2023: ಕ್ರೀಡಾಭಿಮಾನಿಗಳಿಗೆ ಭರ್ಜರಿ ಮನರಂಜನೆ!
2023ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದಷ್ಟು ಸರಣಿ!
ಹಲವು ವಿಶ್ವಕಪ್, ವಿಶ್ವ ಚಾಂಪಿಯನ್‌ಶಿಪ್‌ಗಳಿಗೆ ಈ ವರ್ಷ ಸಾಕ್ಷಿಯಾಗಲಿದೆ
ಈ ವರ್ಷ ನಡೆಯಲಿರುವ ಮಹತ್ವದ ಕ್ರೀಡಾಕೂಟ, ಪಂದ್ಯಾವಳಿಗಳ
ಬೆಂಗಳೂರು(ಜ.01): 2023ರಲ್ಲೂ ಕ್ರೀಡಾಭಿಮಾನಿಗಳು ಭರಪೂರ ಮನರಂಜನೆ ನಿರೀಕ್ಷೆ ಮಾಡಬಹುದಾಗಿದೆ. ಹಲವು ವಿಶ್ವಕಪ್, ವಿಶ್ವ ಚಾಂಪಿಯನ್‌ಶಿಪ್‌ಗಳಿಗೆ ಈ ವರ್ಷ ಸಾಕ್ಷಿಯಾಗಲಿದೆ. ಉಳಿದಂತೆ ಪ್ರತಿ ವರ್ಷ ನಡೆಯುವಂತೆ ಪ್ರತಿಷ್ಠಿತ ಲೀಗ್‌ಗಳು, ಟೆನಿಸ್ ಗ್ರ್ಯಾನ್ ಸ್ಲಾಂಗಳು ಇದ್ದೇ ಇರಲಿವೆ. ಈ ವರ್ಷ ನಡೆಯಲಿರುವ ಮಹತ್ವದ ಕ್ರೀಡಾಕೂಟ, ಪಂದ್ಯಾವಳಿಗಳ ವಿವರ ಇಲ್ಲಿದೆ.
2023 ಕ್ರೀಡಾ ಮುನ್ನೋಟ: ಭಾರತ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದಷ್ಟು ಸರಣಿ!
ಭಾರತ ಕ್ರಿಕೆಟ್ ತಂಡ 2023ರಲ್ಲೂ ಮಹತ್ವದ ಸರಣಿಗಳನ್ನು ಆಡಲಿದೆ. ಜನವರಿ ಮೊದಲ ವಾರದಲ್ಲೇ ತವರಿನ ಸರಣಿಗಳು ಆರಂಭಗೊಳ್ಳಲಿದ್ದು, ಫೆಬ್ರವರಿ-ಮಾಚ್‌ರ್‍ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯನ್ನು ಗೆದ್ದು ಸತತ 2ನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಟೀಂ ಇಂಡಿಯಾ ಕಾತರಿಸುತ್ತಿದೆ. ಜೂನ್‌ನಲ್ಲಿ ಟೆಸ್ಟ್ ವಿಶ್ವಕಪ್ ಫೈನಲ್ ನಡೆಯಲಿದೆ. ಇದೇ ವೇಳೆ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ತವಕವೂ ಭಾರತ ತಂಡಕ್ಕಿದೆ. 2023ರಲ್ಲಿ ಭಾರತಕ್ಕೆ 8 ಟೆಸ್ಟ್, 18 ಏಕದಿನ(ಏಷ್ಯಾಕಪ್, ವಿಶ್ವಕಪ್ ಹೊರತುಪಡಿಸಿ), 17 ಟಿ20 ಪಂದ್ಯಗಳನ್ನು ಆಡಲಿದೆ.
ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟಿ20, ಏಕದಿನ ಸರಣಿಗಳನ್ನು ಆಡಲಿರುವ ಭಾರತ, ಆ ಬಳಿಕ ತವರಿನಲ್ಲಿ ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜುಲೈ-ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳಲಿದ್ದು, ಆ ನಂತರ ಏಷ್ಯಾಕಪ್‌ನಲ್ಲಿ ಭಾಗವಹಿಸಲಿದೆ. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ಆಸೀಸ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದ್ದು, ವಿಶ್ವಕಪ್ ಬಳಿಕ ಮತ್ತೆ ಆಸ್ಪ್ರೇಲಿಯಾಗೆ ಆತಿಥ್ಯ ವಹಿಸಲಿದ್ದು 5 ಟಿ20 ಪಂದ್ಯಗಳನ್ನು ಆಡಲಿದೆ. ಡಿಸೆಂಬರ್‌ನಲ್ಲಿ ದ.ಆಫ್ರಿಕಾ ಪ್ರವಾಸಕ್ಕೆ ತಂಡ ತೆರಳಲಿದೆ.
ಗೃಹಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್..! ಪೊಲಿಟಿಕ್ಸ್‌ಗೆ ಎಂಟ್ರಿ..?
ಇದೆಲ್ಲದರ ಜೊತೆಗೆ ಏಪ್ರಿಲ್-ಮೇನಲ್ಲಿ ಭಾರತದಲ್ಲಿ 16ನೇ ಆವೃತ್ತಿಯ ಐಪಿಎಲ್ ಟಿ20 ಟೂರ್ನಿ ನಡೆಯಲಿದೆ.
ಮಹಿಳಾ ಟಿ20 ವಿಶ್ವಕಪ್
ಈ ವರ್ಷ ಕಿರಿಯ, ಹಿರಿಯ ಮಹಿಳೆಯರ ಟಿ20 ವಿಶ್ವಕಪ್ ನಡೆಯಲಿದೆ. ಎರಡೂ ಟೂರ್ನಿಗಳಿಗೆ ದ.ಆಫ್ರಿಕಾ ಆತಿಥ್ಯ ನೀಡಲಿದೆ. ಜ.14ರಿಂದ 29ರ ವರೆಗೂ ಚೊಚ್ಚಲ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ನಡೆಯಲಿದ್ದು, ಫೆ. 10ರಿಂದ 26ರ ವರೆಗೂ ಮಹಿಳಾ ಟಿ20 ವಿಶ್ವಕಪ್ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಎರಡೂ ಟೂರ್ನಿಗಳಿಗೆ ಭಾರತ ಕಾಲಿಡಲಿದೆ.
ಚೊಚ್ಚಲ ಮಹಿಳಾ ಐಪಿಎಲ್
ಬಿಸಿಸಿಐ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ಪರಿಚಯಿಸಲಿದ್ದು, ಚೊಚ್ಚಲ ಆವೃತ್ತಿಯು ಮಾಚ್‌ರ್‍ನಲ್ಲಿ ನಡೆಯಲಿದೆ. 5 ತಂಡಗಳು ಪಾಲ್ಗೊಳ್ಳಲಿದ್ದು, ಆರ್‌ಸಿಬಿ ಮಾಲಿಕರು ಸಹ ತಂಡ ಖರೀದಿಸುವ ನಿರೀಕ್ಷೆ ಇದೆ.
ಭಾರತದಲ್ಲಿ ಹಾಕಿ ವಿಶ್ವಕಪ್
ಜ.13ರಿಂದ 29ರ ವರೆಗೂ ಭಾರತದಲ್ಲಿ ಪುರುಷರ ಹಾಕಿ ವಿಶ್ವಕಪ್ ನಡೆಯಲಿದೆ. ಒಡಿಶಾದ ರೂರ್ಕೆಲಾ ಹಾಗೂ ಭುವನೇಶ್ವರ ಆತಿಥ್ಯ ವಹಿಸಲಿದ್ದು, 16 ತಂಡಗಳು ಸ್ಪರ್ಧಿಸಲಿವೆ. 1975ರ ಬಳಿಕ ವಿಶ್ವಕಪ್ ಗೆಲ್ಲದ ಭಾರತ, ಈ ಬಾರಿ ತವರಿನಲ್ಲಿ ಆ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
ಕತಾರಲ್ಲಿ ಮತ್ತೊಂದು ಫುಟ್ಬಾಲ್ ಹಬ್ಬ
ಫಿಫಾ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕತಾರ್ 2023ರಲ್ಲಿ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಗೊಳ್ಳುವ ಟೂರ್ನಿಯು ಈ ಬಾರಿ ಜೂ.16ರಿಂದ ಜು.16ರ ವರೆಗೂ ನಡೆಯಲಿದೆ. 24 ತಂಡಗಳು ಕಣಕ್ಕಿಳಿಯಲಿದ್ದು, 5ನೇ ಬಾರಿಗೆ ಭಾರತ ಪ್ರವೇಶ ಪಡೆದಿರುವ ಭಾರತ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ. ಇದೇ ವೇಳೆ ಜು.20ರಿಂದ ಆ.20ರ ವರೆಗೂ ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ನಲ್ಲಿ ಫಿಫಾ ಮಹಿಳಾ ವಿಶ್ವಕಪ್ ನಡೆಯಲಿದೆ.
ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್
ಅ.19-27ರ ವರೆಗೂ ಹಂಗೇರಿಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ. ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟುವಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಈ ಕೂಟ ನೆರವಾಗಲಿದೆ.
ಭಾರತದಲ್ಲಿ ಮೋಟೋ ಜಿಪಿ: ಈ ವರ್ಷ ಭಾರತಕ್ಕೆ ಮೋಟೋ ಜಿಪಿ ಕಾಲಿಡಲಿದೆ. ಸೆಪ್ಟೆಂಬರ್‌ನಲ್ಲಿ ನೋಯ್ಡಾದ ಬುದ್ಧ ಅಂ.ರಾ. ಸಕ್ರ್ಯೂಟ್‌ನಲ್ಲಿ ಭಾರತ್ ಗ್ರ್ಯಾನ್ ಪ್ರಿ ಬೈಕ್ ರೇಸ್ ನಡೆಯಲಿದೆ.
ಚೀನಾದಲ್ಲಿ ಏಷ್ಯನ್ ಗೇಮ್ಸ್
ಕೋವಿಡ್‌ನಿಂದ ಮುಂದೂಡಿಕೆಯಾಗಿದ್ದ 2022ರ ಏಷ್ಯನ್ ಗೇಮ್ಸ್ ಚೀನಾದ ಹಾಂಗ್ಝೂನಲ್ಲಿ ಸೆ.23ರಿಂದ ಅ.8ರ ವರೆಗೂ ಆಯೋಜನೆಗೊಳ್ಳಲಿದೆ. ಟೋಕಿಯೋ ಒಲಿಂಪಿಕ್ಸ್ ಬಳಿಕ ಭಾರತೀಯರಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಬಾಕ್ಸಿಂಗ್ ವಿಶ್ವಕೂಟ
ಮಾ.15-31ರ ವರೆಗೂ ನವದೆಹಲಿಯಲ್ಲಿ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ. 6 ವರ್ಷದಲ್ಲಿ 2ನೇ ಬಾರಿಗೆ ಒಟ್ಟಾರೆ 3ನೇ ಬಾರಿಗೆ ಭಾರತ ಆತಿಥ್ಯ ಹಕ್ಕು ಪಡೆದಿದೆ. 70ಕ್ಕೂ ಹೆಚ್ಚು ದೇಶಗಳ ಬಾಕ್ಸರ್‌ಗಳು ಸ್ಪರ್ಧಿಸುವ ನಿರೀಕ್ಷೆ ಇದ್ದು ಒಟ್ಟು 19 ಕೋಟಿ ರು.ಗೂ ಅಧಿಕ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ.