ವಿಂಬಲ್ಡನ್: 49ನೇ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ನೋವಾಕ್ ಜೋಕೋವಿಚ್!
ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ಹಾದಿಯಲ್ಲಿರುವ ಟೆನಿಸ್ ದಂತಕಥೆ ನೋವಾಕ್ ಜೋಕೋವಿಚ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಇತಿಹಾಸದಲ್ಲಿ 49ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್: ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗರಲ್ಲಿ ಓರ್ವರಾಗಿರುವ ಸರ್ಬಿಯಾದ ನೋವಾಕ್ ಜೋಕೋವಿಚ್ 49ನೇ ಬಾರಿ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.2 ಜೋಕೋವಿಚ್ ಬುಧವಾರ ಆಸ್ಟ್ರೇಲಿಯಾದ ಅಗ್ರ ಟೆನಿಸಿಗ ಅಲೆಕ್ಸ್ ಡೆ ಮಿನಾರ್ ವಿರುದ್ಧ ಸೆಣಸಬೇಕಿತ್ತು. ಆದರೆ ಪ್ರಿ ಕ್ವಾರ್ಟರ್ ಫೈನಲ್ ವೇಳೆ ಕಾಣಿಸಿಕೊಂಡಿದ್ದ ಗಾಯದ ಕಾರಣದಿಂದಾಗಿ ಮಿನಾರ್, ಜೋಕೋ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ನಿರ್ಗಮಿಸಿದರು.
ಇದರೊಂದಿಗೆ ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸುವ ವಿಶ್ವ ನಂ.9 ಆಟಗಾರನ ಕನಸು ಭಗ್ನಗೊಂಡಿತು. ವಿಂಬಲ್ಡನ್‌ನ 7 ಬಾರಿ ಚಾಂಪಿಯನ್ ಜೋಕೋ, ಟೂರ್ನಿಯಲ್ಲಿ 13ನೇ ಬಾರಿ ಸೆಮೀಸ್‌ಗೇರಿದ್ದು, ಶುಕ್ರವಾರ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ 25ನೇ ಶ್ರೇಯಾಂಕಿತ, ಇಟಲಿಯ ಲೊರೆಂಜೊ ಮುಸೆಟ್ಟಿ/13ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಸೆಣಸಾಡಲಿದ್ದಾರೆ.
ಒಲಿಂಪಿಕ್ ಪದಕಗಳ ಬಗ್ಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಸೆಮೀಸ್‌ಗೆ ರಬೈಕೆನಾ, ಕ್ರೇಜಿಕೋವಾ ಪ್ರವೇಶ
ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್ ಎಲೆನಾ ರಬೈಕೆನಾ, 2021ರ ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಬೋರಾ ಕ್ರೇಜಿಕೋವಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕಜಕಸ್ತಾನದ ರಬೈಕೆನಾ ಕ್ವಾರ್ಟರ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಗೆದ್ದರೆ, ಚೆಕ್ ಗಣರಾಜ್ಯದ ಕ್ರೇಜಿಕೋವಾ ಅವರು 13ನೇ ಶ್ರೇಯಾಂಕಿತೆ, ಲಾಟ್ವಿಯಾ ದೇಶದ ಎಲೆನಾ ಓಸ್ಟಪೆನ್ಕೋ ವಿರುದ್ಧ 6-4, 7-6(7/4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.
3ನೇ ಟಿ20: ಭಾರತದ ಆಲ್ರೌಂಡ್ ಆಟಕ್ಕೆ ಶರಣಾದ ಜಿಂಬಾಬ್ವೆ
ಗುರುವಾರ ಸೆಮಿಫೈನಲ್‌ನಲ್ಲಿ ರಬೈಕೆನಾ-ಕ್ರೇಜಿಕೋವಾ ಮುಖಾಮುಖಿಯಾಗಲಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಸರ್ಬಿಯಾದ ಡೊನಾ ವೆಕಿಚ್-2024ರ ಫ್ರೆಂಚ್ ಓಪನ್ ರನ್ನರ್ ಅಪ್, ಇಟಲಿಯ ಜಾಸ್ಮೀನ್ ಪೌಲಿನಿ ಪರಸ್ಪರ ಸೆಣಸಲಿದ್ದಾರೆ.
ಆ.3, 4ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್
ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯು ಆ.3 ಮತ್ತು 4ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಹಿರಿಯ ಅಥ್ಲೆಟಿಕ್ಸ್ ಕೂಟ ಆಯೋಜಿಸಲಿದೆ. ಇದು ಆ.30ರಿಂದ ಸೆ.2ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆ ಟ್ರಯಲ್ಸ್ ಆಗಿರಲಿದೆ. ಕೂಟದಲ್ಲಿ ಪಾಲ್ಗೊಳ್ಳುವವರು ಜುಲೈ 27ರ ಮೊದಲು ಎಎಫ್‌ಐ ವೆಬ್‌ಸೈಟ್ (https://indianathletics.in/)ನಲ್ಲಿ ಹೆಸರು ನೋಂದಾಯಿಸಬೇಕು ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.
ಒಲಿಂಪಿಕ್ಸ್‌ನಲ್ಲಿ ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ಪಡುಕೋಣೆ ಮೆಂಟರ್
ನವದೆಹಲಿ: ದಿಗ್ಗಜ ಶಟ್ಲರ್ ಪ್ರಕಾಶ್ ಪಡುಕೋಣೆ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಬ್ಯಾಡ್ಮಿಂಟನ್ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಭಾರತದ 7 ಶಟ್ಲರ್‌ಗಳು ಆಡಲಿದ್ದು, ಅವರ ಜೊತೆಗೆ 8 ಮಂದಿ ಸಹಾಯಕ ಸಿಬ್ಬಂದಿ, ಕೋಚ್‌ಗಳು ಹಾಗೂ ಫಿಸಿಯೋಗಳೂ ಇರಲಿದ್ದಾರೆ.