೨೦೨೪ರ ಖೇಲ್ ರತ್ನ ಪ್ರಶಸ್ತಿಯನ್ನು ನಾಲ್ವರು ಕ್ರೀಡಾಪಟುಗಳಿಗೆ ಘೋಷಿಸಲಾಗಿದೆ. ಶೂಟರ್ ಮನು ಭಾಕರ್, ಚೆಸ್ ಚಾಂಪಿಯನ್ ಡಿ ಗುಕೇಶ್, ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ಸ್ ಪಟು ಪ್ರವೀಣ್ ಕುಮಾರ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ೩೨ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆಯಾಗಿದ್ದು, ಜನವರಿ ೧೭ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ನವದೆಹಲಿ: 2024ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ ನಾಲ್ವರು ಕ್ರೀಡಾಪಟುಗಳಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಹಾಗೂ ಯುವಜನ ಖಾತೆ ಇಲಾಖೆ ಘೋಷಿಸಿದೆ.
2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬೇಟೆಯಾಡಿದ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ 18 ವರ್ಷದ ಡಿ ಗುಕೇಶ್, ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಪ್ಯಾರಾಲಿಂಪಿಕ್ಸ್ ಪಟು ಪ್ರವೀಣ್ ಕುಮಾರ್ ಅವರಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿ ಅರಸಿ ಬಂದಿದೆ.
ಇನ್ನು ಇದೇ ವೇಳೆ ಕ್ರೀಡಾಕ್ಷೇತ್ರದಲ್ಲಿ ಅಸಾಧಾರಣ ಪ್ರದರ್ಶನ ತೋರಿದ ದೇಶದ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 32 ಅಥ್ಲೀಟ್‌ಗಳಿಗೆ ಕೇಂದ್ರ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ. ಈ ಎಲ್ಲಾ ಅಥ್ಲೀಟ್‌ಗಳು 2025ರ ಜನವರಿ 17ರಂದು ರಾಷ್ಟ್ರಪತಿ ಭವನದಲ್ಲಿ ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಈ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ಬಿಗ್ ಶಾಕ್! ಸಿಡ್ನಿ ಟೆಸ್ಟ್‌ನಿಂದ ಈ ಕ್ರಿಕೆಟರ್ ಔಟ್!
ಖೇಲ್ ರತ್ನ ಪ್ರಶಸ್ತಿ ವಿಜೇತರ ಕಿರು ಪರಿಚಯ:
1. ಮನು ಭಾಕರ್:
22 ವರ್ಷದ ಮನು ಭಾಕರ್, ಒಲಿಂಪಿಕ್ಸ್ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿನ 10 ಮೀಟರ್ ಏರ್ ಪಿಸ್ತೂಲ್ ವೈಯುಕ್ತಿಕ ವಿಭಾಗದಲ್ಲಿ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಕಂಚಿನ ಪದಕ ಜಯಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.
2. ಹರ್ಮನ್‌ಪ್ರೀತ್ ಸಿಂಗ್:
ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಟೋಕಿಯೋ ಒಲಿಂಪಿಕ್ಸ್ ಬಳಿಕ ಭಾರತ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿಕ ಪದಕ ಜಯಿಸಿತ್ತು. ಭಾರತ ಕಂಚಿನ ಪದಕ ಜಯಿಸುವಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು.
3. ಡಿ ಗುಕೇಶ್:
ತಮಿಳುನಾಡು ಮೂಲದ 18 ವರ್ಷದ ಡಿ ಗುಕೇಶ್ ಕಳೆದ ತಿಂಗಳು ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿನ್ ಲಿರೆನ್ ಅವರನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಅತಿಕಿರಿಯ ಚೆಸ್ ಪಟು ಎನ್ನುವ ಹಿರಿಮೆಗೆ ಡಿ ಗುಕೇಶ್ ಪಾತ್ರರಾಗಿದ್ದರು.
4. ಪ್ರವೀಣ್ ಕುಮಾರ್:
ಭಾರತದ ಪ್ರಮುಖ ಪ್ಯಾರಾ ಅಥ್ಲೀಟ್ ಆಗಿರುವ ಪ್ರವೀಣ್ ಕುಮಾರ್, ಟಿ 64 ಹೈಜಂಪ್ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರವೀಣ್ ಕುಮಾರ್ ಟಿ 64 ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
