15 ತಲೈವಾಸ್
ಶಾದ್ಲೂ 2.07 ಹರ್ಯಾಣ
ಗುಮಾನ್ 1.97 ಗುಜರಾತ್
ಪವನ್ 1.72 ಟೈಟಾನ್ಸ್
ಭರತ್ 1.30 ಯುಪಿ
