ಚೊಚ್ಚಲ ಆವೃತ್ತಿ ಅಲ್ಟಿಮೇಟ್ ಖೋ ಖೋ ಲೀಗ್ ಇಂದಿನಿಂದ ಆರಂಭ
ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಇಂದಿನಿಂದ ಆರಂಭಗೊಳ್ಳಲಿರುವ ಈ ಆವೃತ್ತಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ
ಕರ್ನಾಟಕದ 9 ಮಂದಿ ವಿವಿಧ ತಂಡಗಳ ಪರ ಆಡಲಿದ್ದಾರೆ
ಪುಣೆ(ಆ.14): ಬಹು ನಿರೀಕ್ಷಿತ ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ(ಯುಕೆಕೆ) ಲೀಗ್ ಭಾನುವಾರದಿಂದ ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಆರಂಭಗೊಳ್ಳಲಿದೆ. ಡಾಬರ್ ಸಮೂಹದ ಮುಖ್ಯಸ್ಥ ಅಮಿತ್ ಬರ್ಮನ್ ಅವರು ಭಾರತೀಯ ಖೋ ಖೋ ಫೆಡರೇಶನ್(ಕೆಕೆಎಫ್‌ಐ) ಸಹಭಾಗಿತ್ವದಲ್ಲಿ ಲೀಗ್ ಆರಂಭಿಸುತ್ತಿದ್ದು, ಸೆ.4ರಂದು ಲೀಗ್ ಮುಕ್ತಾಯಗೊಳ್ಳಲಿದೆ.
ಇದು ಫ್ರಾಂಚೈಸಿ ಆಧಾರಿತ ಲೀಗ್ ಆಗಿದ್ದು ಈ ಆವೃತ್ತಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ. ಭಾನುವಾರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಕಿಲಾಡೀಸ್, 2ನೇ ಪಂದ್ಯದಲ್ಲಿ ಚೆನ್ನೈ ಕ್ವಿಕ್ ಗನ್ಸ್ ಜೊತೆ ತೆಲುಗು ಯೋಧಾಸ್ ಮುಖಾಮುಖಿಯಾಗಲಿವೆ. ಒಡಿಶಾ ಸರ್ಕಾರದ ಒಡಿಶಾ ಜಗ್ಗರ್‌ನಟ್ಸ್ ಹಾಗೂ ರಾಜಸ್ಥಾನ ವಾರಿಯರ್ಸ್ ತಂಡಗಳೂ ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಲೀಗ್‌ನಲ್ಲಿ ಗೌತಮ್, ಪ್ರಜ್ವಲ್ ಸೇರಿದಂತೆ ಕರ್ನಾಟಕದ 9 ಮಂದಿ ವಿವಿಧ ತಂಡಗಳ ಪರ ಆಡಲಿದ್ದಾರೆ.
ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ನಡೆಯಲಿದ್ದು, ಪ್ರತೀ ತಂಡ ಇತರೆ 5 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ. ಲೀಗ್‌ನಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದ್ದು, ನಾಕೌಟ್ ಹಂತದಲ್ಲಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಇರಲಿವೆ.
ಬ್ಯಾಡ್ಮಿಂಟನ್ ವಿಶ್ವ ಕೂಟಕ್ಕೆ ಗೈರಾಗಲಿರುವ ಪಿ.ವಿ.ಸಿಂಧು
ನವದೆಹಲಿ: ಮಾಜಿ ವಿಶ್ವ ಚಾಂಪಿಯನ್, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಗಾಯದ ಕಾರಣದಿಂದ ಈ ಬಾರಿಯ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ. ಈ ವಿಷಯವನ್ನು ಸ್ವತಃ ಸಿಂಧು ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸಿಂಧು, ಪಾದದ ಗಾಯದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆ.21ರಿಂದ 28ರ ವರೆಗೆ ಟೋಕಿಯೋದಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ.
ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್: ಮಂಡ್ಯ ಬುಲ್ಸ್ ಶುಭಾರಂಭ
ಬೆಂಗಳೂರು: ಚೊಚ್ಚಲ ಆವೃತ್ತಿಯ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ ಶುಕ್ರವಾರ ನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಚಾಲನೆ ದೊರೆಯಿತು. ರಾಜ್ಯ ಸರ್ಕಾರದ ಐಟಿ, ಬಿಟಿ ಸಚಿವ ಅಶ್ವಥ್ ನಾರಾಯಣ್ ಅವರು ಬ್ಯಾಡ್ಮಿಂಟನ್ ಆಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
BIG 3: ಕೆಸರುಗದ್ದೆಯಾಗಿರುವ ಸ್ಟೇಡಿಯಂ, ಅಧಿಕಾರಿಗಳಿಂದ ಶೀಘ್ರ ಕ್ರಮದ ಭರವಸೆ
ಉದ್ಘಾಟನಾ ಪಂದ್ಯದಲ್ಲಿ ಮಂಡ್ಯ ಬುಲ್ಸ್ ತಂಡ ಬಂಡೀಪುರ ಟಸ್ಕರ್ಸ್ ವಿರುದ್ಧ 7-0 ಅಂತರದಲ್ಲಿ ಗೆಲುವು ಸಾಧಿಸಿತು. ಮಹಿಳಾ ಸಿಂಗಲ್ಸ್‌ನಲ್ಲಿ ಬಂಡೀಪುರ ಗೆದ್ದರೂ, ಬಳಿಕ ಪುರುಷರ ಡಬಲ್ಸ್, ಪುರುಷರ ಸಿಂಗಲ್ಸ್, ಮಿಶ್ರ ಡಬಲ್ಸ್ ಹಾಗೂ ಸೂಪರ್ ಮ್ಯಾಚ್‌ನಲ್ಲಿ ಮಂಡ್ಯದ ಶಟ್ಲರ್‌ಗಳು ಗೆಲುವು ಸಾಧಿಸಿದರು. ಮಂಡ್ಯ ಮಹಿಳಾ ಸಿಂಗಲ್ಸ್‌ನಲ್ಲಿ ಗಳಿಸಿದ್ದ 1 ಅಂಕ ಟ್ರಂಪ್ ಪಂದ್ಯದಲ್ಲಿ ಸೋಲುವ ಮೂಲಕ ಕಳೆದುಕೊಂಡಿತು.
ಯುಎಸ್ ಓಪನ್ ಆಡಲು ಜೋಕೋವಿಚ್‌ಗೆ ಅನುಮತಿ?
ನ್ಯೂಯಾರ್ಕ್: ಕೋವಿಡ್ ಲಸಿಕೆ ಪಡೆಯದಿದ್ದರೂ 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಸರ್ಬಿಯಾದ ನೋವಾಕ್ ಜೋಕೋವಿಚ್‌ಗೆ ಯುಎಸ್ ಓಪನ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ಆರೋಗ್ಯ ಇಲಾಖೆ ಕೋವಿಡ್ ನಿಯಮಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಲಸಿಕೆ ಪಡೆಯದವರು ಎದುರಿಸುತ್ತಿದ್ದ ನಿರ್ಬಂಧಗಳನ್ನು ತೆರವುಗೊಳಿಸಿದೆ. ಆದರೆ ಇದು ಸದ್ಯ ಅಮೆರಿಕ ನಾಗರಿಕರಿಗೆ ಮಾತ್ರ ಅನ್ವಯಿಸಲಿದೆ. ವರದಿಗಳ ಪ್ರಕಾರ ಶೀಘ್ರದಲ್ಲೇ ವಿದೇಶಿ ಪ್ರಯಾಣಿಕರಿಗೆ ಇರುವ ನಿಯಮಗಳನ್ನೂ ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಈ ನಿಮಯಗಳನ್ನು ಬದಲಿಸಿದರೆ, ಜೋಕೋ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳಬಹುದು.