Doping Test: ಡಿಸ್ಕಸ್ ಥ್ರೋ ಪಟು ಕಮಲ್‌ಪ್ರೀತ್ ಕೌರ್ 3 ವರ್ಷ ಬ್ಯಾನ್
ಡಿಸ್ಕಸ್ ಥ್ರೋ ಪಟು ಕಮಲ್‌ಪ್ರೀತ್ ಕೌರ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ
ಕಮಲ್‌ಪ್ರೀತ್ ಕೌರ್ ನಿಷೇಧಿತ ಸ್ಟ್ಯಾನೊಜೊಲೊಲ್ ಪದಾರ್ಥ ಸೇವಿಸಿರುವುದು ದೃಢ
ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಮಗ್ರತೆ ಘಟಕದಿಂದ ಕಮಲ್‌ಪ್ರೀತ್‌ಗೆ 3 ವರ್ಷನಿಷೇಧ
ನವದೆಹಲಿ(ಅ.13): ಭಾರತದ ಅಗ್ರ ಡಿಸ್ಕಸ್ ಥ್ರೋ ಪಟು ಕಮಲ್‌ಪ್ರೀತ್ ಕೌರ್ ನಿಷೇಧಿತ ಸ್ಟ್ಯಾನೊಜೊಲೊಲ್ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಮಗ್ರತೆ ಘಟಕ(ಎಐಯು) 3 ವರ್ಷ ನಿಷೇಧ ಹೇರಿದೆ. ಅವರ ನಿಷೇಧ ಅವಧಿಯನ್ನು ಮಾ.29, 2022ರಿಂದ ಪರಿಗಣಿಸಲಾಗುತ್ತದೆ.
ಮಾರ್ಚ್ 7ರಂದು ಪಟಿಯಾಲಾದಲ್ಲಿ ಸಂಗ್ರಹಿಸಿದ್ದ ಮಾದರಿಯಲ್ಲಿ ಸ್ಟೆರಾಯ್ಡ್ ಪತ್ತೆಯಾದ ಬಳಿಕ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಕಮಲ್‌ಪ್ರೀತ್ ಕೌರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿ 6ನೇ ಸ್ಥಾನ ಪಡೆದಿದ್ದರು. ಅದಕ್ಕೂ ಮುನ್ನ 65.06 ಮೀ. ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದರು.
ಛತ್ತೀಸ್‌ಗಢ: ಪಂದ್ಯದ ವೇಳೆ ಕಬಡ್ಡಿ ಪಟು ಸಾವು!
ರಾಯ್‌ಗಢ: 32 ವರ್ಷದ ಕಬಡ್ಡಿ ಆಟಗಾರ ತಾಂಡಾರಾಮ್ ಇಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಪಂದ್ಯಾವಳಿ ವೇಳೆ ಅಂಕಣದಲ್ಲೇ ಕುಸಿದು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆ ಮಾರ್ಗದಲ್ಲಿ ಪ್ರಾಣ ಬಿಟ್ಟರು. ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜೋಕೋ ವೀಸಾಗೆ ಲಾಬಿ ನಡೆಸಲ್ಲ: ಆಸ್ಪ್ರೇಲಿಯಾ
ಮೆಲ್ಬರ್ನ್: ಮಾಜಿ ವಿಶ್ವ ನಂ.1 ನೋವಾಕ್ ಜೋಕೋವಿಚ್ 2023ರ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲೂ ಆಡುವುದು ಅನುಮಾನವೆನಿಸಿದೆ. ಬುಧವಾರ ಟೂರ್ನಿಯ ಪ್ರಚಾರ ಕಾರ‍್ಯಕ್ರಮವನ್ನು ಆರಂಭಿಸಿದ ಟೆನಿಸ್ ಆಸ್ಪ್ರೇಲಿಯಾ ಜೋಕೋವಿಚ್‌ರ ವೀಸಾಗೆ ಲಾಬಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ‘ಜೋಕೋ ಟೂರ್ನಿಯಲ್ಲಿ ಆಡಲು ಇಚ್ಛಿಸಿ ಅವರಿಗೆ ಆಸ್ಪ್ರೇಲಿಯಾ ಸರ್ಕಾರ ವೀಸಾ ನೀಡಿದರೆ ಸಂತೋಷ’ ಎಂದು ಟೆನಿಸ್ ಆಸ್ಪ್ರೇಲಿಯಾ ಮುಖ್ಯಸ್ಥ ಕ್ರೇಗ್ ಟೈಲಿ ಹೇಳಿದ್ದಾರೆ.
ಐಎಸ್‌ಎಲ್: ಗೋವಾಗೆ ಜಯ
ಕೋಲ್ಕತಾ: 9ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಎಫ್‌ಸಿ ಗೋವಾ ಗೆಲುವಿನ ಆರಂಭ ಪಡೆದಿದೆ. ಬುಧವಾರ ಈಸ್ಟ್ ಬೆಂಗಾಲ್ ವಿರುದ್ಧ 2-1 ಗೋಲುಗಳಲ್ಲಿ ಜಯಿಸಿತು. ಗೋವಾ ಪರ ಫೆರ್ನಾಂಡೆಸ್(7ನೇ ನಿಮಿಷ), ಎಡು ಬೆಡಿಯಾ(94ನೇ ನಿಮಿಷ) ಗೋಲು ಬಾರಿಸಿದರು. ಈಸ್ಟ್ ಬೆಂಗಾಲ್ ಪರ ಕ್ಲೆಯೆಟನ್(64ನೇ ನಿ.,) ಗೋಲು ಗಳಿಸಿದರು. ಈಸ್ಟ್ ಬೆಂಗಾಲ್ ಸತತ 2ನೇ ಸೋಲು ಕಂಡಿತು.
ಸುಶೀಲ್ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ ಚಾರ್ಜ್‌ಶೀಟ್
ನವದೆಹಲಿ: ಯುವ ಕುಸ್ತಿಪಟು ಸಾಗರ್ ಧನ್‌ಕರ್ ಕೊಲೆ ಪ್ರಕರಣದಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ, ದಂಗೆ ಆರೋಪಗಳನ್ನು ಹೊರಿಸಲಾಗಿದೆ. ದೆಹಲಿ ಸೆಷನ್ಸ್ ಕೋರ್ಚ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್, ಸುಶೀಲ್ ಹಾಗೂ ಸಂಗಡಿಗರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅರೋಪಗಳನ್ನು ಹೊರಿಸಿದ್ದಾರೆ.
Murder Case: ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ..!
2021ರ ಮೇ 4ರಂದು ಇಲ್ಲಿನ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಮೇಲೆ ಸುಶೀಲ್‌ರ ಗ್ಯಾಂಗ್ ಹಲ್ಲೆ ಮಾಡಿತ್ತು. ಆ ವೇಳೆ ಸಾಗರ್ ಮೃತಪಟ್ಟಿದ್ದರು. ಮೇ 23ರಂದು ಸುಶೀಲ್‌ರ ಬಂಧನವಾಗಿತ್ತು. ಅವರ 2021ರ ಜು.2ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.