ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ನಿಖಾತ್, ನೀತು ಲಗ್ಗೆ
ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇನ್ನು 4 ಮಂದಿ ಕ್ವಾರ್ಟರ್ ಪ್ರವೇಶ
ಪದಕದ ಹೊಸ್ತಿಲಲ್ಲಿ ನಿಖಾತ್ ಸೇರಿ ನಾಲ್ವರು ಮಹಿಳಾ ಬಾಕ್ಸರ್‌ಗಳು
ಸಾಕ್ಷಿ ಚೋಪ್ರಾ ಹಾಗೂ ಮಂಜು ಬಂಬೋರಿಯಾಗೆ ನಿರಾಸೆ
ನವದೆಹಲಿ(ಮಾ.22): ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇನ್ನೂ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಪ್ರಿ ಕ್ವಾರ್ಟರ್ ಹಂತದಲ್ಲಿ ನೀತು ಗಂಗಾಸ್, ನಿಖಾತ್ ಜರೀನ್, ಮನೀಶಾ ಹಾಗೂ ಜಾಸ್ಮಿನ್ ಗೆಲುವು ಸಾಧಿಸಿದರೆ, ಸಾಕ್ಷಿ ಚೋಪ್ರಾ ಹಾಗೂ ಮಂಜು ಬಂಬೋರಿಯಾ ಸೋಲು ಕಂಡರು.
48 ಕೆ.ಜಿ. ವಿಭಾಗದಲ್ಲಿ ನೀತು ತಜಕಿಸ್ತಾನದ ಕೊಸಿಮೊವಾ ವಿರುದ್ಧ ಮೊದಲ ಸುತ್ತಿಲ್ಲೇ ಜಯಿಸಿದರೆ, ಮೆಕ್ಸಿಕೋದ ಪ್ಯಾಟ್ರಿಸಿಯಾ ವಿರುದ್ಧ ನಿಖಾತ್ 5-0 ಅಂತರದಲ್ಲಿ ಗೆಲುವು ಪಡೆದರು. 57 ಕೆ.ಜಿ. ವಿಭಾಗದಲ್ಲಿ ಮನೀಶಾ ಟರ್ಕಿಯ ತುರ್ಹಾನ್‌ರನ್ನು ಸೋಲಿಸಿದರೆ, ತಜಕಿಸ್ತಾನದ ಸಮಡೊವಾ ವಿರುದ್ಧ ಜಾಸ್ಮಿನ್ ಗೆದ್ದರು. ಜಪಾನ್‌ನ ಕಿಟೊ ವಿರುದ್ಧ ಸಾಕ್ಷಿ, ಉಜ್ಬೇಕಿಸ್ತಾನದ ಖಮಿಡೊವಾ ವಿರುದ್ಧ ಮಂಜು ಸೋಲುಂಡರು.
ಕೊಡವ ಹಾಕಿ: ಕನ್ನಂಡ ರೋಹನ್ 6 ಗೋಲು!
ನಾಪೋಕ್ಲು: 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ 3ನೇ ದಿನವಾದ ಮಂಗಳವಾರ ಕನ್ನಂಡ ತಂಡದ ರೋಹನ್ ಅಯ್ಯಪ್ಪ ಆರು ಗೋಲು ಬಾರಿಸಿ ಗಮನ ಸೆಳೆದರು. ಚಿಲ್ಲವಂಡ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕನ್ನಂಡ ತಂಡವು 7-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಇನ್ನು ಮುಕ್ಕಾಟಿರ (ಕಡಗದಾಳು) ಸಹಿತ ಹಲವು ತಂಡಗಳು ಮುನ್ನಡೆ ಸಾಧಿಸಿದವು. ಮೂವೇರ, ಮುಕ್ಕಾಟಿರ(ಮೂವತ್ತೋಕ್ಲು), ಆಪಟ್ಟಿರ, ಜಮ್ಮಡ, ಆಪಾಡಂಡ ತಂಡಗಳು ವಾಕ್ ಓವರ್ ಪಡೆದು ಮುಂದಿನ ಸುತ್ತು ಪ್ರವೇಶಿಸಿದವು.
ಮುಕ್ಕಾಟಿರ ತಂಡವು ಅನ್ನಾಡಿಯಂಡ ತಂಡದ ವಿರುದ್ಧ 5-0 ಗೆಲವು ಸಾಧಿಸಿತು. ಚೊಟ್ಟೆಯಂಡಮಾಡ ತಂಡವು ದೇಯಂಡ ತಂಡದ ವಿರುದ್ಧ 4-0 ಅಂತರದ ಗೆಲವು ಪಡೆಯಿತು. ಐತಿಚಂಡ ತಂಡವು ಕಟ್ಟೇರ ತಂಡದ ವಿರುದ್ಧ 4-0 ಅಂತರದ ಗೆಲವು ಸಾಧಿಸಿತು. ಚೆರುಮಂದಂಡ ತಂಡವು ಅಜ್ಜಿನಂಡ ತಂಡದ ವಿರುದ್ಧ 4-1ರಲ್ಲಿ ಗೆದ್ದರೆ, ಮಾಚಿಮಾಡ ತಂಡವು ಮಂಡಿರ (ಮಾದಾಪುರ)ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿತು.
ರ‍್ಯಾಂಕಿಂಗ್: 25ನೇ ಸ್ಥಾನಕ್ಕೆ ಕುಸಿದ ಸೇನ್!
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 6 ಸ್ಥಾನ ಕುಸಿತ ಕಂಡಿದ್ದು, 25ನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಆಲ್-ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೇನ್ 2ನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 6ನೇ ಸ್ಥಾನ ಪಡೆದಿದ್ದ ಸೇನ್, ಈ ವರ್ಷ ಮಲೇಷ್ಯಾ ಓಪನ್, ಇಂಡಿಯಾ ಓಪನ್, ಜರ್ಮನ್ ಓಪನ್ ಟೂರ್ನಿಗಳಲ್ಲೂ ಆರಂಭಿಕ ಸುತ್ತುಗಳಲ್ಲೇ ಸೋಲು ಕಂಡಿದ್ದರು.
ಮಾರ್ಚ್ 23ರಿಂದ ಬೆಂಗ್ಳೂರಲ್ಲಿ ರಾಷ್ಟ್ರೀಯ ವೇಟ್‌ಲಿಫ್ಟಿಂಗ್
ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರಾರಯಂಕಿಂಗ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಮಾ.23ರಿಂದ 29ರ ವರೆಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಆನಂದೇಗೌಡ ತಿಳಿಸಿದರು.
ಕೇವಲ 5 ನಿಮಿಷದಲ್ಲಿ ಒಂದು ಮೈಲಿ ದೂರ ಓಡಿದ 9 ತಿಂಗಳ ತುಂಬು ಗರ್ಭಿಣಿ..! ಸಾಧಕಿಗೊಂದು ಸಲಾಂ
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಾಂಪಿಯನ್‌ಶಿಪ್ ಕುರಿತ ಮಾಹಿತಿ ಹಂಚಿಕೊಂಡ ಅವರು, ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಮೀರಾಬಾಯಿ ಚಾನು, ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ವಿಜೇತೆ ಬಿಂದ್ಯಾರಾಣಿ, ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನ ಪದಕ ವಿಜೇತೆ ಆಕಾಂಕ್ಷ, ರಾಜ್ಯದ ಬಿ.ಎನ್.ಉಷಾ ಸೇರಿ 600ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಯ್ ಬರೇಲಿ ಹಾಕಿ ಸ್ಟೇಡಿಯಂಗೆ ರಾಣಿ ಹೆಸರು!
ನವದೆಹಲಿ: ಭಾರತದ ತಾರಾ ಹಾಕಿ ಆಟಗಾರ್ತಿ, ಮಾಜಿ ನಾಯಕಿ ರಾಣಿ ರಾಂಪಾಲ್ ಅವರ ಹೆಸರನ್ನು ಉತ್ತರ ಪ್ರದೇಶದ ರಾಯ್ ಬರೇಲಿಯ ಹಾಕಿ ಕ್ರೀಡಾಂಗಣಕ್ಕೆ ಇಡಲಾಗಿದೆ. ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ರಾಣಿ ಪಾತ್ರರಾಗಿದ್ದಾರೆ. ಎಂಸಿಎಫ್ ರಾಯ್ ಬರೇಲಿ ಕ್ರೀಡಾಂಗಣದ ಹೆಸರನ್ನು ‘ರಾಣೀಸ್ ಗರ್ಲ್ಸ್ ಹಾಕಿ ಟಫ್‌ರ್’ ಎಂದು ಬದಲಿಸಲಾಗಿದೆ. ಈ ಖುಷಿಯನ್ನು ರಾಣಿ ತಮ್ಮ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.